ADVERTISEMENT

ನವಲಗುಂದ | ತೀವ್ರ ಮಳೆ ಸಾಧ್ಯತೆ: ಎಚ್ಚರ ವಹಿಸಲು ತಹಶೀಲ್ದಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:05 IST
Last Updated 16 ಅಕ್ಟೋಬರ್ 2024, 14:05 IST
ಸುಧೀರ್ ಸಾಹುಕಾರ್
ಸುಧೀರ್ ಸಾಹುಕಾರ್   

ನವಲಗುಂದ: ‘ವಾಯುಭಾರ ಕುಸಿತದಿಂದ ತಾಲ್ಲೂಕಿನ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಸೇರಿ ಅಚ್ಚು–ಕಟ್ಟು ಪ್ರದೇಶದಲ್ಲಿ ಎರಡು ದಿನ ಗುಡುಗು–ಸಿಡಿಲಿನಿಂದ ಹೆಚ್ಚಿನ ಮಳೆಯಾಗುವ ಸಂಭವವಿರುತ್ತದೆ. ಸಾರ್ವಜನಿಕರು ಮುಂಜಾಗ್ರತೆಯಿಂದ ಇರಬೇಕು’ ಎಂದು ತಹಶೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದ್ದಾರೆ.

‘ಪ್ರವಾಹ, ಭಾರಿ ಮಳೆಯಿಂದ ಯಾವುದೇ ಜನ–ಜಾನುವಾರು ಜೀವಹಾನಿಯಾಗದಂತೆ ಕ್ರಮ ವಹಿಸಬೇಕು. ಗುಡುಗು-ಸಿಡಿಲಿನಿಂದಾಗುವ ಅನಾಹುತಗಳ ಕುರಿತು ಸಾರ್ವಜನಿಕರಿಗೆ ಹಾಗೂ ರೈತರಲ್ಲಿ ಎಚ್ಚರ ಮೂಡಿಸಬೇಕು. ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ-ಕರುಗಳನ್ನು ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತಿತರೆ ಚಟುವಟಿಕೆ ನಡೆಸದಂತೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

‘ಹಳ್ಳ, ಕೆರೆ ದಡ ಸೇರಿದಂತೆ ಅಪಾಯವಿರುವ ಸೇತುವೆಗಳಲ್ಲಿ ಫೋಟೊ, ಸೆಲ್ಫಿಗಳನ್ನು ತೆಗೆಯದಂತೆ ಸಾರ್ವಜನಿಕರಿಗೆ ಅಧಿಕಾರಿಗಳು ತಿಳಿಹೇಳಬೇಕು. ಪ್ರತಿ ಗ್ರಾಮದಲ್ಲಿ ಡಂಗುರ ಸಾರುವುದು, ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

‘ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂಭವ ಇರುತ್ತದೆ. ಆದ್ದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಗತ್ಯ ಇರುವ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.