ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆದ ಗುಣಮಟ್ಟದ ಕಾಮಗಾರಿಗಳನ್ನು ಮಾತ್ರ ಪಾಲಿಕೆ ಹಸ್ತಾಂತರಿಸಿಕೊಳ್ಳಬೇಕು. ಕೆಲವು ಯೋಜನೆಗಳ ಕಾಮಗಾರಿಯ ಗುಣಮಟ್ಟದಲ್ಲಿ ನ್ಯೂನತೆಗಳಿದ್ದು, ತನಿಖಾ ಹಂತದಲ್ಲಿದೆ. ವರದಿಯಲ್ಲಿ ಲೋಪದೋಷ ಕಂಡುಬಂದರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರರೇ ಸಂಪೂರ್ಣ ಹೊಣೆಗಾರರಾಗಬೇಕಾಗುತ್ತದೆ...
ಇಲ್ಲಿನ ಮಹಾನಗರ ಪಾಲಿಕೆ ಸಭಾಭವನದಲ್ಲಿ ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್ ವೀಣಾ ಬರದ್ವಾಡ ಅವರು ಮೇಲಿನಂಂತೆ ಠರಾವು ಪಾಸು ಮಾಡಿದರು. ಹೆಚ್ಚಿನ ವಿಷಯ ಪಟ್ಟಿಯಲ್ಲಿ ನಮೂದಿಸಿದ ಸ್ಮಾರ್ಟ್‌ಸಿಟಿ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳ ಹಸ್ತಾಂತರ ವಿಷಯ, ಶೂನ್ಯ ವೇಳೆಯಲ್ಲಿ ಸುದೀರ್ಘ ಚರ್ಚೆಯಾಯಿತು. ಪಕ್ಷಾತೀತವಾಗಿ ಸದಸ್ಯರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೆಲವು ಕಾಮಗಾರಿ ಕಳಪೆಯಾಗಿದ್ದು, ಲೋಕಾಯುಕ್ತ ತನಿಖೆಯಲ್ಲಿದೆ. ಅವುಗಳನ್ನು ಹಸ್ತಾಂತರಿಸಿಕೊಂಡರೆ ಮುಂದಾಗುವ ಸಮಸ್ಯೆಗೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
‘ಯೋಜನೆಗಳ ಗುಣಮಟ್ಟದ ಕುರಿತು ಪಾಲಿಕೆ ಎಂಜಿನಿಯರ್‌ಗಳು ಮತ್ತು ಸ್ಮಾರ್ಟ್‌ಸಿಟಿ ಎಂಜಿನಿಯರ್‌ಗಳು ಜಂಟಿ ಪರಿಶೀಲನೆ ನಡೆಸಿ, ವರದಿ ನೀಡುವುದು ಬಾಕಿಯಿದೆ. ಲೋಕಾಯುಕ್ತ ತನಿಖೆ ಸಹ ನಡೆಯುತ್ತಿದೆ. ವ್ಯತಿರಿಕ್ತ ವರದಿ ಬಂದರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಸೇರಿ ಸಂಬಂಧಪಟ್ಟ ಎಲ್ಲ ಎಂಜಿನಿಯರ್‌ಗಳು ಹೊಣೆಗಾರರಾಗಬೇಕಾಗುತ್ತದೆ. ಇದಕ್ಕೆ ಅವರೆಲ್ಲರ ಒಪ್ಪಿಗೆಯಿದ್ದರೆ ಹಸ್ತಾಂತರ ಮಾಡಿಕೊಳ್ಳಬಹುದು’ ಎಂದು ಸದಸ್ಯ ತಿಪ್ಪಣ್ಣ ಮಜ್ಜಗಿ ಹೇಳಿದರು.
ಸದಸ್ಯರಾದ ಶಿವು ಹಿರೇಮಠ, ಚೇತನ ಹೀರೆಕೆರೂರು, ಸುವರ್ಣಾ ಕಲಕುಂಟ್ಲಾ, ಆರೀಫ್ ಭದ್ರಾಪುರ ಸೇರಿದಂತೆ ಕೆಲವರು, ‘ಈವರೆಗೆ ಪೂರ್ಣಗೊಂಡ ಕಾಮಗಾರಿಗಳೆಷ್ಟು, ಹಸ್ತಾಂತರವಾದ ಕಾಮಗಾರಿಗಳೆಷ್ಟು? ಕೆಲವು ಕಾಮಗಾರಿ ಡೀಮ್ಡ್ ಹಸ್ತಾಂತರವಾಗಿದ್ದು, ಅದಕ್ಕೆ ಕಾರಣವೇನು?’ ಎಂದು ಪ್ರಶ್ನಿಸಿದರು.
‘ಪಾಲಿಕೆ ಅಧೀಕ್ಷಕ ಎಂಜಿನಿಯರ್ ಟಿ. ತಿಪ್ಪಣ್ಣ, ‘ಸ್ಮಾರ್ಟ್‌ಸಿಟಿ ಯೋಜನೆಯಡಿ ಒಟ್ಟು 63 ಕಾಮಗಾರಿ ನಡೆದಿದ್ದು, 30 ಕಾಮಗಾರಿ ಪೂರ್ಣಗೊಂಡಿವೆ. 15 ಕಾಮಗಾರಿ ಡೀಮ್ಡ್ ಹಸ್ತಾಂತರಗೊಂಡಿವೆ. ಕೆಲವು ಕಾಮಗಾರಿಯಲ್ಲಿ ನ್ಯೂನತೆ ಇರುವುದರಿಂದ, ಸರಿಪಡಿಸುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಅದನ್ನು ಸರಿಪಡಿಸಿರುವುದಾಗಿ ಹೇಳಿದ್ದರು. ಆದರೆ, ನೂರಕ್ಕೆ ನೂರರಷ್ಟು ಸರಿಪಡಿಸದ ಕಾರಣ ಮತ್ತೊಮ್ಮೆ ಪರಿಶೀಲನೆ ನಡೆಸಬೇಕಿತ್ತು. ಕೆಲಸದ ಒತ್ತಡದಿಂದ ಅದು ನಡೆಸಲಾಗಿರಲಿಲ್ಲ. ರಾಜ್ಯಮಟ್ಟದ ಸಲಹಾ ಸಮಿತಿಯ ನಡಾವಳಿ ಪ್ರಕಾರ, ಡೀಮ್ಡ್ ಹಸ್ತಾಂತರವಾಗಿದೆ’ ಎಂದು ಸಭೆಗೆ ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಮರು ನಿರ್ಮಾಣವಾಗಿರುವ ಜನತಾ ಬಜಾರ್ ಮಾರುಕಟ್ಟೆ ಮತ್ತು ಗಣೇಶಪೇಟೆಯ ಮೀನು ಮಾರುಕಟ್ಟೆಯಲ್ಲಿನ ಮಳಿಗೆಗಳನ್ನು ಹಿಂದಿನ ಮಳಿಗೆದಾರರಿಗೆ, ಪ್ರಸ್ತುತ ಮಾರುಕಟ್ಟೆ ದರದಲ್ಲಿ ಹಂಚಲು ಸರ್ಕಾರದ ಅನುಮತಿ ಕೋರುವ ಕುರಿತು ಚರ್ಚೆ ನಡೆಯಿತು. ಪಾಲಿಕೆಗೆ ಹೆಚ್ಚಿನ ಆದಾಯ ಬರುವ ನಿಟ್ಟಿನಲ್ಲಿ ಹಸ್ತಾಂತರವಾದ ನಂತರ ನಿರ್ಣಯ ತೆಗೆದುಕೊಳ್ಳುವ ಕುರಿತು ತಿಪ್ಪಣ್ಣ ಮಜ್ಜಗಿ ಸಲಹೆ ನೀಡಿದರು.
‘10 ತಿಂಗಳಾದರೂ ಸಮಿತಿ ರಚಿಸಿಲ್ಲ’
‘ಮಹಾನಗರ ಪಾಲಿಕೆಗೆ ಕಂದಾಯ ಗ್ರಾಮಗಳ ಸೇರ್ಪಡೆ ಕುರಿತು 2023ರ ಜನವರಿ 25ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಸಮಿತಿ ರಚಿಸಿ ವರದಿ ಸಿದ್ಧಪಡಿಸಲು ತೀರ್ಮಾನಿಸಲಾಗಿತ್ತು. 10 ತಿಂಗಳಾದರೂ ಸಮಿತಿ ರಚನೆಯಾಗಿಲ್ಲ’ ಎಂದು ಸದಸ್ಯ ಸಂದಿಲ್ ಕುಮಾರ ಆಕ್ಷೇಪ ವ್ಯಕ್ತಪಡಿಸಿದರು.
‘ಕೆಲವು ಹಳ್ಳಿಗಳಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ, ಕಟ್ಟಡಗಳಿಗೆ ಪಾಲಿಕೆ ಅನುಮತಿ ನೀಡುತ್ತಿದೆ, ಕೆಲವು ಹಳ್ಳಿಗಳಿಗೆ ನೀಡುತ್ತಿಲ್ಲ. ಕಂದಾಯ ಗ್ರಾಮಗಳಾಗಿ, ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದ್ದರೂ ಸಮಸ್ಯೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ ಅವರು, ‘ಎಷ್ಟು ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಬೇಕಿದೆ’ ಎನ್ನುವ ಮಾಹಿತಿ ತಿಳಿಸಬೇಕು’ ಎಂದರು.
‘ಕಂದಾಯ ಗ್ರಾಮಗಳಾಗಿದ್ದರೂ ಸರ್ವೇ ನಂಬರ್ ಗ್ರಾಮ ಪಂಚಾಯ್ತಿಗೆ ಒಳಪಟ್ಟಿರುವುದರಿಂದ ಸಮಸ್ಯೆಯಾಗುತ್ತಿದೆ. ಸರ್ವೇ ಇಲಾಖೆಯ ಸಿಬ್ಬಂದಿ ಒಳಗೊಂಡು ಸಮಿತಿ ರಚಿಸಬೇಕಿದೆ. ಹುಬ್ಬಳ್ಳಿ–ಧಾರವಾಡದಲ್ಲಿ 57 ಹಳ್ಳಿ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಬೇಕಿದೆ’ ಎಂದು ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.
‘ತೋಳನಕೆರೆ ಉದ್ಯಾನದಲ್ಲಿರುವ ಮಳಿಗೆಗಳನ್ನು ಇನ್ನೂ ಟೆಂಡರ್ ಕರೆದಿಲ್ಲ. ಆದರೆ, ಕೆಲವರು ಅಲ್ಲಿ ವ್ಯಾಪಾರ ಮಾಡುತ್ತಿದ್ದು, ಪಾಲಿಕೆ ನಷ್ಟವಾಗುತ್ತಿದೆ. ಆ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆರೀಫ್ ಭದ್ರಾಪುರ ಆಗ್ರಹಿಸಿದರು. ‘ವಾರ್ಡ್ 60ರ ವ್ಯಾಪ್ತಿಯಲ್ಲಿ ಕೆಲವರು ರಸ್ತೆ ಬದಿ ಶೆಡ್ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಅದನ್ನು ತೆರವುಗೊಳಿಸಲು ಮುಂದಾಗಬೇಕು’ ಎಂದು ರಾಧಾಬಾಯಿ ಸಫಾರೆ ಸಭೆಗೆ ತಿಳಿಸಿದರು.
ನೇರಪಾವತಿಗೆ ಪರಿಗಣನೆ; ಸಂಭ್ರಮೋತ್ಸಾಹ
ಪೌರಕಾರ್ಮಿಕರ ಒತ್ತಡಕ್ಕೆ ಮಣಿದು ಮೈಸೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ನೇರ ಪಾವತಿಗೆ ಪರಿಗಣಿಸಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು. ನೇರಪಾವತಿಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಮೇಯರ್ ನಿರ್ಣಯ ಕೈಗೊಂಡು ಠರಾವು ಪಾಸು ಮಾಡಿದರು. ಇದು ಪೌರಕಾರ್ಮಿಕರ ಸಂಭ್ರಮಕ್ಕೆ ಕಾರಣವಾಗಿದ್ದು ನಿರ್ಣಯ ಹೊರಬೀಳುತ್ತಿದ್ದಂತೆ ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗುಲಾಲು ಎರಚಿ ಪರಸ್ಪರ ಸಿಹಿ ತಿನ್ನಿಸಿದರು. ಪಾಲಿಕೆಯಲ್ಲಿ ನಿರ್ಣಯ ಕೈಗೊಂಡಿದ್ದಕ್ಕೆ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಮೇಯರ್ ವೀಣಾ ಬರದ್ವಾಡ ಉಪಮೇಯರ್ ಸತೀಶ ಹಾನಗಲ್ ಸೇರಿದಂತೆ ಹಲವರನ್ನು ಕಾರ್ಮಿಕರು ಸನ್ಮಾನಿಸಿ ಗೌರವಿಸಿದರು. ಪೌರ ಕಾರ್ಮಿಕರ ಸಂಘದ ಮುಖಂಡ ವಿಜಯ ಗುಂಟ್ರಾಳ ‘ಪೌರಕಾರ್ಮಿಕರ ಹಕ್ಕು ಹತ್ತಿಕ್ಕಲು ಕಾಂಗ್ರೆಸ್ ನಾಯಕರು ಷಡ್ಯಂತ್ರ ನಡೆಸಿದ್ದರು. ಪಾಲಿಕೆಯ ಬಿಜೆಪಿ ಸದಸ್ಯರು ನಮ್ಮ ಪರವಾಗಿ ನಿಂತು ನ್ಯಾಯ ಒದಗಿಸಿಕೊಟ್ಟಿದ್ದಾರೆ’ ಎಂದದರು. ವಾಗ್ವಾದ: ಗುತ್ತಿಗೆ ಪೌರಕಾರ್ಮಿಕರು ನೇರ ವೇತನಕ್ಕೆ ಪರಿಗಣಿಸುವಂತೆ ಪ್ರತಿಭಟನೆ ನಡೆಸುವಾಗ ಸಂಬಂಧವಿಲ್ಲದ ಪೌರಕಾರ್ಮಿಕರು ಪಾಲ್ಗೊಂಡಿದ್ದರು. ಇದರಿಂದ ನಗರದ ಸ್ವಚ್ಛತೆಗೆ ತೊಂದರೆಯಾಗಿತ್ತು. ಅಂತಹ ಕಾರ್ಮಿಕರಿಗೆ ನೋಟಿಸ್ ಜಾರಿ ಮಾಡಿ ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲುಕುಂಟ್ಲಾ ಸಭೆಯಲ್ಲಿ ಪ್ರಶ್ನಿಸಿದರು. ಕಾಂಗ್ರೆಸ್ ಸದಸ್ಯರೆಲ್ಲರೂ ಧ್ವನಿಗೂಡಿಸಿದರು. ಇದಕ್ಕೆ ಆಡಳಿತ ಪಕ್ಷ ಬಿಜೆಪಿ ವಿರೋಧಿಸಿ ‘ತಮ್ಮವರ ಪರವಾಗಿ ಎಲ್ಲ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಯಾರಿಗೂ ನೋಟಿಸ್ ಜಾರಿ ಮಾಡುವ ಅಗತ್ಯವಿಲ್ಲ’ ಎಂದರು. ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ತೀವ್ರ ವಾಗ್ವಾದ ನಡೆಯಿತು. ಕೊನೆಗೆ ಮೇಯರ್ ಅವರು ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಪಡೆಯುವ ನಿರ್ಣಯ ಘೋಷಿಸಿದರು.
ಕೊಳಚೆ ನೀರು ನಿಯಂತ್ರಿಸಲು ₹15 ಕೋಟಿ!
ನಗರದ ಉಣಕಲ್ ಕೆರೆಗೆ ಹರಿದು ಬರುವ ಕೊಳಚೆ ನೀರನ್ನು ತಡೆಯಲು ಈಗಾಗಲೇ ₹15 ಕೋಟಿ ವೆಚ್ಚಮಾಡಿದ್ದರೂ ನಿರೀಕ್ಷಿತ ಗುರಿ ತಲುಪಲಾಗದ ವಿಷಯ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆಯಾಯಿತು. ಶೂನ್ಯವೇಳೆಯಲ್ಲಿ ವಿಷಯ ಮಂಡಿಸಿದ ರಾಜಣ್ಣ ಕೊರವಿ ‘ಕೆರೆಗೆ ಹರಿದು ಬರುವ ಕೊಳಚೆ ನೀರು ನಿಯಂತ್ರಿಸಲು ಪಾಲಿಕೆ ಈವರೆಗೆ ಎಷ್ಟು ವೆಚ್ಚ ಮಾಡಿದೆ? ಅದು ಯಶಸ್ವಿಯಾಗಿದೆಯೇ’ ಎಂದು ಪ್ರಶ್ನಿಸಿದರು. ವಲಯಾಧಿಕಾರಿ ತುಬಾಕೆ ‘ಕೊಳಚೆ ನೀರು ಹರಿದು ಬರುವುದನ್ನು ನಿಯಂತ್ರಿಸಲು ಹಾಗೂ ಅಂತರಗಂಗೆ ತೆಗೆಯಲು ಎಂಟು ವರ್ಷದಲ್ಲಿ ₹15 ಕೋಟಿ ವೆಚ್ಚ ಮಾಡಲಾಗಿದೆ. ಕೊಳಚೆ ನೀರು ಸೇರುವುದು ಶೇ 90ರಷ್ಟು ನಿಯಂತ್ರಣವಾಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ₹2.40 ಕೋಟಿ ವೆಚ್ಚದ ಮತ್ತೊಂದು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ’ ಎಂದರು. ಸುವರ್ಣಾ ಕಲಕುಂಟ್ಲಾ ಸಹಮತ ವ್ಯಕ್ತಪಡಿಸಿ ‘ಕೆರೆಯ ನೀರು ಪರೀಕ್ಷೆ ಮಾಡಲಾಗಿದ್ದು ಚರ್ಮ ರೋಗ ಬರುವ ಸಾಧ್ಯತೆ ಕುರಿತು ವರದಿ ಬಂದಿದೆ. ಅದರಲ್ಲಿರುವ ಮೀನು ತಿಂದರೂ ಆರೋಗ್ಯ ಅಪಾಯವಿದೆ. ಪರಿಸ್ಥಿತಿ ಗಂಭೀರವಿದ್ದಾಗಲೂ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿರುವುದು ಸರಿಯಲ್ಲ’ ಎಂದರು. ‘ಪಾಲಿಕೆ ಸದಸ್ಯರ ಅಧಿಕಾರಿಗಳ ನೇತೃತ್ವದ ತಂಡ ಕೆರೆ ವೀಕ್ಷಿಸಿ ಅದು ನೀಡುವ ವರದಿ ಆಧರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಮೇಯರ್ ಹೇಳಿದರು.
ಇಂಗ್ಲಿಷ್‌ನಲ್ಲಿ ಉತ್ತರ: ಕ್ಷಮೆ ಕೇಳಿದ ಅಧಿಕಾರಿ
ಹುಬ್ಬಳ್ಳಿ ಪಾಲಿಕೆ ಸಭಾಭವನ ಮತ್ತು ಧಾರವಾಡದ ಆಜಾದಿ ಕಾ ಅಮೃತ ಮಹೋತ್ಸವ ಕಟ್ಟಡ ಕುರಿತು ಸುವರ್ಣಾ ಕಲಕುಂಟ್ಲಾ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಇಂಗ್ಲಿಷ್‌ನಲ್ಲಿ ಉತ್ತರ ನೀಡಲಾಗಿತ್ತು. ಇದರಿಂದ ಸರ್ವ ಸದಸ್ಯರು ಪಾಲಿಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸಿದರು. ‘ಕನ್ನಡದಲ್ಲಿಯೇ ವ್ಯವಹರಿಸಬೇಕು ಎನ್ನುವ ಆದೇಶವಿದ್ದರೂ ಇಂಗ್ಲಿಷ್‌ನಲ್ಲಿ ಉತ್ತರ ನೀಡಿದ್ದು ಮಹಾ ಅಪರಾಧ. ಈ ಕುರಿತು ಸಂಬಂಧಪಟ್ಟ ಅಧಿಕಾರಿ ಸಭೆಯಲ್ಲಿ ಕ್ಷೆಮ ಕೇಳಲೇಬೇಕು’ ಎಂದರು. ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ‘ಪರಿಷತ್ ಕಾರ್ಯದರ್ಶಿ ಅವರು ಕೇಳಿದ ವರದಿಯನ್ನು ಅವರಿಗೆ ನೀಡಿದ್ದೇನೆ. ಕ್ಷಮೆ ಕೇಳುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.