ರಾಮಕೃಷ್ಣ ಸಿದ್ರಪಾಲ
ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೂಯ್ದ,ನುಣ್ಣನೆ ಎರಕಾವ ಹೂಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲ ತೂಯ್ದ,ದೇವನು ಜಗವೆಲ್ಲ ತೂಯ್ದ ।। (ಡಾ.ದ.ರಾ.ಬೇಂದ್ರೆ)
ಮಲೆನಾಡು ಮತ್ತು ಬಯಲು ಸೀಮೆ ನಡುವಿನ ಹೆಬ್ಬಾಗಿಲು ಧಾರವಾಡ ಕಲೆ ಸಾಹಿತ್ಯ ಸಂಗೀತಗಳ ತವರೂರು. ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನದ ಈ ಊರು ‘ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ’ ಎಂಬ ಖ್ಯಾತಿಗೂ ಪಾತ್ರವಾಗಿದೆ. ಅತ್ಯುತ್ತಮ ಕವಿಗಳು, ಬರಹಗಾರರು ಮತ್ತು ಚಿಂತಕರಿಂದ ಅರಳಿದೆ. ಕರ್ನಾಟಕ ಸಂಗೀತ, ಕಲೆ ಸಂಸ್ಕೃತಿ, ಸಂಗೀತಗಾರರು, ಕವಿಗಳು, ಬರಹಗಾರರು ಮತ್ತು ಧಾರವಾಡ ಪೇಢಾಕ್ಕೂ ‘ಧಾರಾನಗರಿ’ ಹೆಸರುವಾಸಿ.
ಸಂಗೀತ, ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಧಾರವಾಡದ ಅಪಾರ ಕೊಡುಗೆಯನ್ನು ಗುರುತಿಸಿದ ಕೇಂದ್ರ ಸರ್ಕಾರವು ಧಾರವಾಡದಲ್ಲಿ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಹಾಗೂ ಸಂಗೀತ ನಾಟಕ ಅಕಾಡೆಮಿಯ ಪ್ರಾದೇಶಿಕ ಕಚೇರಿಗಳನ್ನು ಕೂಡ ಧಾರವಾಡದಲ್ಲಿ ಆರಂಭಿಸಲು ಚಿಂತನೆ ನಡೆದಿದೆ.
ಧಾರವಾಡವನ್ನು ‘ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ’ಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯವು ಎಲ್ಲಾ ಅಗತ್ಯ ಅನುದಾನ ಮತ್ತು ಸಹಕಾರ ನೀಡಲಿದೆ. ಧಾರವಾಡದ ಕೋರ್ಟ್ ಸರ್ಕಲ್ ಬಳಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿ ಕಟ್ಟಡಕ್ಕೆ 2023ರ ಫೆಬ್ರುವರಿಯಲ್ಲಿ ಶಂಕುಸ್ಥಾಪನೆ ನೆರವೇರಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದಡಿ ಕಾರ್ಯನಿರ್ವಹಿಸುವ ವಿವಿಧ ಅಕಾಡೆಮಿಗಳ ಕಚೇರಿಗಳು ಕೂಡ ಧಾರವಾಡದಲ್ಲೇ ಸ್ಥಾಪನೆಯಾಗಲಿವೆ.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘವು ಸಾಹಿತ್ಯಾಭಿಮಾನಿಗಳನ್ನು ಒಟ್ಟುಗೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರೆ, ವರಕವಿ ದ.ರಾ.ಬೇಂದ್ರೆಯವರ ಮನೆಯಿರುವ ಸಾಧನಕೇರಿ, ಸುಭಾಷ್ ರಸ್ತೆಯ ಅಟ್ಟದ ಮೇಲಿನ ‘ಮನೋಹರ ಗ್ರಂಥಮಾಲಾ’ ಸಾಹಿತ್ಯಾಸಕ್ತರ ಪ್ರಮುಖತಾಣ. ಆದಿ ಕವಿ ಪಂಪನ ಜನ್ಮಸ್ಥಳ, ಮೂರು ‘ಜ್ಞಾನಪೀಠ’ ಪ್ರಶಸ್ತಿಯನ್ನು ತಂದುಕೊಟ್ಟ ಶಾಲ್ಮಲಾ ನದಿಯ ಮೂಲಸ್ಥಾನದ ಹೆಮ್ಮೆಯ ಬೀಡಿದು.
ಬಿಜಾಪುರದ ಆದಿಲ್‌ಶಾಹಿಗಳು, ವಿಜಯನಗರದ ಅರಸರು, ಮೊಘಲರು, ಟಿಪ್ಪು, ಪೇಶ್ವೆಯವರೆಲ್ಲ ಆಳಿಹೋಗಿರುವ ಈ ಧಾರವಾಡ ಬುದ್ಧಿಜೀವಿಗಳ, ಸಾಹಿತಿಗಳ, ಕವಿಗಳ, ಕಲಾವಿದರ, ಸಂಗೀತಗಾರರ ತವರು. ಹಳೆಗನ್ನಡ, ನಡುಗನ್ನಡ, ನವೋದಯ, ಪ್ರಗತಿಶೀಲ, ನವ್ಯ, ದಲಿತ–ಬಂಡಾಯ, ಸಮಕಾಲೀನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಕಾವ್ಯವೇ ಜೀವನವೆಂದು ಬದುಕಿದವರು, ಸಾಹಿತ್ಯವೇ ಉಸಿರಾದವರೆಲ್ಲ ನಡೆದಾಡಿದ ಭೂಮಿಯಿದು.
ಮರೆತೇವು ಮರೆದ, ತೆರೆದೇವು ಮನದ
ಎರದೇವು ಒಲವ, ಹಿಡಿನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು
ಕನ್ನಡದ ದೀಪ।। (ಡಾ.ಡಿ.ಎಸ್. ಕರ್ಕಿ)
ವಚನ ಪಿತಾಮಹ ಫ. ಗು. ಹಳಕಟ್ಟಿ, ಶಾಂತ ಕವಿ(ಸಕ್ಕರಿ ಬಾಳಾಚಾರ್ಯ), ದ. ರಾ. ಬೇಂದ್ರೆ, ವಿ. ಕೃ. ಗೋಕಾಕ, ರಂ. ಶ್ರೀ. ಮುಗಳಿ, ಬೆಟಗೇರಿ ಕೃಷ್ಣ ಶರ್ಮ, ಆಲೂರು ವೆಂಕಟರಾಯರು, ಡಿ. ಎಸ್. ಕರ್ಕಿ, ಆನಂದ ಕಂದ, ಪ್ರೊ. ಕೀರ್ತಿನಾಥ ಕುರ್ತಕೋಟಿ, ಶಾಂತಿನಾಥ ದೇಸಾಯಿ, ಶಂಬಾ ಜೋಶಿ, ಡಾ.ಎಂ.ಎಂ.ಕಲಬುರ್ಗಿ, ಜಿ.ಎಸ್.ಆಮೂರ, ಗಿರೀಶ ಕಾರ್ನಾಡ, ಚನ್ನವೀರ ಕಣವಿ... ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ...ಹೀಗೆ ಆದಿಕವಿ ಪಂಪನಿಂದ ಹಿಡಿದು ನೂರಾರು ಪ್ರಾತಃಸ್ಮರಣೀಯರು ನಾಡಿನ ಸಾಹಿತ್ಯದ ಪರಂಪರೆಯಲ್ಲಿ ಅಮರರಾಗಿರುವವರೆಲ್ಲ ಇದೇ ನೆಲಮೂಲದವರು.
ಈವರೆಗೆ ಧಾರವಾಡದಲ್ಲಿ ನಾಲ್ಕು ಬಾರಿ (1918, 1940, 1957, 2019), ಹುಬ್ಬಳ್ಳಿಯಲ್ಲಿ ಎರಡು ಬಾರಿ (1933,1990) ಸೇರಿ ಒಟ್ಟು ಆರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. ಜೈಪುರ ಲಿಟರೇಚರ್ ಫೆಸ್ಟಿವಲ್ ಮಾದರಿಯಲ್ಲಿ ಕೆಲ ವರ್ಷ ‘ಸಾಹಿತ್ಯ ಸಂಭ್ರಮ’ ಆಯೋಜಿಸಿದ್ದು ಕೂಡ ವಿಶೇಷವೇ.
ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು
ಉಸಿರುಸಿರಿಗೂ ತಂಪೆರಚಿದೆ ನಿನ್ನದೆ ಪರಿಮಳವು
ತಿಂಗಳ ತನಿವೆಳಕಲಿ ಮೈದೊಳೆದಿಹ ಮನದನ್ನೆ
ಮಂಗಳವೀ ಮನೆಯಂಗಳ ಚೆಂಗಲವೆಯ ಚೆನ್ನ।। (ಡಾ.ಚೆನ್ನವೀರ ಕಣವಿ)
ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೂ ಧಾರವಾಡದ ಕೊಡುಗೆ ಅಪಾರ. ಕುಂದಗೋಳದ ಸವಾಯಿ ಗಂಧರ್ವ (ರಾಮಚಂದ್ರ ಗಣೇಶ ಕುಂದಗೋಳಕರ್). ಪಂ.ಭೀಮಸೇನ ಜೋಶಿ (ಗದಗ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿ ಜನನ, ಅದು ಅವಿಭಜಿತ ಧಾರವಾಡ ಜಿಲ್ಲೆಯಾಗಿತ್ತು), ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಸಿತಾರರತ್ನ ರಹಿಮತ್ ಖಾನ್ ಸಂಗೀತ ಪರಂಪರೆ... ಹೀಗೆ ಈ ಕ್ಷೇತ್ರಕ್ಕೆ ಕೊಡುಗೆಯೂ ಬಲು ದೊಡ್ಡದು.
ಲಲಿತಕಲೆಗಳ ಬೀಡು
1935 ರಲ್ಲಿ ಕರ್ನಾಟಕದ ಮೊದಲ ಕಲಾ ಶಾಲೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ‘ಹಾಲಭಾವಿ ಸ್ಕೂಲ್ ಆಫ್ ಆರ್ಟ್’ ಕಲಾಶಾಲೆಯನ್ನು ಡಿ.ವಿ. ಹಾಲಭಾವಿ ಧಾರವಾಡದಲ್ಲಿ ಸ್ಥಾಪಿಸಿದರು. ಧಾರವಾಡ ಫೈನ್ ಆರ್ಟ್ ಸೊಸೈಟಿಯ ಆಶ್ರಯದಲ್ಲಿ ಸ್ಥಾಪಿಸಲಾದ ಶಾಲೆಯು ಸಾವಿರಾರು ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣವನ್ನು ನೀಡಿದೆ. ಶಾಲೆಯು ವಿದ್ಯಾರ್ಥಿಗಳಿಗೆ ರಂಗಭೂಮಿ, ಸಾಹಿತ್ಯ ಮತ್ತು ಸಂಗೀತದಂತಹ ಪೂರಕ ಕ್ಷೇತ್ರಗಳಿಗೆ ಪರಿಚಯಿಸಿದೆ.
ಕುಮಾರೇಶ್ವರ ಲಲಿತಕಲಾ ಮಹಾವಿದ್ಯಾಲಯವನ್ನು (1991) ಹಾವೇರಿಯಲ್ಲಿ ಕೆ.ಎನ್.ನೆಗ್ಲೂರುಮಠ ಸ್ಥಾಪಿಸಿದರು. ವಿ.ಆರ್.ಸುತಾರ್ ಅವರು ಧಾರವಾಡದಲ್ಲಿ ಗಂಗಾಂಬಿಕಾ ಸ್ಮಾರಕ ಕಲಾ ಶಾಲೆ (1993) ಆರಂಭಿಸಿದರು. ಧಾರವಾಡದಲ್ಲಿ ಕರ್ನಾಟಕ ವಿವಿ ಅಡಿಯಲ್ಲಿ 199ರಲ್ಲಿ ಸರ್ಕಾರಿ ಲಲಿತಕಲಾ ಕಾಲೇಜು ಸ್ಥಾಪನೆಗೊಂಡಿದೆ.
ದಿನವೂ ಜನಜಂಗುಳಿಯಿಂದ, ಗದ್ದಲ ಗಲಾಟೆಯಿಂದ ಕೂಡಿರುವ ಹುಬ್ಬಳ್ಳಿ ಕೂಡ ಸಾಕಷ್ಟು ವೈವಿಧ್ಯಮಯ ಕಲೆಯ ಅನಾವರಣಕ್ಕೂ ಸಾಕ್ಷಿಯಾಗಿದೆ. ಕುಂಚಬ್ರಹ್ಮ ಡಾ.ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ ಸಮಿತಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಸ್ಕೂಲ್ ರಸ್ತೆಯಲ್ಲಿ ಚಿತ್ರಸಂತೆ ಆಯೋಜಿಸಿತ್ತು. ಈ ವರ್ಷ ಜನವರಿ 30ರಂದು ನಡೆದ ಚಿತ್ರಸಂತೆಯಲ್ಲಿ ಅನೇಕ ಕಲಾವಿದರು ಪಾಲ್ಗೊಂಡು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಕಲಾಸಕ್ತರ ಗಮನ ಸೆಳೆದರು.
ಈ ಚಿತ್ರಸಂತೆಯಲ್ಲಿ 500ಕ್ಕೂ ಹೆಚ್ಚು ಕಲಾ ಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅನೇಕ ಕಲಾವಿದರು ಚಿತ್ರಸಂತೆಯಲ್ಲಿ ತಮ್ಮ ಚಿತ್ರ ಪ್ರದರ್ಶನ ಹಾಗೂ ಮಾರಾಟ ನಡೆಸಿದರು. ಜಲವರ್ಣ, ತೈಲವರ್ಣ, ಅಕ್ರ್ಯಾಲಿಕ್ ಪೇಂಟಿಂಗ್, ಮಧುಬನಿ, ಡಿಜಿಟಲ್ ಕಲೆ, ರಾಜಸ್ಥಾನಿ ಶೈಲಿಯ ಕಲಾಕೃತಿಗಳು ಕಲಾಸಕ್ತರ ಮನ ಸೆಳೆದವು.
ಅವಳಿ ನಗರದಲ್ಲಿ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಧಾರವಾಡದಲ್ಲಿ ಸರ್ಕಾರಿ ಆರ್ಟ್ ಸ್ಕೂಲ್ ಜೊತೆಗಿನ ಗ್ಯಾಲರಿ ಹೊರತು ಪಡಿಸಿದರೆ ಹುಬ್ಬಳ್ಳಿಯಲ್ಲಿ ಸರ್ಕಾರಿ ಕಲಾಗ್ಯಾಲರಿ ಇಲ್ಲ. ಹುಬ್ಬಳ್ಳಿಯಲ್ಲಿ ವಿಜಯ ಮಹಾಂತೇಶ ಕಲಾಶಾಲೆ ಇದೆ. ಮಿಣಜಗಿ ಆರ್ಟ್ ಗ್ಯಾಲರಿಗಾಗಿ ಮಹಾನಗರ ಪಾಲಿಕೆ ಗಾಜಿನ ಮನೆಯ ಆವರಣದಲ್ಲಿ ನೀಡಿದ್ದನ್ನು ಮರಳಿ ಪಡೆದಿದೆ. ಹೀಗಾಗಿ ಕಲಾವಿದರಿಗೆ ಗ್ಯಾಲರಿ ಇಲ್ಲದಂತಾಗಿದೆ. ಗ್ಯಾಲರಿಗಾಗಿ ಕಲಾವಿದರ ಮನವಿ, ಆಗ್ರಹ ನಡೆದೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.