ಹುಬ್ಬಳ್ಳಿ: ಮಂಜೂರಾದ ಗೃಹಸಾಲದ ಸಂಪೂರ್ಣ ಮೊತ್ತ ಗ್ರಾಹಕರ ಖಾತೆಗೆ ವರ್ಗಾಯಿಸದೆ, ನಕಲಿ ಚೆಕ್‌ಗಳ ಮೂಲಕ ಹಣ ವರ್ಗಾಯಿಸಿದಂತೆ ಮಾಡಿ ಬರೋಬ್ಬರಿ ₹49 ಲಕ್ಷ ವಂಚಿಸಿರುವುದಲ್ಲದೆ, ₹72 ಲಕ್ಷ ಗೃಹಸಾಲ ಪಡೆದಿರುವುದಾಗಿ ಹೇಳಿ, ಮರುಪಾವತಿಸುವಂತೆ ಗ್ರಾಹಕರೊಬ್ಬರಿಗೆ ಯೂನಿಯನ್ ಬ್ಯಾಂಕ್ ನೋಟಿಸ್ ನೀಡಿದೆ. ಈ ಪ್ರಕರಣವೀಗ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶಿವಗಿರಿ ಕಾಲೊನಿಯ ಗ್ರಾಹಕಿ, ಮಹಿಳಾ ಉದ್ಯಮಿ ಪ್ರವೀಣಾ ಪಟ್ಟಣಶೆಟ್ಟಿ ವಂಚನೆಗೊಳಗಾಗಿದ್ದು, ಲ್ಯಾಮಿಂಗ್ಟನ್ ರಸ್ತೆಯ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕ, ಉಪಪ್ರಧಾನ ವ್ಯವಸ್ಥಾಪಕ ಸೇರಿ ಮೂವರ ವಿರುದ್ಧ ಕೋರ್ಟ್ ಮೂಲಕ ಖಾಸಗಿ ದೂರು ನೀಡಿದ್ದಾರೆ.
ಏನಿದು ಪ್ರಕರಣ: ಉದ್ಯಮಿ ಪ್ರವೀಣಾ ಅವರಿಗೆ ಬ್ಯಾಂಕ್ ₹70 ಲಕ್ಷ ಗೃಹಸಾಲ ಮಂಜೂರು ಮಾಡಿತ್ತು. 2018ರ ಅಕ್ಟೋಬರ್‌ನಲ್ಲಿ ಮೊದಲನೇ ಕಂತಿನಲ್ಲಿ ₹21 ಲಕ್ಷ ಪಡೆದಿದ್ದರು. ನಂತರ ಉಳಿದ ₹49 ಲಕ್ಷ ಬಿಡುಗಡೆ ಮಾಡುವಂತೆ ಬ್ಯಾಂಕ್ ಅಧಿಕಾರಿಯ ಬಳಿ ವಿನಂತಿಸಿಕೊಂಡಿದ್ದರೂ, ತಾಂತ್ರಿಕ ಸಮಸ್ಯೆಯೆಂದು ವಿಳಂಬ ಮಾಡಿದ್ದರು. ನಂತರ ಕೋವಿಡ್‌ನಿಂದ ಸಮಸ್ಯೆಯಾಗಿದೆ ಎಂದು ತಿಳಿಸಿದ್ದರು. ಆಂಧ್ರ ಬ್ಯಾಂಕ್ ಯೂನಿಯನ್ ಬ್ಯಾಂಕ್‌ಗೆ ವಿಲೀನವಾದ ನಂತರ, ಪ್ರವೀಣಾ ಅವರಿಗೆ ಬಡ್ಡಿ ಸೇರಿ ₹72 ಲಕ್ಷ ಸಾಲ ಪಾವತಿಸುವಂತೆ ನೋಟಿಸ್ ನೀಡಿತ್ತು.
ಆ ಕುರಿತು ಪ್ರವೀಣಾ ಅವರು ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ, ‘ಮಂಜೂರಾದ ಎಲ್ಲ ಸಾಲವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನು ನೀಡಲು ಬ್ಯಾಂಕ್ ನಿರಾಕರಿಸಿದಾಗ, ಅವರು ಮುಂಬೈನಲ್ಲಿರುವ ಬ್ಯಾಂಕ್‌ನ ಮುಖ್ಯ ಕಚೇರಿಗೆ ಭೇಟಿ ನೀಡಿ ಅವ್ಯವಹಾರದ ಕುರಿತು ದೂರು ಸಲ್ಲಿಸಿದ್ದರು. ನಂತರ ಬ್ಯಾಂಕ್‌ನವರು ಅವರ ಉಳಿತಾಯ ಖಾತೆಯ ವಿವರ ನೀಡಿದ್ದಾರೆ. ಪರಿಶೀಲಿಸಿದಾಗ 2018ರ ಅಕ್ಟೋಬರ್‌ನಿಂದ 2019ರ ಫೆಬ್ರುವರಿ ಅವಧಿಯಲ್ಲಿ, ಚೆಕ್ ನಂಬರ್ ಬಳಸಿ, ₹27 ಲಕ್ಷ ಸಾಲ ನೀಡಿದಂತೆ ಮಾಡಲಾಗಿದೆ. ಆದರೆ, ಪ್ರವೀಣಾ ಅವರಿಗೆ ಬ್ಯಾಂಕ್ ನೀಡಿದ್ದ ಮೂಲ ಚೆಕ್ ಅವರ ಬಳಿಯಲ್ಲಿಯೇ ಇತ್ತು.
ಹಣ ಬಿಡುಗಡೆ ಮಾಡಿರುವ ಚೆಕ್‌ಗಳ ಪ್ರತಿ ನೀಡುವಂತೆ ಬ್ಯಾಂಕ್‌ಗೆ ವಿನಂತಿಸಿದಾಗ, ‘ಗೋಡೌನ್‌ನಲ್ಲಿದೆ’ ಎಂದು ಹಾರಿಕೆ ಉತ್ತರ ನೀಡುತ್ತ ಬಂದಿದ್ದಾರೆ. ಚೆಕ್‌ಗೆ ಸಹಿ ಮಾಡದೆ ಇದ್ದರೂ, ಸಾಲ ಮಂಜೂರು ಮಾಡಿದ 90 ದಿನಗಳಲ್ಲಿ ಎಲ್ಲ ಹಣ ಬಿಡುಗಡೆ ಮಾಡಿದಂತೆ ಮಾಡಿ ವಂಚಿಸಿದ್ದಲ್ಲದೆ, ಇದೀಗ ಆಸ್ತಿ ಹರಾಜು ಮಾಡುವ ಬಗ್ಗೆಯೂ ಬ್ಯಾಂಕ್ ನೋಟಿಸ್ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿದೇಶ ಪ್ರವಾಸ; ವಂಚನೆ: ಬೆಂಗಳೂರಿನ ವಿಶ್ವಾ ಟೂರ್ ಕಂಪನಿಯು ಧಾರವಾಡ ಸತ್ತೂರಿನ ಸಿದ್ದನಗೌಡ ಪಾಟೀಲ ಅವರಿಗೆ ಸಿಂಗಾಪುರ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ, ಮುಂಗಡ ₹1.40 ಲಕ್ಷ ಪಡೆದು ವಂಚಿಸಿರುವ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಗಾಪುರ, ಮಲೇಷಿಯಾ ಮತ್ತು ಬ್ಯಾಂಕಾಕ್ ಪ್ರವಾಸ ತೆರಳಲೆಂದು ಸಿದ್ದನಗೌಡ ಅವರು, ಟೂರ್ ಕಂಪನಿಯ ಆನಂದಮೂರ್ತಿ ಅವರನ್ನು ಸಂಪರ್ಕಿಸಿದ್ದರು. ಮುಂಗಡ ಹಣ ಪಡೆದು ಪ್ರವಾಸಕ್ಕೂ ಕರೆದೊಯ್ಯುದೆ, ಹಣವೂ ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
₹96 ಸಾವಿರ ವಂಚನೆ: ಆನ್‌ಲೈನ್ ಗೇಮ್‌ನಲ್ಲಿ ಹೆಚ್ಚಿಗೆ ಗಳಿಸಬಹುದು ಎಂದು ಶಿರೂರ ಪಾರ್ಕ್‌ನ ಸಂಗಮೇಶ ಕೆಂಚನಗೌಡ್ರ ಅವರಿಗೆ ಸಂದೇಶ ಕಳುಹಿಸಿದ ವಂಚಕ, ಅವರಿಂದಲೇ ₹96 ಸಾವಿರ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಸಂಗಮೇಶ ಅವರು ಫೋನ್‌ಪೇ, ಪೇಟಿಎಂ, ಟೆಲಿಗ್ರಾಮ್ ಆ್ಯಪ್‌ಗಳನ್ನು ಬಳಸುತ್ತಿದ್ದರು. ಅವುಗಳ ಮಾಹಿತಿ ಪಡೆದ ವಂಚಕ ಅವರಿಗೆ ಟೆಲಿಗ್ರಾಮ್ ಸಂದೇಶ ಕಳುಹಿಸಿ, ಆನ್‌ಲೈನ್ ಗೇಮ್ ಕುರಿತು ವಿವರಿಸಿದ್ದಾನೆ. ನಂತರ ಪೇಟಿಎಂ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂಟ್ಯೂಬ್ ಲೈಕ್; ವಂಚನೆ: ಯೂಟ್ಯೂಬ್ ವಿಡಿಯೊ ಲೈಕ್ ಮಾಡಿ ಸ್ಕ್ರೀಶಾಟ್ ಅನ್ನು ವಾಟ್ಸ್‌ಆ್ಯಪ್ ನಂಬರ್‌ಗೆ ಕಳುಹಿಸಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಹಳೇಹುಬ್ಬಳ್ಳಿ ಶ್ರೀನಿವಾಸ ಕಲಕಣಿ ಅವರಿಗೆ ಸಂದೇಶ ಕಳುಹಿಸಿದ ವಂಚಕ, ಅವರಿಂದ ₹1.65 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಲೈಕ್ ಮಾಡಿದ ಪ್ರತಿ ವಿಡಿಯೊಗೆ ₹50 ನೀಡುವುದಾಗಿ ಹೇಳಿದ ವಂಚಕ, ಶ್ರೀನಿವಾಸ ಅವರ ನಂಬರ್ ಅನ್ನು ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದ್ದಾನೆ. ಹಣ ಹೂಡಿಕೆ ಮಾಡಿದರೆ ಹೆಚ್ಚಿಗೆ ಲಾಭ ಪಡೆಯಬಹುದು ಎಂದು ಆಮಿಷ ತೋರಿಸಿ, ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಿತ್ತು ಪರಾರಿ: ಹುಬ್ಬಳ್ಳಿ–ಧಾರವಾಡ ಬೈಪಾಸ್‌ನ ಕಾರವಾರ ರಸ್ತೆ ಅಂಡರ್ ಬ್ರಿಜ್‌ನ ಸ್ವಲ್ಪ ದೂರದಲ್ಲಿರುವ ಮರವೊಂದರ ಕೆಳಗೆ ಕೂತಿದ್ದ ಗಿರಿಯಾಲ್ ರಸ್ತೆಯ ಅಂಜನಮ್ಮ ಉಪ್ಪಾರ ಮತ್ತು ಶರಣಬಸಪ್ಪ ತಟ್ಟಿಮನಿ ಅವರನ್ನು ಇಬ್ಬರು ಯುವಕರು ಬೆದರಿಸಿ, ₹46 ಸಾವಿರ ಮೌಲ್ಯದ ಮೊಬೈಲ್, ಚಿನ್ನಾಭರಣ ಹಾಗೂ ನಗದು ಕಿತ್ತು ಪರಾರಿಯಾಗಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.