ಹುಬ್ಬಳ್ಳಿ: ‘ಪ್ರಸ್ತುತ ವರ್ಷ ಕರ್ನಾಟಕ ರಾಜ್ಯೋತ್ಸವ(ನ.1) ದಿನದಂದೇ ದೀಪಾವಳಿ ಅಮಾವಾಸ್ಯೆ ಬಂದಿದ್ದು, ಹಬ್ಬದ ಪ್ರಯುಕ್ತ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗುವ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮವನ್ನು ಮುಂದೂಡಲು ಚಿಂತನೆ ನಡೆಸಲಾಗಿದೆ’ ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.
‘ಈ ಕುರಿತು ಅಕ್ಟೋಬರ್ 15ರಂದು ಸಂಜೆ 5ಕ್ಕೆ ಮಹಾನಗರ ಪಾಲಿಕೆ ಮೇಯರ್ ಕಚೇರಿಯಲ್ಲಿ ಸರ್ವಪಕ್ಷಗಳ ಮುಖಂಡರ ಸಭೆ ಕರೆದು, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನ. 1ರಂದೇ ನಡೆಸಲಾಗುವುದು’ ಎಂದು ಸೋಮವಾರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಪೂರ್ವಭಾವಿ ಸಭೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದರು.
‘ಪಾಲಿಕೆ ವ್ಯಾಪ್ತಿಯ ಪ್ರಮುಖ ಸ್ಥಳದಲ್ಲಿ ಶಾಶ್ವತವಾಗಿ ಕನ್ನಡ ಧ್ವಜ ಹಾರಾಡುವಂತೆ ಮಾಡಬೇಕು ಎಂದು ಕೆಲವು ಕನ್ನಡ ಸಂಘಟನೆಯ ಮುಖಂಡರು ಸಲಹೆ– ಸೂಚನೆಗಳನ್ನು ನೀಡಿದ್ದಾರೆ. ವಿವಿಧ ಪಕ್ಷಗಳ ಸದಸ್ಯರ ಸಲಹೆ ಮೇರೆಗೆ, ಸೂಕ್ತ ಸ್ಥಳ ಗುರುತಿಸಿ ಪ್ರಸ್ತುತ ವರ್ಷದಿಂದಲೇ ಬಾವುಟ ಹಾರಿಸಲಾಗುವುದು’ ಎಂದರು.
ರೌಡಿಗಳಿಗೆ ‘ಧೀಮಂತ’ ಬೇಡ: ‘ಕಳೆದ ವರ್ಷ ರೌಡಿಗಳಿಗೆ ಧೀಮಂತ ಪ್ರಶಸ್ತಿ ನೀಡಿ, ಮೌಲ್ಯ ಹಾಳು ಮಾಡಲಾಗಿದೆ. ರಾತ್ರೋರಾತ್ರಿ ಮೇಯರ್, ಉಪಮೇಯರ್ ಅವರಿಗೆ ಅರ್ಜಿ ಸಲ್ಲಿಸಿ, ಪ್ರಶಸ್ತಿಗೆ ಒತ್ತಡ ಹಾಕಿದ್ದಾರೆ. ಜಾತಿ ರಾಜಕಾರಣ ಮಾಡದೆ, ಅರ್ಹರಿಗೆ ಪ್ರಶಸ್ತಿ ನೀಡಬೇಕು. ಕನ್ನಡ ಸಂಘಟನೆಯ ಕನಿಷ್ಠ ಮೂವರನ್ನಾದರೂ ಆಯ್ಕೆ ಮಾಡಬೇಕು’ ಎಂದು ಕರ್ನಾಟಕ ಸಂಗ್ರಾಮ ಸೇನೆ ಅಧ್ಯಕ್ಷ ಸಂಜೀವ ಧುಮ್ಮಕ್ಕನಾಳ ಆಗ್ರಹಿಸಿದರು.
ಪ್ರವೀಣ ಗಾಯಕವಾಡ ಮಾತನಾಡಿ, ‘ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ರಾಜ್ಯೋತ್ಸವದ ಮುನ್ನಾದಿನ ಪ್ರಕಟಿಸದೆ, ಎರಡು–ಮೂರು ದಿನ ಮೊದಲೇ ಘೋಷಿಸಬೇಕು. ಅನರ್ಹರಿಗೆ ಪ್ರಶಸ್ತಿ ನೀಡಿ, ಗೊಂದಲಕ್ಕೆ ಕಾರಣವಾಗಬಾರದು’ ಎಂದು ಸಲಹೆ ನೀಡಿದರು.
‘ಸಿದ್ಧಾರೂಢಮಠ ಮತ್ತು ಬೆಂಗೇರಿಯಿಂದಲೂ ಮೆರವಣಿಗೆ ಆಯೋಜಿಸಬೇಕು. ಬಸವಣ್ಣ ಸೇರಿದಂತೆ ವಿವಿಧ ಶರಣರ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಿ, ವಚನಗಳನ್ನು ಪ್ರದರ್ಶಿಸಬೇಕು. ಕಲಾವಿದರಿಗೆ ಕೊಡುವ ಗೌರವಧನದಲ್ಲಿ ತಾರತಮ್ಯ ಮಾಡಬಾರದು. ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಆದೇಶ ಹೊರಡಿಸಬೇಕು’ ಎಂದು ಎಚ್.ವಿ. ಪಾಟೀಲ ಹೇಳಿದರು.
‘ಕನ್ನಡ ಬಾವುಟ ಹಾರುವ ಹತ್ತು ಕಂಬಗಳು ಹುಬ್ಬಳ್ಳಿಯಲ್ಲಿದ್ದು, ಅವುಗಳನ್ನು ಸರಿಪಡಿಸಬೇಕು. ಮೇಲ್ಸೇತುವೆ ಕಾಮಗಾರಿಯಿಂದ ಚನ್ನಮ್ಮ ವೃತ್ತ ಹಾಳಾಗಿದ್ದು, ಶುಚಿತ್ವ ಕಾಪಾಡಿಕೊಳ್ಳಬೇಕು. ಕನ್ನಡಕ್ಕಾಗಿ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡಬೇಕು. ಕನ್ನಡದಲ್ಲಿಲ್ಲದ ನಾಮಫಲಕಗಳನ್ನು ಮುಲಾಜಿಲ್ಲದೆ ಕಿತ್ತೆಸೆಯಬೇಕು’ ಎಂದು ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಆಗ್ರಹಿಸಿದರು.
‘ಪಾಲಿಕೆ ವ್ಯಾಪ್ತಿಯಲ್ಲಿರುವ ಹಳೆಯ ಕನ್ನಡ ಶಾಲೆ ಮತ್ತು ಎಲ್ಲ ವಾರ್ಡ್‌ಗಳಲ್ಲಿ ರಾಜ್ಯೋತ್ಸವ ಆಚರಣೆಯಾಗಬೇಕು. ಪ್ರಮುಖ ವೃತ್ತಗಳನ್ನು ಹಾಗೂ ಪಾಲಿಕೆ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಬೇಕು. ನಾಡೋಜ ಪಾಟೀಲ ಪುಟ್ಟಪ್ಪ, ಪಂ. ಗಂಗೂಬಾಯಿ ಹಾನಗಲ್ ಮತ್ತು ಪಂ. ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರಲ್ಲಿ ಪ್ರಶಸ್ತಿ ನೀಡಬೇಕು’ ಸೇರಿದಂತೆ ಅನೇಕ ಸಲಹೆ–ಸೂಚನೆಗಳನ್ನು ವಿವಿಧ ಸಂಘಟನೆ ಪದಾಧಿಕಾರಿಗಳು ನೀಡಿದರು.
ಉಪಮೇಯರ್ ದುರ್ಗಮ್ಮ ಬಿಜವಾಡ, ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಸದಸ್ಯೆ ಸುವರ್ಣಾ ಕಲಕುಂಟ್ಲ, ಮುಖ್ಯ ಲೆಕ್ಕಾಧಿಕಾರಿ ಪಿ.ಬಿ. ವಿಶ್ವನಾಥ, ವಲಯಾಧಿಕಾರಿ ಗಿರೀಶ ತಳವಾರ ಇದ್ದರು.
ಇಂದಿನಿಂದ ತೆರವು ಕಾರ್ಯಾಚರಣೆ: ಮೇಯರ್
‘ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಶೇ 60ರಷ್ಟು ಕನ್ನಡ ಬಳಕೆ ಮಾಡದೆ ಅಳವಡಿಸಿರುವ ಅಂಗಡಿ–ಮಾಲ್‌ಗಳ ನಾಮಫಲಕಗಳ ತೆರವು ಕಾರ್ಯಾಚರಣೆ ಮಂಗಳವಾರದಿಂದ (ಅಕ್ಟೋಬರ್ 14) ಆರಂಭಿಸಲಾಗುವುದು’ ಎಂದು ಮೇಯರ್ ರಾಮಪ್ಪ ಬಡಿಗೇರ ತಿಳಿಸಿದರು. ‘ಕನ್ನಡ ಬಳಕೆ ಮಾಡದ ನಾಮಫಲಕಗಳ ತೆರವಿಗೆ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆ ಮುಖಂಡರು ಆಗ್ರಹಿಸಿದ್ದು ಆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಎಲ್ಲ ವಲಯ ಕಚೇರಿಗಳಿಂದ ಏಕಕಾಲದಲ್ಲಿ ಕಾರ್ಯಾಚರಣೆ ನಡೆಲಾಗುವುದು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಕನ್ನಡ ಬಾವುಟ ವಿತರಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.