ಹುಬ್ಬಳ್ಳಿ: ಚುಮುಚುಮು ಚಳಿಗೆ ಮೈ ಕೊಡವಿ ಜನರು ಎದ್ದೇಳುವ ಮುನ್ನವೇ ಮಹಾರಾಷ್ಟ್ರದ ಸ್ವಯಂ ಸೇವಕರು ಕಸಬರಿಗೆ, ಸಲಿಕೆ ಹಿಡಿದು ಬಡಾವಣೆಗಳಲ್ಲಿ ಬೀದಿಗಳನ್ನು ಸ್ವಚ್ಛಗೊಳಿಸಲು ಆರಂಭಿಸಿದ್ದರು. ಎದ್ದು ನೋಡಿದ ಜನರು ಅಚ್ಚರಿಗೆ ಒಳಗಾಗಿದ್ದರು.
ಇನ್ನೊಂದು ಕಡೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹು–ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಮಾಜಿ ಸಚಿವ ಪ್ರಮೋದ ಮಧ್ವರಾಜ್ ಅವರೆಲ್ಲ ಮಾರುಕಟ್ಟೆ ಪ್ರದೇಶವನ್ನು ಸ್ವಚ್ಛಗೊಳಿಸುತ್ತಿದ್ದರು. ಬೆಂಬಲಿಗರು ಅವರನ್ನು ಅನುಸರಿಸಿದರು...
–ಈ ದೃಶ್ಯಗಳು ಕಂಡುಬಂದಿದ್ದು ಭಾನುವಾರ ಬೆಳಬೆಳಿಗ್ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ. ಮಹಾರಾಷ್ಟ್ರದ ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಮಹಾ ಸ್ವಚ್ಛತಾ ಅಭಿಯಾನದಲ್ಲಿ.
ಚನ್ನಮ್ಮ ವೃತ್ತದ ಬಳಿ ಸೇರಿದ ಗಣ್ಯರು ಸಾಂಕೇತಿಕವಾಗಿ ಅಂಚಟಗೇರಿ ಓಣಿಯಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು. ಸಾವಿರಾರು ಸ್ವಯಂಸೇವಕರು ನಗರದ ವಿವಿಧ ಬೀದಿಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ಬಿಡುವಿಲ್ಲದೆ ಸ್ವಚ್ಛತಾ ಕಾರ್ಯ ನಡೆಸಿದರು. ನಂತರ ಗೋಕುಲ ರಸ್ತೆಯ ಲೋಟಸ್ ಗಾರ್ಡನ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲ ಸ್ವಯಂಸೇವಕರು ಶಿಸ್ತಿನ ಸಿಪಾಯಿಗಳಂತೆ ಕಂಡುಬಂದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಎಷ್ಟೋ ಬಾರಿ ಮನೆಗಳಲ್ಲೇ ಕಸಬರಿಗೆ ಹಿಡಿದು ಸ್ವಚ್ಛಗೊಳಿಸಲು ಗಂಡ–ಹೆಂಡತಿಯರು ಒಬ್ಬರಿಗೊಬ್ಬರು ಹೇಳುತ್ತಿರುತ್ತಾರೆ. ಆದರೆ ಇಷ್ಟೊಂದು ಪ್ರಮಾಣದ ಕಾರ್ಯಕರ್ತರ ನಿಸ್ವಾರ್ಥ ಸೇವಾಭಾವ ಕಂಡು ನನ್ನಲ್ಲಿ ಭಾರಿ ಅಚ್ಚರಿ ಉಂಟುಮಾಡಿತು’ ಎಂದರು.
‘ಧರ್ಮಾಧಿಕಾರಿ ಪ್ರತಿಷ್ಠಾನದಿಂದ ನಡೆಸುತ್ತಿರುವ ಈ ಕಾರ್ಯಕ್ರಮವು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿದೆ. ಮಹಾರಾಷ್ಟ್ರದಿಂದ ಬರುವ ಸ್ವಯಂ ಸೇವಕರಿಗಾಗಿ ವಿಶೇಷ ರೈಲು, ಬಸ್ ಸೌಲಭ್ಯ ಮಾಡಲಾಗಿತ್ತು. ಹುಬ್ಬಳ್ಳಿಯಲ್ಲಿ ಅಭಿಯಾನ ನಡೆದಿದ್ದು ಖುಷಿ ಇದೆ. ಧಾರವಾಡದಲ್ಲೂ ಅಭಿಯಾನ ಹಮ್ಮಿಕೊಳ್ಳುವಂತೆ ಪ್ರತಿಷ್ಠಾನದ ಪದಾಧಿಕಾರಿಗಳಿಗೆ ವಿನಂತಿ ಮಾಡಿದ್ದೇನೆ’ ಎಂದರು.
‘ಹು–ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ 25 ವಾರ್ಡ್‌ಗಳಲ್ಲಿ ಮಾರ್ಚ್ ತಿಂಗಳಿನಿಂದ ಪ್ರತಿ ತಿಂಗಳು ಒಂದು ಭಾನುವಾರ ಒಂದು ವಾರ್ಡ್‌ನಲ್ಲಿ ಸ್ವಚ್ಛತೆ ನಡೆಸಲಾಗುವುದು’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
‘ಈ ನಿಟ್ಟಿನಲ್ಲಿ ಸ್ಥಳೀಯ ಕಾರ್ಯಕರ್ತರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಅಭಿಯಾನ ನಡೆಸಲಾಗುವುದು’ ಎಂದರು.
‘ಮಹಾರಾಷ್ಟ್ರದ ಸತಾರಾ, ಸಾಂಗ್ಲಿ, ಸೊಲ್ಲಾಪುರ, ಗೋವಾ, ಬೆಳಗಾವಿ ಮುಂತಾದ ಕಡೆಗಳಿಂದ 4 ರೈಲುಗಳಲ್ಲಿ 12ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಮೂರು ಗಂಟೆಗಳಲ್ಲಿ 11 ಪೊಲೀಸ್ ಠಾಣೆ, 16 ಮಾರುಕಟ್ಟೆ ಪ್ರದೇಶ, 12 ಸರ್ಕಾರಿ ಕಚೇರಿಗಳು, ಮೂರು ಬಸ್ ನಿಲ್ದಾಣಗಳು ಸೇರಿ 164 ಪ್ರದೇಶಗಳಲ್ಲಿ ಸ್ವಚ್ಛತೆ ಮಾಡಲಾಗಿದೆ. ಅಂದಾಜು 2500–2800 ಟನ್ ಕಸ ಸಂಗ್ರಹಿಸಲಾಗಿದೆ’ ಎಂದು ಪ್ರತಿಷ್ಠಾನದ ರಾಹುಲ್ ಪಾರೇಖ್ ಮಾಹಿತಿ ನೀಡಿದರು. ಕಸ ಸಾಗಣೆಗೆ ಮಹಾನಗರ ಪಾಲಿಕೆಯಿಂದ ಟ್ರ್ಯಾಕ್ಟರ್, ಟಿಪ್ಪರ್‌ಗಳನ್ನು ಒದಗಿಸಲಾಗಿತ್ತು.
ಪ್ರತಿಷ್ಠಾನದ ವಿಜಯ ಲಕ್ಕುಂಡಿ, ಸುಭಾಸಸಿಂಗ್ ಜಮಾದಾರ, ಮಜೇಥಿಯಾ ಫೌಂಡೇಷನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ, ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ಬಳ್ಳಿ, ನಿವೃತ್ತ ನೌಕಾ ಕಮಾಂಡರ್ ರುದ್ರಯ್ಯಾ ಯಾದವಾಡ ಇದ್ದರು.
ಕೆಲವರು ಕರ್ನಾಟಕ–ಮಹಾರಾಷ್ಟ್ರ ಕನ್ನಡ–ಮರಾಠಿ ಎಂದು ಬಡಿದಾಡುತ್ತಾರೆ. ಆದರೆ ನೀವು ಮಹಾರಾಷ್ಟ್ರದಿಂದ ಇಲ್ಲಿಗೆ ಬಂದು ಸ್ವಚ್ಛತೆ ಮಾಡಿ ದೇಶದ ಏಕತೆ ಅಖಂಡತೆ ಸಾರಿದ್ದೀರಿಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.