ಕುಂದಗೋಳ: ಕಿತ್ತೂರು ಕರ್ನಾಟಕ ಭಾಗದ ಕೊರಳಿಗೆ ಸಾಹಿತ್ಯ, ಕಲೆ, ಸಂಗೀತ, ಶಿಕ್ಷಣದ ಮುತ್ತುಗಳ ಒಡವೆಯೇ ಧಾರವಾಡ. ಜಿಲ್ಲೆಯಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಹೆಸರುವಾಸಿಯಾಗಿರುವುದು ಕುಂದಗೋಳದ ನಾಡಗೀರ ವಾಡೆ.
ಪಟ್ಟಣದ ‘ನಾಡಗೀರ ವಾಡೆ’ ಸವಾಯಿ ಗಂಧರ್ವ, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಅವರ ಸಂಗೀತದ ಆಲಾಪವನ್ನು ಜಗತ್ತಿಗೆ ಹರಡಿದ ಜಾಗ ಎಂಬುದು ಬಹುತೇಕರಿಗೆ ಗೊತ್ತಿಲ್ಲ.
19ನೇ ಶತಮಾನದ ಆರಂಭದಯಲ್ಲಿ ಒಂದು ದಿನ ರಾತ್ರಿ ಉಸ್ತಾದ್ ಅಬ್ದುಲ್ ಕರೀಂಖಾನ್‍ರ ಸಂಗೀತ ಗೋಷ್ಠಿ ನಡೆಯಿತು. ಮರುದಿನ ಬೆಳಿಗ್ಗೆ ಬಾಲಕನೊಬ್ಬ ಅದೇ ರಾಗವನ್ನು ಯಥಾವತ್ತಾಗಿ ಗುನುಗುತ್ತಿದ್ದ. ಇದನ್ನು ಗಮನಿಸಿದ ಜಮೀನ್ದಾರ ರಂಗನಗೌಡ ನಾಡಿಗೇರ ಅವರು ಉಸ್ತಾದ್ ಅವರನ್ನು ಕರೆದು ‘ನೋಡಿ ನಮ್ಮ ಖಾರಕೂನ ಗಣೇಶ ಜೋಶಿ ಮಗ ಥೇಟ್ ನಿಮ್ಮಂತೆ ಹಾಡುತ್ತಿರುವ’ ಎಂದರಂತೆ.
ಉಸ್ತಾದ್, ಆ ಬಾಲಕನನ್ನು ಕರೆದು ಮತ್ತೊಮ್ಮೆ ಹಾಡಲು ಹೇಳಿದರು. ಹುಡುಗ ಹಾಡಿದ್ದನ್ನು ಕೇಳಿ ಮನಸೋತರು. ಮುಂದೇ ನಡೆದದ್ದು ಇತಿಹಾಸ. ಆ ಬಾಲಕನ ಹೆಸರು ರಾಮ್‌ಭಾವು; ಇವರೇ ನಮ್ಮ ಸವಾಯಿ ಗಂಧರ್ವ.
ಆನಂತರ ಸವಾಯಿ ಗಂಧರ್ವರು ದೇಶದಾದ್ಯಂತ ಅನೇಕ ಕಡೆ ಸಂಗೀತ ಗೋಷ್ಠಿ ನಡೆಸಿದರು. ಅವರ ಸಂಗೀತ ಸೇವೆ ಆರಂಭವಾದ ನಾಡಗೀರ ವಾಡೆಯಿಂದಲೇ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಎಂಬ ಜಗದ್ವಿಖ್ಯಾತ ಸಂಗೀತಗಾರರು ಹೊರಹೊಮ್ಮಿದರು.
ಸವಾಯಿ ಗಂಧರ್ವರ ಸಮಕಾಲೀನ ಸಂಗೀತಜ್ಞರು ಕುಂದಗೋಳದ ವಾಡೆಗೆ ಬಂದು ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಸವಾಯಿ ಗಂಧರ್ವರು 1952 ಸೆ.12ರಂದು ಕಾಲವಾದ ನಂತರ ಅವರ ನೆನಪಲ್ಲಿ ಪ್ರತಿವರ್ಷ ಎರಡು ದಿನ ಅಹೋರಾತ್ರಿ ಸಂಗೀತ ಮಹೋತ್ಸವ ನಡೆಸುವ ಸಂಪ್ರದಾಯ ಸಾಗಿಬಂದಿದೆ.
ಇಲ್ಲಿ ಭೀಮಸೇನ್ ಜೋಶಿ ಅವರು ಸತತ 10 ವರ್ಷ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಖ್ಯಾತ ಸಂಗೀತಗಾರರಾದ ಮಲ್ಲಿಕಾರ್ಜುನ ಮನಸೂರು, ಪಂಡಿತ್ ಬಸವರಾಜ ರಾಜಗುರು, ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು, ಉತ್ತರ ಭಾರತದ ಮಾಣಿಕ್ ಭಿಡೆ, ಅಶ್ವಿನಿ ಭಿಡೆ, ರತ್ನಾಕರ ಫೈ, ಹೀರಾಬಾಯಿ, ಬೆಹೆರ್ ಬುವಾ, ಫಿರೋಜ ದಸ್ತೂರ್, ಮಾಣಿಕ್ ವರ್ಮಾ, ದೊರೆಸ್ವಾಮಿ ಅಯ್ಯಂಗಾರ್, ಮಾಲಿನಿ ರಾಜೂರಕರ್ ಅವರ ಸಂಗೀತ ಮೇಳಕ್ಕೂ ಈ ವಾಡೆ ಸಾಕ್ಷಿಯಾಗಿತ್ತು.
ಸಂಗೀತ ಆಸಕ್ತರ ಸಂಖ್ಯೆ ಹೆಚ್ಚಿದಂತೆ, ವಾಡೆ ಜಾಗ ಚಿಕ್ಕದಾಯಿತು. ಎಪಿಎಂಸಿ ಯಾರ್ಡ್‌ನಲ್ಲಿ ಕೆಲ ಕಾಲ ಸಂಗೀತೋತ್ಸವ ನಡೆಯಿತು. ಸದ್ಯ ಪಟ್ಟಣದ ಸವಾಯಿ ಗಂಧರ್ವ ಕಲಾಮಂದಿರ ದಲ್ಲಿ ಸಂಗೀತೋತ್ಸವ ನಡೆಯುತ್ತದೆ. ನಾಡಗೀರ ಕುಟುಂಬದ ಐದನೇ ತಲೆಮಾರಿನ ಸಂಗೀತ ಆರಾಧಕ ಅರ್ಜುನ ನಾಡಿಗೇರ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದಾರೆ.
ಇಂದಿಗೂ ವಾಡೆಯು ಸಂಗೀತದಿಂದ ದೂರ ಉಳಿದಿಲ್ಲ. ಸಾಹಿತ್ಯ, ಕಲೆ, ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಆಗಾಗ ನಡೆಯುತ್ತಲೇ ಇರುತ್ತವೆ.
ಸವಾಯಿ ಗಂಧರ್ವರ ನೆನಪಲ್ಲಿ ವಾಡೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳುತ್ತಿದ್ದು ಗಂಗೂಬಾಯಿ ಹಾನಗಲ್ ಎನ್ನುವುದು ವಿಶೇಷ. ಪ್ರಸಿದ್ದ ಸಂಗೀತಗಾರರನ್ನು ಕರೆಸುವುದು, ಉಸ್ತುವಾರಿ, ವಸತಿ, ಊಟ, ವ್ಯವಸ್ಥೆಗೆ ನಾಡಗೀರ ಕುಟುಂಬ ಆರ್ಥಿಕವಾಗಿ ಬೆನ್ನೆಲುಬಾಗಿತ್ತು.
ನಾಡಗೀರ ಜಮೀನ್ದಾರರ ಜಮೀನಿನಲ್ಲಿ ದುಡಿಯುತ್ತಿದ್ದ ಅನೇಕ ಕೂಲಿಕಾರರಿಗೂ ಸಂಗೀತದ ರಾಗಗಳ ಪರಿಚಯವಿತ್ತು ಎನ್ನುವುದು ವಿಶೇಷ.
ನಾವು ಚಿಕ್ಕವರಿದ್ದಾಗಿನಿಂದ ವಾಡೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಕ್ಕೆ ಹೋಗುತ್ತಿ ದ್ದೆವು. ಹಿಂದೂಸ್ತಾನಿ ಸಂಗೀತಕ್ಕೆ ವಾಡೆ ಕೊಡುಗೆ ದೊಡ್ಡದು–ತಿಪ್ಪಣ್ಣ ಈಟಿ, ಸಂಗೀತಗಾರ, ಯರಗುಪ್ಪಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.