ಹುಬ್ಬಳ್ಳಿ: ಗೋಪನಕೊಪ್ಪ ಸಮೀಪದ ಅಮರ ಕಾಲೊನಿಯಲ್ಲಿ ನೂರಾರು ಸಮಸ್ಯೆಗಳ ರಾಶಿಯಿವೆ. ಸರಿಯಾದ ರಸ್ತೆಯಿಲ್ಲ, ಚರಂಡಿ ವ್ಯವಸ್ಥೆಯಿಲ್ಲ; ಕುಡಿಯುವ ನೀರಿಗೂ ಪಕ್ಕದ ಗವಿಸಿದ್ದೇಶ್ವರ ಕಾಲೊನಿಯನ್ನು ಅವಲಂಬಿಸಬೇಕಾಗಿದೆ.
ಹೀಗಾಗಿ ಅಲ್ಲಿನ ಕಾಲೊನಿಯ ಜನ ನಿತ್ಯ ಪರದಾಡುವಂತಾಗಿದೆ. ಶಿವಳ್ಳಿಗೆ ಹೋಗುವ ರಸ್ತೆಯಲ್ಲಿ ಬರುವ ಈ ಬಡಾವಣೆಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಓಣಿ ಒಳಗಿನ ಮಣ್ಣಿನ ರಸ್ತೆಯಲ್ಲಿ ದೊಡ್ಡ ಕಲ್ಲುಗಳೇ ಹೆಚ್ಚಾಗಿ ಕಾಣುತ್ತವೆ. ಹೀಗಾಗಿ ವಾಹನಗಳ ಸಂಚಾರ ದುಸ್ತರವಾಗಿದೆ. ನಾಯಿ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಓಣಿಯ ಹಾಗೂ ಸುತ್ತ–ಮುತ್ತಲಿನ ಜನರಿಗೆ ರೋಗದ ಭೀತಿ ಕಾಡುತ್ತಿದೆ.
ಅಮರ ಕಾಲೊನಿ ಪ್ರವೇಶಿಸುವ ರಸ್ತೆಯ ಪಕ್ಕದಲ್ಲಿ ಕೊಳಚೆ ತುಂಬಿರುವ ಚರಂಡಿ ನೀರು ನಿಮ್ಮನ್ನು ಸ್ವಾಗತಿಸುತ್ತದೆ. ಅದರಲ್ಲಿ ಪ್ಲಾಸ್ಟಿಕ್ ಚೀಲಗಳು, ಗಾಜಿನ ಬಾಟಲ್‌ಗಳನ್ನು ಎಸೆಯಲಾಗಿದ್ದು, ಸುತ್ತಲಿನ ಪ್ರದೇಶ ಗಬ್ಬು ನಾರುತ್ತಿದೆ. ಅನೇಕ ಬಾರಿ ನಾವೆಲ್ಲರೂ ಸೇರಿ ಹಣ ಜೋಡಿಸಿ ಅಲ್ಲಿನ ಗಲೀಜು ವಾತಾವರಣವನ್ನು ಸ್ವಚ್ಛ ಮಾಡಿದ್ದೇವೆ ಎನ್ನುತ್ತಾರೆ ಸ್ಥಳೀಯರು.
ಗಟಾರದ ನೀರು ಸರಿಯಾಗಿ ಹರಿಯದ ಕಾರಣ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಇದರಿಂದ ನಿತ್ಯ ಕಿರಿಕಿರಿಯಾಗುತ್ತಿದೆ. ಚುನಾವಣೆ ಸಮೀಪ ಬಂದಾಗಲಷ್ಟೇ ಮತ ಹಾಕಿ ಕೇಳಲು ಬರುವ ಜನಪ್ರತಿನಿಧಿಗಳು ನಂತರ ಬಡಾವಣೆಯತ್ತ ಸುಳಿಯವುದೇ ಇಲ್ಲ. ಅಮರ ಕಾಲೊನಿ ಪಕ್ಕದ ಗವಿಸಿದ್ದೇಶ್ವರ ಕಾಲೊನಿ, ಶಿವ ಕಾಲೊನಿ ಮತ್ತು ಲಕ್ಷ್ಮಿ ಬಡಾವಣೆಗೆ ಹೋಲಿಸಿದರೆ ನಮ್ಮ ಬಡಾವಣೆ ಹೆಚ್ಚು ಕೊಳಚೆಯಾಗಿದೆ. ಮಳೆಗಾಲದಲ್ಲಂತೂ ಚರಂಡಿ ದುರ್ನಾತ ಬೀರುತ್ತದೆ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
‘18 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇನೆ. ಚರಂಡಿ, ಕುಡಿಯುವ ನೀರು ಹಾಗೂ ರಸ್ತೆಯಂಥ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಕೋರಿದರೂ ಪ್ರಯೋಜನವಾಗಿಲ್ಲ. ಶಾಲೆಗೆ ಹೋಗುವ ಮಕ್ಕಳು, ಹಿರಿಯರು ಕೆಟ್ಟು ಹೋದ ರಸ್ತೆಯಲ್ಲಿಯೇ ಅಡ್ಡಾಡಬೇಕಾಗಿದೆ. ಹೀಗಾದರೆ, ನಮ್ಮ ಬಡಾವಣೆ ಅಭಿವೃದ್ಧಿ ಯಾವಾಗ’ ಎಂದು ಸ್ಥಳೀಯ ನಿವಾಸಿ ಜೈನುದ್ದೀನ್ ಅನ್ಸಾರಿ ಪ್ರಶ್ನಿಸುತ್ತಾರೆ.
ಏಳು ವರ್ಷಗಳಿಂದ ಅಮರ ಕಾಲೊನಿಯಲ್ಲಿ ವಾಸವಾಗಿದ್ದೇನೆ. ಕೊಳಚೆ ನೀರು, ನೀರಿನ ಅನಾನುಕೂಲತೆ ನೋಡಿ ಸಾಕಾಗಿ ಹೋಗಿದೆ. ಸಮಸ್ಯೆ ಯಾವಾಗ ಪರಿಹಾರವಾಗುತ್ತದೆಯೋ?
ಜೈತುಂಬಿ ದಡಾಕಿ, ಸ್ಥಳೀಯ ನಿವಾಸಿ
ಮಣ್ಣಿನ ರಸ್ತೆಯ ಮೇಲೆ ವಾಹನ ಚಾಲನೆ ಮಾಡಿ ಬಿದ್ದವರಿಗೆ ಲೆಕ್ಕವೇ ಇಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಉತ್ತಮ ರಸ್ತೆ ನಿರ್ಮಿಸಿಕೊಡಬೇಕು.
ಜೈನುದ್ದೀನ್ ಅನ್ಸಾರಿ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.