ADVERTISEMENT

ಹುಬ್ಬಳ್ಳಿ–ಧಾರವಾಡ ಬೈಪಾಸ್: ಹತ್ತು ಪಥ ನಿರ್ಮಾಣಕ್ಕೆ ಟೆಂಡರ್‌- ಪ್ರಲ್ಹಾದ ಜೋಶಿ

₹1,200 ಕೋಟಿ ವೆಚ್ಚದಲ್ಲಿ 31 ಕಿ.ಮೀ. ರಸ್ತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 14:54 IST
Last Updated 7 ಜನವರಿ 2022, 14:54 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ದ್ವಿಪಥವಿದ್ದ ಹುಬ್ಬಳ್ಳಿ–ಧಾರವಾಡ ನಡುವಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಆರು ಪಥಗಳ ಎಕ್ಸ್‌ಪ್ರೆಸ್‌ ಹೆದ್ದಾರಿ ರಸ್ತೆ ಸೇರಿದಂತೆ 10 ಪಥಗಳ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆರು ಪಥದ ಎಕ್ಸ್‌ಪ್ರೆಸ್‌ ರಸ್ತೆ ಹಾಗೂ ಎರಡೂ ಬದಿಯಲ್ಲಿ ದ್ವಿಪಥದ ಸರ್ವಿಸ್‌ ರಸ್ತೆ ನಿರ್ಮಿಸಲಾಗುತ್ತಿದೆ. ಇದಕ್ಕೆ ₹1,200 ಕೋಟಿ ವೆಚ್ಚವಾಗಲಿದೆ. ಎರಡೂವರೆ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಐದು ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ ಎಂದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4ರ ಗಬ್ಬೂರು ಬಳಿಯಿಂದ 402.6 ಕಿ.ಮೀ.ನಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿಯ 433.2 ಕಿ.ಮೀ.ವರೆಗಿನ 31 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹800 ಕೋಟಿ, ಭೂ ಸ್ವಾದೀನ, ಡಿಪಿಆರ್ ತಯಾರಿಕೆ ಹಾಗೂ ಇನ್ನಿತರ ಕಾರ್ಯಕ್ಕೆ ₹400 ಕೋಟಿಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ತಿಳಿಸಿದ್ದಾರೆ.

ADVERTISEMENT

ಈಗಿರುವ ಬೈಪಾಸ್‍ನ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಇರಲಿದೆ. ಇದು ಕೆಲಗೇರಿ ಹಾಗೂ ನರೆಂದ್ರ ಮಧ್ಯೆ ನಿರ್ಮಾಣ ಮಾಡಲಾಗುತ್ತಿದ್ದು, ಹುಬ್ಬಳ್ಳಿ –ಧಾರವಾಡ ಮಧ್ಯ ಸಂಚರಿಸುವ ಪ್ರಯಾಣಿಕರಿಗೆ ಟೋಲ್ ನಿಂದ ವಿನಾಯಿತಿ ನೀಡಲಾಗಿದೆ. ಈ ಬೈಪಾಸ್ ನಿರ್ಮಾಣದಿಂದ ನಗರ ಮಧ್ಯದೊಳಗೆ ಸಂಚರಿಸುವ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎಂದೂ ಜೋಶಿ ಅವರು ತಿಳಿಸಿದ್ದಾರೆ.

ಈ ರಸ್ತೆ ದ್ವಿಪಥವನ್ನು ಮಾತ್ರ ಹೊಂದಿದ್ದರಿಂದ, ಆಗಾಗ ಅಪಘಾತಗಳು ಸಂಭವಿಸುತ್ತಿದ್ದವು. ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕನಿಷ್ಠ ಆರು ಪಥಗಳಿಗೆ ರಸ್ತೆ ವಿತರಣೆ ಆಗಬೇಕು ಎಂದು ಜೋಶಿ ಅವರು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.