ADVERTISEMENT

ಹುಬ್ಬಳ್ಳಿ | ಗೃಹಭಾಗ್ಯ ಯೋಜನೆಯ ಮನೆಗಳ ನಿರ್ಮಾಣ ಕಾಮಗಾರಿ ಬೇಗ ಮುಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 13:05 IST
Last Updated 20 ಜೂನ್ 2024, 13:05 IST
<div class="paragraphs"><p>ಹುಬ್ಬಳ್ಳಿಯ ಮಂಟೂರಿನಲ್ಲಿ&nbsp;ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘದ ಆಶ್ರಯದಲ್ಲಿ ಪೌರಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು</p></div>

ಹುಬ್ಬಳ್ಳಿಯ ಮಂಟೂರಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘದ ಆಶ್ರಯದಲ್ಲಿ ಪೌರಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು

   

ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ನಗರದ ಮಂಟೂರು ರಸ್ತೆಯಲ್ಲಿ ಪೌರಕಾರ್ಮಿಕರಿಗಾಗಿ ಗೃಹಭಾಗ್ಯ ಯೋಜನೆಯಡಿಯಲ್ಲಿ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯನ್ನು ಬೇಗನೆ ಮುಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘದ ಆಶ್ರಯದಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿ, ಪಾಲಿಕೆ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ADVERTISEMENT

ಮನೆಗಳ ನಿರ್ಮಾಣ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿದೆ. ರಸ್ತೆ, ಒಳಚರಂಡಿ ಸೌಲಭ್ಯ ಕಲ್ಪಿಸಿಲ್ಲ. ಕೂಡಲೇ ಕಾಮಗಾರಿಯನ್ನು ಬೇಗ ಮುಗಿಸಿ, ಅರ್ಹರಿಗೆ ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನವನಗರದಲ್ಲಿ ಅರ್ಹ ಫಲಾನುಭವಿಗಳಿಗೆ 122 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಇಂದಿಗೂ ಸಂಬಂಧಿಸಿದವರ ಹೆಸರಿಗೆ ನೋಂದಣಿಯಾಗಿಲ್ಲ. ಹೀಗಾಗಿ ಮನೆ ನಿರ್ಮಾಣಕ್ಕಾಗಿ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ. ನಿವೇಶನದ ನೋಂದಣಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಪೌರಕಾರ್ಮಿಕರಿಗೆ ಹಾಗೂ ಪಾಲಿಕೆ ನೌಕರರಿಗೆ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ, ಸೌಲಭ್ಯಗಳು ಸಿಗುತ್ತಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲು ಸರ್ಕಾರ ಆದೇಶಿಸಿದ್ದರೂ, ಒಂದೂವರೆ ವರ್ಷವಾದರೂ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಿಲ್ಲ. ಪಾಲಿಕೆಯ ವೈದ್ಯಾಧಿಕಾರಿ ಡಾ.ದಂಡಪ್ಪನವರು ಪೌರಕಾರ್ಮಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪೌರಕಾರ್ಮಿಕರು ಮೃತರಾದಲ್ಲಿ ಅನುಕಂಪದ ಆಧಾರದ ಮೇಲೆ ಮೃತರ ಅವಲಂಬಿತರಿಗೆ ಸಕಾಲಕ್ಕೆ ನೌಕರಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಪ್ರಮುಖರಾದ ಹೊನ್ನೂರಪ್ಪ ದೇವಗಿರಿ, ಗಂಗಾಧರ ಎಚ್‌.ಟಗರಗುಂಟಿ, ನಿಂಗಪ್ಪ ಮೊರಬದ, ಬಸಪ್ಪ ಎಸ್‌.ಮಾದರ, ವೆಂಕಟೇಶ, ಎಚ್‌.ಬಿ.ದೇವಗಿರಿ, ರಮೇಶ, ಅಶೋಕ, ಕೆಂಪಣ್ಣ, ರಾದಮ್ಮ ಗುಡಿಯಾಳ, ಧನಲಕ್ಷ್ಮಿ, ಅನುಸೂಯ, ಶ್ವೇತಾ ಹಾಗೂ ಹಲವು ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.