ADVERTISEMENT

ಹುಬ್ಬಳ್ಳಿ: ಸಮಸ್ಯೆಗಳ ನಡುವೆಯೇ ನಿತ್ಯದ ಬದುಕು

ಸಿಮೆಂಟ್‌ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಆಗ್ರಹ

ಎಲ್‌.ಮಂಜುನಾಥ
Published 10 ಅಕ್ಟೋಬರ್ 2024, 4:36 IST
Last Updated 10 ಅಕ್ಟೋಬರ್ 2024, 4:36 IST
ಹುಬ್ಬಳ್ಳಿಯ ಹನುಮಂತ ನಗರದ ಚರಂಡಿ ವ್ಯವಸ್ಥೆ ಇಲ್ಲದ ಮಣ್ಣಿನ ರಸ್ತೆಯ ಮಧ್ಯದಲ್ಲಿಯೇ ಮನೆಯ ಬಳಕೆಯ ನೀರು ನಿಂತಿರುವುದು
ಪ್ರಜಾವಾಣಿ ಚಿತ್ರ: ಗುರು ಹಬೀಬ 
ಹುಬ್ಬಳ್ಳಿಯ ಹನುಮಂತ ನಗರದ ಚರಂಡಿ ವ್ಯವಸ್ಥೆ ಇಲ್ಲದ ಮಣ್ಣಿನ ರಸ್ತೆಯ ಮಧ್ಯದಲ್ಲಿಯೇ ಮನೆಯ ಬಳಕೆಯ ನೀರು ನಿಂತಿರುವುದು ಪ್ರಜಾವಾಣಿ ಚಿತ್ರ: ಗುರು ಹಬೀಬ    

ಹುಬ್ಬಳ್ಳಿ: ಕಿರಿದಾದ ಮಣ್ಣಿನ ರಸ್ತೆಗಳು, ಚರಂಡಿ ವ್ಯವಸ್ಥೆ ಇಲ್ಲ. ಪದೇ ಪದೇ ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು,  ಮಳೆಗಾಲದ ವೇಳೆ ಮನೆಯೊಳಗೆ ನುಗ್ಗುವ ಗಲೀಜು ನೀರು, ರಸ್ತೆ ಬದಿಯಲ್ಲಿಯೇ ತ್ಯಾಜ್ಯದ ರಾಶಿ, ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ, ಕೊಳಚೆ ನೀರು ಮಿಶ್ರಿತ ಕುಡಿಯುವ ನೀರು ಪೂರೈಕೆ, ಪಾಲಿಕೆಗೆ ಸಕಾಲಕ್ಕೆ ತೆರಿಗೆ ಪಾವತಿಸಿದರೂ ಸಿಗದ ಮನೆಯ ಹಕ್ಕುಪತ್ರ. 

–ಇದು ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 49 ವಾರ್ಡ್‌ನಲ್ಲಿನ ಹನುಮಂತ ನಗರ, ಶೆಟ್ಟರ ಲೇಔಟ್‌, ಶಕ್ತಿ ಕಾಲೊನಿ ಸೇರಿದಂತೆ ಲಿಂಗರಾಜ ನಗರದ ಸುತ್ತಮುತ್ತಲಿನ ಕೊಳಚೆ ಪ್ರದೇಶಗಳ ಸ್ಥಿತಿ. ಇಲ್ಲಿನ ನಿವಾಸಿಗಳು ಇಂತಹ ಹಲವು ಸಮಸ್ಯೆ, ಕೊರತೆಗಳ ನಡುವೆಯೇ ನಿತ್ಯ ಬದುಕು ಸಾಗಿಸುತ್ತಿದ್ದಾರೆ. 

ಹನುಮಂತ ನಗರದಲ್ಲಿ 300ಕ್ಕೂ ಅಧಿಕ ಕುಟುಂಬಗಳು 25 ವರ್ಷಗಳಿಂದ ವಾಸವಾಗಿವೆ. ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಪಾಲಿಕೆಗೆ ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿಸುತ್ತಲೇ ಬಂದಿದ್ದಾರೆ. ಆದರೆ, ಇಂದಿಗೂ ಇವರಿಗೆ ಪಾಲಿಕೆಯಿಂದ ಅಧಿಕೃತವಾದ ಡೋರ್‌ ನಂಬರ್‌, ನಿವಾಸಿ ಹಕ್ಕುಪತ್ರ ದೊರೆತಿಲ್ಲ. ಇವರ ಬಳಿ ಆರಂಭದಲ್ಲಿ ನಿವೇಶನಕ್ಕೆ ಸಂಬಂಧಿಸಿದ ಹೊಲದ ಮಾಲೀಕರು ನೀಡಿದ ಜಾಗದ ಪತ್ರ ಮಾತ್ರವಿದೆ. 

ADVERTISEMENT

ಬುಡಕಟ್ಟು, ಶೋಷಿತ ಹಾಗೂ ಅಲ್ಪ ಸಮುದಾಯಕ್ಕೆ ಸೇರಿದ ಜನರು ಇಲ್ಲಿ ವಾಸವಾಗಿದ್ದಾರೆ. ಬಹುತೇಕರು ನಿತ್ಯ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸವಾಗಿರುವ ಇವರಿಗೆ ಶುದ್ಧ ಕುಡಿಯುವ ನೀರು ಎನ್ನುವುದು ಸಹ ಮರೀಚಿಕೆಯಾಗಿದೆ. 

‘ಚರಂಡಿ ವ್ಯವಸ್ಥೆ ಇಲ್ಲದ ಕಾರಣ. ಮನೆಯ ತ್ಯಾಜ್ಯದ ನೀರು, ಶೌಚಾಲಯದ ನೀರಿನ ಪೈಪ್‌ಗಳನ್ನು ನೇರವಾಗಿ ಒಳಚರಂಡಿಗೆ ಅಳವಡಿಸಲಾಗಿದೆ. ಇದರಿಂದಾಗಿ ಆಗಾಗ ಗಟಾರ ತುಂಬಿ, ಹೊರಗೆ ಹರಿಯುತ್ತದೆ. ಕೆಲವೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ನೊಳಗೆ ಕೊಳಚೆ ನೀರು ಸೇರುವುದರಿಂದ ಗಲೀಜು ನೀರು ಪೂರೈಕೆಯಾಗುತ್ತದೆ. ಕುಡಿಯಲು, ಬಳಕೆಗೆ ಯೋಗ್ಯವಾಗಿರುವುದಿಲ್ಲ’ ಎಂದು ಇಲ್ಲಿನ ನಿವಾಸಿಗಳಾದ ಈರಮ್ಮ ಗಂಗಮ್ಮ ಮಡಿವಾಳ, ಸುಭದ್ರಮ್ಮ, ನಾಗರಾಜ, ದೇವೇಂದ್ರಪ್ಪ ಪಾರಗಿ ದೂರುತ್ತಾರೆ. 

‘25 ವರ್ಷಗಳಿಂದ ವಾಸವಾಗಿದ್ದು, 10 ವರ್ಷಗಳಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿದ್ದೇವೆ. ಇಂದಿಗೂ ನಮಗೆ ಪಾಲಿಕೆಯಿಂದ ಅಧಿಕೃತವಾದ ಡೋರ್‌ ನಂಬರ್‌, ಹಕ್ಕುಪತ್ರ ಸಿಕ್ಕಿಲ್ಲ. ರಸ್ತೆ, ಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳು ಸಿಗುತ್ತಿಲ್ಲ’ ಎಂದು ದೂರುತ್ತಾರೆ ಹನುಮಂತ ನಗರದ ನಿವಾಸಿ ನಾರಾಯಣ ಲಕ್ಷ್ಮಣ ಕೊಪ್ಪಳ. 

‘ಸಿಮೆಂಟ್‌, ಡಾಂಬರ್‌ ರಸ್ತೆ ಹಾಗೂ ವ್ಯವಸ್ಥಿತವಾದ ಚರಂಡಿ ನಿರ್ಮಿಸಿಕೊಡಿ ಎಂದು ಹಲವು ಬಾರಿ ಪಾಲಿಕೆ ಸದಸ್ಯರಲ್ಲಿ ಮನವಿ ಮಾಡಲಾಗಿದೆ. ಇಂದಿಗೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಇಲ್ಲಿ ಓಡಾಡಲು ಕಷ್ಟವಾಗುತ್ತದೆ‘ ಎಂದು ಶೆಟ್ಟರ ಲೇಔಟ್‌ನ ನಿವಾಸಿ ರಾಜು ಅಸಮಾಧಾನ ವ್ಯಕ್ತಪಡಿಸಿದರು. 

ಹುಬ್ಬಳ್ಳಿಯ ಹನುಮಂತ ನಗರದ ಜನವಸತಿ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದು –ಪ್ರಜಾವಾಣಿ ಚಿತ್ರ: ಗುರು ಹಬೀಬ 

ಮೂಲ ಸೌಲಭ್ಯಕ್ಕಾಗಿ ನಿವಾಸಿಗಳ ಭಿನ್ನಹ ಬಾಕ್ಸ್ ಚರಂಡಿ ನಿರ್ಮಿಸಲು ಆಗ್ರಹ ಮನೆಯ ಹಕ್ಕುಪತ್ರ ವಿತರಣೆಗೆ ಒತ್ತಾಯ

ರಸ್ತೆ ಚಿಕ್ಕದಿದೆ ಎಂದು ಚರಂಡಿ ನಿರ್ಮಿಸಿಲ್ಲ. ಮಳೆಗಾಲದ ವೇಳೆ ರಸ್ತೆಯ ನೀರು ಮನೆಯೊಳಗೆ ಹರಿಯುತ್ತದೆ. ರಸ್ತೆ ಬದಿಯಲ್ಲಿ ಬಾಕ್ಸ್‌ ಚರಂಡಿಗಳನ್ನು ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ. 
ಜಯಶ್ರಿ ಗೃಹಿಣಿ ಶೆಟ್ಟರ ಲೇಔಟ್‌ ನಿವಾಸಿ
ಮಣ್ಣಿನ ರಸ್ತೆಗಳಿದ್ದು ಬಹುತೇಕ ಹಾಳಾಗಿದ್ದು ಜನರ ಸಂಚಾರಕ್ಕೂ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಓಡಾಡಲು ಕಷ್ಟವಾಗುತ್ತದೆ. ಪಾಲಿಕೆ ಪೂರೈಸುವ ಕುಡಿಯುವ ನೀ‌ರಿನಲ್ಲಿ ಕೊಳಚೆ ನೀರು ಸೇರಿ ಗಲೀಜು ವಾಸನೆ ಬರುತ್ತದೆ.
ಸುಭದ್ರಮ್ಮ ಗೃಹಿಣಿ ಹನುಮಂತ ನಗರ. 

₹6 ಕೋಟಿ ಅನುದಾನಕ್ಕೆ ಪ್ರಸ್ತಾವ: ವೀಣಾ ಭರದ್ವಾಡ 

‘ಹನುಮಂತ ನಗರ ಶೆಟ್ಟರ ಲೇಔಟ್‌ ಶಕ್ತಿ ಕಾಲೊನಿ ಹಾಗೂ ರಾಣಿ ಚೆನ್ನಮ್ಮ ಕಾಲೊನಿಯಲ್ಲಿ ಅಗತ್ಯ ಇರುವ ಕಡೆ ರಸ್ತೆ ನಿರ್ಮಾಣ ಚರಂಡಿ ವ್ಯವಸ್ಥೆ ಶುದ್ಧ ಕುಡಿಯುವ ನೀರು ಪೂರೈಕೆಗೆ ನಳ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ₹6 ಕೋಟಿ ಅನುದಾನ ಮಂಜೂರು ಮಾಡುವಂತೆ ಈಗಾಗಲೇ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಸಂಸದ ಪ್ರಲ್ಹಾದ ಜೋಶಿ ಅವರಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ. ಡಿಸೆಂಬರ್‌ ಅಥವಾ ನವೆಂಬರ್‌ನಲ್ಲಿ ಅನುದಾನ ದೊರೆಯವ ಸಾಧ್ಯತೆ ಇದೆ. ಹಣ ಬಂದ ತಕ್ಷಣ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು‘ ಎಂದು ಇಲ್ಲಿನ ಪಾಲಿಕೆ ಸದಸ್ಯೆ ವೀಣಾ ಭರದ್ವಾಡ ಹೇಳುತ್ತಾರೆ.  ‘ಅಕ್ರಮ–ಸಕ್ರಮದ ಅಡಿಯಲ್ಲಿ ಹನುಮಂತ ನಗರದ ನಿವಾಸಿಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ ಪಾಲಿಕೆಗೆ ತೆರಿಗೆ ಪಾವತಿಸುತ್ತಿದ್ದಾರೆ. ಅ.3ರಂದು ಹನುಮಂತ ನಗರದಲ್ಲಿಯೇ ತೆರಿಗೆ ಪಾವತಿಗೆ ಅನುಕೂಲ ಮಾಡಿಕೊಡಲಾಗಿದೆ. ಅಧಿಕೃತವಾಗಿ ಕೊಳಚೆ ಪ್ರದೇಶವೆಂದು ಘೋಷಣೆಯಾದರೆ ಇನ್ನೂ ಹೆಚ್ಚಿನ ಸೌಲಭ್ಯಗಳು ನಿವಾಸಿಗಳಿಗೆ ದೊರೆಯುತ್ತವೆ’ ಎನ್ನುತ್ತಾರೆ ಅವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.