ADVERTISEMENT

ಹುಬ್ಬಳ್ಳಿ–ಧಾರವಾಡ ಹೆದ್ದಾರಿ: ಬೈಪಾಸ್‌ನಲ್ಲಿ ಕೊನೆಗಾಣದ ಅಪಘಾತ

ಏಳು ದಿನದಲ್ಲಿ ನಾಲ್ಕು ಅಪಘಾತ, ಏಳು ಮಂದಿ ಸಾವು

ನಾಗರಾಜ ಬಿ.ಎನ್‌.
Published 23 ಅಕ್ಟೋಬರ್ 2024, 5:40 IST
Last Updated 23 ಅಕ್ಟೋಬರ್ 2024, 5:40 IST
<div class="paragraphs"><p>ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಸ್ತೆಯ ತಾರಿಹಾಳದ ಬಳಿ ರಸ್ತೆ ಕಾಮಗಾರಿ ಅರ್ಧಮರ್ಧ ನಡೆದಿದೆ </p></div>

ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಸ್ತೆಯ ತಾರಿಹಾಳದ ಬಳಿ ರಸ್ತೆ ಕಾಮಗಾರಿ ಅರ್ಧಮರ್ಧ ನಡೆದಿದೆ

   

–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ‘ಸಾವಿನ ಹೆದ್ದಾರಿ’ ಎಂಬಂತೆ ಆಗಿರುವ ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಸ್ತೆಯಲ್ಲಿ ಕಳೆದ ಏಳು ದಿನಗಳಲ್ಲಿ ನಡೆದ ಮೂರು ಅಪಘಾತಗಳಲ್ಲಿ, ಏಳುಮಂದಿ ಮೃತಪಟ್ಟಿದ್ದಾರೆ. ಈ ನಾಲ್ಕು ಅಪಘಾತಗಳೂ ‘ಹಿಟ್‌ ಆ್ಯಂಡ್‌ ರನ್‌’ ಪ್ರಕರಣಗಳೇ ಆಗಿವೆ.

ADVERTISEMENT

ಎರಡು ವರ್ಷಗಳಿಂದ ಹುಬ್ಬಳ್ಳಿ–ಧಾರವಾಡವರೆಗಿನ 32 ಕಿ.ಮೀ. ಉದ್ದದ ಬೈಪಾಸ್‌ ರಸ್ತೆಯ ವಿಸ್ತೀರ್ಣ ಕಾಮಗಾರಿ ನಡೆಯುತ್ತಿದ್ದು, ಅಪಘಾತಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ತೀರಾ ಇಕ್ಕಟ್ಟಾದ ದ್ವಿಪಥ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಆದ್ಯತೆ ಮೇರೆಗೆ ವಿಸ್ತರಿಸಿ, ಅಲ್ಲಲ್ಲಿ ಅಪಾಯದ ಮುನ್ಸೂಚನೆಯ ಫಲಕಗಳನ್ನು ಅಳವಡಿಸಲಾಗಿತ್ತು. ಆದ್ದರಿಂದ ಸವಾರರು ಜಾಗ್ರತೆ ವಹಿಸಿದ್ದರು. ಅಪಘಾತಗಳ ಸಂಖ್ಯೆ ಪ್ರಮಾಣವೂ ಇಳಿಕೆಯಾಗಿತ್ತು.

ಈಗ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದು ಅಲ್ಲಲ್ಲಿ, ಮಣ್ಣು ತೆಗೆದು ಹಾಗೆಯೇ ಬಿಡಲಾಗಿದೆ. ತಾರಿಹಾಳದ ಧಾರವತಿ ಆಂಜನೇಯ ದೇವಾಲಯದ ಅನತಿ ದೂರದಲ್ಲಿ ರಸ್ತೆ ವಿಸ್ತೀರ್ಣಕ್ಕೆ ತೆಗ್ಗು ತೆಗೆದು ಹಾಗೆಯೇ ಬಿಡಲಾಗಿದೆ. ಏರು–ಇಳಿತ ಇರುವ ಇಕ್ಕಟ್ಟಾದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಪಾಯಕಾರಿ ಆಗಿದೆ. ಪಕ್ಕದಲ್ಲಿಯೇ ಇರುವ ದೊಡ್ಡ ತೆಗ್ಗಿನಲ್ಲಿ ಮಳೆ ನೀರು ನಿಲ್ಲುವುದರಿಂದ, ರಾತ್ರಿ ವೇಳೆ ಸವಾರರಿಗೆ ಅದು ಗೋಚರಿಸುವುದಿಲ್ಲ. ಅಲ್ಲದೆ, ಗೋಕುಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಹ ಅದಕ್ಕೆ ಹೊಂದಿಕೊಂಡಿದೆ. ಅಲ್ಲೆಲ್ಲಿಯೂ ಅಪಾಯದ ಮುನ್ಸೂಚನೆಯ ಫಲಕ ಕಾಣಲ್ಲ.

ಸರ್ವಿಸ್‌ ರಸ್ತೆ  ಹೊರತುಪಡಿಸಿ ಆರು ಪಥದ ರಸ್ತೆ ನಿರ್ಮಾಣವಾಗುತ್ತಿದೆ. ಮನ್ಸೂರು, ಯರಿಕೊಪ್ಪ ಸೇರಿ ಕೆಲ ಭಾಗಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೀಗಾಗಿ, ಅಲ್ಲಲ್ಲಿ ಅಪೂರ್ಣ ಕಾಮಗಾರಿ ನಡೆಸಿ ಬಿಡಲಾಗಿದೆ. ಆರಂಭದಲ್ಲಿ ಅಳವಡಿಸಿದ್ದ ಎಚ್ಚರಿಕೆ ನಾಮಫಲಕಗಳೆಲ್ಲ ಅಳಸಿ ಹೋಗಿವೆ. ಒಂದೊವರೆ ತಿಂಗಳ ಹಿಂದೆ ಟೋಲ್‌ ಬಂದ್‌ ಆದ ಕಾರಣ, ಧಾರವಾಡ–ತಾರಿಹಾಳ ಹಾಗೂ ಗಬ್ಬೂರ ಬಳಿಯ ಟೋಲ್‌ ಗೇಟ್‌ ತೆರವು ಮಾಡಲಾಗಿದೆ. ಆದರೆ, ಅವುಗಳ ಕೆಲವು ಅವಶೇಷಗಳು ಹಾಗೂ ತಳಪಾಯ ಅಲ್ಲಿಯೇ ಇವೆ. ಇದು ಸಹ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ಮೊದಲು ಪ್ರತಿ ವರ್ಷ 400ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ, 90ಕ್ಕೂ ಹೆಚ್ಚು ಮಂದಿಯನ್ನು ಬೈಪಾಸ್‌ ಬಲಿ ಪಡೆಯುತ್ತಿತ್ತು. 2021ರಲ್ಲಿ 428 ಅಪಘಾತಗಳು ಸಂಭವಿಸಿ, 109 ಮಂದಿ ಮೃತಪಟ್ಟಿದ್ದರು. 2022ರಲ್ಲಿ ಪ್ರಕರಣಗಳ ಸಂಖ್ಯೆ 513ಕ್ಕೆ ಏರಿಕೆಯಾಗಿತ್ತು. ಆ ವರ್ಷ 108 ಮಂದಿ ಮೃತಪಟ್ಟು, 491 ಮಂದಿ ಗಾಯಗೊಂಡಿದ್ದರು. ಕಾಮಗಾರಿ ಆರಂಭವಾದ ವರ್ಷದಲ್ಲಿ ಅಂದರೆ, 2023ರಲ್ಲಿ 217 ಅಪಘಾತಗಳಲ್ಲಿ 41 ಮಂದಿ ಮೃತಪಟ್ಟು, 194 ಮಂದಿ ಗಾಯಗೊಂಡಿದ್ದರು ಎಂದು ಪೊಲೀಸ್‌ ದಾಖಲೆ ತಿಳಿಸುತ್ತದೆ.

ಅಪಘಾತಕ್ಕೆ ಕಾರಣಗಳು: ‘ಬೈಪಾಸ್‌ ರಸ್ತೆಯ ಪಕ್ಕ ರಾತ್ರಿವೇಳೆ ಗೂಡ್ಸ್‌, ಕಂಟೇನರ್‌, ಟ್ಯಾಂಕರ್‌ ವಾಹನಗಳು ಕೆಟ್ಟು ನಿಂತಿರುತ್ತವೆ. ಕೆಲ ಚಾಲಕರು ರಸ್ತೆ ಪಕ್ಕ ವಾಹನಗಳನ್ನು ನಿಲ್ಲಿಸಿರುತ್ತಾರೆ. ಬೈಪಾಸ್‌ ರಸ್ತೆಯೆಂದು ಕೆಲವರು ವಾಹನಗಳನ್ನು ವೇಗವಾಗಿ ಚಲಾಯಿಸಿ, ಕೆಟ್ಟು ನಿಂತಿರುವ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾರೆ. ಇನ್ನು ಕೆಲವರು ಮದ್ಯಪಾನ, ಮಾದಕ ವಸ್ತುಗಳ ಸೇವನೆ ಮಾಡಿ ನಿಯಂತ್ರಣ ಕಳೆದುಕೊಂಡು ರಸ್ತೆಯ ವಿಭಜಕಕ್ಕೋ, ಎದುರಿಗೆ ಇರುವ ವಾಹನಗಳಿಗೋ ಡಿಕ್ಕಿ ಹೊಡೆಯುತ್ತಾರೆ. ಬಹುತೇಕ ಬೈಕ್‌ ಸವಾರರು ಹೆಲ್ಮೆಟ್‌ಗಳನ್ನೇ ಧರಿಸುವುದಿಲ್ಲ. ಇತ್ತೀಚೆಗೆ ರಾತ್ರಿ ಹಾಗೂ ನಸುಕಿನ ವೇಳೆ ವಾಹನಗಳು ಡಿಕ್ಕಿ ಹೊಡೆದು ದ್ವಿಚಕ್ರ ವಾಹನಗಳ ಸವಾರರು ಮೃತಪಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ’ ಎಂದು ಪೊಲೀಸರು ಹೇಳುತ್ತಾರೆ.

ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಸ್ತೆಯ ಧಾರಾವತಿ ಆಂಜನೇಯ ದೇವಸ್ಥಾನದ ಸಮೀಪ ರಸ್ತೆ ವಿಸ್ತೀರ್ಣ ಕಾಮಗಾರಿಗೆ ತೆಗ್ಗು ತೋಡಿದ ಜಾಗದಲ್ಲಿ ನೀರು ನಿಂತಿದೆ

‘ಪೊಲೀಸ್‌ ಇಲಾಖೆ ಜೊತೆ ಚರ್ಚಿಸಿ ಕ್ರಮ’

‘ಬೈಪಾಸ್‌ ವಿಸ್ತೀರ್ಣ ಕಾಮಗಾರಿಗೆ ಸಂಬಂಧಿಸಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಳೆಗಾಲದಿಂದ ಕಾಮಗಾರಿ ವಿಳಂಬವಾಗಿದೆ. ಅಪಘಾತ ಪ್ರಕರಣಗಳು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು ಪರಿಶೀಲಿಸುತ್ತಿದ್ದೇವೆ. ಅಪಾಯಕಾರಿ ಸ್ಥಳಗಳಲ್ಲಿ ತ್ವರಿತವಾಗಿ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಪೊಲೀಸ್‌ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ‘ಪ್ರಜಾವಾಣಿ’ ತಿಳಿಸಿದರು.

ಬೈಪಾಸ್‌ ನಿರ್ವಹಣೆಯಿಲ್ಲದ ಕಾರಣ ಮತ್ತು ಮಳೆಯಿಂದ ಮತ್ತೆ ಅಪಘಾತಗಳು ನಡೆಯುತ್ತಿವೆ. ಸವಾರರು ಜಾಗ್ರತೆಯಿಂದ ವಾಹನ ಚಲಾಯಿಸಬೇಕು. ಅಪಘಾತ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳುತ್ತಿದೆ
–ವಿನೋದ ಮುಕ್ತೇದಾರ, ಎಸಿಪಿ ಸಂಚಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.