ADVERTISEMENT

KLE ಘಟಿಕೋತ್ಸವ; ಬಾಬಾಸಾಹೇಬ್‌ ಕಲ್ಯಾಣಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ

​ಪ್ರಜಾವಾಣಿ ವಾರ್ತೆ
Published 1 ಮೇ 2022, 9:39 IST
Last Updated 1 ಮೇ 2022, 9:39 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾರತ ಫೋರ್ಜ್‌ ಲಿಮಿಟೆಡ್‌ ಅಧ್ಯಕ್ಷ ಬಾಬಾಸಾಹೇಬ್‌ ಕಲ್ಯಾಣಿ ಅವರಿಗೆ ಪ್ರಭಾಕರ ಕೋರೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾರತ ಫೋರ್ಜ್‌ ಲಿಮಿಟೆಡ್‌ ಅಧ್ಯಕ್ಷ ಬಾಬಾಸಾಹೇಬ್‌ ಕಲ್ಯಾಣಿ ಅವರಿಗೆ ಪ್ರಭಾಕರ ಕೋರೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು   

ಹುಬ್ಬಳ್ಳಿ: ಯುವಜನತೆಯ ಶಕ್ತಿ ಮತ್ತು ಜ್ಞಾನವನ್ನು ದೇಶ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದು, ಮುಂದಿನ 25 ವರ್ಷಗಳಲ್ಲಿ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವನಾಯಕನಾಗುವತ್ತ ದಾಪುಗಾಲು ಹಾಕುತ್ತಿದೆ ಎಂದು ಭಾರತ ಫೋರ್ಜ್‌ ಲಿಮಿಟೆಡ್‌ ಅಧ್ಯಕ್ಷ ಬಾಬಾಸಾಹೇಬ್‌ ಕಲ್ಯಾಣಿ ಅಭಿಪ್ರಾಯಪಟ್ಟರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಸ್ವೀಕರಿಸಿ ಮಾತನಾಡಿದ ಅವರು ‘ಈಗ ನಾವು ಗಡಿಯಿಲ್ಲದ ಜಗತ್ತು ಸೃಷ್ಟಿಸಿಕೊಂಡಿದ್ದೇವೆ. ಅಲ್ಲಿ ಆಳವಾಗಿ ಬೇರೂರಿರುವ ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಸಂಪೂರ್ಣ ಸಾಮರ್ಥ್ಯ ತೋರಬಹುದು. ನಮ್ಮ ಉತ್ಸಾಹ, ಬುದ್ಧಿಶಕ್ತಿ ಹಾಗೂ ಬದ್ಧತೆ ದೇಶದ ಅಭಿವೃದ್ಧಿಗೆ ನೆರವಾಗುತ್ತದೆ’ ಎಂದರು.

‘ಭಾರತೀಯ ಎಂಜಿನಿಯರ್‌ಗಳು ತಮ್ಮ ಸಾಮರ್ಥ್ಯದ ಮೂಲಕ ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ. ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಲ್ಲಿ ಶೇ 30ಕ್ಕಿಂತಲೂ ಹೆಚ್ಚು ಭಾರತೀಯ ಮೂಲದವರೇ ಇದ್ದಾರೆ. ಅದರಲ್ಲಿ ಹೆಚ್ಚಿನವರು ದೈತ್ಯ ಕಂಪನಿಗಳ ಸಿಇಒ ಆಗಿದ್ದಾರೆ. ಭಾರತ ವಿಶ್ವಮಟ್ಟದಲ್ಲಿ ತನ್ನ ಗತವೈಭವ ಮರಳಿ ಪಡೆಯುತ್ತಿರುವುದಕ್ಕೆ ಇವು ಉದಾಹರಣೆಗಳಾಗಿವೆ’ ಎಂದರು.

ADVERTISEMENT

‘ಪದವೀಧರ ಎಂಜಿನಿಯರ್‌ಗಳು ಹಳೆಯ ಪರಿಕಲ್ಪನೆಗಳನ್ನು ಬದಿಗಿಡುವ, ಸ್ಥಾಪಿತ ಮಾದರಿಗಳನ್ನು ಮರು ವ್ಯಾಖ್ಯಾನಿಸಿ ಮತ್ತು ಶ್ರೇಣಿ ವ್ಯವಸ್ಥೆ ಪುನರ್‌ ರಚಿಸುವ ಅವಕಾಶ ಹೊಂದಿದ್ದಾರೆ. ವಸುಧೈವ ಕುಟುಂಬಕಂ ಪರಿಕಲ್ಪನೆಯನ್ನು ಅಂತರರಾಷ್ಟ್ರೀಯ ನಾಯಕರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಜಗತ್ತು ಉತ್ಪಾದನೆ ಮತ್ತು ಮಾಹಿತಿ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ದೇಶವೇ ಮೊದಲು ಎನ್ನುವ ಗಟ್ಟಿತನಗೊಂದಿಗೆ ಭಾರತ ತನ್ನ ಆದರ್ಶಗಳು, ಶ್ರಿಮಂತ ಪರಂಪರೆ, ಪ್ರಜಾಸತಾತ್ಮಕ ಮೌಲ್ಯಗಳ ಆಧರಿತ ತತ್ವಶಾಸ್ತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸರಿಯಾಗಿ ಪ್ರತಿಪಾದಿಸುತ್ತಿದೆ. ಜಗತ್ತಿನ ಆರ್ಥಿಕ ಶಕ್ತಿಯ ಲಾಭವನ್ನು ತ್ವರಿತವಾಗಿ ಪಡೆಯುವಲ್ಲಿ ಯುವಪೀಳಿಗೆ ಮುಂಚೂಣಿಯಲ್ಲಿದೆ. ವಿಶ್ವದಾದ್ಯಂತ ಜ್ಞಾನದಜಾಲ ರಚಿಸಲು ತಂತ್ರಜ್ಞಾನ ನೆರವಾಗುತ್ತದೆ’ ಎಂದರು.

’ಶುದ್ಧ ಕುಡಿಯುವ ನೀರು, ವಾಯುಮಾಲಿನ್ಯ, ನದಿಮಾಲಿನ್ಯ, ನಾಗರಿಕ ಪ್ರಜ್ಞೆ, ಶಿಸ್ತು, ಶೈಕ್ಷಣಿಕ ವ್ಯವಸ್ಥೆ ಹಾಗೂ ಆಡಳಿತದ ಲಭ್ಯತೆಗಳನ್ನು ಸರಿಯಾಗಿ ಹೊಂದಿಸಬೇಕಾದ ಹಲವಾರು ಕೆಲಸಗಳು ಆಗಬೇಕಾಗಿವೆ. ನೀವು ಕೊಡುಗೆ ನೀಡಬಹುದಾದ ಕ್ಷೇತ್ರಗಳೂ ಬಹಳಷ್ಟಿವೆ. ಜಾಗತಿಕ ನಾಯಕನಾಗಿ ಭಾರತವನ್ನು ಜಗತ್ತು ಬೇರೆ ದೃಷ್ಟಿಯಲ್ಲಿಯೇ ನೋಡುತ್ತಿದೆ. ಅದಕ್ಕಾಗಿ ರಾಷ್ಟ್ರೀಯತೆಯನ್ನು ಸಾಕಾರಗೊಳಿಸಲು, ‌ಸಶಕ್ತ ಮತ್ತು ಆತ್ಮನಿರ್ಭರ ಭಾರತದತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ. ಅನಿಲ್‌ ಸಹಸ್ರಬುದ್ಧೆ ಮಾತನಾಡಿ ‘ಕಾಲೇಜಿನಲ್ಲಿ ಕಲಿಕೆಯ ಜೊತೆಗೆ ಸ್ವಯಂ ಕಲಿಕೆಯೂ ಅತ್ಯಗತ್ಯ. ಮುಂದಿನ ಸವಾಲುಗಳ ಅಗತ್ಯಕ್ಕೆ ತಕ್ಕಂತೆ ಕೌಶಲಗಳನ್ನು ಕಲಿಯಬೇಕು. ಸರ್ಕಾರ ಹಾಗೂ ಸಮಾಜಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಬೇಕು. ಜೀವನದ ಕೊನೆಯ ತನಕ ಕಲಿಯುತ್ತಲೇ ಇರಬೇಕು. ಆತ್ಮನಿರ್ಭರ ಭಾರತದ ಭಾಗವಾಗಬೇಕು’ ಎಂದರು.

ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಾಧಿಪತಿ ಪ್ರಭಾಕರ ಕೋರೆ, ಪರೀಕ್ಷಾ ವಿಭಾಗದ ನಿಯಂತ್ರಕ ಡಾ. ಅನಿಲಕುಮಾರ್‌ ವಿ. ನಂದಿ, ಅಕಾಡೆಮಿಕ್‌ ಡೀನ್ ಡಾ. ಪ್ರಕಾಶ ಜಿ. ತಿವಾರಿ, ಕುಲಸಚಿವ ಎನ್‌.ಎಚ್‌. ಆಯಚಿತ್‌ ಸೇರಿದಂತೆ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪದವಿಯಷ್ಟೇ ಸಾಲದು, ಜ್ಞಾನವೂ ಮುಖ್ಯ: ಸುಧಾಮೂರ್ತಿ

ಪದವಿ ಪಡೆದ ಶೇ 85ರಷ್ಟು ಎಂಜಿನಿಯರ್‌ಗಳು ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಸುಂದರ ಭವಿಷ್ಯಕ್ಕೆ ಪದವಿಯಷ್ಟೇ ಸಾಲದು; ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಜ್ಞಾನವೂ ಬೇಕು ಎಂದು ಇನ್ಫೊಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.

’ದೇಶದ ಚಿಂತನೆ ಮೊದಲ ಆದ್ಯತೆಯಾಗಲಿ. ಕಲಿಸಿದ ಗುರು, ಬದುಕು ರೂಪಿಸಿದ ಫೋಷಕರನ್ನು ಎಂದಿಗೂ ಮರೆಯಬೇಡಿ. ಹೊಸದನ್ನು ಕಲಿಯುವಲ್ಲಿ ನಿಮಗೆ ನೀವೇ ಉತ್ತಮ ಗೆಳೆಯರು. ಗುಣಮಟ್ಟದ ಕೆಲಸಕ್ಕೆ ಆದ್ಯತೆ ಕೊಟ್ಟರೆ ಕೀರ್ತಿ, ಹೆಸರು ಹಾಗೂ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಕೋಟಿ ಹಣವಿದ್ದರೂ ತಲೆಯಲ್ಲಿರುವ ಜ್ಞಾನವೇ ಹೆಚ್ಚು’ ಎಂದರು.

₹18 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ: ಶೆಟ್ಟರ್‌

ಹುಬ್ಬಳ್ಳಿ: ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದೆ. ₹18 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್‌ ಹೇಳಿದರು.

ವಿಶ್ವಮಟ್ಟದಲ್ಲಿ ಗುಣಮಟ್ಟ ಕಾಯ್ದುಕೊಂಡ ವಿ.ವಿ.ಗಳಲ್ಲಿ ನಮ್ಮ ವಿ.ವಿ. ಕೂಡ ಸ್ಥಾನ ಹೊಂದಿದೆ. ವಿದ್ಯುತ್‌ ಚಾಲಿತ ವಾಹನಗಳ ಅನ್ವೇಷಣೆ, ಸಂಶೋಧನೆ ಹೀಗೆ ಹೊಸ ಸಾಧನೆಗಳತ್ತ ಸಾಗುತ್ತಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.