ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನ ಆವರಣದ ಕಾಂಪೌಂಡ್ ಭಾಗಶಃ ತೆರವು ಆಗಲಿದೆ.
ತೆರವು ಕಾರ್ಯಕ್ಕೆ ಅನುಮತಿ ಹಾಗೂ ಭದ್ರತೆ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಗೆ ಜುಲೈ 23ರಂದು ಪತ್ರ ಬರೆದಿದ್ದಾರೆ. ಈ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಮೊದಲ ಹಂತದ ₹ 300 ಕೋಟಿ ವೆಚ್ಚದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಎನ್‌ಎಚ್‌ಎಐ ಅಧಿಕಾರಿಗಳು ಮುಂದಾಗಿದ್ದಾರೆ.
‘ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದ ಕಡೆ ಮತ್ತು ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳುವ ಈದ್ಗಾ ಮೈದಾನದ ಅಕ್ಕಪಕ್ಕ ಅಂದಾಜು ಶೇ 10–15ರಷ್ಟು ಭಾಗ ತೆರವು ಆಗಲಿದೆ. ಮೇಲ್ಸೇತುವೆಗೆ ಕಾಮತ್ ಹೋಟೆಲ್ ಎದುರು ಬೃಹತ್ ಪಿಲ್ಲರ್, ಸಂಗೊಳ್ಳಿ ರಾಯಣ್ಣ ವೃತ್ತದ ಹೈಮಾಸ್ಟ್ ಕಂಬದ ಬಳಿ ಒಂದು ಪಿಲ್ಲರ್ ನಿರ್ಮಾಣ ಆಗಲಿದೆ. ಈ ಕಾಮಗಾರಿಗೆ ಉಪನಗರ ಪೊಲೀಸ್ ಠಾಣೆ ಕಟ್ಟಡದ ಶೇ 20ರಷ್ಟು ಭಾಗವೂ ತೆರವು ಆಗಲಿದೆ’ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಚನ್ನಮ್ಮ ವೃತ್ತದಿಂದ ಮಹಾನಗರ ಪಾಲಿಕೆ ಎದುರಿನ ಟೈಟಾನ್ ಐ ಶೋ ರೂಮ್‌ವರೆಗಿನ 350 ಮೀಟರ್ ಉದ್ದದ ಚತುಷ್ಪಥ ಮೇಲ್ಸೇತುವೆಯಲ್ಲಿ 300 ಮೀಟರ್ ಉದ್ದ ಸಾಲಿಡ್ ರ‍್ಯಾಂಪ್ ನಿರ್ಮಾಣವಾಗಲಿದೆ. ಉಳಿದ 50 ಮೀಟರ್ ಉದ್ದದ ಮಾರ್ಗದಲ್ಲಿ (ಕಾಮತ್ ಹೋಟೆಲ್ ಮತ್ತು ರಾಯಣ್ಣ ವೃತ್ತದ ಬಳಿ) ಪಿಲ್ಲರ್ ನಿರ್ಮಾಣವಾಗಲಿದೆ. ಪಿಲ್ಲರ್ ಎತ್ತರ ಕನಿಷ್ಠ 5.5 ಮೀಟರ್ ಎತ್ತರ ಇರಲಿದ್ದು, ತಳಭಾಗ ಆಧರಿಸಿ ಹೆಚ್ಚುಕಡಿಮೆ ಆಗಲಿದೆ. ಎರಡೂ ಕಡೆ 7.50 ಮೀಟರ್ ಜಾಗವನ್ನು ಸರ್ವಿಸ್ ರಸ್ತೆ ಮತ್ತು ಪಾದಚಾರಿ ಮಾರ್ಗಕ್ಕೆ ಮೀಸಲಿಟ್ಟಿದ್ದು, ಅಕ್ಕಪಕ್ಕದ ಅಂಗಡಿ, ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಭೂಸ್ವಾಧೀನ ಕುರಿತು ನೋಟಿಸ್ ನೀಡಲಾಗಿದೆ.
ಪತ್ರದಲ್ಲಿ ಏನಿದೆ...?
‘ರಾಣಿ ಚನ್ನಮ್ಮ ವೃತ್ತ ಬಳಿಯ ಈದ್ಗಾ ಆವರಣದ ಎರಡೂ ಕಡೆಯ ಗೋಡೆಯನ್ನು ಭಾಗಶಃ ಒಡೆದು ಮೇಲ್ಸೇತುವೆ ಕಾಮಗಾರಿ ನಡೆಸಬೇಕಿದೆ. ಈ ಭಾಗದಲ್ಲಿ ಎರಡು ಪಿಲ್ಲರ್‌ಗಳು ನಿರ್ಮಾಣವಾಗಲಿದ್ದು ಭೂಸ್ವಾಧೀನದ ಪ್ರಸ್ತಾವ ಅಂತಿಮ ಹಂತದಲ್ಲಿದೆ. ಈ ಕುರಿತು ಜುಲೈ 6ರಂದು ಜಿಲ್ಲಾಧಿಕಾರಿ ಪೊಲೀಸ್ ಕಮಿಷನರ್ ಮತ್ತು ಹು–ಧಾ ಮಹಾನಗರ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಸಭೆ ನಡೆಸಿ ನೀಲನಕ್ಷೆಯಂತೆ ಪಿಲ್ಲರ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದ್ದು ಯೋಜನೆ ಅನುಷ್ಠಾನಕ್ಕೆ ಪೊಲೀಸ್ ಭದ್ರತೆ ನೀಡಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಸಹಾಯಕ ಎಂಜಿನಿಯರ್ ಪೊಲೀಸ್ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಚನ್ನಮ್ಮ ವೃತ್ತವನ್ನು ಕೇಂದ್ರವಾಗಿರಿಸಿಕೊಂಡು ಮೊದಲ ಹಂತದಲ್ಲಿ ₹ 300 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶೇ 60ರಷ್ಟು ಕಾಮಗಾರಿ ಮುಕ್ತಾಯವಾಗಿದೆ.–ಗಂಗಾಧರ್ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.