ADVERTISEMENT

ಹುಬ್ಬಳ್ಳಿ–ಧಾರವಾಡ: ಕೋವಿಡ್‌ ಶವ ಸಾಗಣೆ, ಅಂತ್ಯಕ್ರಿಯೆ ಉಚಿತ

ಹುಬ್ಬಳ್ಳಿಯ ಹೆಗ್ಗೇರಿ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಅವಕಾಶ; ಶವ ಸಾಗಣೆಗೆ ಮೂರು ಆಂಬುಲೆನ್ಸ್‌ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 12:45 IST
Last Updated 27 ಏಪ್ರಿಲ್ 2021, 12:45 IST
ಹುಬ್ಬಳ್ಳಿಯ ಹೆಗ್ಗೇರಿ ಸ್ಮಶಾನದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಿದ ಸಿಬ್ಬಂದಿ
ಹುಬ್ಬಳ್ಳಿಯ ಹೆಗ್ಗೇರಿ ಸ್ಮಶಾನದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಿದ ಸಿಬ್ಬಂದಿ   

ಹುಬ್ಬಳ್ಳಿ: ಕೋವಿಡ್‌–19ನಿಂದ ಮೃತಪಟ್ಟವರ ಶವ ಸಾಗಿಸಲು ಆಂಬುಲೆನ್ಸ್‌ ಮಾಲೀಕರು, ಮೃತರ ಕುಟುಂಬದವರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಇದೀಗ ದೊಡ್ಡ ಸುದ್ದಿಯಾಗಿದೆ. ಇದರಿಂದಾಗಿ ಹಣ ಕೊಡಲಾಗದವರು ತಮ್ಮವರ ಶವ ಸಂಸ್ಕಾರಕ್ಕೆ ಪರದಾಡುತ್ತಿರುವುದು ವರದಿಯಾಗುತ್ತಿದೆ. ಇಂತಹ ಪ್ರಕರಣಗಳು ಹುಬ್ಬಳ್ಳಿ–ಧಾರವಾಡದಲ್ಲಿ ಘಟಿಸದಂತೆ ಕ್ರಮ ಕೈಗೊಂಡಿರುವ ಮಹಾನಗರ ಪಾಲಿಕೆ, ಶವಗಳ ಸಾಗಾಟ ಮತ್ತು ಅಂತ್ಯಕ್ರಿಯೆ ಉಚಿತವಾಗಿ ನೆರವೇರಿಸಲು ಮುಂದಾಗಿದೆ.

ದಿನದ ಇಪ್ಪತ್ತನಾಲ್ಕು ತಾಸು ಈ ಸೇವೆ ಲಭ್ಯ ಇರಲಿದೆ. ಆರೋಗ್ಯ ಇಲಾಖೆ ನೀಡಿರುವ ಶವ ಸಾಗಿಸುವ ಒಂದು ಆಂಬುಲೆನ್ಸ್ ಜತೆಗೆ, ಮತ್ತೆರಡು ಆಂಬುಲೆನ್ಸ್‌ಗಳನ್ನು ಪಾಲಿಕೆ ತಾತ್ಕಾಲಿಕವಾಗಿ ಬಾಡಿಗೆಗೆ ಪಡೆದಿದೆ. ಅವಳಿನಗರದಲ್ಲಿ ಕೋವಿಡ್‌ಗೆ ಬಲಿಯಾಗುವವರ ಶವವನ್ನು ಒಂದೇ ಕಡೆ ಅಂತ್ಯಕ್ರಿಯೆ ನಡೆಸಲು ಸ್ಮಶಾನವೊಂದರಲ್ಲಿ ವ್ಯವಸ್ಥೆಮಾಡಲಾಗಿದೆ. ಅದಕ್ಕಾಗಿ ಐವರು ಕಾರ್ಮಿಕರನ್ನೂ ನೇಮಿಸಿಕೊಳ್ಳಲಾಗಿದೆ.

ಅಂತ್ಯಕ್ರಿಯೆಗೆ ₹6 ಸಾವಿರ:

ADVERTISEMENT

‘ಅಂತ್ಯಸಂಸ್ಕಾರಕ್ಕೆ ಸ್ಮಶಾನಗಳಲ್ಲಿ ಅಧಿಕ ಹಣ ಪಡೆಯುತ್ತಿರುವ ದೂರುಗಳಿವೆ. ಹಾಗಾಗಿ, ಪಾಲಿಕೆಯೇ ಪ್ರತಿ ಕೋವಿಡ್ ಶವದ ಅಂತ್ಯಕ್ರಿಯೆಗೆ ₹6 ಸಾವಿರ ಖರ್ಚು ಮಾಡಲಿದೆ. ಸುಡಲು ಬೇಕಾಗುವ ಐದು ಕ್ವಿಂಟಲ್ ಕಟ್ಟಿಗೆ, ಲೀಟರ್ ಡೀಸೆಲ್, ಪೂಜಾ ಸಾಮಗ್ರಿಗಳಿಗೆ ಈ ಹಣ ಬಳಸಲಾಗುತ್ತದೆ’ ಎಂದು ಕೋವಿಡ್ ಶವಗಳ ಅಂತ್ಯಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಾಲಿಕೆಯ ಘನತ್ಯಾಜ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷಕುಮಾರ ಯರಂಗಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂತ್ಯಕ್ರಿಯೆ ನೆರವೇರಿಸುವುದಕ್ಕಾಗಿ ಐವರು ಕಾರ್ಮಿಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ಮಾಸಿಕ ₹16 ಸಾವಿರ ಸಂಬಳ ನಿಗದಿಪಡಿಸಲಾಗಿದೆ. ಆಯಾ ಧರ್ಮದವರ ವಿಧಿ ವಿಧಾನಗಳಂತೆ, ಶವಸಂಸ್ಕಾರವನ್ನು ಕಾರ್ಮಿಕರು ನೆರವೇರಿಸಲಿದ್ದಾರೆ. ಯಾವುದೇ ಕಾರಣಕ್ಕೂ ದಕ್ಷಿಣೆ ಹೆಸರಲ್ಲಿ ಮೃತರ ಕಡೆಯವರಿಂದ ಹಣ ಪಡೆಯುವಂತಿಲ್ಲ. ಹಾಗೇನಾದರೂ ಪಡೆದರೆ, ಪಾಲಿಕೆಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ಕೊಡಬಹುದು’ ಎಂದು ಹೇಳಿದರು.

‘ಕೊರೊನಾ ಸೋಂಕಿನಿಂದ ರಕ್ಷಣೆಪಡೆಯಲು ಅಂತ್ಯಕ್ರಿಯೆ ನಡೆಸುವ ಕಾರ್ಮಿಕರಿಗೆ ಸುರಕ್ಷಾ ಸಾಧನಗಳಾದ ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್ ಗ್ಲೌಸ್ಹಾಗೂ ಸ್ಯಾನಿಟೈಸರ್ ವಿತರಿಸಲಾಗಿದೆ. ಮಾರ್ಗಸೂಚಿ ಪ್ರಕಾರ, ಅಂತ್ಯಕ್ರಿಯೆಯಲ್ಲಿ ನಿಗದಿತ ಸಂಖ್ಯೆಯ ಮಂದಿಯಷ್ಟೇ ಸೂಕ್ತ ಅಂತರ ಕಾಯ್ದುಕೊಂಡು ಭಾಗವಹಿಸಬೇಕು’ ಎಂದರು.

ಸಾಗಣೆಗೆ ಆಂಬುಲೆನ್ಸ್

‘ಶವವನ್ನು ಆಸ್ಪತ್ರೆಯಿಂದ ಅಥವಾ ಮನೆಯಿಂದ ಸ್ಮಶಾನದವರೆಗೆ ಸಾಗಿಸುವುದಕ್ಕಾಗಿ, ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಒಂದೊಂದು ಆಂಬುಲೆನ್ಸ್‌ ಅನ್ನುಮಾಸಿಕ ₹70 ಸಾವಿರ ಬಾಡಿಗೆಗೆ ಪಡೆಯಲಾಗಿದೆ. ಮೂವರು ಚಾಲಕರು ಇರಲಿದ್ದು, ಮೂರು ಪಾಳಿಗಳಲ್ಲಿ ದಿನವಿಡೀ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿ ಆಂಬುಲೆನ್ಸ್‌ನ ತಿಂಗಳ ಗರಿಷ್ಠ ಸಂಚಾರ ಮಿತಿ 1,500 ಕಿಲೋಮೀಟರ್ ನಿಗದಿಪಡಿಲಾಗಿದ್ದು, ಹೆಚ್ಚುವರಿ ಓಡಾಟಕ್ಕೆ ಪ್ರತಿ ಕಿ.ಮೀ.ಗೆ ತಲಾ ₹25 ನೀಡಲಾಗುವುದು’ ಎಂದರು.

‘ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಅಥವಾ ಮನೆಗಳಲ್ಲಿ ಮೃತಪಟ್ಟ ಕೋವಿಡ್‌ ಬಾಧಿತರ ಸಂಬಂಧಿಗಳು ಪಾಲಿಕೆಯ ಈ ಸೌಲಭ್ಯ ಬಳಸಿಕೊಳ್ಳಬೇಕು. ಆಂಬುಲೆನ್ಸ್‌ಗಾಗಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೆ, ಆಸ್ಪತ್ರೆಗೆ ಅಥವಾ ಮನೆ ಬಾಗಿಲಿಗೆ ಆಂಬುಲೆನ್ಸ್ ಬರಲಿದೆ’ ಎಂದು ಹೇಳಿದರು.

ಹೆಗ್ಗೇರಿಯಲ್ಲಿ ಶವಸಂಸ್ಕಾರಕ್ಕೆ ವ್ಯವಸ್ಥೆ

‘ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 55 ಸ್ಮಶಾನಗಳಿವೆ. ಎಲ್ಲಾ ಕಡೆಯೂ ಮೃತರ ಕಡೆಯವರಿಂದ ಕೋವಿಡ್‌ ಮಾರ್ಗಸೂಚಿಗಳ ಪಾಲನೆ ಅಸಾಧ್ಯ. ಹಾಗಾಗಿ, ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಸ್ಮಶಾನದಲ್ಲಿ ಮಾತ್ರ ಕೋವಿಡ್ ಶವಗಳ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ಕುಟುಂಬದ 20 ಮಂದಿ ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು, ಪಾಲಿಕೆ ನಿಯೋಜಿಸಿರುವ ಕಾರ್ಮಿಕರೇ ಎಲ್ಲಾ ಕೆಲಸಗಳನ್ನು ಮಾಡಲಿದ್ದಾರೆ’ ಎಂದು ಸಂತೋಷ ಯರಂಗಳಿ ತಿಳಿಸಿದರು.

‘ಮೊದಲ ಕೋವಿಡ್ ಅಲೆಯಲ್ಲಿ ಮೃತಪಟ್ಟವರ ಶವಗಳನ್ನು ವಿದ್ಯಾನಗರದಲ್ಲಿರುವ ಸ್ಮಶಾನದಲ್ಲಿ ಸುಡಲಾಗುತ್ತಿತ್ತು. ಸ್ಮಶಾನಕ್ಕೆ ಹೊಂದಿಕೊಂಡಂತೆ ಸುತ್ತಲೂ ಕಾಲೇಜುಗಳು, ಹಾಸ್ಟೆಲ್‌ ಹಾಗೂ ಜನನಿಬಿಡ ಪ್ರದೇಶ ಇರುವುದರಿಂದ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಈ ಸಲ, ಹೆಗ್ಗೇರಿಯಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

ನಿತ್ಯ 2 ಶವ ಅಂತ್ಯಕ್ರಿಯೆ

‘ಒಂದು ವಾರದಿಂದ ಕೋವಿಡ್‌ನಿಂದ ಮೃತಪಟ್ಟವರ ಎರಡರಿಂದ ಮೂರು ಶವಗಳು ಸ್ಮಶಾನಕ್ಕೆ ಬರುತ್ತಿವೆ. ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಇಲ್ಲೇ ಇದ್ದು, ಕೋವಿಡ್ ಮಾರ್ಗಸೂಚಿ ಪ್ರಕಾರ ವಾರಸುದಾರರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ತಡರಾತ್ರಿ ಶವಗಳನ್ನು ತಂದವರು ನಮಗೆ ಕರೆ ಮಾಡುತ್ತಾರೆ. ಆಗ, ಬಂದು ಶವಸಂಸ್ಕಾರ ಮಾಡುತ್ತೇವೆ. ಯಾರಿಂದಲೂ ಹಣ ಪಡೆಯುವುದಿಲ್ಲ’ ಎಂದು ಹೆಗ್ಗೇರಿ ಸ್ಮಶಾನದಲ್ಲಿ 17 ವರ್ಷಗಳಿಂದ ಕೆಲಸ ಮಾಡುತ್ತಿರುವ ಹುಸನಪ್ಪ ವಜ್ಜಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಆಂಬುಲೆನ್ಸ್ ಮತ್ತು ಅಂತ್ಯಕ್ರಿಯೆ ಸೇವೆಗೆ ಸಂಪರ್ಕಿಸಬೇಕಾದ ಪಾಲಿಕೆಯ ನಿಯಂತ್ರಣ ಕೊಠಡಿ ಸಂಖ್ಯೆ

* 0836 2213888

* 0836 2213869

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.