ಹುಬ್ಬಳ್ಳಿ: ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಗೆ ಅಮರಗೋಳದ ಹೊರವಲಯದಲ್ಲಿ ಹಳ್ಳವು ತುಂಬಿ ಹರಿಯಿತು. ಇದರಿಂದಾಗಿ ಸಮೀಪದ ಸರ್ಕಾರಿ ಪ್ರೌಢಶಾಲೆಯು ಜಲಾವೃತಗೊಂಡಿದ್ದರಿಂದ, ಸುಮಾರು 150 ವಿದ್ಯಾರ್ಥಿಗಳು ಹಾಗೂ ಆರು ಶಿಕ್ಷಕರು ಮೂರೂವರೆ ತಾಸು ಹೊರಬರಲಾಗದೆ ಸಿಲುಕಿದರು.
ಜವಳಿ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರ ಗ್ರಾಮದಲ್ಲಿ ಘಟನೆ ನಡೆದಿದೆ. ಸಂಜೆ 4.30ರ ಸುಮಾರಿಗೆ ಅರ್ಧ ತಾಸು ಸುರಿದ ಮಳೆಗೆ, ಶಾಲೆಯಿಂದ ಅನತಿ ದೂರದಲ್ಲಿ ಹರಿಯುವ ಹಳ್ಳದ ನೀರು ಶಾಲೆ ಕಟ್ಟಡವನ್ನು ಆವರಿಸಿತು. ನೀರನ ಪ್ರಮಾಣ ಹೆಚ್ಚಾಗಿದ್ದರಿಂದ, ವಿದ್ಯಾರ್ಥಿಗಳು ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ.
‘ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯೊಳಗೆ ಸಿಲುಕಿರುವ ವಿಷಯ ತಿಳಿಯುತ್ತಿದ್ದಂತೆ, ಎಸ್‌ಡಿಎಂಸಿ ಸದಸ್ಯರೊಂದಿಗೆ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ತೆರಳಿದೆವು. ನೀರಿನ ಹರಿವು ತಗ್ಗುವವರೆಗೆ ಹೊರ ಬಾರದೆ, ಒಳಗೆ ಇರುವಂತೆ ಶಿಕ್ಷಕರಿಗೆ ಸೂಚಿಸಿದೆವು. ರಾತ್ರಿ 7.30ರ ಸುಮಾರಿಗೆ ನೀರಿನ ಪ್ರಮಾಣ ತಗ್ಗಿದ ಬಳಿಕ ಟ್ರಾಕ್ಟರ್‌ನಲ್ಲಿ ಎಲ್ಲರನ್ನೂ ಸುರಕ್ಷಿತವಾಗಿ ಕರೆತಂದೆವು’ ಎಂದು ಬೆಳವಟಗಿ ಗ್ರಾಮ ಪಂಚಾಯ್ತಿ ಪಿಡಿಒ ಶಿವಾನಂದ ಹಂಪಿಹೊಳಿ ತಿಳಿಸಿದರು.
ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ್ದ ಶಾಲೆಯ ನೂತನ ಕಟ್ಟಡವನ್ನು ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿತ್ತು. ಪ್ರಸಕ್ತ ಸಾಲಿನಿಂದ ಅಲ್ಲಿ ತರಗತಿಗಳು ಆರಂಭಗೊಂಡಿದ್ದವು. ಶಾಲೆ ಸುತ್ತಮುತ್ತಲಿನ ಹೊಲಗಳ ನೀರು ಸರಾಗವಾಗಿ ಹರಿದುಹೋಗಲು ಹಳ್ಳ ಸೇರಲು ಸಿಡಿ ನಿರ್ಮಿಸಿದ್ದರೆ, ಈ ಅನಾಹುತ ಸಂಭವಿಸುತ್ತಿರಲಿಲ್ಲ. ಮಳೆಗಾಲಕ್ಕೂ ಮುಂಚೆಯೇ ಶಾಲೆಯ ರಸ್ತೆಯನ್ನು ಮತ್ತಷ್ಟು ಎತ್ತರಗೊಳಿಸದಿದ್ದರೆ, ಮತ್ತೆ ಇದೇ ರೀತಿಯ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.