ADVERTISEMENT

ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪಾದಯಾತ್ರೆ

ರೈತ ಸೇನಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 13:12 IST
Last Updated 19 ಫೆಬ್ರುವರಿ 2022, 13:12 IST

ಹುಬ್ಬಳ್ಳಿ: ‘ಉತ್ತರ ಕರ್ನಾಟಕದ ನೀರಾವರಿ ಯೋಜನೆ ಅನುಷ್ಠಾನ ಹಾಗೂ ರೈತರಿಗೆ ಶಾಶ್ವತ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ, ಮಾರ್ಚ್‌ ಮೊದಲ ವಾರದಲ್ಲಿ ನರಗುಂದದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು’ ಎಂದು ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಉತ್ತರ ಕರ್ನಾಟಕದವರೇ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕಾಳಜಿ ವಹಿಸುತ್ತಿಲ್ಲ. ಈ ಭಾಗದಿಂದ ಆಯ್ಕೆ ಆಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಸಹ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರೈತರ ಉತ್ಪನ್ನ ಮಾರಾಟಕ್ಕೆ ರಾಜ್ಯ ಸರ್ಕಾರ ಶಾಶ್ವತ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಇದಕ್ಕೆ ಬಜೆಟ್‌ನಲ್ಲಿ ₹10 ಸಾವಿರ ಕೋಟಿ ಮೀಸಲಿಡಬೇಕು. ಕೇಂದ್ರ ಸರ್ಕಾರ ನಿಗದಿ ಮಾಡುವ ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರ ಗೌರವ ಧನ ನೀಡಬೇಕು. ರೈತರ ಬೆಳೆಗೆ ಸೂಕ್ತ ಬೆಲೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮಹದಾಯಿ ಯೋಜನೆ ಜಾರಿಗೆ ಸರ್ಕಾರ ₹1,600 ಕೋಟಿ ಮೀಸಲಿರಿಸಿದ್ದರೂ, ಇಲ್ಲಿಯವರೆಗೆ ಕಾಮಗಾರಿ ಪ್ರಾರಂಭಿಸದೆ ಇರುವುದು ಈ ಭಾಗದ ಜನರಿಗೆ ಮಾಡಿದ ಅನ್ಯಾಯವಾಗಿದೆ. ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಕೆಲವು ಬ್ಯಾಂಕ್‌ನ ಸಿಬ್ಬಂದಿ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಕೃಷ್ಣಾ ನದಿ ನೀರಿನ ಬಳಸಿಕೊಳ್ಳಲು ಸರ್ಕಾರ ಯೋಜನೆ ರೂಪಿಸಬೇಕು. ನಂಜುಂಡಪ್ಪ ವರದಿಯಂತೆ 9 ಇಲಾಖೆಗಳ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

‘ಮಹದಾಯಿ ಹೋರಾಟದಲ್ಲಿ ಭಾಗಿಯಾದ ರೈತರಿಗೆ ಯಾವುದೇ ಲಾಭವಾಗಿಲ್ಲ. ಈ ಹೋರಾಟದ ಹೆಸರಿನಲ್ಲಿ ಕೆಲವರು ರಾಜಕೀಯ ನಾಯಕರು ಬೆಳೆದಿದ್ದಾರೆ. ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಲಾಭವಾಗಿದೆ’ ಎಂದು ಆರೋಪಿಸಿದರು.
ಸಂಘಟನೆಯ ಉಪಾಧ್ಯಕ್ಷ ಮಲ್ಲಣ್ಣ ಆಲೇಕರ, ವಕ್ತಾರ ಗುರು ರಾಯನಗೌಡ್ರ, ಬಸವರಾಜ ಗುಡಿ, ಚಿದಾನಂದ ಹುಬ್ಬಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.