ADVERTISEMENT

ಹುಬ್ಬಳ್ಳಿ: ಕೊಲೆ ಆರೋಪಿ ಬಂಧಿಸಿ, ಗಲ್ಲುಶಿಕ್ಷೆ ವಿಧಿಸಲು ಆಗ್ರಹ

ಅಂಜಲಿ ಅಂಬಿಗೇರ ಕೊಲೆ ಖಂಡಿಸಿ, ಬಿಜೆಪಿ, ವಿವಿಧ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 13:06 IST
Last Updated 16 ಮೇ 2024, 13:06 IST
ಹುಬ್ಬಳ್ಳಿಯ ಶಹರ ಪೊಲೀಸ್‌ ಠಾಣೆಯ ಎದುರಿನ ರಸ್ತೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಕುಳಿತು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಶಹರ ಪೊಲೀಸ್‌ ಠಾಣೆಯ ಎದುರಿನ ರಸ್ತೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಕುಳಿತು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ನಗರದ ವೀರಾಪುರ ಓಣಿಯ ಯುವತಿ ಅಂಜಲಿ ಅಂಬಿಗೇರ ಅವರ ಕೊಲೆ ಖಂಡಿಸಿ ಗುರುವಾರ ನಗರದಲ್ಲಿ ಬಿಜೆಪಿ ಹುಬ್ಬಳ್ಳಿ– ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು. 

ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಇಲ್ಲಿನ ವೀರಾಪುರ ಓಣಿಯ ಕರಿಯಮ್ಮ ದೇವಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಪಕ್ಷದ ಹಲವು ಮುಖಂಡರು ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆ  ಕೂಗುತ್ತಾ ಶಹರ ಪೊಲೀಸ್‌ ಠಾಣೆಯ ಎದುರು ಜಮಾಯಿಸಿದರು.

ರಸ್ತೆಯು ಉದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ‘ನಮಗೆ ನಿಮ್ಮ ಯಾವುದೇ ‘ಗ್ಯಾರಂಟಿ’ ಯೋಜನೆಗಳ ಸೌಲಭ್ಯ ಬೇಡ. ಮಹಿಳೆಯರಿಗೆ, ಹೆಣ್ಣು ಮಕ್ಕಳ ಜೀವ ಭದ್ರತೆ ರಕ್ಷಣೆಯ ಗ್ಯಾರಂಟಿ ನೀಡಬೇಕು’ ಎಂದು ಆಗ್ರಹಿಸಿದರು. 

ADVERTISEMENT

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡರಾದ ಲಕ್ಷ್ಮಿ ಬಿಜವಾಡ, ಲತಾ ಅಂಗಡಿ ಅವರು, ’ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಬಂದ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದಾರೆ’ ಎಂದು ದೂರಿದರು. 

ಪ್ರತಿಭಟನಾ ರ್‍ಯಾಲಿಯ ಮಾರ್ಗ ಮಧ್ಯದ ರಸ್ತೆಯ ದುರ್ಗಾದ ಬೈಲ್ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್‌ ಸುಟ್ಟು, ಸರ್ಕಾರ ಹಾಗೂ ಸ್ಥಳೀಯ ಪೊಲೀಸರ ಕರ್ತವ್ಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಠಾಣೆ ಎದುರು ಕುಳಿತು ಪ್ರತಿಭಟನೆ:

ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ಇಲ್ಲಿನ ಶಹರ ಪೊಲೀಸ್‌ ಠಾಣೆಯ ಎದುರು ರಸ್ತೆಯಲ್ಲಿ ಕುಳಿತು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ. ಅಂಜಲಿ ಅವರನ್ನು ಕೊಲೆ ಮಾಡಿ ‍ಪರಾರಿಯಾಗಿರುವ ಆರೋಪಿಯನ್ನು ಕೂಡಲೇ ಬಂಧಿಸಿ, ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. 

ಈ ವೇಳೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ’ನಗರದಲ್ಲಿ ಕಳೆದ ಎರಡು ತಿಂಗಳಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ  ಇಬ್ಬರ ಕೊಲೆಯಾಗಿವೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ಬಡವರು ಆರೋಪಿಗಳ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದರೆ ಅವರನ್ನೇ ಬೆದರಿಸಿ ಕಳುಹಿಸುತ್ತಿದ್ದಾರೆ. ‘ಗಿರೀಶ ಸಾವಂತ್‌ ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ’ ಎಂದು ಸ್ವತಃ ಅಂಜಲಿಯೇ ತನ್ನ ಅಜ್ಜಿಯೊಂದಿಗೆ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳದೇ ಅವರಿಗೆ ಬೈಯ್ದು ಕಳುಹಿಸಿದ್ದಾರೆ. ಆದರೀಗ ಅದೇ ಅಂಜಲಿಯ ಕೊಲೆಯಾಗಿದೆ. ಇದಕ್ಕೆ ಪೊಲೀಸರು ಸಹ ಪರೋಕ್ಷವಾಗಿ ಕಾರಣರಾಗಿದಾರೆ’ ಎಂದು ಆರೋಪಿಸಿದರು. 

‘ಅಂಜಲಿ ಕೊಲೆಯಾಗಿ ಎರಡು ದಿನಗಳಾದರೂ ಗೃಹ ಸಚಿವ ಪರಮೇಶ್ವರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯ ಸರ್ಕಾರದ ಯಾವ ಸಚಿವರೂ ಯುವತಿಯ ಕೊಲೆಯನ್ನು ಖಂಡಿಸಿ, ಯಾವ ಹೇಳಿಕೆಯನ್ನೂ ನೀಡಿಲ್ಲ. ಜನರು ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರವು ಆರೋಪಿಯನ್ನು ತಕ್ಷಣ ಬಂಧಿಸಿ, ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜೊತೆಗೆ ಕೊಲೆಯಾಗಿರುವ ಅಂಜಲಿ ಅವರ ಕುಟುಂಬಕ್ಕೆ ಸೂಕ್ತ ಸಹಾಯಧನ ಘೋಷಿಸಬೇಕು’ ಎಂದು ಆಗ್ರಹಿಸಿದರು. 

‘ಚಿನ್ನಾಭರಣ ಕಳುವಿಗೆ ಸಂಬಂಧಿಸಿದಂತೆ ಅಂಜಲಿ ಕೊಲೆ ಆರೋಪಿ ಗಿರೀಶ್‌ ವಿರುದ್ಧ ಆರು ತಿಂಗಳ ಹಿಂದೆಯೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅಂದು ಪೊಲೀಸರು ಆತನನ್ನು ಬಂಧಿಸಿ, ಶಿಕ್ಷೆ ವಿಧಿಸಿದ್ದರೆ ಇಂದು ಅಂಜಲಿ ಕೊಲೆಯಾಗುತ್ತಿರಲಿಲ್ಲ. ನಗರದ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಶಶಿಕಾಂತ ಬಿಜವಾಡ್‌ ದೂರಿದರು. 

ಬಿಜೆಪಿ ಮುಖಂಡರಾದ ಪ್ರಭು ನವಲಗುಂದಮಠ, ಶಿವು ಮೆಣಸಿನಕಾಯಿ, ದತ್ತಮೂರ್ತಿ ಕುಲಕರ್ಣಿ, ರಂಗಾ ಬದ್ದಿ, ಬಸವರಾಜ ಅಮ್ಮಿನಬಾವಿ, ಪ್ರತಿಭಾ ಪವಾರ್, ಜಗದೀಶ್ ಬುಳ್ಳಾನವರ, ರಾಜು ಜರತಾರಘರ್, ಶಶಿಕಾಂತ್ ಬಿಜವಾಡ್, ಪದ್ಮಾವತಿ ಚಿಗಳಂಪಲ್ಲಿ, ನಾಗರತ್ನ ಬಳ್ಳಾರಿ, ಸುವರ್ಣ ಜಂಗಮಗೌಡ್ರು, ಶಿವಾನಂದ ಅಂಬಿಗೇರ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಅಂಜಲಿ ಕೊಲೆ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಬಿಜೆಪಿ ಮುಖಂಡರು ಹುಬ್ಬಳ್ಳಿಯ ಶಹರ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು

ಶಹರ ಪೊಲೀಸ್ ಠಾಣೆ ಎದುರು ಪೊಲೀಸ್‌ ಬಂದೋಬಸ್ತ್‌ ಬಿಜೆಪಿ ಮುಖಂಡರು, ಕಾರ್ಯಕರ್ತರ ವಶ, ಬಿಡುಗಡೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿ

‘ಹುಬ್ಬಳ್ಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಸೇವನೆ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆಯುತ್ತಲೇ ಇವೆ. ಪೊಲೀಸ್‌ ಅಧಿಕಾರಿಗಳು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು‘ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಮುಖಂಡ ಶಿವಾನಂದ ಅಂಬಿಗೇರ ಪ್ರತಿಭಟನೆ ವೇಳೆ ಆಗ್ರಹಿಸಿದರು.  ಪ್ರತಿಭಟನಾಕಾರರ ವಶ: ಬಿಡುಗಡೆ ಅಂಜಲಿ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಬಿಜೆಪಿ ಮುಖಂಡರು ಶಹರ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಶಾಸಕ ಸೇರಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್‌ ವ್ಯಾನ್‌ನಲ್ಲಿ ಕರೆದೊಯ್ದು ಗೋಕುಲ ರಸ್ತೆಯ ಸಿಆರ್‌ ಮೈದಾನದಲ್ಲಿ ಬಿಡುಗಡೆ ಮಾಡಿದರು. 

ಎನ್‌ಕೌಂಟರ್‌ ಕಾನೂನು ಜಾರಿಗೆ ಆಗ್ರಹ

‘ಹುಬ್ಬಳ್ಳಿಯಲ್ಲಿ ಎರಡು ತಿಂಗಳ ಅವಧಿಯಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಎಂಬ ಇಬ್ಬರ ಯುವತಿಯರ ಕೊಲೆ ಪ್ರಕರಣ ನಡೆದಿರುವುದು ಖಂಡನೀಯ. ಕೊಲೆಯ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಬೇಕು. ಈ ಬಗ್ಗೆ ಕಾನೂನು ಜಾರಿಯಾಗಬೇಕು’ ಎಂದು ಕರ್ನಾಟಕ ರಾಜ್ಯ ಭೋವಿ (ವಡ್ಡರ) ಮಹಾಸಭಾದ ಮುಖಂಡರು ಆಗ್ರಹಿಸಿದರು.  ನಗರದ ಶಹರ ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೊಲೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಾಗುತ್ತಿಲ್ಲ. ಹೀಗಾಗಿ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಲೇ ಇದ್ದು ಕೂಡಲೇ ಸರ್ಕಾರ ಇಂತಹ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕು’ ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.  ತಹಶೀಲ್ದಾರ್‌ಗೆ ಮನವಿ:   ಅಂಜಲಿ ಅವರ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಗಿರೀಶ ಸಾವಂತ್‌ನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ನಗರದ ಕಿತ್ತೂರುರಾಣಿ ಚನ್ನಮ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಪ್ರತಿಭಟನೆ ನಡೆಸಿ ಶಹರ ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.