ಹಲಗಿ ಹೊಡಿಯೋಣ ಬಾರಾ
ಹಲಗಿ ಹೊಡಿಯೋಣ...
ಹೋಳಿಯ ರಂಗಿನಾಟದಲಿ
ಕಲ್ಮಶ ತೊರೆಯುತ ಮನಸುಗಳ ಬೆಸೆಯೋಣ
ಹಲಗಿಯ ತಾಳದಲಿ ಬಣ್ಣದೋಕುಳಿಯಲಿ
ಅಹಂ ತೊರೆದು ಸೌಹಾರ್ದವ ಕಟ್ಟೋಣ
ಹಲಗಿ ಹೊಡಿಯೋಣ ಬಾರಾ
ಹಲಗಿ ಹೊಡಿಯೋಣ...
ಬಣ್ಣದೋಕುಳಿಯ ಹಬ್ಬವಾದ ಹೋಳಿಯ ಸಂಗಾತಿ ಹಲಗಿ ಅಥವಾ ತಮಟೆ. ಬಣ್ಣದಾಟಕ್ಕೆ ಹಲಗಿಯ ತಾಳ ಬೆರೆತಾಗಲೇ ಹೋಳಿಗೆ ನಿಜವಾದ ಕಳೆ ಬರುವುದು. ಹಾಗಾಗಿ, ರಂಗಿನಾಟದ ಪ್ರಮುಖ ಆಕರ್ಷಣೆ ಎಂದರೆ ಹಲಗಿಯೇ. ಬಣ್ಣದ ಚಿತ್ತಾರದಲ್ಲಿ ತಾಳಕ್ಕೆ ಮೈ ಮರೆತು ಮನುಷ್ಯ ಹೆಜ್ಜೆ ಹಾಕುವಂತೆ ಮಾಡುವ ಸಾಮರ್ಥ್ಯ ಹಲಗಿಗೆ ಇದೆ.
ಹಲಗಿ ಮತ್ತು ಮನುಷ್ಯನದು ತಾಳಾತ್ಮಕ ಮತ್ತು ಭಾವನಾತ್ಮಕ ಸಂಬಂಧ. ಮನುಷ್ಯನ ಹುಟ್ಟು, ಬದುಕಿನ ಸಂಭ್ರಮ ಹಾಗೂ ಸಾವಿನ ಮೆರವಣಿಗೆವರೆಗೂ ಅದು ಆತನ ಆಪ್ತ ಸಂಗಾತಿ. ಗ್ರಾಮ ದೇವರುಗಳ ಅಡ್ಡೆಯನ್ನು (ಪಲ್ಲಕ್ಕಿ) ಎತ್ತಿ ಕುಣಿಸಲು, ದೇವರನ್ನು ಹೊತ್ತ ತೇರು ಮುಂದಕ್ಕೆ ಸಾಗಲು ಅದರ ತಾಳ–ಮೇಳ, ಸದ್ದು–ಸಪ್ಪಳ ಬೇಕೇ ಬೇಕು. ಇಲ್ಲದಿದ್ದರೆ, ಆ ಸಂಭ್ರಮವೇ ಅಪೂರ್ಣ.
ಆಧುನಿಕತೆಯ ಈ ಹೊತ್ತಿನಲ್ಲೂ ಉತ್ತರ ಕರ್ನಾಟಕದ ಹಲವೆಡೆ ಹಲಗಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಚೀಲ ಸೇರಿರುವ ಹಲಗಿಗಳು ಹೋಳಿ ಹಬ್ಬದಲ್ಲಿ ಹೊರ ಬರುತ್ತವೆ. ಇದೀಗ ಹುಬ್ಬಳ್ಳಿಯಲ್ಲಿ ಹಬ್ಬದ ತಯಾರಿ ನಿಧಾನವಾಗಿ ರಂಗೇರುತ್ತಿದೆ. ಬಗೆಬಗೆಯ ಬಣ್ಣಗಳ ಜತೆಗೆ, ವಿವಿಧ ಆಕಾರದ ಮತ್ತು ಗಾತ್ರದ ಹಲಗಿಗಳ ಮಾರಾಟವೂ ಜೋರಾಗಿದೆ. ಹುಬ್ಬಳ್ಳಿಯ ಕೋರ್ಟ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮನ ವೃತ್ತ, ದುರ್ಗದ ಬೈಲ್ ಸೇರಿದಂತೆ ವಿವಿಧೆಡೆ ಹಲಗಿ ಖರೀದಿ ಭರಾಟೆಯೂ ಹೆಚ್ಚಾಗಿದೆ.
ಹಲಗಿ ನಂಬಿಯೇ ಬದುಕು
ಹಬ್ಬದ ಉತ್ಸಾಹ ಏರಿಸುವ ಹಲಗಿ, ನೂರಾರು ಮಂದಿಯ ಬದುಕಿನ ದಾರಿಯೂ ಹೌದು. ನಗರದ ವಿವಿಧೆಡೆ ಬೀದಿಯಲ್ಲಿ ರಾಶಿ ಹಾಕಿಕೊಂಡ ಹಲಗಿ ಮಾರಾಟ ಮಾಡುತ್ತಿರುವ ಬಗರಿಕಾರರು ಸೇರಿದಂತೆ ವಿವಿಧ ಜನರು ತಮ್ಮ ತುತ್ತಿ ಚೀಲ ತುಂಬಿಸಿಕೊಳ್ಳಲು ಹಲಗಿ ತಯಾರಿಕೆ ಮತ್ತು ಮಾರಾಟವನ್ನು ಅವಲಂಬಿಸಿದ್ದಾರೆ.
‘ನಮ್ಮ ಪೂರ್ವಿಕರ ಕಾಲದಿಂದ ಹಲಗಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ಈ ಕೆಲಸ ಬಿಟ್ಟರೆ, ಬೇರೇನೂ ಗೊತ್ತಿಲ್ಲ. ಸಂಗೀತಕ್ಕೆ ಬೇಕಾದ ತಬಲಾ, ಡಗ್ಗಾ, ಡೋಲಕ,
ಹಲಗಿ ಸೇರಿದಂತೆ ವಿವಿಧ ಪರಿಕರಗಳನ್ನು ತಯಾರಿ, ಮಾರಾಟ ಹಾಗೂ ರಿಪೇರಿ ಮಾಡುವುದು ಬಗರಿಕಾರರಾದ ನಮ್ಮ ಕುಲಕಸುಬಾಗಿದೆ’ ಎನ್ನುತ್ತಾರೆ ಹಾವೇರಿ ಜಿಲ್ಲೆಯ ಹಾನಗಲ್‌ನ ನಾಗರಾಜ.
ನಗರದ ಹಳೇ ಕೋರ್ಟ್ ವೃತ್ತದ ಬಳಿ ಇರುವ ಸಾಯಿಬಾಬಾ ಮಂದಿರದ ಎದುರಿನ ರಸ್ತೆ ಬದಿ ಕುಟುಂಬ ಸಮೇತ ಬೀಡುಬಿಟ್ಟಿರುವ ಅವರು, ಮೂರ್ನಾಲ್ಕು ದಿನಗಳಿಂದ ಹಲಗಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರಿಗೆ ಪತ್ನಿ ಹಾಗೂ ಮಕ್ಕಳು ಕೂಡ ಸಾಥ್ ನೀಡುತ್ತಿದ್ದಾರೆ.
ಎಲ್ಲವೂ ಬದಲಾಗಿದೆ
‘ಹಲಗಿ ತಯಾರಿಕೆ ಮತ್ತು ವ್ಯಾಪಾರದಲ್ಲಿ ತುಂಬಾ ಬದಲಾವಣೆಯಾಗಿದೆ. ಹಿಂದೆ ಹಲಗಿಯನ್ನು ಕೇವಲ ಚರ್ಮದಲ್ಲಿ ಮಾಡಲಾಗುತ್ತಿತ್ತು. ಆದರೆ, ಈಗ ಫೈಬರ್ ಹಲಗಿಗಳು ಲಗ್ಗೆ ಇಟ್ಟಿವೆ. ಹಾಗಾಗಿ, ಇದನ್ನೇ ನಂಬಿಕೊಂಡಿದ್ದ ನೂರಾರು ಕುಟುಂಬಗಳು ಕಸುಬು ಬಿಟ್ಟು, ಬೇರೆ ಉದ್ಯೋಗಗಳನ್ನು ಅವಲಂಬಿಸಿದವು. ಆದರೆ, ನಮಗೆ ಈ ಕೆಲಸ ಬಿಟ್ಟರೆ ಬೇರೆ ಗೊತ್ತಿಲ್ಲ. ಹಾಗಾಗಿ, ಇದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎನ್ನುತ್ತಾರೆ ನಾಗರಾಜ.
‘ಹಾನಗಲ್‌ನಲ್ಲಿ ಹಲಗಿ ವಾದ್ಯಗಳ ಅಂಗಡಿ ಇಟ್ಟುಕೊಂಡಿರುವ ನಾವು, ಹೋಳಿ ಸಂದರ್ಭದಲ್ಲಿ ಮಾತ್ರ ಹುಬ್ಬಳ್ಳಿಗೆ ವ್ಯಾಪಾರಕ್ಕಾಗಿ ಸಂಸಾರ ಸಮೇತ ಬರುತ್ತೇವೆ. ಹಬ್ಬದ ಸಂದರ್ಭದಲ್ಲಿ ಹಲಗಿ ಖರೀದಿಸುವವರ ಸಂಖ್ಯೆ ಇಲ್ಲಿ ಹೆಚ್ಚು. ಸಣ್ಣ ಗಾತ್ರದ ಫೈಬರ್ ಮತ್ತು ಚರ್ಮದ ಹಲಗಿಗಳಿಂದಿಡಿದು, ಕನಿಷ್ಠ ₹100ರಿಂದ ಸಾವಿರದವರೆಗಿನ ಬಗೆಬಗೆಯ ಹಲಗಿಗಳು ನಮ್ಮಲಿವೆ’ ಎನ್ನುತ್ತಾರೆ ಅವರು.
‘ಮಹಾರಾಷ್ಟ್ರದ ಮೀರಜ್‌ನಿಂದ ಹಲಗಿ ತಯಾರಿಕೆಗೆ ಬೇಕಾದ ವಸ್ತುಗಳನ್ನು ತರಿಸುತ್ತೇವೆ. ಕುರಿ ಚರ್ಮವೂ ಅಲ್ಲಿಂದಲೇ ಬರುತ್ತದೆ. ಬಳಿಕ, ಮನೆಯವರೆಲ್ಲರೂ ಕುಳಿತು ತಯಾರಿಸುತ್ತೇವೆ. ಇದು ವಂಶಪಾರಂಪರ್ಯ ಕಲೆಯಾದ್ದರಿಂದ ಇದಕ್ಕೆ ತರಬೇತಿ ಬೇಕಿಲ್ಲ. ನೋಡನೋಡುತ್ತಲೇ ಎಲ್ಲವೂ ಕರಗತವಾಗಿ ಬಿಡುತ್ತದೆ’ ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ ಶಂಕರ್.
ಸಂಭ್ರಮ ಹೆಚ್ಚಿಸಿದ ‘ಜಗ್ಗಲಗಿ ಹಬ್ಬ’
ಹಲಗಿ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ನಾಲ್ಕು ವರ್ಷದಿಂದ ಹಲಗಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಬದಲಾದ ಕಾಲಕ್ಕೆ ತಕ್ಕಂತೆ ಈ ಹಬ್ಬಕ್ಕೆ ಆಧುನಿಕ ಸ್ಪರ್ಶ ನೀಡಿ ಜನಪ್ರಿಯಗೊಳಿಸಿರುವುದು ಈ ಹಬ್ಬದ ವಿಶೇಷವಾಗಿದ್ದು, ಈ ಬಾರಿ, ಮಾರ್ಚ್ 11ರಂದು ಜರುಗಲಿದೆ.
‘ಮೂಲೆ ಗುಂಪಾಗಿದ್ದ ಹಲಗಿ ಮತ್ತು ಜಗ್ಗಲಗಿ ಕಲಾವಿದರನ್ನು ಗುರುತಿಸಿ ಈ ಹಬ್ಬಕ್ಕೆ ಆಹ್ವಾನಿಸಿ ಪ್ರೋತ್ಸಾಹಿಸಲಾಗುತ್ತಿದೆ. ಭಾಗವಹಿಸುವ ಕಲಾವಿದರ ಸಂಖ್ಯೆವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜನರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಆಧುನಿಕತೆಯಲ್ಲಿ ಕಳೆದು ಹೋಗಿರುವ ನಮ್ಮ ಸಂಸ್ಕೃತಿಯ ಹಬ್ಬಗಳಿಗೆ ಹೊಸ ರೂಪ ಕೊಟ್ಟು, ಮುಂದಿನ ಪೀಳಿಗೆಗೆ ಅವುಗಳನ್ನು ಪರಿಚಯಿಸುವುದು ಈ ಹಬ್ಬದ ಉದ್ದೇಶ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಹಬ್ಬದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದ್ದು, ಈ ಬಾರಿ ಹಬ್ಬವು ಮತ್ತಷ್ಟು ಅದ್ಧೂರಿಯಾಗಿರಲಿದೆ’ ಎನ್ನುತ್ತಾರೆ ಜಗ್ಗಲಗಿ ಹಬ್ಬದ ಆಯೋಜಕರಾದ ಮಹೇಶ ಟೆಂಗಿನಕಾಯಿ.
ಎಂದಿನಂತೆ ಈ ಬಾರಿಯೂ ಮೂರುಸಾವಿರ ಮಠದ ಆವರಣದಿಂದ ಹೊರಡುವ ಜಗ್ಗಲಗಿ ಹಬ್ಬದ ಮೆರವಣಿಗೆಯ, ಪ್ರಮುಖ ಬೀದಿಗಳನ್ನ ಹಾದು ರಾತ್ರಿಯ ಹೊತ್ತಿಗೆ ಗಂಗಾಧರನಗರದ ಸಮುದಾಯ ಭವನದಲ್ಲಿ ಸಮಾಪ್ತಿಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.