ಜಿಲ್ಲೆಯಲ್ಲಿ ಡೆಂಗಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಪೂರ್ಣಪ್ರಮಾಣದ ಕಡಿವಾಣ ಹಾಕಲು ಜಿಲ್ಲಾಡಳಿತದ ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಯಾವುದೆಲ್ಲ ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ಎಚ್ಚರವಹಿಸಬೇಕಾದ ವಿಷಯಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿ ಪಾಟೀಲ ಸಿ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
* ಡೆಂಗಿ ಜ್ವರ ಎಂದರೇನು?
ಡಾ.ಶಶಿ ಪಾಟೀಲ ಸಿ: ಡಂಗಿ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ.
* ಈ ರೋಗದ ಮುಖ್ಯ ಲಕ್ಷಣಗಳಾವವು?
ಡಾ.ಶಶಿ ಪಾಟೀಲ ಸಿ: ಇದ್ದಕ್ಕಿದ್ದಂರತೆ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ– ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುವುದು ಈ ರೋಗದ ಪ್ರಮುಖ ಲಕ್ಷಣಗಳು. ಬಾಯಿ, ಮೂಗು ಮತ್ತು ಒಸಡುಗಳಿಂದ ತೀವ್ರ ಸ್ಥಿತಿಯಲ್ಲಿ ರಕ್ತ ಸ್ರಾವ ಹಾಗೂ ಚರ್ಮದ ಮೇಲೆ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ.
* ಈ ರೋಗಕ್ಕೆ ಚಿಕಿತ್ಸೆ ಏನು?
ಡಾ.ಶಶಿ ಪಾಟೀಲ ಸಿ: ಡೆಂಗಿ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿನುಸಾರವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು. ಡೆಂಗಿ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.
* ಡೆಂಗಿ ನಿಯಂತ್ರಣ ಹೇಗೆ?
ಡಾ.ಶಶಿ ಪಾಟೀಲ ಸಿ:ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಗಿ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲುಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಮಡಿಕೆ ಉಪಯೋಗಿಸದ ಒರಳುಕಲ್ಲು ಮುಂತಾದ ಕಡೆ ಸಂಗ್ರಹವಾಗುವ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
ಮುಂಜಾಗ್ರತಾ ಕ್ರಮಗಳು
ಎಲ್ಲ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್ ಕೂಲರ್ ಮುಂತಾದವುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು.
ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚುವುದು.
ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಅವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು.
ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕು.
ಗಮನಿಸಿ
ಡೆಂಗಿ ರೋಗ ಬಂದಾಗ ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳ ಕೊರತೆಯಾಗುವುದೆಂಬ ವದಂತಿ ಜನಸಾಮಾನ್ಯರದಲ್ಲಿ ಹರಡಿದೆ. ಆದರೆ, ಪ್ಲೇಟ್‌ಲೆಟ್ ಕಡಿಮೆಯಾದ ರೋಗಿಗಳಿಗೆ ವೈದ್ಯರು ನೀಡುವ ಐ.ವಿ ದ್ರಾವಣದಿಂದ ಪ್ಲೇಟ್‌ಲೆಟ್‌ಗಳ ಪ್ರಮಾಣ ಹೆಚ್ಚಾಗಿ ರೋಗಿಯು ಚೇತರಿಸಿಕೊಳ್ಳುತ್ತಾನೆ.
ರಾಜ್ಯದ 171 ಪರವಾನಗಿ ಪಡೆದ ರಕ್ತನಿಧಿಗಳಲ್ಲಿ 30 ರಕ್ತನಿಧಿಗಳಿಗೆ ರಕ್ತದ ಕಣಗಳನ್ನು ಬೇರ್ಪಡಿಸಲು ಅನುಮತಿ ನೀಡಲಾಗಿದ್ದು ಯಾವುದೇ ಡೆಂಗಿ ರೋಗಿಯು ಉಲ್ಬಣಾವಸ್ಥೆ ತಲುಪಿದರೆ ಪ್ಲೇಟ್‌ಲೆಟ್‌ಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ರೋಗ ಗಂಭೀರ ಸ್ಥಿತಿಯಲ್ಲಿರುವ ಪ್ರಕರಣಗಳ ಸಮರ್ಪಕ ನಿರ್ವಹಣೆಗಾಗಿ ರಾಜ್ಯಮಟ್ಟದ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆ ಹಾಗೂ ಆಯ್ದ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳ (ಐಸಿಯು) ಸೇವೆ ಲಭ್ಯ ಇದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಆರೋಗ್ಯ ಸಹಾಯಕರನ್ನು ಭೇಟಿ ಮಾಡಬಹುದು.
ಪ್ರಕಟಣೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಧಾರವಾಡ
ಡೆಂಗಿ ನಿಯಂತ್ರಣಕ್ಕೆ ಮುಂಜಾಗ್ರತೆ, ಜಾಗೃತಿ ಕಾರ್ಯಕ್ರಮ...
ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಲವಾರು ಕ್ರಮಗಳನ್ನು ವಹಿಸಿದೆ. ಡೆಂಗಿ ತಡೆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ನಿಯಂತ್ರಣ ಕ್ರಮಗಳು ಹಾಗೂ ಮುಂಜಾಗ್ರತೆ ಕ್ರಮಗಳ ಕುರಿತು ಡಾ.ಶಶಿ ಪಾಟೀಲ ಸಿ ನೀಡಿದ ಮಾಹಿತಿ ಇಂತಿದೆ.
ಧಾರವಾಡ ನಗರ ಮತ್ತು ಗ್ರಾಮೀಣ, ಹುಬ್ಬಳ್ಳಿ ನಗರ ಭಾಗದಲ್ಲಿ ಡೆಂಗಿ ಪ್ರಕರಣಳು ಕಂಡುಬಂದಿವೆ. ಈವರೆಗೆ ಜಿಲ್ಲೆಯಲ್ಲಿ 1765 ಡೆಂಗಿ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 334 ದೃಢಪಟ್ಟಿದ್ದು ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ 15 ಮಂದಿ ಜಿಲ್ಲಾಸ್ಪತ್ರೆ, ಕಿಮ್ಸ್ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಧಿಕಾರಿಯವರು ಜಿಲ್ಲಾಮಟ್ಟದ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ತುರ್ತು ಸಭೆ ನಡೆಸಿ ಡೆಂಗಿ ಸ್ಥಿತಿಗತಿ ಪರಿಶೀಲಿಸಿ ನಿಯಂತ್ರಣ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಆದೇಶ ಹಾಗೂ ಮಾರ್ಗದರ್ಶನ ನೀಡಿದ್ಧಾರೆ.
ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನ– ಒಣ ದಿನವಾಗಿ ಆಚರಿಸಲಾಗುತ್ತದೆ. ಡೆಂಗಿ ಪ್ರಕರಣಗಳು ಕಂಡುಬಂದ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. ಆಂದೋಲನದ ರೀತಿಯಲ್ಲಿ ಈ ಕಾರ್ಯ ಮಾಡಲಾಗುತ್ತಿದೆ. ಆಶಾಕಾರ್ಯಕರ್ತೆಯರು, ಕ್ಷೇತ್ರ ಸಿಬ್ಬಂದಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಮನೆಮನೆಗೆ ತೆರಳಿ ಪರಿಶೀಲನೆ ಮಾಡುವುದು, ಲಾರ್ವಾ ಕಂಡುಬಂದರೆ ನಾಶ ಮಾಡುವುದು, ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಮೀಕ್ಷಾ (ಗ್ರಾಮೀಣ 18 ಲಕ್ಷ ಮನೆಗಳು ಹಾಗೂ ನಗರ ಪ್ರದೇಶ 17 ಲಕ್ಷ ಮನೆಗಳು) ಕಾರ್ಯ ಶೇ 100 (ಜನವರಿಯಿಂದ ಈವರೆಗೆ) ಆಗಿದೆ.
ಜಿಲ್ಲಾಮಟ್ಟದ ಮತ್ತು ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ (ಕಾರ್ಯ ಪಡೆ) ಸಮಿತಿ ರಚಿಸಲಾಗಿದೆ. ಜಿಲ್ಲಾಮಟ್ಟದ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯಿತಿ ಸಿಇಒ, ಯೋಜನಾ ನಿರ್ದೇಶಕರು, ವೈದ್ಯಕೀಯ ವಿಜ್ಞಾನ ಕಾಲೇಜಿನ ಮುಖ್ಯಸ್ಥರು, ಜಿಲ್ಲಾ ಆರೋಗ್ಯಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಡಿಡಿಪಿಐ, ಐಎಂಎ ಅಧ್ಯಕ್ಷರು ಮೊದಲಾದವರು ಸಮಿತಿಯಲ್ಲಿ ಇರುತ್ತಾರೆ. ವಾರಕ್ಕೊಮ್ಮೆ ಸಮಿತಿ ಸಭೆ ಜರುಗಲಿದೆ. ಡೆಂಗಿ ಬಗ್ಗೆ ಚರ್ಚಿಸಿ ಸ್ಥಳೀಯವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಮಿತಿಯುವರು ಸಲಹೆಸೂಚನೆಗಳನ್ನು ನೀಡುವರು.
ಡೆಂಗಿಗೆ ಸಂಬಂಧಿಸಿದಂತೆ ಕಂಟ್ರೋಲ್ ರೂಂ ಸ್ಥಾಪನೆ, ಸಹಾಯವಾಣಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸೊಳ್ಳೆಗಳನ್ನು ತಿನ್ನುವ ಗಪ್ಪಿ ಮೀನುಗಳನ್ನು ಕೆರೆ, ಕಟ್ಟೆ, ತೊಟ್ಟಿ, ಕ್ವಾರಿಗಳಲ್ಲಿ ನೀರು ಸಂಗ್ರಹವಾಗು ತಗ್ಗುಗಳಲ್ಲಿ ಬಿಡಲಾಗಿದೆ. ಹುಡ್ಕೊ ಕಾಲೊನಿ, ಕೆಲಗೇರಿ ಸಹಿತ ವಿವಿಧೆಡೆಗಳಲ್ಲಿ ತೊಟ್ಟಿಗಳಲ್ಲಿ ಗಪ್ಪಿ ಮೀನುಗಳನ್ನು ಬಿಡಲಾಗಿದೆ. ಧಾರವಾಡದ ಡಿಎಚ್ಒ ಕಚೇರಿ ಆವರಣದಲ್ಲಿ ಹಾಗೂ ಕಲಘಟಗಿಯಲ್ಲಿ ಲಾರ್ವಾಹಾರಿ ಮೀನು ಸಾಕಾಣಿಕೆ ಘಟಕಗಳು ಇವೆ. ಅಣ್ಣಿಗೇರಿಯಲ್ಲಿ ಮುಖ್ಯ ಘಟಕ ಇದೆ.
ಡೆಂಗಿ ಜಾಗೃತಿ ನಿಟ್ಟಿನಲ್ಲಿ ಜಿಲ್ಲೆಯ 1718 ಶಾಲೆ–ಕಾಲೇಜುಗಳಲ್ಲಿ ಏಕಕಾಲಕ್ಕೆ ಮೆಗಾ ಕ್ಯಾಂಪೇನ್ ಆಯೋಜಿಸಲಾಗಿತ್ತು. ಮಾದರಿಗಳ ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿದೆ. ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಡೆಂಗಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯಾ, ಝೀಕಾ ವೈರಸ್ ನಿಯಂತ್ರಣ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಹಲವೆಡೆ ಡೆಂಗಿ ನಿಯಂತ್ರಣ ಕ್ರಮಗಳ ಕುರಿತು ಫಲಕಗಳನ್ನು ಅಳವಡಿಸಲಾಗಿದೆ.
ಜಿಲ್ಲಾ ಆಸ್ಪತ್ರೆ, ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಡೆಂಗಿ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡಲಾಗಿದೆ.
ಕರಪತ್ರ, ಭಿತ್ತಿ ಪತ್ರಗಳ ಹಂಚಿ ಅರಿವು ಮೂಡಿಸಲಾಗುತ್ತಿದೆ. ಕಲಾವಿದರು, ಸ್ತ್ರೀಶಕ್ತಿ ಸಂಘಗಳ ಮೂಲಕ ಐಇಸಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಧೂಮೀಕರಣ (ಫಾಗಿಂಗ್) ಸ್ಥಳೀಯ ಆಡಳಿತ ಸಂಸ್ಥೆಗಳು ಕ್ರಮ ವಹಿಸಿವೆ. ಕಸ ಸಂಗ್ರಹ ವಾಹನಗಳಲ್ಲಿ ಡೆಂಗಿ ನಿಯಂತ್ರಣ ಅರಿವಿನ ಹಾಡುಗಳ ಪ್ರಸಾರ ಮಾಡಲಾಗುತ್ತಿದೆ. ಸೊಳ್ಳೆ ಕಚ್ಚದಂತೆ ಸೊಳ್ಳೆ ಪರದೆ ಬಳಕೆ ಮೊದಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿವಿಧೆಡೆ ಜಾಗೃತಿ ಜಾಥಾಗಳನ್ನು ಆಯೋಜಿಸಲಾಗಿದೆ.
ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಜ್ವರ ಮೊದಲಾದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದರಲ್ಲಿ ತಪಾಸಣೆ ಮಾಡಿಕೊಳ್ಳಬೇಕು. ಸ್ಗಚ್ಛತೆ ಕಾಪಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.