ADVERTISEMENT

ಹುಬ್ಬಳ್ಳಿ: ಹಿಂದೂ ಮಹಾಗಣಪತಿಗೆ ಭಕ್ತಿ, ಸಡಗರದ ವಿದಾಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 16:17 IST
Last Updated 27 ಸೆಪ್ಟೆಂಬರ್ 2024, 16:17 IST
ಹುಬ್ಬಳ್ಳಿಯ ಅಶೋಕ ನಗರದಲ್ಲಿ ಹಿಂದೂ ಮಹಾಗಣಪತಿ ಮಂಡಳದ ಗಣೇಶ ಮೂರ್ತಿ ಮೆರವಣಿಗೆಗೆ ಭಗವಾ ಧ್ವಜ ಹಾರಿಸುವ ಮೂಲಕ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು
ಹುಬ್ಬಳ್ಳಿಯ ಅಶೋಕ ನಗರದಲ್ಲಿ ಹಿಂದೂ ಮಹಾಗಣಪತಿ ಮಂಡಳದ ಗಣೇಶ ಮೂರ್ತಿ ಮೆರವಣಿಗೆಗೆ ಭಗವಾ ಧ್ವಜ ಹಾರಿಸುವ ಮೂಲಕ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು   

ಹುಬ್ಬಳ್ಳಿ: ಇಲ್ಲಿನ ನವನಗರದಲ್ಲಿ ಹಿಂದೂ ಮಹಾಗಣಪತಿ ಮಂಡಳ ಹಾಗೂ ಅಶೋಕ ನಗರದಲ್ಲಿ ಹುಬ್ಬಳ್ಳಿ ಹಿಂದೂ ಮಹಾಗಣಪತಿ ಮಂಡಳದಿಂದ ಪ್ರತಿಷ್ಠಾಪಿಸಿದ್ದ 21ನೇ ದಿನದ ಗಣೇಶ ಮೂರ್ತಿಗಳನ್ನು ಡಿ.ಜೆ ಅಬ್ಬರ, ಅದ್ಧೂರಿ ಮೆರವಣಿಗೆಯೊಂದಿಗೆ ಶುಕ್ರವಾರ ತಡರಾತ್ರಿ ವಿಸರ್ಜಿಸಲಾಯಿತು. ಈ ಮೂಲಕ ಈ ವರ್ಷದ ಗಣೇಶೋತ್ಸವ ಆಚರಣೆಗೆ ತೆರೆಬಿತ್ತು.

ನವನಗರದ ಕಾಶಿ ಶಾಖಾ ಮಠದ ರಾಜಶೇಖರ ಶಿವಾಚಾರ್ಯರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ನವನಗರ, ಗಾಮನಗಟ್ಟಿ, ರಾಯಾಪುರ, ಸುತಗಟ್ಟಿ, ಪಂಚಾಕ್ಷರ ನಗರ, ಕೆ.ಸಿ.ಸಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಬಡಾವಣೆ ಹಾಗೂ ಹುಬ್ಬಳ್ಳಿ–ಧಾರವಾಡದ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಗಣೇಶ ಮೂರ್ತಿಯನ್ನು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ನವನಗರದ ಮಹಾವೀರ ವೃತ್ತದಿಂದ ಆರಂಭಗೊಂಡ ಮೆರವಣಿಗೆ, ನಮೋ ಭಾರತ ಸರ್ಕಲ್, ಪುನೀತ್ ರಾಜ್‌ಕುಮಾರ ಸರ್ಕಲ್, ಕರ್ನಾಟಕ ವೃತ್ತ, ಬಸವೇಶ್ವರ ಸರ್ಕಲ್, ಬಾಲಮಂದಿರ ದೇವಸ್ಥಾನದ ಮಾರ್ಗವಾಗಿ ಬೈರಿದೇವರಕೊಪ್ಪದ ಶಾಂತಿ ನಿಕೇತನ ಕಾಲೊನಿವರೆಗೂ ಸಾಗಿತು. ಸನಾ ಕಾಲೇಜು ಸಮೀಪದ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಯಿತು.

ADVERTISEMENT

ಅಪ್ಪಾಜಿ ಜನಸೇವಾ ಸೇವಾ ಟ್ರಸ್ಟ್, ನವಶಕ್ತಿ ಮಹಿಳಾ ಮಂಡಳದ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ಧಕ್ಕೂ ಗಣಪತಿ ಬಪ್ಪಾ ಮೋರಯಾ, ಮಂಗಳಮೂರ್ತಿ ಮೋರಯಾ’, ‘ಜೈ ಶ್ರೀರಾಮ್‌’, ‘ಜೈ ಭಜರಂಗಿ’, ‘ಗಜಾನನ ಮಹಾರಾಜ ಕೀ ಜೈ’ ಘೋಷಣೆಗಳು ಮೊಳಗಿದವು. ಡಿ.ಜೆ ಸದ್ದಿಗೆ ಯುವಕ, ಯುವತಿಯರು, ಮಕ್ಕಳು ಕುಣಿದು ಕುಪ್ಪಳಿಸಿದರು. ಪಟಾಕಿಗಳನ್ನು ಸಿಡಿಸಿ, ಗುಲಾಲ್ ಎರಚಿ ಸಂಭ್ರಮಿಸಿದರು.

ಕೆಲವರು ಕೇಸರಿ ಪೇಟ, ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೇಸರಿ ಬಾವುಟ, ಭಗವಾಧ್ವಜ ಹಿಡಿದು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು.

ಗಣೇಶ ಮೂರ್ತಿ ಮೆರವಣಿಗೆ ವೇಳೆ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ನವನಗರ, ಹುಬ್ಬಳ್ಳಿ ಹಾಗೂ ಧಾರವಾಡ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿತ್ತು.

ಭಗವಾ ಧ್ವಜ ಹಾರಿಸಿ ಸಂಭ್ರಮಿಸಿದ ಶಾಸಕ

ಹುಬ್ಬಳ್ಳಿ: ಅಶೋಕ ನಗರದ ಹುಬ್ಬಳ್ಳಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯೂ ಸಾವಿರಾರು ಜನರ ನಡುವೆ ಸಂಭ್ರಮದಿಂದ ನಡೆಯಿತು. ಮೆರವಣಿಗೆಗೆ ಶಾಸಕ ಮಹೇಶ ಟೆಂಗಿನಕಾಯಿ ಭಗವಾ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು. ದೇಶಪಾಂಡೆ ನಗರ ಕಾಟಾ ಮಾರ್ಕೆಟ್‌ ಚನ್ನಮ್ಮ ವೃತ್ತ ಮಾರ್ಗವಾಗಿ ಡಿ.ಜೆ ಸದ್ದಿನೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿ ಇಂದಿರಾ ಗಾಜಿನ ಮನೆ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಯಿತು.

ಸಾಮರಸ್ಯದ ಸಂದೇಶ ಸಾರಿದ ಜನತೆ

ಹಿಂದೂ ಮಹಾಗಣಪತಿ ಮಂಡಳಿಯಿಂದ ನವನಗರದಲ್ಲಿ ಎರಡನೇ ಬಾರಿಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಮೂರ್ತಿ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆಯವರೆಗೂ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಎಲ್ಲ ಧರ್ಮದವರು ಭಾಗಿಯಾಗಿ ಸಾಮರಸ್ಯ ಮೆರೆದರು. ಮುಸ್ಲಿಂ ಸಮುದಾಯದವರು ಪ್ರತಿನಿತ್ಯ ಇಲ್ಲಿನ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರೆ ಮಸೀದಿಯಲ್ಲಿ ಮುಸ್ಲಿಮರ ಪ್ರಾರ್ಥನೆ ವೇಳೆ ಗಣೇಶ ಮಂಡಳಿಯವರು ಹಾಡುಗಳನ್ನು ಹಾಕದೆ ಸಹಕರಿಸಿದರು. ಶುಕ್ರವಾರ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಎಲ್ಲ ಧರ್ಮದವರು ಭಾಗವಹಿಸಿ ಶಾಂತಿಯುತವಾಗಿ ಕಾರ್ಯಕ್ರಮ ನೆರವೇರಿಸಿ ಮಾದರಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.