ಹುಬ್ಬಳ್ಳಿ: ನಗರ ಪ್ರದೇಶಗಳಲ್ಲಿ ಅಂಗವಿಕಲರಿಗೆ ಕೆಲ ಉದ್ಯೋಗಾವಕಾಶ ಸಿಗಬಹುದು. ಆದರೆ ಗ್ರಾಮೀಣ ಭಾಗದವರಿಗೆ ಅವಕಾಶಗಳ ಸಂಖ್ಯೆ ಕಡಿಮೆ. ಕೃಷಿ ಕೂಲಿಗೂ ಅವರನ್ನು ಪರಿಗಣಿಸುವವರು ಕಡಿಮೆ. ಆದರೆ ಗ್ರಾಮೀಣ ಭಾಗದ ಅಂಗವಿಕಲರು ಸ್ವಾವಲಂಬನೆ ಸಾಧಿಸಲು ಉದ್ಯೋಗ ಖಾತ್ರಿ ಯೋಜನೆ ಉತ್ತಮ ಅವಕಾಶ ಒದಗಿಸಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಂಗವಿಕಲರ ಪಾಲ್ಗೊಳ್ಳುವಿಕೆಯಲ್ಲಿ ಜಿಲ್ಲೆಯಲ್ಲಿ ಕಲಘಟಗಿ ತಾಲ್ಲೂಕು ಮುಂದಿದೆ. ಈ ವರ್ಷ ನರೇಗಾ ಕಾಮಗಾರಿಗೆ ಅಂಗವಿಕಲರ ನೋಂದಣಿಯಲ್ಲಿ ಇಲ್ಲಿಯವರೆಗೆ ಹುಬ್ಬಳ್ಳಿ ಹಾಗೂ ನವಲಗುಂದ ತಾಲ್ಲೂಕು ಮುಂದಿದ್ದರೆ ಕೆಲಸದಲ್ಲಿ ಪಾಲ್ಗೊಳ್ಳುವುದರಲ್ಲಿ ಕಲಘಟಗಿ ತಾಲ್ಲೂಕು ಮುಂದೆ ಇದೆ. ಕಲಘಟಗಿಯಲ್ಲಿ ಇಲ್ಲಿಯವರೆಗೆ ಅಂಗವಿಕಲರಿಂದ 1028 ಮಾನವ ದಿನಗಳ ಕೆಲಸ ಆಗಿದೆ. ಕುಂದಗೋಳ–636, ಧಾರವಾಡ–586, ಹುಬ್ಬಳ್ಳಿ–528, ಅಣ್ಣಿಗೇರಿ–266, ನವಲಗುಂದ–221, ಅಳ್ನಾವರ–37, ಒಟ್ಟು 3302 ಮಾನವ ದಿನಗಳ ಕೆಲಸ ಅಂಗವಿಕಲರಿಂದ ಆಗಿದೆ.
‘ಬಹುತೇಕ ಅಂಗವಿಕಲರ ಪಾಲ್ಗೊಳ್ಳುವಿಕೆಯಲ್ಲಿ ಪ್ರತಿ ವರ್ಷ ಹೆಚ್ಚಿನ ವ್ಯತ್ಯಾಸ ಕಂಡು ಬರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದ ಸಮೀಪದಲ್ಲಿ ಇರುವ ಅಂಗವಿಕಲರು ಮಾತ್ರ ಪಾಲ್ಗೊಳ್ಳುತ್ತಾರೆ. ದೃಷ್ಟಿ ದೋಷ ಉಳ್ಳವರು ಹಾಗೂ ಬುದ್ಧಿ ಮಾಂದ್ಯತೆ ಇರುವವರು ಈ ಕಾಮಗಾರಿಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದಿಲ್ಲ. ಅಂಗವಿಕಲರಿಗೆ ಸಮಾನ ವೇತನ ಇದ್ದರೂ ಕೆಲಸದ ಪ್ರಮಾಣದಲ್ಲಿ ಶೇ 50ರಷ್ಟು ರಿಯಾಯಿತಿ ಇದೆ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ತಿಳಿಸಿದರು.
‘ಅಂಗವಿಕಲತೆ ಆಧರಿಸಿ ಅವರು ಮಾಡಬಹುದಾದ ಕೆಲಸಗಳನ್ನು ಮಾತ್ರ ನೀಡಲಾಗುತ್ತದೆ. ಕಾರ್ಮಿಕರಿಗೆ ಕುಡಿಯುವ ನೀರು ತಂದು ಕೊಡುವುದು, ಗಿಡ ನೆಡುವುದು, ಬಾಂಡಲಿಗೆ ಮಣ್ಣು–ಜಲ್ಲಿ ತುಂಬುವುದು, ಬಂಡಿಂಗ್ ಮಾಡುವುದು, ನರೇಗಾ ಕಾರ್ಮಿಕರ ಮಕ್ಕಳನ್ನು ನೋಡಿಕೊಳ್ಳಲು ಸಹಾಯ ಮಾಡುವುದು, ಸಿಮೆಂಟ್–ಇಟ್ಟಿಗೆ ಸಾಗಿಸುವುದು ಹೀಗೆ ಸುಲಭ ಕೆಲಸಗಳನ್ನು ನೀಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
‘ಹುಬ್ಬಳ್ಳಿ ತಾಲ್ಲೂಕಿನಲ್ಲಿ ಈ ವರ್ಷ 215 ಅಂಗವಿಕಲರು ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ 26 ಮಂದಿ ಮಾತ್ರ ಕೆಲಸಕ್ಕೆ ಬಂದಿದ್ದಾರೆ. ನಾವು ವರ್ಷಕ್ಕೊಮ್ಮೆ ಅಂಗವಿಕಲರಿಗಾಗಿಯೇ ವಿಶೇಷ ಗ್ರಾಮ ಸಭೆ ನಡೆಸಿ ಅವರಿಗೆ ಇರುವ ವಿಶೇಷ ಅವಕಾಶ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಮನೆಮನೆಗೆ ಹೋಗಿ ತಿಳಿಸಿರುತ್ತೇವೆ. ಅಂಗವಿಕಲರಿಗಾಗಿ ಮಾಸಾಶನ ಸೇರಿದಂತೆ ಹಲವು ಯೋಜನೆ, ಸೌಲಭ್ಯ ಇರುವುದರಿಂದ ಕೆಲಸಕ್ಕೆ ಬರಲು ಹೆಚ್ಚಿನವರು ಮುಂದಾಗುವುದಿಲ್ಲ’ ಎಂದು ತಾಲ್ಲೂಕು ಐಇಸಿ (ಮಾಹಿತಿ ಶಿಕ್ಷಣ ಹಾಗೂ ಸಂವಹನ) ಸಂಯೋಜಕ ರಮೇಶ್ ಲಮಾಣಿ ತಿಳಿಸಿದರು.
ಉದ್ಯೋಗ ಖಾತ್ರಿಯಲ್ಲಿ ಉಳಿದವರಿಗಿಂತ ನಮಗೆ ಅರ್ಧದಷ್ಟು ಕೆಲಸ ಮಾತ್ರ ಇರುತ್ತದೆ. ಪೂರ್ಣ ಕೂಲಿ ಸಿಗುತ್ತದೆ. ಈ ಕಾಮಗಾರಿಯಿಂದ ಬರುವ ಕೂಲಿಯಿಂದ ಮನೆ ಖರ್ಚು ನಿಭಾಯಿಸಲು ಬಹಳ ಸಹಾಯವಾಗಿದೆಲಕ್ಷ್ಮೀ ಸುಳ್ಳ ಗ್ರಾಮ
ಸುಲಭದ ಕೆಲಸ
‘ಉದ್ಯೋಗ ಖಾತ್ರಿ ಕೆಲಸಕ್ಕೆ ಬರುವ ಅಂಗವಿಕಲರಿಗೆ ಅವರ ಅಂಗವಿಕಲತೆಯ ಪ್ರಮಾಣ ಆಧರಿಸಿ ಮಾಡಲು ಸಾಧ್ಯವಾಗುವಂಥ ಸುಲಭದ ಕೆಲಸ ನೀಡಲಾಗುತ್ತದೆ. ಸಾಮಾನ್ಯರಿಗಿಂತ ಅರ್ಧ ಕೆಲಸ ಮಾಡಿದರೂ ಅವರಿಗೆ ಪೂರ್ಣ ಕೂಲಿ ₹ 349 ನೀಡಲಾಗುತ್ತದೆ. ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದವರಿಗೆ ಕೇಂದ್ರ ಸರ್ಕಾರದ ಇಂದಿರಾ ಆವಾಸ್ ಯೋಜನೆಗೆ ಆಯ್ಕೆಯಾಗುವವರ ಪಟ್ಟಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ’ ಎಂದು ಹುಬ್ಬಳ್ಳಿ ತಾಲ್ಲೂಕು ಐಇಸಿ (ಮಾಹಿತಿ ಶಿಕ್ಷಣ ಸಂವಹನ) ಸಂಯೋಜಕ ರಮೇಶ್ ಲಮಾಣಿ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.