ಹುಬ್ಬಳ್ಳಿ: ನಗರದ ಹೃದಯ ಭಾಗದ ಸುಸಜ್ಜಿತವಾದ ರಸ್ತೆಯಲ್ಲಿ ಕೆಲವೇ ಬಸ್‌ಗಳು ಆಗಾಗ ಸಂಚರಿಸುತ್ತಿದ್ದರೆ, ಪಕ್ಕದ ರಸ್ತೆಯಲ್ಲಿ ಸಾಮಾನ್ಯ ಬಸ್‌ಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿರುವುದನ್ನು ಎಲ್ಲಾದರೂ ನೋಡಲು ಸಾಧ್ಯವೇ...?
ಹುಬ್ಬಳ್ಳಿ–ಧಾರವಾಡದ ಬಿಆರ್‌ಟಿಎಸ್ ಯೋಜನೆ ಗಮನಿಸಿದಾಗ ಮೇಲಿನ ಪ್ರಶ್ನೆಗೆ ‘ಹೌದು’ ಎಂಬ ಉತ್ತರ ಸಿಗುತ್ತದೆ. ಅವಳಿನಗರಗಳನ್ನು ಸಂಪರ್ಕಿಸಲು ನಿರ್ಮಿಸಿರುವ 22 ಕಿ.ಮೀ. ಉದ್ದದ ಬಿಆರ್‌ಟಿಎಸ್ ಪ್ರತ್ಯೇಕ ಕಾರಿಡಾರ್‌ನಿಂದ ಪ್ರಯೋಜನಕ್ಕಿಂತ ಸಮಸ್ಯೆಗಳೇ ಜಾಸ್ತಿಯಾಗಿವೆ.
ಸಂಚಾರ ದಟ್ಟಣೆ ಹೆಚ್ಚಾಗಿರುವ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಬಿಆರ್‌ಟಿಎಸ್ ಚಿಗರಿ ಬಸ್‌ಗಳು ಯಾವುದೇ ಆತಂಕವಿಲ್ಲದೆ ಓಡಾಡುತ್ತಿದ್ದರೆ, ಪಕ್ಕದ ರಸ್ತೆಯಲ್ಲಿ ನೂರಾರು ವಾಹನಗಳ ಸವಾರರು ಬಿಸಿಲು– ಮಳೆ ಲೆಕ್ಕಿಸದೆ ದಟ್ಟಣೆಯಲ್ಲಿ ಸಿಲುಕಿ ಪರದಾಡುತ್ತಿರುತ್ತಾರೆ.
ಸಂಚಾರದಲ್ಲಿ ತಾರತಮ್ಯ
ಈಗಾಗಲೇ ಅವಳಿನಗರಗಳ ಮಧ್ಯೆ ಚಿಗರಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಜೊತೆಗೆ, ಖಾಸಗಿ ಬೇಂದ್ರೆ ಸಾರಿಗೆ ಬಸ್‌ಗಳು ಸಹ ಸಂಚರಿಸುತ್ತಿವೆ.
ಮೂರೂ ರೀತಿಯ ಬಸ್‌ಗಳ ಉದ್ದೇಶ ಒಂದೇ ಆಗಿದ್ದರೂ, ಚಿಗರಿಗೆ ಮಾತ್ರ ಯಾಕೆ ಪ್ರತ್ಯೇಕ ಕಾರಿಡಾರ್ ಎಂಬ ಪ್ರಶ್ನೆ ಸಾರ್ವಜನಿಕರದು.
‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬಿಆರ್‌ಟಿಎಸ್ ಮಾರ್ಗದಲ್ಲಿ ಇತರ ಸರ್ಕಾರಿ ಬಸ್‌ಗಳ ಸಂಚಾರಕ್ಕೂ ಅವಕಾಶ ಕೊಡುವುದರಿಂದ ನಷ್ಟವೇನೂ ಆಗುವುದಿಲ್ಲ’ ಎನ್ನುತ್ತಾರೆ ಹುಬ್ಬಳ್ಳಿಯ ಶಿವಬಸಪ್ಪ ಹಿರೇಮಠ.
ರಸ್ತೆ ಮಧ್ಯೆ ನಿಲ್ದಾಣ:
ಕಾರಿಡಾರ್ ಮಧ್ಯೆ ಇರುವ 32 ಬಸ್ ನಿಲ್ದಾಣಗಳು ಹಳೇ ಪಿ.ಬಿ. ರಸ್ತೆಯ ನಿತ್ಯ ಸಂಚಾರ ದಟ್ಟಣೆಗೆ ಮತ್ತೊಂದು ಕಾರಣ.
ನಿಲ್ದಾಣಗಳ ಆಸುಪಾಸಿನಲ್ಲಿರುವ ಸಿಗ್ನಲ್‌ಗಳಲ್ಲಿ ಯಾವಾಗ ಕೆಂಪು– ಹಸಿರು ದೀಪ ಹೊತ್ತಿಕೊಳ್ಳುತ್ತದೆ, ಯಾವ ಕಡೆಯಿಂದ ವಾಹನಗಳು ಬರುತ್ತವೆ ಎಂಬ ಆತಂಕದಲ್ಲೇ ಜನ ರಸ್ತೆ ದಾಟಬೇಕು. ಕೆಲವೆಡೆ ನಿರ್ಮಿಸಿರುವ ಮೇಲ್ಸೇತುವೆಗಳು ಸಹ ಅಷ್ಟಾಗಿ ಬಳಕೆಯಾಗುತ್ತಿಲ್ಲ.
‘ಬುದ್ಧಿವಂತರಿಗಷ್ಟೇ ಬಿಆರ್‌ಟಿಎಸ್ ಪ್ರಯಾಣ ಲಾಯಕ್ಕಾಗಿದೆ. ನಿಲ್ದಾಣಕ್ಕೆ ಬರುವುದೇ ಪ್ರಯಾಣಿಕರಿಗೆ ಸವಾಲು. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಚಿತ. ಕೌಂಟರ್‌ನಲ್ಲಿ ಟಿಕೆಟ್ ಪಡೆದು, ಅದರಲ್ಲಿರುವ ಬಾರ್ ಕೋಡ್ ಸ್ಕ್ಯಾನ್ ಮಾಡಿದರಷ್ಟೇ ಒಳಕ್ಕೆ ಹೋಗುವ ಬಾಗಿಲು ತೆರೆದುಕೊಳ್ಳುತ್ತದೆ. ಇಲ್ಲದಿದ್ದರೆ, ಒದ್ದಾಡಬೇಕು. ಈ ಕಿರಿಕಿರಿ ಯಾಕೆ ಬೇಕು ಎಂದು ಅನೇಕರು ಚಿಗರಿ ಬಸ್‌ಗಳತ್ತ ಸುಳಿಯದೆ, ಸಾಮಾನ್ಯ ಬಸ್‌ಗಳನ್ನೇ ಹತ್ತಿಕೊಳ್ಳುತ್ತಾರೆ’ ಎಂದು ಹೊಸೂರಿನ ಹೇಮಂತ ದೊಡ್ಡಮನಿ ಗಮನ ಸಳೆಯುತ್ತಾರೆ.
ತಂಗುದಾಣಗಳೇ ಮಾಯ
ಯೋಜನೆಗಾಗಿ ಹಳೇ ಪಿ.ಬಿ. ರಸ್ತೆಯ ಎರಡೂ ಬದಿಗಳಲ್ಲಿ ಹಿಂದೆ ಇದ್ದ 50ಕ್ಕೂ ಹೆಚ್ಚು ಬಸ್ ತಂಗುದಾಣಗಳನ್ನು ತೆರವುಗೊಳಿಸಲಾಗಿದೆ. ಆದರೆ, ಯೋಜನೆ ಆರಂಭಗೊಂಡ ಬಳಿಕ ಕಾರಿಡಾರ್ ಮಧ್ಯೆ 32 ನಿಲ್ದಾಣಗಳನ್ನು ನಿರ್ಮಿಸಲಾಗಿದೆಯೇ ಹೊರತು, ಸರ್ವೀಸ್ ರಸ್ತೆಗಳಲ್ಲಿದ್ದ ತಂಗುದಾಣಗಳನ್ನು ಮರು ನಿರ್ಮಿಸಿಲ್ಲ.
ಇದರಿಂದಾಗಿ ಬಿಆರ್‌ಟಿಎಸ್ ಹೊರತುಪಡಿಸಿದ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಸ್‌ಗಾಗಿ ಕಾಯಲು ತಂಗುದಾಣಗಳೇ ಇಲ್ಲ. ಬಸ್‌ಗಳು ಸಹ ನಿಗದಿತ ಸ್ಥಳಗಳಲ್ಲಿ ನಿಲ್ಲದಿರುವುದರಿಂದ, ಸಿಗ್ನಲ್ ಸೇರಿದಂತೆ ಎಲ್ಲೆಂದರಲ್ಲಿ ಜನರನ್ನು ಹತ್ತಿಸಿಕೊಳ್ಳುವುದು ಮತ್ತು ಇಳಿಸುವುದು ಸಾಮಾನ್ಯವಾಗಿದೆ. ಅವಳಿನಗರ ಮಾರ್ಗದ ಸಂಚಾರ ದಟ್ಟಣೆಗೆ ಇದು ಕೂಡ ಕಾರಣವಾಗಿದೆ.
ಫೀಡರ್ ಸೇವೆ, ಫುಟ್‌ಪಾತ್, ಪಾರ್ಕಿಂಗ್ ಸಮಸ್ಯೆ
ಬಿಆರ್‌ಟಿಎಸ್ ನಿಲ್ದಾಣಗಳಿರುವ ಸ್ಥಳಕ್ಕೆ ಸರಿಯಾಗಿ ಫೀಡರ್ ಸೇವೆ ಇಲ್ಲ. ಬಸ್ ಇಳಿದ ತಕ್ಷಣ ಆಟೊ ಸೇರಿದಂತೆ ಇತರ ವಾಹನಗಳು ಸಿಗುವುದಿಲ್ಲ. ಕೆಲ ದೂರ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಪ್ರಯಾಣಿಕರದ್ದಾಗಿದೆ.
ಇನ್ನು ಪಾದಚಾರಿ ಮಾರ್ಗ ಇಲ್ಲದಿರುವುದು ಯೋಜನೆಯ ಮತ್ತೊಂದು ವೈಫಲ್ಯ. ಮೆಟ್ರೋ ಮಾದರಿಯಂತೆ, ಪ್ರಯಾಣಿಕರು ತಮ್ಮ ವಾಹನವನ್ನು ನಿಲ್ದಾಣದ ಬಳಿ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ.
ಮಳೆಗೆ ಹಳ್ಳವಾಗುವ ರಸ್ತೆ
ಯೋಜನೆಯ ಅವ್ಯವಸ್ಥೆಯ ಮತ್ತೊಂದು ಮುಖ ಗೋಚರಿಸುವುದು ಮಳೆಗಾಲದಲ್ಲಿ. ಮಳೆ ಸುರಿದಾಗ ಕಾರಿಡಾರ್‌ನಿಂದ ನೀರು ಸುಗಮವಾಗಿ ಹರಿದು ಚರಂಡಿ ಸೇರದೆ, ರಸ್ತೆಯಲ್ಲೇ ನಿಲ್ಲುತ್ತದೆ. ಮಳೆ ಬಂದಾಗ ಧಾರವಾಡದ ಟೋಲ್ ನಾಕಾ, ಹುಬ್ಬಳ್ಳಿಯ ಉಣಕಲ್ ಸೇರಿದಂತೆ ಹಲವೆಡೆ ಕಾರಿಡಾರ್ ಜಲಾವೃತ್ತಗೊಳ್ಳುತ್ತದೆ.
ಇಂದಿಗೂ ಕಾಮಗಾರಿ ಅಪೂರ್ಣ
2013ರಲ್ಲಿ ಆರಂಭಗೊಂಡ ಕಾಮಗಾರಿ 2017ಕ್ಕೆ ಪೂರ್ಣಗೊಳ್ಳಬೇಕಿತ್ತು. 2020ರಲ್ಲಿ ಕಾರಿಡಾರ್‌ಗೆ ಅಧಿಕೃತ ಚಾಲನೆ ಸಿಕ್ಕರೂ, ಕೆಲವೆಡೆ ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ನವಲೂರು ಬಳಿ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಬೈರಿದೇವರಕೊಪ್ಪದ ಬಳಿ ರಸ್ತೆ ವಿಸ್ತರಣೆ ಬಾಕಿ ಇದೆ. ಕೆಲವೆಡೆ ರಸ್ತೆ ಅಗಲವಾಗಿದ್ದರೆ, ಉಳಿದೆಡೆ ಕಿರಿದಾಗಿದೆ.
ಹುಬ್ಬಳ್ಳಿಯ ಹೊಸೂರು ವೃತ್ತದಿಂದ ಧಾರವಾಡದ ಜುಬಿಲಿ ವೃತ್ತದವರೆಗೆ ಮಾತ್ರ ಕಾರಿಡಾರ್ ನಿರ್ಮಿಸಲಾಗಿದೆ. ಆದರೆ, ಕಾರಿಡಾರ್ ಹೊರತುಪಡಿಸಿದ ರಸ್ತೆಗಳಲ್ಲೂ ಚಿಗರಿಗಳು ಸಂಚರಿಸುತ್ತವೆ. ಹಾಗಾಗಿ, ಈ ಬಸ್‌ಗಳ ಪ್ರಯಾಣವೂ ಸಂಚಾರ ದಟ್ಟಣೆಯಿಂದ ಹೊರತಾಗಿಲ್ಲ ಎಂದು ಜನ ದೂರುತ್ತಾರೆ.
ನಿತ್ಯ ನಷ್ಟದಲ್ಲೇ ಸಂಚಾರ
ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಚಿಗರಿ ಬಸ್‌ಗಳು ಒಮ್ಮೆಯೂ ಲಾಭದಲ್ಲಿ ಕಾರ್ಯಾಚರಣೆ ನಡೆಸಿಲ್ಲ. 85 ಚಿಗರಿ ಬಸ್‌ಗಳು ಅವಳಿನಗರದ ಮಧ್ಯೆ ನಿತ್ಯ ಸುಮಾರು 950 ಟ್ರಿಪ್ ಓಡಾಡುತ್ತವೆ. ಅಂದಾಜು 65 ಸಾವಿರ ಜನ ಪ್ರಯಾಣಿಸುತ್ತಾರೆ. ನಿತ್ಯ ಅಂದಾಜು ₹9 ಲಕ್ಷದಿಂದ ₹10 ಲಕ್ಷ ಆದಾಯ ಸಂಗ್ರಹವಾಗುತ್ತದೆ. ಲಾಭ–ನಷ್ಟಗಳ ಲೆಕ್ಕಾಚಾರ ಹಾಕಿದರೆ, ಬಸ್‌ಗಳ ಪ್ರತಿ ಕಿಲೋಮೀಟರ್ ಸಂಚಾರಕ್ಕೆ ₹82 ಖರ್ಚಾದರೆ, ಬರುವ ಆದಾಯ ಕೇವಲ ₹45 ಮಾತ್ರ!
‘ಜನರ ತೆರಿಗೆ ಹಣವನ್ನು ಇಂತಹ ಯೋಜನೆಗಳಿಗೆ ಪೋಲು ಮಾಡುವುದು ಎಷ್ಟು ಸರಿ. ಸಾಮಾನ್ಯ ಬಸ್‌ಗಳ ಕಾರ್ಯಾಚರಣೆಯನ್ನೇ ಹೆಚ್ಚಿಸಿದ್ದರೆ ಜನರಿಗೂ ಅನುಕೂಲವಾಗುತ್ತಿತ್ತು. ಅವೈಜ್ಞಾನಿಕ ಯೋಜನೆ
ಯಿಂದಾಗಿ ಸಾಲು ಮರಗಳಿಂದ ಕೂಡಿದ್ದ ಹಳೇ ಪಿ.ಬಿ. ರಸ್ತೆಯ ಸೌಂದರ್ಯವೇ ಹಾಳಾಯ್ತು’ ಎಂದು ಹುಬ್ಬಳ್ಳಿಯ ವೀರೇಶ ಕೆ. ಅಸಮಾಧಾನ ವ್ಯಕ್ತಪಡಿಸಿದರು.
ಮೂಲ ಉದ್ದೇಶ ಮರೆತ ಯೋಜನೆ
ಪ್ರಯಾಣಿಕರನ್ನು ಸಾಗಿಸುವ ಎಲ್ಲಾ ಸ್ಥಳೀಯ ಬಸ್‌ಗಳು ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಸಂಚರಿಸಬೇಕು ಎಂಬುದು ಯೋಜನೆಯ ಮೂಲ ಉದ್ದೇಶ. ಆದರೆ, ಈ ಉದ್ದೇಶವನ್ನು ಮರೆತು ಯೋಜನೆಯನ್ನು ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಉದ್ಭವವಾಗಿವೆ.
ಬಿಆರ್‌ಟಿಎಸ್ ಆರಂಭವಾದ ಬಳಿಕ ಅವಳಿನಗರಗಳ ಮಧ್ಯೆ ವಾಯವ್ಯ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‌ಗಳು ಸೇರಿದಂತೆ, ಖಾಸಗಿ ಬೇಂದ್ರೆ ಬಸ್‌ಗಳ ಸಂಚಾರವನ್ನು ಸಹ ನಿಲ್ಲಿಸಿ, ಎಲ್ಲಾ ಪ್ರಯಾಣಿಕರು ಚಿಗರಿ ಬಸ್‌ಗಳಲ್ಲೇ ಸಂಚರಿಸಬೇಕು ಎಂಬ ಉದ್ದೇಶ ಹೊಂದಲಾಗಿತ್ತು. ಆದರೆ, ಮೂಲ ಉದ್ದೇಶವನ್ನೇ ಮರೆತು, 2020ರಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು.
ಕಾರಿಡಾರ್‌ನಲ್ಲಿ 85 ಚಿಗರಿ ಬಸ್‌ಗಳು ಸಂಚರಿಸಿದರೆ, ಪಕ್ಕದ ಎರಡೂ ರಸ್ತೆಗಳಲ್ಲಿ ಸಾಮಾನ್ಯ ಸರ್ಕಾರಿ ಹಾಗೂ ಖಾಸಗಿ ಬೇಂದ್ರೆ ಬಸ್‌ಗಳು ಸಹ ಓಡಾಡುತ್ತಿವೆ. ಖಾಸಗಿ ಬಸ್‌ಗಳ ಸಂಚಾರ ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಇತ್ತ, ಸಾಮಾನ್ಯ ಬಸ್‌ಗಳನ್ನು ಸಹ ಕಾರಿಡಾರ್‌ನಲ್ಲಿ ಓಡಾಡಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಸಂಚಾರ ಸುಗಮವಾಗುವುದರ ಬದಲು, ಮತ್ತಷ್ಟು ದುರ್ಗಮವಾಯಿತು.
‘ಯೋಜನೆಯ ಮರುಪರಿಶೀಲನೆ ಅಗತ್ಯ’
‘ಬಿಆರ್‌ಟಿಎಸ್ ಸುಸ್ಥಿರ ನಗರ ಸಾರಿಗೆಯ ಯೋಜನೆ. ಸುರಕ್ಷತೆ, ಸೇವೆ, ಸಾರ್ವಜನಿಕ ಸಾರಿಗೆ ಬಳಕೆಯ ಹೆಚ್ಚಳ, ವಾಯುಮಾಲಿನ್ಯ ತಗ್ಗಿಸುವುದು ಸೇರಿದಂತೆ ವಿವಿಧ ಉದ್ದೇಶಗಳೊಂದಿಗೆ ಜಾರಿಗೊಳಿಸಲಾಗಿದೆ. ಅವುಗಳಲ್ಲಿ ಎಷ್ಟನ್ನು ಇದುವರೆಗೆ ಸಾಧಿಸಲಾಗಿದೆ ಎಂಬುದರ ಅವಲೋಕನ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ, ಸೇವೆಯನ್ನು ಉತ್ತಮಪಡಿಸಲುಯೋಜನೆಯನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಜನಾಗ್ರಹ ಸರ್ಕಾರೇತರ ಸಂಸ್ಥೆಯ ನಾಗರಿಕರ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಮುಖ್ಯಸ್ಥ ಸಂತೋಷ ನರಗುಂದ ಅಭಿಪ್ರಾಯಪಟ್ಟರು.
‘ಲಾಭ–ನಷ್ಟಕ್ಕಿಂತ ಸೇವೆಯೇ ಮುಖ್ಯ’
‘ದೇಶದಲ್ಲೇ ಅತ್ಯಂತ ಕಡಿಮೆ ಟಿಕೆಟ್ ದರದಲ್ಲಿ ಎ.ಸಿ ಬಸ್‌ಗಳ ಸೇವೆ ಒದಗಿಸುತ್ತಿರುವ ಏಕೈಕ ಯೋಜನೆ ಬಿಆರ್‌ಟಿಎಸ್. ಇಲ್ಲಿ ಲಾಭ–ನಷ್ಟದ ಲೆಕ್ಕಾಚಾರಕ್ಕಿಂತ ಅತ್ಯುತ್ತಮ ಸೇವೆ ಒದಗಿಸುವುದೇ ಮುಖ್ಯ ಉದ್ದೇಶ. ಆರಂಭದಲ್ಲಿ ಚಿಗರಿ ಬಸ್‌ವೊಂದರ ಒಂದು ಕಿ.ಮೀ. ಕಾರ್ಯಾಚರಣೆಯಿಂದ ₹36 ಆದಾಯ ಬರುತ್ತಿತ್ತು. ಇದೀಗ ಅದು ₹45ಕ್ಕೆ ಏರಿಕೆಯಾಗಿದೆ. ಇದನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಭರತ್ಎಸ್. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಅವಳಿನಗರದ ನಡುವೆ ಸಂಚರಿಸುವ ಖಾಸಗಿ ಬೇಂದ್ರೆ ಬಸ್‌ಗಳ ಕಾರ್ಯಾಚರಣೆ ನಿಂತರೆ, ಚಿಗರಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದುಪ್ಪಟ್ಟುಗೊಳ್ಳಲಿದೆ. ಬೇಂದ್ರೆ ಪರವಾನಗಿ ರದ್ದುಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿದೆ. ತೀರ್ಪು ನಮ್ಮ ಪರವಾಗಿ ಬಂದ ತಕ್ಷಣ ಅವಳಿನಗರದ ಮಧ್ಯೆ ಚಿಗರಿ ಬಸ್‌ಗಳಷ್ಟೇ ಕಾರ್ಯಾಚರಣೆ ನಡೆಸಲಿವೆ’ ಎಂದರು.
ಫೀಡರ್ ಸೇವೆಗೆ ಒತ್ತು: ‘ಚಿಗರಿ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ನಿಲ್ದಾಣಗಳಿಗೆ ಫೀಡರ್ ಸೇವೆ ಹೆಚ್ಚಿಸುವುದು, ನಿಲ್ದಾಣಕ್ಕೆ ಜನ ಬರಲು ಹಾಗೂ ಹೋಗಲು ಅನುಕೂಲವಾಗುವಂತೆ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಕಾರಿಡಾರ್‌ನಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದಕ್ಕೆ ಮೊದಲು ಒತ್ತು ನೀಡಲಾಗುವುದು’ ಎಂದು ಹೇಳಿದರು.
‘ನವಲೂರು ಬಳಿ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಯೋಜನೆಗಾಗಿ ಬೈರಿದೇವರ ಕೊಪ್ಪದ ಬಳಿ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿದೆ. ಭೂ ಸ್ವಾಧೀನ ಮತ್ತು ಪರಿಹಾರ ವಿತರಣೆ ಮುಗಿದಿದ್ದರೂ, ಮಾಲೀಕತ್ವದ ವಿವಾದದಿಂದಾಗಿ ಭೂಮಿ ಹಸ್ತಾಂತರವಾಗಿಲ್ಲ. ಜುಲೈನಲ್ಲಿ ಪ್ರಕರಣದ ವಿಚಾರಣೆ ಇದ್ದು, ಆದಷ್ಟು ಬೇಗ ಇತ್ಯರ್ಥವಾಗಲಿದೆ’ ಎಂದರು.
ಫ್ಲೈಓವರ್‌ನಿಂದ 3 ನಿಲ್ದಾಣಕ್ಕೆ ಹಾನಿ: ‘ಚನ್ನಮ್ಮ ವೃತ್ತದಿಂದ ಮೂರು ದಿಕ್ಕಿಗೆ ನಿರ್ಮಾಣವಾಗುತ್ತಿರುವ ಫ್ಲೈಓವರ್‌ನಿಂದಾಗಿ ಬಿಆರ್‌ಟಿಎಸ್‌ನ ಮೂರು ನಿಲ್ದಾಣಗಳಿಗೆ ಹಾನಿಯಾಗಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ತರಲಾಗಿದೆ. ನಿಲ್ದಾಣಗಳಿಗೆ ಹಾನಿಯಾಗದಂತೆ ಫ್ಲೈಓವರ್ ವಿನ್ಯಾಸ ಬದಲಿಸುವ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ತಿಳಿಸಿದರು.
‘ದೇಶದಲ್ಲೇ ಯಶಸ್ವಿ ಯೋಜನೆ’
‘ಗುಜರಾತ್‌ನ ಅಹಮದಾದ್, ಸೂರತ್, ಮಹಾರಾಷ್ಟ್ರದ ಪುಣೆ, ಪಿಂಪ್ರಿ– ಚಿಂಚವಾಡದಲ್ಲಿ ಬಿಆರ್‌ಟಿಎಸ್ ಕಾರಿಡಾರ್‌ಗಳಿವೆ. ಅವುಗಳಿಗೆ ಹೋಲಿಸಿದರೆ ಹುಬ್ಬಳ್ಳಿ–ಧಾರವಾಡದ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದುವರೆಗೆ ರಾಷ್ಟ್ರಮಟ್ಟದ ಮೂರು ಪ್ರಶಸ್ತಿಗಳು ಯೋಜನೆಯು ಮುಡಿಗೇರಿಸಿಕೊಂಡಿದೆ’ ಎನ್ನುತ್ತಾರೆ ಬಿಆರ್‌ಟಿಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಜಡೆನ್ನವರ.
‘ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ2019ರಲ್ಲಿ ಬೆಸ್ಟ್ ಅರ್ಬನ್ ಮಾಸ್ ಟ್ರಾನ್ಸಿಸ್ಟ್ ಪ್ರಾಜೆಕ್ಟ್ ವರ್ಗದಡಿ ‘ಅವಾರ್ಡ್ ಆಫ್ ಎಕ್ಸಲೆನ್ಸ್ –2019’ ಪ್ರಶಸ್ತಿ, 2021ರಲ್ಲಿ 14ನೇ ಅರ್ಬನ್ ಮೊಬಿಲಿಟಿ ಇಂಡಿಯಾ ಕಾನ್ಫರೆನ್ಸ್–2021ರಲ್ಲಿ ಸಿಟಿ ವಿತ್ ದ ಬೆಸ್ಟ್ ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ (ಐಟಿಎಸ್) ವರ್ಗದಡಿ ‘ಅವಾರ್ಡ್ ಆಫ್ ಎಕ್ಸಲೆನ್ಸ್–2021’ ಪ್ರಶಸ್ತಿ ಹಾಗೂ ‘ಎನ್ವಿರಾನ್‌ಮೆಂಟ್ ಅಂಡ್ ಸಸ್ಟೈನೆಬಿಲಿಟಿ ಗೋಲ್ಡ್ ಸ್ಕೋಚ್ ಅವಾರ್ಡ್ –2021’ ಪ್ರಶಸ್ತಿಗಳು ಯೋಜನೆಗೆ ಸಿಕ್ಕಿವೆ’ ಎಂದು ಹೇಳಿದರು.
ಸಾರ್ವಜನಿಕರು ಏನಂತಾರೆ
ಬಿಆರ್‌ಟಿಎಸ್‌ನಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಸಿಗ್ನಲ್‌ಗಳಲ್ಲಿ ದಾಟುವುದೇ ಸವಾಲು. ಸ್ವಲ್ಪ ಯಾಮಾರಿದರೂ ಅಪಘಾತ ಖಚಿತ. ನಿರ್ವಹಣೆಯ ಕೊರತೆ ಎದ್ದು ಕಾಣುತ್ತದೆ. ಈ ನಿಟ್ಟಿನಲ್ಲಿ ಹಲವು ಸುಧಾರಣೆಗಳ ಅಗತ್ಯವಿದೆ
– ರೇವಣಸಿದ್ಧಪ್ಪ ದೇಸಾಯಿ, ಹುಬ್ಬಳ್ಳಿ
****
ದೇಶದೆಲ್ಲೆಡೆ ವಿಫಲವಾಗಿರುವ ಯೋಜನೆಯು ಹುಬ್ಬಳ್ಳಿ–ಧಾರವಾಡಕ್ಕೆ ಶಾಪವಾಗಿ ಪರಿಣಮಿಸಿದೆ. ಇದರ ಬದಲಿಗೆ, ಆರು ಪಥದ ರಸ್ತೆಯನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರೆ ಜನರಿಗೆ ಅನುಕೂಲವಾಗಲಿದೆ
– ಲೋಹಿತ ಗಾಮನಗಟ್ಟಿ, ವಿದ್ಯಾನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.