ಹುಬ್ಬಳ್ಳಿ: ನಗರದ ಜನನಿಬಿಡ ಹಲವು ರಸ್ತೆಗಳ ಮಧ್ಯೆ ತಗ್ಗುಗುಂಡಿ ಬಿದ್ದಿರುವುದು ಹಾಗೂ ಒಳಚರಂಡಿ (ಮ್ಯಾನ್‌ಹೋಲ್) ಮುಚ್ಚಳ ಕಿತ್ತುಹೋಗಿ ಹಲವು ತಿಂಗಳು ಕಳೆದರೂ ದುರಸ್ತಿ ಮಾಡುವುದಕ್ಕೆ ಯಾರೂ ಬರುತ್ತಿಲ್ಲ. ಬೈಕ್, ಕಾರು, ಆಟೊದಂತಹ ಸಣ್ಣ ವಾಹನಗಳಿಗೆ ಮತ್ತು ನಡೆದುಹೋಗುವ ಜನರಿಗೆ ಈ ತಗ್ಗುಗಳು ಯಮಪಾಶವಾದಂತಾಗಿವೆ.
ಜನತಾ ಬಜಾರ್ ಮುಖ್ಯರಸ್ತೆಯಲ್ಲಿ ದುರ್ಗಾ ದೇವಸ್ಥಾನದ ಎದುರು, ಕಮರಿಪೇಟೆ ಪೊಲೀಸ್ ಠಾಣೆಯಿಂದ ಮೂರು ಸಾವಿರ ಮಠ ಸಂಪರ್ಕಿಸುವ ಮಾರ್ಗದಲ್ಲಿ, ರೈಲ್ವೆ ನಿಲ್ದಾಣ ಪ್ರವೇಶದ ಮುಖ್ಯದ್ವಾರದ ಎದುರು, ಹೊಸೂರ ಬಸ್ ನಿಲ್ದಾಣ ಹಿಂಭಾಗದ ದ್ವಾರದ ಎದುರು, ಗೋಕುಲ್ ರಸ್ತೆ ಕೈಗಾರಿಕಾ ವಲಯದ ಮುಖ್ಯರಸ್ತೆಯಲ್ಲಿ... ಹೀಗೆ ಅನೇಕ ಕಡೆ ಗುಂಡಿಗಳು ಬಾಯ್ತೆರೆದು ಬಲಿಗಾಗಿ ಕಾಯುತ್ತಿವೆ.
ಸಮಸ್ಯಾತ್ಮಕವಾದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಜನದಟ್ಟಣೆ ನಿರ್ಮಾಣವಾದಾಗ ತಗ್ಗುಗುಂಡಿಗಳು ಗೋಚರಿಸದೆ ಬೈಕ್ ಸವಾರರು ಸಂಕಷ್ಟಕ್ಕೆ ಸಿಲುಕುವ ಘಟನೆಗಳು ಪ್ರತಿನಿತ್ಯ ನಡೆಯುತ್ತಿವೆ. ಘಟನೆ ನಡೆದಾಗೊಮ್ಮೆ ಅಕ್ಕಪಕ್ಕದ ಮಳಿಗೆ ವ್ಯಾಪಾರಿಗಳು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಸಹಾಯಕ್ಕೆ ಧಾವಿಸುತ್ತಾರೆ. ಯಮಪಾಶವಾದ ಇಂಥ ರಸ್ತೆ ಗುಂಡಿಯನ್ನು ಜನರು ದೂರದಿಂದ ಗಮನಿಸಲಿ ಎಂದು ಅದರಲ್ಲಿ ಮರದ ಟೊಂಗೆ ಸಿಕ್ಕಿಸುವುದು, ಸುತ್ತಲೂ ಕಲ್ಲುಗಳನ್ನು ಇಡುವುದು ಅಥವಾ ನಿರುಪಯುಕ್ತ ವಸ್ತುಗಳನ್ನು ಅದರ ಮೇಲಿಟ್ಟಿರುತ್ತಾರೆ.
‘ರಸ್ತೆಯಲ್ಲಿ ಹೊಂಡ ಬಿದ್ದು ಎರಡು ತಿಂಗಳಾಗಿದೆ. ಇದುವರೆಗೂ ಯಾರೊಬ್ಬರೂ ದುರಸ್ತಿ ಮಾಡುವುದಕ್ಕೆ ಬಂದಿಲ್ಲ. ಮಳೆನೀರು ಭಾರಿ ಪ್ರಮಾಣದಲ್ಲಿ ಹರಿಯುವಾಗ ರಸ್ತೆ ತಗ್ಗು ಮುಚ್ಚಿಕೊಳ್ಳುತ್ತದೆ. ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಮಕ್ಕಳನ್ನು ಕುಡಿಸಿಕೊಂಡು ಬರುವವರಿಗೂ ಈ ಗುಂಡಿಗಳು ಕಾಣುವುದಿಲ್ಲ. ಹೀಗಾಗಿ ಕಮರಿಪೇಟೆ ಪೊಲೀಸ್ ಠಾಣೆ ಕಡೆಯಿಂದ ಬರುವವರು ಮತ್ತು ಮಾರ್ಕೆಟ್‌ನಿಂದ ಬೆಂಗಳೂರು ರಸ್ತೆಗೆ ಹೋಗುವ ಅನೇಕ ಬೈಕ್ ಸವಾರರು ಹೊಂಡಕ್ಕೆ ಸಿಲುಕಿ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ, ಗಾಯ ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಬೇಜವಾಬ್ದಾರಿ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಈ ತಗ್ಗುಗಳ ಮೇಲೆ ತಂದು ಕೂರಿಸಬೇಕು’ ಎಂದು ನೂರ್ ಮಾರ್ಕೆಟ್ ವ್ಯಾಪಾರಿ ಮಲ್ಲೇಶ ಆಕ್ರೋಶ ವ್ಯಕ್ತಪಡಿಸಿದರು.
ಜನನಿಬಿಡ ರಸ್ತೆಗಳಲ್ಲಿ ಉಂಟಾದ ಇಂಥ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹು–ಧಾ ಮಹಾನಗರ ಪಾಲಿಕೆ ತಿಂಗಳಾನುಗಟ್ಟಲೆ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಬಡಾವಣೆ ಮಾರ್ಗಗಳಲ್ಲಿ ಮಳೆನೀರಿನಿಂದ ನಿರ್ಮಾಣವಾದ ತಗ್ಗುಗುಂಡಿಗಳಿಗೆ ದುರಸ್ತಿ ಆಗುವುದಕ್ಕೆ ಆರು ತಿಂಗಳಿಗೂ ಅಧಿಕ ಸಮಯ ಕಾಯಬೇಕಾದ ಸ್ಥಿತಿ ಇದೆ. ಹೊಸೂರು ಬಸ್ ನಿಲ್ದಾಣ ಹಿಂಭಾಗದಿಂದ ಕಾರವಾರ ರಸ್ತೆಗೆ ಸಂಪರ್ಕಿಸುವ ಮಾರ್ಗದಲ್ಲಿ ಮ್ಯಾನ್‌ಹೋಲ್‌ವೊಂದು ಬಾಯ್ತೆರೆದಿತ್ತು. ಕಿರಿದಾದ ಈ ಮಾರ್ಗದಲ್ಲಿ ಪ್ರತಿನಿತ್ಯ ವಾಹನದಟ್ಟಣೆ ಸಮಸ್ಯೆಯಾಗಿತ್ತು. ಕಣ್ಣಿಗೆ ರಾಚುವಂತಿದ್ದ ಈ ಸಮಸ್ಯೆಗೆ ಪರಿಹಾರ ಒದಗಿಸಲು ಮಹಾನಗರ ಪಾಲಿಕೆಗೆ ಒಂದು ತಿಂಗಳಿಗೂ ಅಧಿಕ ಸಮಯ ಬೇಕಾಯಿತು.
ರಸ್ತೆ ಗುಂಡಿ ಬಿದ್ದಿರುವ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ಸೂಚಿಸಲಾಗುವುದು. ಇಂಥ ಸಮಸ್ಯೆ ಗಮನಕ್ಕೆ ಬಂದ ತಕ್ಷಣ ದುರಸ್ತಿಗೆ ಕ್ರಮ ವಹಿಸುತ್ತೇವೆ.ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ
ಕಾರವಾರ ರಸ್ತೆ ಇಂಡಿಪಂಪ್‌ನಿಂದ ಬನ್ನಿಗಿಡ ಬಸ್ ಡಿಪೋಗೆ ಸಂಪರ್ಕಿಸುವ ಮಾರ್ಗದ ಚನ್ನಪೇಟೆ ಕಡೆಗಿನ ತಿರುವಿನಲ್ಲಿ ರಸ್ತೆ ಕುಸಿತ ಸಾಮಾನ್ಯವಾಗಿದೆ. ಪ್ರತಿನಿತ್ಯ ವಾಹನ ದಟ್ಟಣೆ ಏರ್ಪಡುತ್ತಿದೆ. ಸಮಸ್ಯೆ ವಿಪರೀತ ಹಂತಕ್ಕೆ ತಲುಪಿ ಒಂದೂವರೆ ವರ್ಷವಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಹಳೇ ಹುಬ್ಬಳ್ಳಿಯ ಬಾಂತಿ ಕಟ್ಟೆ, ಆಯೋಧ್ಯಾನಗರ, ಅಕ್ಕಿಪೇಟೆ, ಈಶ್ವರ ನಗರ, ಗಿರಿಯಾಲ್ ಮಾರ್ಗ, ನೇಕಾರ ಗಲ್ಲಿ, ಎಸ್.ಎಂ.ಕೃಷ್ಣ ಬಡಾವಣೆ ಮಾರ್ಗಗಳಲ್ಲಿ ಮಳೆಯಿಂದಾಗಿ ಬಾಯ್ತೆರೆದ ತಗ್ಗುಗುಂಡಿಗಳು ಸಂಚಾರಕ್ಕೆ ಸಂಕಷ್ಟ ತಂದೊಡ್ಡಿವೆ.
ಕನಿಷ್ಠ ಪಕ್ಷ ಮುಖ್ಯರಸ್ತೆಗಳಲ್ಲಿ ನಿರ್ಮಾಣವಾದ ಹೊಂಡ, ಬಾಯ್ತೆರೆದ ಒಳಚರಂಡಿ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡಬೇಕು ಎನ್ನುವುದು ಜನರ ಒತ್ತಾಯ.
ವಾರ್ಡ್ ಸದಸ್ಯರು ಎಲ್ಲಿದ್ದಾರೆ?
ಯಾವುದೇ ವಾರ್ಡ್‌ನಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಯನ್ನು ಮಹಾನಗರ ಪಾಲಿಕೆ ಗಮನಕ್ಕೆ ತಂದು ಆದಷ್ಟು ಶೀಘ್ರ ಪರಿಹಾರ ಕಲ್ಪಿಸುವ ಕೆಲಸವನ್ನು ಆಯಾ ವಾರ್ಡ್ ಸದಸ್ಯರು ಮಾಡಬೇಕು ಎನ್ನುವುದು ಜನರ ನಿರೀಕ್ಷೆ. ವಾಸ್ತವವಾಗಿ ವಾರ್ಡ್ ಸದಸ್ಯರು ಕೂಡಾ ಸಮಸ್ಯೆಗಳು ಕಣ್ಣಿಗೆ ಕಾಣುತ್ತಿಲ್ಲ ಎನ್ನುವಂತೆ ಓಡಾಡುತ್ತಾರೆ ಎನ್ನುವುದು ಜನರ ಆರೋಪ.
‘ವೈಯಕ್ತಿಕವಾಗಿ ಎದುರಿಸುವ ಸಮಸ್ಯೆಗಳ ಬಗ್ಗೆ ಜನರು ವಾರ್ಡ್ ಸದಸ್ಯರಿಗೆ ದೂರು ಕೊಡಬಹುದು. ಆದರೆ ಸಾರ್ವಜನಿಕ ರಸ್ತೆಯಲ್ಲಿ ಉಂಟಾಗುವ ಸಮಸ್ಯೆಯನ್ನು ಪಾಲಿಕೆ ಸದಸ್ಯರೇ ಗಮನಿಸಿ ಸ್ಪಂದಿಸಬೇಕು‘ ಎನ್ನುವುದು ನೇಕಾರ ನಗರದ ನಿವಾಸಿ ಗಂಗಾಧರ ಕುಸಗಲ್ ಅವರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.