ADVERTISEMENT

ಹುಬ್ಬಳ್ಳಿ–ಧಾರವಾಡ | ಜನರ ನೆಮ್ಮದಿ, ರಕ್ಷಣೆಗೆ ಆದ್ಯತೆ: ಎನ್‌. ಶಶಿಕುಮಾರ್‌

ನಾಗರಾಜ ಬಿ.ಎನ್‌.
Published 6 ಜುಲೈ 2024, 6:13 IST
Last Updated 6 ಜುಲೈ 2024, 6:13 IST
<div class="paragraphs"><p>ಎನ್‌. ಶಶಿಕುಮಾರ್‌, ಪೊಲೀಸ್‌ ಕಮಿಷನರ್‌</p></div>

ಎನ್‌. ಶಶಿಕುಮಾರ್‌, ಪೊಲೀಸ್‌ ಕಮಿಷನರ್‌

   

ಹುಬ್ಬಳ್ಳಿ: ‘ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ಹಾಗೂ ರೌಡಿಗಳ ಜೊತೆ ಪೊಲೀಸರ ಸಂಬಂಧ ಕಾನೂನಾತ್ಮಕ ಪ್ರಕ್ರಿಯೆಗಷ್ಟೇ ಸೀಮಿತವಾಗಿರಬೇಕು. ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಇರುವುದು ಶಾಂತಿಪ್ರಿಯ ಜನರಿಗೆ ಮಾತ್ರ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿದರು.

ನೂತನ ಕಮಿಷನರ್‌ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಪೊಲೀಸರು ಯಾರ ಜೊತೆ ಪ್ರೀತಿ–ಸ್ನೇಹದಿಂದ ಇರಬೇಕು ಎಂಬುದನ್ನು ಮೊದಲು ಅರಿತಿರಬೇಕು. ಸಮಾಜಘಾತುಕ ಶಕ್ತಿಗಳ, ಪುಡಿ ರೌಡಿಗಳ ಜೊತೆ ಅವರು ಸಂಬಂಧ ಇಟ್ಟುಕೊಳ್ಳುವ ಪ್ರಶ್ನೆಯೇ ಉದ್ಬವಿಸಲ್ಲ. ಅದಕ್ಕೆ ನಮ್ಮಲ್ಲಿ ಅವಕಾಶ ಇಲ್ಲ. ಈ ಕುರಿತು ನಮ್ಮೆಲ್ಲ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿರುವೆ. ಪೊಲೀಸರ ಕಾರ್ಯಚಟುವಟಿಕೆ ಜನರಿಗೆ ನೆಮ್ಮದಿ ತರಬೇಕು’ ಎಂದರು.

ADVERTISEMENT

‘ಹೆಣ್ಣುಮಕ್ಕಳ ರಕ್ಷಣೆ ಪ್ರಜ್ಞಾವಂತ ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ. ಅವರ ರಕ್ಷಣೆಗೆ ಪೊಲೀಸ್‌ ಇಲಾಖೆ ಚನ್ನಮ್ಮ ಪಡೆ ಸಜ್ಜುಗೊಳಿಸಿದೆ. ಕರ್ತವ್ಯದಲ್ಲಿರುವ ನಮ್ಮ ಪ್ರತಿ ಸಿಬ್ಬಂದಿ ಸಹ ಚನ್ನಮ್ಮ ಪಡೆ ಸಿಬ್ಬಂದಿಯಂತೆ ಕಾರ್ಯ ನಿರ್ವಹಿಸುತ್ತಾರೆ. ಏನೇ ಸಮಸ್ಯೆ ಎದುರಾದರೂ ಮಹಿಳೆಯರು ಕುಟುಂಬದವರ, ಸ್ನೇಹಿತರ, ಶಿಕ್ಷಕರ ಅಥವಾ ಪೊಲೀಸರ ಜೊತೆ ಮುಕ್ತವಾಗಿ ಹಂಚಿಕೊಳ್ಳಬೇಕು. ಆಗ ಕಾನೂನಾತ್ಮಕ ಸಲಹೆ, ಧೈರ್ಯ ದೊರೆಯುತ್ತದೆ’ ಎಂದರು.

‘ಹುಬ್ಬಳ್ಳಿ–ಧಾರವಾಡದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆ, ಕೈಗಾರಿಕೆ, ಧಾರ್ಮಿಕ ಸ್ಥಳಗಳು ಇವೆ. ಇಲ್ಲಿಯ ಪ್ರತಿ ಜಾಗಕ್ಕೂ ಒಂದೊಂದು ಸೂಕ್ಷ್ಮತೆಯಿದೆ. ಈ ಎರಡೂ ನಗರದ ಜನರ ನಿರೀಕ್ಷೆಗಳು ಬೇರೆ ಬೇರೆಯಿದ್ದು, ನಡೆಯುವ ಅಪರಾಧ ಪ್ರಕರಣಗಳು ಸಹ ಬೇರೆ ಬೇರೆಯೇ ಆಗಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ, ಈ ಹಿಂದೆ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾದವರ, ರಾಜಕಾರಣಿಗಳ ಸಲಹೆ ಸೂಚನೆಗಳನ್ನು ಪಡೆದು, ಶಾಂತಿ ನಗರವನ್ನಾಗಿ ಮಾಡಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ, ಅವೆಲ್ಲವನ್ನು ಜಾರಿಗೆ ತರುತ್ತೇನೆ’ ಎಂದು ಭರವಸೆ ನೀಡಿದರು.

‘ಸಮಸ್ಯೆ ಹೇಳಿಕೊಂಡು ಠಾಣೆಗೆ ಬರುವ ಸಾರ್ವಜನಿಕರಿಗೆ ಸಿಬ್ಬಂದಿ ಸ್ಪಂದಿಸಬೇಕು. ಕೆಲವರು ಮನೆ ಬಾಗಿಲು ಮುರಿದು ಕಳವು ಮಾಡಿದ ಹಾಗೂ ಇನ್ನಿತರ ಸಣ್ಣಪುಟ್ಟ ಪ್ರಕರಣಗಳು ನಡೆದ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ತಂದುಕೊಡುತ್ತಾರೆ. ಅಂತಹ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ, ಅಪರಾಧಿಗಳ ಪತ್ತೆಗೆ ಮುಂದಾಗಬೇಕು’ ಎಂದರು.

‘ಅಪರಾಧ ಮುಕ್ತ

ನಗರಕ್ಕೆ ಯೋಜನೆ’

‘ಡ್ರಗ್ಸ್‌ ಮಾರಾಟ– ಸಾಗಾಟ, ಅಪಘಾತ ನಿಯಂತ್ರಣ, ಸಂಚಾರ ಸುವ್ಯವಸ್ಥೆಗೆ ತಕ್ಷಣ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ಅಧಿಕಾರ ಸ್ವೀಕರಿಸಿದ ಎರಡು ದಿನಗಳಲ್ಲಿ ಮಾಹಿತಿ ಸಂಗ್ರಹಿಸಿರುವೆ.  ಹಿರಿಯ ಅಧಿಕಾರಿಗಳ ಜೊತೆ ಸಭೆಯಲ್ಲಿ ಚರ್ಚಿಸಿದ್ದೇನೆ. ಕೇಂದ್ರ ಮತ್ತು ರಾಜ್ಯ ಗುಪ್ತಚರ ವಿಭಾಗದ ಜೊತೆಯೂ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವೆ. ಅಪರಾಧ ಮುಕ್ತ ನಗರ ಮಾಡಲು ನನ್ನದೇ ಆದ ಕೆಲ ಯೋಜನೆಗಳಿವೆ’ ಎಂದು ಶಶಿಕುಮಾರ್‌ ತಿಳಿಸಿದರು.

ಕಾನೂನು ಸುವ್ಯವಸ್ಥೆ ಹಾಗೂ ಅಪಘಾತ ಪ್ರಕರಣಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿರುವೆ. ಜಿಲ್ಲಾ ಮಟ್ಟದ ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸಲಾಗುವುದು
ಎನ್‌. ಶಶಿಕುಮಾರ್‌, ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.