ADVERTISEMENT

ಹುಬ್ಬಳ್ಳಿ: ಎಲ್ಲ 82 ವಾರ್ಡ್‌ಗಳಲ್ಲಿ ಜೆಡಿಎಸ್ ಸ್ಪರ್ಧೆ

ಮುಂಬರುವ ಹು–ಧಾ ಮಹಾನಗರ ಪಾಲಿಕೆ ಚುನಾವಣೆ: ಎನ್.ಎಚ್. ಕೋನರಡ್ಡಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 9:38 IST
Last Updated 7 ಆಗಸ್ಟ್ 2021, 9:38 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಸಿದ್ಧತೆ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಮಾತನಾಡಿದರು
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಸಿದ್ಧತೆ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಮಾತನಾಡಿದರು   

ಹುಬ್ಬಳ್ಳಿ: ಈ ಬಾರಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ 82 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಹೇಳಿದರು.

ಮುಂಬರುವ ಮಹಾನಗರ ಪಾಲಿಕೆ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲು ಇಲ್ಲಿನ ಗಣೇಶಪೇಟೆಯಲ್ಲಿ ಶನಿವಾರ ನಡೆದ ಹುಬ್ಬಳ್ಳಿ ಪೂರ್ವ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಕೆಲವರು ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದು, ನಂತರ ಬೇರೆ ಪಕ್ಷ ಸೇರಿದರು. ಅಂಥವರು ನಮಗೆ ಬೇಕಿಲ್ಲ. ಪಕ್ಷದ ವಿರುದ್ಧ ಮಾತನಾಡುವವರ ಅಗತ್ಯವೂ ಪಕ್ಷಕ್ಕಿಲ್ಲ’ ಎಂದು ಪಾಲಿಕೆ ಚುನಾವಣಾ ಸ್ಪರ್ಧಾಕಾಂಕ್ಷಿಗಳು, ಕರ್ಯಕರ್ತರಿಗೆ ಎಚ್ಚರಿಸಿದರು.

ADVERTISEMENT

‘ಚುನಾವಣೆಗೆ ಸ್ಪರ್ಧಿಸುವುದು ಹಗುರ ಎಂದು ಭಾವಿಸಬೇಡಿ. ಅದಕ್ಕೊಂದು ಬದ್ಧತೆ– ಶಿಸ್ತು ಇರಬೇಕು. ಅಲ್ಲಿ ನಿಮ್ಮ ಸಾಮರ್ಥ್ಯ ಬಹಿರಂಗವಾಗುತ್ತದೆ’ ಎಂದು ತಿಳಿಹೇಳಿದರು.

ಜೆಡಿಎಸ್ ಹುಬ್ಬಳ್ಳಿ–ಧಾರವಾಡ ಮಹಾನಗರ ಘಟಕದ ಅಧ್ಯಕ್ಷ ಗುರುರಾಜ ಹುಣಸೀಮರದ ಮಾತನಾಡಿ, ‘ನಿಮ್ಮ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿ. ನಮ್ಮ ಮನೆ ಬಾಗಿಲು ಕಾಯುವವನು ಎಂದು ಚುನಾವಣೆಗೆ ಟಿಕೆಟ್ ಕೊಡುವ ಪದ್ಧತಿ ಇಲ್ಲ’ ಎಂದರು.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಇಲ್ಲ. ಎಲ್ಲ 224 ಕ್ಷೇತ್ರಗಳಲ್ಲೂ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ’ ಎಂದು ತಿಳಿಸಿದರು.

ಕೆಲವರು ಈ ಹಿಂದಿನ ವಿದ್ಯಮಾನಗಳ ಕುರಿತು ಅಸಮಾಧಾನ ಹೊರಹಾಕಿದರು. ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸುವ ಆಕಾಂಕ್ಷಿಗಳು ಮುಖಂಡರಿಗೆ ಅರ್ಜಿ ಸಲ್ಲಿಸಿದರು. ಇದೇ ವೇಳೆ ಕೆಲವು ಯುವಕ–ಯುವತಿಯರು ಜೆಡಿಎಸ್ ಸೇರ್ಪಡೆ ಆದರು.

ಪಕ್ಷದ ಮುಖಂಡರಾದ ಇರ್ಷಾದ್ ಭದ್ರಾಪುರ, ಬಸವರಾಜ ಭಜಂತ್ರಿ, ಶಂಕರ ಪವಾರ, ಅಫ್ರೋಜ್ ಮೆಣಸಿನಕಾಯಿ, ಅಬ್ದುಲ್ ಖರೀಂ, ಮುಖಂಡರು–ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.