ADVERTISEMENT

ಹುಬ್ಬಳ್ಳಿ | ನಗರಲ್ಲೊಂದು ಹಳ್ಳಿ ಸೊಗಡು

ದನ–ಕರುಗಳ ಜೊತೆಯೇ ಸಹ–ಜೀವನ; ಬೆಳಗದ ಬೀದಿದೀಪ

ನಾಗರಾಜ ಬಿ.ಎನ್‌.
Published 10 ಜುಲೈ 2024, 5:45 IST
Last Updated 10 ಜುಲೈ 2024, 5:45 IST
ಹುಬ್ಬಳ್ಳಿ ಗೋಪನಕೊಪ್ಪದ ಸಿದ್ದೇಶ್ವರನಗರ ಬಡಾವಣೆಯ ಚಿತ್ರ
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ ಗೋಪನಕೊಪ್ಪದ ಸಿದ್ದೇಶ್ವರನಗರ ಬಡಾವಣೆಯ ಚಿತ್ರ –ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ನೋಡಲಷ್ಟೇ ಪುಟ್ಟ ಪುಟ್ಟ ಮನೆಗಳು. ಒಳ ಪ್ರವೇಶಿಸಿದರೆ ವಿಶಾಲ ಪಡಶಾಲೆ, ಅದಕ್ಕೆ ಹೊಂದಿಕೊಂಡು ಅಷ್ಟೇ ದೊಡ್ಡ ಕೊಟ್ಟಿಗೆಗಳು. ನೂರಾರು ದನ–ಕರುಗಳ ಜೊತೆಗೆ, ಆಡು–ಮೇಕೆಗಳ ಸಹ ಜೀವನ...

ಇದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಗೋಪನಕೊಪ್ಪ ಗ್ರಾಮದ ಸಿದ್ದರಾಮೇಶ್ವರ ಬಡಾವಣೆಯ ಹಳ್ಳಿ ಸೊಗಡು. ಹೇಳಿಕೊಳ್ಳಲಷ್ಟೇ ಕಂದಾಯ ಗ್ರಾಮವಾಗಿ, ನಗರ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದರೆ, ಜನರ ಜೀವನಶೈಲಿ, ಆಚಾರ–ವಿಚಾರಗಳೆಲ್ಲ ಈಗಲೂ ಪುಟ್ಟ ಗ್ರಾಮೀಣ ಪ್ರದೇಶದಂತಿದೆ.

ಮನೆ ಎದುರಿಗೆ ಇರುವ ಕಾಂಕ್ರಿಟ್‌ ರಸ್ತೆಯೇ ಅವರಿಗೆ ಮನೆಯಂಗಳ. ನಸುಕಿನ ಜಾವ ಎದ್ದು ರಸ್ತೆ ಶುಚಿಗೊಳಿಸಿ, ರಂಗೋಲಿ ಇಡುವುದು ಮಹಿಳೆಯರ ಕೆಲಸವಾದರೆ, ಬೆಳಕು ಮೂಡುತ್ತಿದ್ದಂತೆ ಕೊಟ್ಟಿಗೆ ಶುಚಿಗೊಳಿಸಿ, ದನ–ಕರುಗಳನ್ನು ರಸ್ತೆಗೆ ತಂದು ಸ್ನಾನ ಮಾಡಿಸಿ, ಹಾಲು ಹಿಂಡುವುದು ಪುರುಷರ ಕಾಯಕ. ಇಲ್ಲಿ ವಾಸಿಸುವ ಜನರು ಬಹುತೇಕರು ಕುರುಬರಾಗಿದ್ದು, ಮೂರು–ನಾಲ್ಕು ತಲೆಮಾರುಗಳಿಂದ ಹೈನುಗಾರಿಕೆಯೇ ಮುಖ್ಯ ಉದ್ಯೋಗ.

ADVERTISEMENT

ಬಡಾವಣೆಯಲ್ಲಿ 50 ರಿಂದ 60 ಕುಟುಂಬಗಳಿದ್ದು, 300ಕ್ಕೂ ಹೆಚ್ಚು ದನ–ಕರುಗಳು ಇವೆ. ಸಾವಿರಕ್ಕೂ ಹೆಚ್ಚು ಆಡು–ಮೇಕೆಗಳಿವೆ. ದನ–ಕರುಗಳ ಸಂಖ್ಯೆ ಹೆಚ್ಚಿರುವುದರಿಂದ ಸುತ್ತಲಿನ ಕೆಲ ಬಡಾವಣೆ ಜನರಿಗೆ ಬೇಸವಿದೆ. ಅಶುಚಿತ್ವದಿಂದ ಸೊಳ್ಳೆಗಳು ಹೆಚ್ಚುತ್ತಿದ್ದು ಅನಾರೋಗ್ಯದ ಭಯ ಅವರನ್ನು ಕಾಡುತ್ತಿದೆ. ಪಾಲಿಕೆ ಸಿಬ್ಬಂದಿ ಆಗಾಗ ಬಂದು, ಸುತ್ತಲಿನ ವಾತಾವರಣ ಶುಚಿಯಾಗಿ ಇಟ್ಟುಕೊಳ್ಳುವಂತೆ ಸ್ಥಳೀಯರಿಗೆ ಸೂಚಿಸುತ್ತಾರೆ.

‘ಯಾವ ಮೂಲ ಸೌಲಭ್ಯಗಳೂ ಇಲ್ಲದ ಈ ಬಡಾವಣೆ, ಕೆಲ ವರ್ಷಗಳಿಂದಷ್ಟೇ ಸೌಲಭ್ಯ ಪಡೆಯುತ್ತಿದೆ. ಕಚ್ಚಾ ರಸ್ತೆಗಳೆಲ್ಲ ಕಾಂಕ್ರಿಟ್‌ ರಸ್ತೆಗಳಾಗಿವೆ. ಮನೆ ಎದುರಿಗೆ ಹರಿಯುತ್ತಿದ್ದ ಕೊಳಚೆ ನೀರು ಹರಿಯಲು ಗಟಾರು, ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಗಟಾರದ ಹೂಳೆತ್ತ ಪರಿಣಾಮ, ಮಳೆ ಜೋರಾಗಿ ಬಂದರೆ ಗಟಾರ ತುಂಬಿ ನೀರು ರಸ್ತೆ ಮೇಲೆ ಹರಿದು, ಮನೆ ಒಳಗೂ ನುಗ್ಗುತ್ತದೆ. ದಿನದ 24 ಗಂಟೆಯೂ ಕುಡಿಯುವ ನೀರಿನ ಸೌಲಭ್ಯವಿದೆ. ಮನೆಗಳ ಮಧ್ಯ ಅಲ್ಲಲ್ಲಿ ಖಾಲಿ ನಿವೇಶನಗಳಿರುವುದರಿಂದ, ನೀರು ನಿಂತು ಕೊಳಚೆ ಪ್ರದೇಶವಾಗಿದೆ. ಡೆಂಗಿ ಜ್ವರದ ಭೀತಿ ಕಾಡುತ್ತಿದೆ’ ಎಂದು ನಿವಾಸಿಗಳು  ತಿಳಿಸಿದರು.

‘ಮೂರು–ನಾಲ್ಕು ತಲೆಮಾರುಗಳಿಂದ ಇಲ್ಲಿಯೇ ವಾಸವಿದ್ದೇವೆ. ಯಾವ ಸೌಲಭ್ಯವೂ ಇಲ್ಲದ ಗ್ರಾಮ ಇದಾಗಿತ್ತು. ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ನಂತರ, ಮೂಲ ಸೌಲಭ್ಯಗಳು ದೊರಕಿವೆ. ಬಡಾವಣೆಯ ಅಲ್ಲಲ್ಲಿ ಹಾಗೂ ಅಕ್ಕಪಕ್ಕ ದೊಡ್ಡ ಕಟ್ಟಡಗಳು ತಲೆ ಎತ್ತಿದ್ದು, ಕೆಲವರು ಅಲ್ಲಿ ಬಾಡಿಗೆಗೆ ಬಂದಿದ್ದಾರೆ. ಅವರಿಗೆ ನಮ್ಮ ಹಳ್ಳಿ ಜೀವನ ಶೈಲಿ ಸರಿ ಹೊಂದುವುದಿಲ್ಲ. ಸಗಣಿ ಅವರಿಗೆ ಹೊಲಸು ವಾಸನೆಯಂತೆ. ನಮಗೆ ಅದು ಆರೋಗ್ಯದ ಸಂಪತ್ತು. ಇದರಿಂದ ಆಗಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತ ಇರುತ್ತದೆ’ ಎಂದು ಸ್ಥಳೀಯ ನಿವಾಸಿ ದ್ಯಾಮಣ್ಣ ಜಟ್ಟಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಕಸ ಮತ್ತು ಬೀದಿದೀಪದ್ದೇ ಸಮಸ್ಯೆ...

‘ಗೋಪನಕೊಪ್ಪದ ಕೊನೆಯ ಬಸ್‌ ನಿಲ್ದಾಣದ ಬಳಿ ರಾತ್ರಿಯಾಗುತ್ತಿದ್ದಂತೆ ಕೆಲವರು ಕಸ ತ್ಯಾಜ್ಯ ತಂದು ಎಸೆಯುತ್ತಾರೆ. ಅದರಲ್ಲಿರುವ ಆಹಾರಕ್ಕೆ ದನ–ಕರುಗಳು ನಾಯಿಗಳು ಮುತ್ತಿಗೆ ಹಾಕುತ್ತವೆ. ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತವಾಗುತ್ತದೆ. ಪಾಲಿಕೆ ಅಧಿಕಾರಿಗಳಿಗೆ ಪೌರ ಕಾರ್ಮಿಕರಿಗೆ ಸಾಕಷ್ಟು ಬಾರಿ ದೂರು ನೀಡಲಾಗಿದೆ. ಒಂದೆರಡು ಬಾರಿ ನಾಮಫಲಕ ಅಳವಡಿಸಿ ಎಚ್ಚರಿಕೆ ನೀಡಿದ್ದರು. ಮತ್ತೆ ಅದೇ ಕಥೆ ಮುಂದುವರಿದಿದೆ. ಕಸ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಬೇಕು’ ಎಂದು ಗೋಪನಕೊಪ್ಪದ ನಿವಾಸಿ ಶಿವರಾಜ ಕಂಬಾರ್‌ ತಿಳಿಸಿದರು.

‘ಗೋಪನಕೊಪ್ಪದ ವ್ಯಾಯಾಮ ಶಾಲೆ ಬಳಿ ಹೈ ಮಾಸ್ಟ್‌ ವಿದ್ಯುತ್‌ ದೀಪವಿದ್ದು ತಿಂಗಳಲ್ಲಿ ಮೂರು ವಾರ ಉರಿಯುವುದೇ ಇಲ್ಲ. ದೇವಾಂಗಪೇಟೆ ಮೂಲಕ ಗೋಪನಕೊಪ್ಪ ಸಂಪರ್ಕಿಸುವ ಪ್ರಮುಖ ಒಳರಸ್ತೆ ಇದಾಗಿರುವುದರಿಂದ ತಡರಾತ್ರಿವರೆಗೂ ವಾಹನಗಳ ಸಂಚಾರ ಇರುತ್ತವೆ. ಅಲ್ಲದೆ ರೈತಾಪಿ ವರ್ಗದ ಕುಟುಂಬಗಳೇ ಇಲ್ಲಿ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಬೀದಿ ದೀಪ ಇಲ್ಲದಿರುವುದು ಸಮಸ್ಯೆಯಾಗುತ್ತಿದೆ’ ಎಂದು ಸೋಮಣ್ಣ ಬಿಂಕದ ತಿಳಿಸಿದರು.

ರಸ್ತೆಬದಿ ಕಸ ಬಿಸಾಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬೀದಿದೀಪ ಸರಿಪಡಿಸಿ ಗಟಾರ ಶುಚಿಗೊಳಿಸಲಾಗುವುದು. ಡೆಂಘಿ ಕುರಿತು ಸ್ಥಳಿಯರಿಗೆ ಜಾಗೃತಿ ಮೂಡಿಸಲಾಗುವುದು.
ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಹಳ್ಳಿ ಜೀವನದಲ್ಲಿ ಇರುವಷ್ಟು ನೆಮ್ಮದಿ ಬೇರೆಲ್ಲೂ ಸಿಗದು. ದನ–ಕರುಗಳೇ ನಮ್ಮ ಆರೋಗ್ಯದ ಸಂಪತ್ತು. ಹೈನುಗಾರಿಕೆ ಬಿಟ್ಟು ಬೇರೆ ಕೆಲಸ ನಮಗೆ ಗೊತ್ತಿಲ್ಲ. ಶುಚಿತ್ವ ಕಾಡುಕೊಳ್ಳುತ್ತಿದ್ದೇವೆ.
ದ್ಯಾಮಣ್ಣ ಜಟ್ಟಪ್ಪನವರ, ಸ್ಥಳೀಯ ನಿವಾಸಿ

ಹುಬ್ಬಳ್ಳಿ ಗೋಪನಕೊಪ್ಪದ ಸಿದ್ದೇಶ್ವರ ನಗರ ಬಡಾವಣೆಯ ಮನೆಯೊಂದರ ಒಳಗೆ ಇರುವ ಕೊಟ್ಟಿಗೆಗೆ ಹೋಗುತ್ತಿರುವ ಜಾನುವಾರುಗಳು –ಪ್ರಜಾವಾಣಿ ಚಿತ್ರ/ ಗುರು ಹಬೀಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.