ADVERTISEMENT

ಹುಬ್ಬಳ್ಳಿ: ಕಾರು ಬಜಾರಿನಲ್ಲಿ ಒಂದು ಸುತ್ತು

ಬಳಸಿದ ಕಾರು ಮಾರಾಟ–ಖರೀದಿಗೆ ಹುಬ್ಬಳ್ಳಿ ಉತ್ತಮ ಜಂಕ್ಷನ್‌

ನಾಗರಾಜ ಚಿನಗುಂಡಿ
Published 11 ನವೆಂಬರ್ 2024, 4:59 IST
Last Updated 11 ನವೆಂಬರ್ 2024, 4:59 IST
<div class="paragraphs"><p>ಹುಬ್ಬಳ್ಳಿಯ ಉಣಕಲ್‌ ಬಳಿಯಿರುವ ಬಳಸಿದ ಕಾರ್‌ ಮಾರ್ಕೆಟ್‌ </p></div>

ಹುಬ್ಬಳ್ಳಿಯ ಉಣಕಲ್‌ ಬಳಿಯಿರುವ ಬಳಸಿದ ಕಾರ್‌ ಮಾರ್ಕೆಟ್‌

   

– ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ಹುಬ್ಬಳ್ಳಿ: ಹುಬ್ಬಳ್ಳಿ–ನವನಗರದ ಮಧ್ಯೆ ಸಂಚರಿಸುವಾಗ ರಸ್ತೆ ಪಕ್ಕದ ಖಾಲಿ ಜಾಗಗಳಲ್ಲಿ ಗುಂಪು ಗುಂಪಾಗಿ ಕಾರು ನಿಲುಗಡೆ ಮಾಡಿದ ನೋಟ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಬಳಸಿದ ಕಾರು ಮಾರಾಟಕ್ಕೆ ಹುಬ್ಬಳ್ಳಿಯ ಪಿ.ಬಿ.ರಸ್ತೆಯೊಂದರಲ್ಲೇ ಎಷ್ಟೊಂದು ಏಜೆನ್ಸಿಗಳಿವೆ ಎಂದು ಉದ್ಘಾರ ತೆಗೆದು ಜನರು ಪರಸ್ಪರ ಚರ್ಚಿಸುತ್ತಾರೆ.

ADVERTISEMENT

ಹುಬ್ಬಳ್ಳಿಯ ಹೊಸೂರ ಕ್ರಾಸ್‌ನಿಂದ ನವ ನಗರದವರೆಗೂ ಹೆದ್ದಾರಿಯ ಎರಡು ಬದಿಗಳಲ್ಲಿ 30ಕ್ಕೂ ಹೆಚ್ಚು ಏಜೆನ್ಸಿಗಳು ಬಳಸಿದ ಕಾರು ಮಾರಾಟ ಮತ್ತು ಖರೀದಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿವೆ. ಇದಲ್ಲದೆ ಒಳರಸ್ತೆಯಲ್ಲೂ ಕಾರು ಮಾರಾಟ ಏಜೆನ್ಸಿಗಳು ಚಾಚಿಕೊಂಡಿವೆ. ಬಳಸಿದ ಕಾರುಗಳ ಖರೀದಿಗೆ ಮತ್ತು ಮಾರಾಟ ಮಾಡುವುದಕ್ಕೆ ವಾಣಿಜ್ಯ ನಗರ ಖ್ಯಾತಿಯ ಹುಬ್ಬಳ್ಳಿಯೆ ಉತ್ತಮವಾದ ಜಂಕ್ಷನ್‌ ಎನ್ನುವ ಮಾತು ಜನಮಾನಸದಲ್ಲಿ ಬೇರೂರಿದೆ.

ಐಷಾರಾಮಿಯಾದ ಆಡಿ, ಮರ್ಸಿಡೀಸ್‌, ಬಿಎಂಡಬ್ಲು, ಫಾರ್ಚೂನರ್‌ನಂತಹ ದುಬಾರಿ ಕಾರಿನಿಂದ ಹಿಡಿದು ಮಾರುತಿ 800, ನ್ಯಾನೊದಂತಹ ಸಣ್ಣ ಕಾರಿನವರೆಗೂ ತರಹೇವಾರಿ ಕಾರುಗಳನ್ನು ಮಾರಾಟಕ್ಕಾಗಿ ಏಜೆನ್ಸಿಗಳ ಜಾಗದಲ್ಲಿ ಮೂಲ ಮಾಲೀಕರು ನಿಲುಗಡೆ ಮಾಡಿ ಹೋಗಿರುತ್ತಾರೆ. ಕಾರು ಬದಲಿಸುವ ಹವ್ಯಾಸ, ಆರ್ಥಿಕ ದುಃಸ್ಥಿತಿ, ಕಾರು ನಿರ್ವಹಣೆಯ ಹೊರೆ, ಕಾರು ನಿಲುಗಡೆಗೆ ಜಾಗದ ಕೊರತೆ, ಲಾಭದ ಉದ್ದೇಶ ಸೇರಿದಂತೆ ವಿವಿಧ ಕಾರಣಕ್ಕಾಗಿ ಜನರು ತಮ್ಮ ಕಾರು ಮಾರಾಟ ಮಾಡುವಂತೆ ಏಜೆನ್ಸಿಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ.

ಮಧ್ಯವರ್ತಿ ಏಜೆನ್ಸಿಗಳು, ಮಾರಾಟದ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ಕಾರಿನ ದಾಖಲೆಗಳನ್ನೆಲ್ಲ ಪರಿಶೀಲಿಸುತ್ತಾರೆ. ಕಾರಿನ ಸ್ಥಿತಿಗತಿ ಹಾಗೂ ಅಗತ್ಯ ದುರಸ್ತಿ ಮಾಡುವ ಬಗ್ಗೆ ಚೌಕಾಸಿ ನಡೆಯುತ್ತದೆ. ಖರೀದಿದಾರ– ಮಾರಾಟದಾರ ಇಬ್ಬರಿಂದಲೂ ಶೇ 2.5 ಕಮಿಷನ್‌ ಪಡೆಯುವುದಾಗಿ ಕೆಲವು ಏಜೆನ್ಸಿಗಳು ಮುಕ್ತವಾಗಿ ಫಲಕ ಹಾಕಿಕೊಂಡಿವೆ. ಆದರೆ, ಬಹಳಷ್ಟು ಏಜೆನ್ಸಿಗಳು ಕಮಿಷನ್‌ ವಿಷಯ ಗುಪ್ತವಾಗಿಟ್ಟು ವ್ಯವಹಾರ ಮುಗಿಸುತ್ತಾರೆ. ಒಟ್ಟಾರೆ, ಏಜೆನ್ಸಿಗಳ ಕೈವಶಕ್ಕೆ ಬರುತ್ತಿದ್ದಂತೆ ಬಳಸಿದ ಕಾರುಗಳಿಗೆ ಹೊಸತನದ ಸ್ಪರ್ಶವಾಗಿರುತ್ತದೆ.

ಹುಬ್ಬಳ್ಳಿಯಲ್ಲಿ ದೂಳು ಸಾಮಾನ್ಯವಾಗಿದ್ದರೂ ಮಾರಾಟಕ್ಕೆ ನಿಲ್ಲಿಸಿದ ಕಾರುಗಳಿಗೆ ದೂಳು ಮುತ್ತಿಕೊಳ್ಳಂತೆ ನೋಡಿಕೊಳ್ಳಲಾಗುತ್ತದೆ. ಕಾರಿನ ಚಕ್ರಗಳು, ಆಸನಗಳು, ಬ್ರೇಕ್‌.. ಇತ್ಯಾದಿ ಎಲ್ಲವೂ ಕಾರ್ಯನಿರ್ವಹಣೆ ಸ್ಥಿತಿಯಲ್ಲಿರುವಂತೆ ಮಾಡಲಾಗುತ್ತದೆ. 20, 15 ಹಾಗೂ 10 ವರ್ಷದ ತುಂಬಾ ಹಳೇ ಮಾದರಿ ಹೊಸತನ ನೀಡುವುದಕ್ಕೆ ಕಾರುಗಳಿಗೆ ಏಜೆನ್ಸಿಗಳು ಸಾಹಸ ಪಡುತ್ತಾರೆ. ಐದು ವರ್ಷದೊಳಗಿನ ಕಾರುಗಳಿಗೆ ಗುಣಮಟ್ಟದ ಸರ್ವಿಸ್‌ ಸಾಕಾಗುತ್ತದೆ.

ಕ್ಲಿಯರನ್ಸ್‌ ಸರ್ಟಿಫಿಕೇಟ್‌ಗೆ ತಗಲುವ ವೆಚ್ಚವನ್ನು ಮಾರಾಟದಾರ ಭರಿಸಬೇಕು. ವಾಹನ ವರ್ಗಾವಣೆಗೆ ಸಂಬಂಧಿಸಿದ ವೆಚ್ಚವನ್ನು ಖರೀದಿದಾರ ಭರಿಸಬೇಕು. ಮಾಲೀಕತ್ವ ಬದಲಾವಣೆ ವೆಚ್ಚವನ್ನು ಮಧ್ಯವರ್ತಿ ಭರಿಸುತ್ತಾರೆ ಎನ್ನುವುದು ಸಾಮಾನ್ಯ ನಿಯಮ.

ದಿನನಿತ್ಯ ಗ್ರಾಹಕರ ಭೇಟಿ: ಹುಬ್ಬಳ್ಳಿಯಲ್ಲಿ ಬಳಸಿದ ಕಾರು ಖರೀದಿಸಲು ಹೊರ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ಜನರು ಬರುತ್ತಾರೆ ಎನ್ನುವುದು ಏಜೆನ್ಸಿ ಮಾಲೀಕರ ವಿವರಣೆ.

‘ಈ ಮೊದಲು ಕಾರು ಖರೀದಿಸಲು ದೀಪಾವಳಿ, ಯುಗಾದಿ ಹಾಗೂ ಊರು ದೇವರ ಜಾತ್ರೆ ಇತ್ಯಾದಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಈಗ ಬಹುತೇಕ ಟ್ರೆಂಡ್‌ ಬದಲಾಗಿದೆ. ಪ್ರತಿದಿನವೂ ಜನರು ಕಾರು ಏಜೆನ್ಸಿಗಳಿಗೆ ಭೇಟಿ ನೀಡಿ ವಿಚಾರಿಸುತ್ತಾರೆ’ ಎಂದು ಹರಿಪ್ರಿಯಾ ಅಟೊ ಕನ್ಸಲ್ಟಂಟ್‌ ಮಾಲೀಕ ರವೀಂದ್ರ ಬೆಂತೂರ ಅವರು ಹೇಳುವ ಮಾತಿದು.

ಹುಬ್ಬಳ್ಳಿಯಲ್ಲೇ ಕಾರು ಏಕೆ: ಬಳಸಿದ ಕಾರು ಮಾರಾಟ ಮತ್ತು ಖರೀದಿಸುವುದು ಹುಬ್ಬಳ್ಳಿಯಲ್ಲೇ ಏಕೆ ಹೆಚ್ಚಾಗಿದೆ ಎನ್ನುವ ಪ್ರಶ್ನೆ ಬಹಳಷ್ಟು ಜನರನ್ನು ಕಾಡುತ್ತದೆ.

‘ಕಾರಿಗೆ ಸಂಬಂಧಿಸಿದ ಪ್ರತಿಯೊಂದು ವ್ಯವಹಾರ ಹುಬ್ಬಳ್ಳಿಯಲ್ಲಿ ನಡೆಯುತ್ತದೆ. ಬಹುತೇಕ ಎಲ್ಲ ಕಂಪೆನಿಗಳ ಕಾರು ಷೋ ರೂಂ, ಬಿಡಿಭಾಗ ಮಾರಾಟ ಮಳಿಗೆಗಳು, ಕಾರಿನ ಕುಶನ್‌, ಸೌಂಡ್‌ ಸಿಸ್ಟಂ, ಎಂಜಿನ್‌ ದುರಸ್ತಿ, ಬಣ್ಣ ಬಳಿಯುವುದು, ಕಾರಿನ ಅಲಂಕಾರ.. ಹೀಗೆ ಪ್ರತಿಯೊಂದನ್ನು ಹುಬ್ಬಳ್ಳಿಯಲ್ಲಿಯೇ ಮಾಡಿಕೊಳ್ಳಬಹುದು. ಒಂದು ಕಡೆ ಇಷ್ಟವಾಗದಿದ್ದರೆ ಇನ್ನೊಬ್ಬರ ಬಳಿ ಹೋಗುವುದಕ್ಕೆ ಅವಕಾಶ ಕೂಡಾ ಇದೆ. ಹೀಗಾಗಿ ಹೊಸ ಕಾರು, ಹಳೇ ಕಾರು ಖರೀದಿಸಲು ಹುಬ್ಬಳ್ಳಿಯನ್ನು ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲವೂ ಒಂದೇ ಕಡೆ ಸಿಗುವುದರಿಂದ ಬೇರೆ ಸ್ಥಳಕ್ಕಿಂತ ಹುಬ್ಬಳ್ಳಿಯಲ್ಲಿ ದರ ಕಡಿಮೆ’ ಎನ್ನುತ್ತಾರೆ ಉಣಕಲ್‌ ಕ್ರಾಸ್‌ ಬಳಿ ಇರುವ ‘ಕಾರ್‌ ಟೌನ್‌’ ಏಜೆನ್ಸಿ ಮಾಲೀಕ ಸಂದೀಪ ಜಡಿ ಅವರು.

ವ್ಯವಹಾರ ತಂತ್ರ: ಪ್ರತಿ ಏಜೆನ್ಸಿ ಮಾಲೀಕರು ತಮ್ಮದೇ ಆದ ವ್ಯವಹಾರ ತಂತ್ರ ರೂಢಿಸಿಕೊಂಡಿದ್ದಾರೆ. ಒಬ್ಬರು ಇನ್ನೊಬ್ಬರಿಗೆ ಗುಟ್ಟು ಬಿಟ್ಟು ಕೊಡುವುದಿಲ್ಲ. ಬಹುತೇಕ ಏಜೆನ್ಸಿಗಳು ವಾಹನ ಮಾರಾಟದಾರ–ಖರೀದಿದಾರರ ಮಧ್ಯೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತವೆ. ಕೆಲವು ಏಜೆನ್ಸಿ ಮಾಲೀಕರು ಕಾರು ಖರೀದಿಸಿ ಮಾರಾಟ ಮಾಡುವುದೂ ಇದೆ. ಓಎಲ್‌ಎಕ್ಸ್‌, ಕಾರ24 ನಂತಹ ವೆಬ್‌ಸೈಟ್‌ನಲ್ಲಿ ಶುಲ್ಕ ಪಾವತಿಸಿ ಆನ್‌ಲೈನ್‌ ಮೂಲಕವೂ ಏಜೆನ್ಸಿ ಮಾಲೀಕರು ಬಳಸಿ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಆದರೂ ಹುಬ್ಬಳ್ಳಿಯಲ್ಲಿ ಆಟೊ ಕನ್ಸಲ್ಟಂಟ್ಸ್‌ಗಳಲ್ಲಿ ಒಗ್ಗಟ್ಟಿದೆ. ಆಗಾಗ ಸಭೆಗಳನ್ನು ನಡೆಸಿ ಪರಸ್ಪರ ಚರ್ಚಿಸುತ್ತಾರೆ. ನೋಂದಾಯಿತ ಸಂಘ ಅಸ್ತಿತ್ವಕ್ಕೆ ಬಂದಿಲ್ಲ.

ಖರೀದಿದಾರನಿಗೆ ಗೊಂದಲ ಬೇಡ: ಬಳಸಿದ ಕಾರು ಖರೀದಿಸುವವರಲ್ಲಿ ಸ್ಪಷ್ಟತೆ ಇರುವುದು ಮುಖ್ಯ. ನಿಗದಿತ ಮೊತ್ತ, ಯಾವ ಕಂಪೆನಿ ಕಾರು, ಸ್ಥಿತಿಗತಿ ಪರೀಕ್ಷಿಸುವ ಜ್ಞಾನ ಇರಲೇ ಬೇಕು. ವ್ಯವಹಾರ ಮುಗಿಸುವ ಮೊದಲು ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು. ಇದಕ್ಕಾಗಿ ಪರಿಚಿತರ ಸಹಾಯ ಪಡೆದು ಬಳಸಿದ ಕಾರು ಖರೀದಿಸುವುದು ಉತ್ತಮ. ಕಾರಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಏಜೆನ್ಸಿಗಳು ಮುಕ್ತವಾಗಿ ಹೇಳುತ್ತಾರೆ.

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಳಸಿದ ಕಾರ್‌ ಮಾರ್ಕೆಟ್‌ – ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ದೀಪಾವಳಿ ಯುಗಾದಿ ಸಂದರ್ಭದಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರು ಖರೀದಿಗೆ ಬರುತ್ತಾರೆ. ಭಾನುವಾರ ಸೇರಿದಂತೆ ರಜೆ ದಿನಗಳಲ್ಲೂ ಜನರು ಭೇಟಿ ನೀಡುತ್ತಾರೆ ಮಾಲೀಕ
ಸಂದೀಪ ಜಡಿ ಕಾರ್‌ಟೌನ್‌ ಏಜೆನ್ಸಿ

ಹುಬ್ಬಳ್ಳಿಯ ಪ್ರಥಮ ಏಜೆನ್ಸಿ

ಹುಬ್ಬಳ್ಳಿಯ ಪಿ.ಬಿ.ರಸ್ತೆಯಲ್ಲಿ 10 ವರ್ಷಗಳ ಹಿಂದೆ ಈ ನೋಟ ಇರಲಿಲ್ಲ. ಬೆರಳೆಣಿಕೆ ಸಂಖ್ಯೆಯ ಕಾರು ಏಜೆನ್ಸಿಗಳಿದ್ದವು. ಕಳೆದ ಐದು ವರ್ಷಗಳಲ್ಲಿ ಏಜೆನ್ಸಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಹುಬ್ಬಳ್ಳಿಯ ಪಿ.ಬಿ.ರಸ್ತೆಯಲ್ಲಿ ಮೊಟ್ಟಮೊದಲು ಬಳಸಿದ ಕಾರು ಖರೀದಿ–ಮಾರಾಟದ ಏಜೆನ್ಸಿ ಆರಂಭವಾದದ್ದು 1997ರಲ್ಲಿ. ಪಿಯುಸಿ ಓದು ಮುಗಿಸಿದ್ದ ರವೀಂದ್ರ ಬೆಂತೂರ ಅವರು ‘ಹರಿಪ್ರಿಯಾ ಅಟೊ ಕನ್ಸಲ್ಟಂಟ್ಸ್‌’ ಆರಂಭಿಸಿ ಇದುವರೆಗೂ ಯಶಸ್ವಿಯಾಗಿ ಮುಂದುವರಿಸಿದ್ದಾರೆ. ಸದ್ಯ ಇನ್ನೂ ಮೂವರು ಪಾಲುದಾರರೊಂದಿಗೆ ಎರಡು ಸ್ಥಳಗಳಲ್ಲಿ ಏಜೆನ್ಸಿ ಮುನ್ನಡೆಸುತ್ತಿದ್ದಾರೆ.

ಬಳಸಿದ ಕಾರು ಖರೀದಿ– ಮಾರಾಟ ವ್ಯವಹಾರದಲ್ಲಿ ಬಹಳಷ್ಟು ಬದಲಾವಣೆ ಆಗಿದೆ ಎನ್ನುವುದು ಅವರ ಅನುಭವದ ಮಾತು. ‘ಏಜೆನ್ಸಿ ಆರಂಭಿಸಿದಾಗ ಕಾರು ಖರೀದಿಗಾಗಿ 10 ಜನರು ಬರುತ್ತಿದ್ದರು. ನಮ್ಮಲ್ಲಿ ಒಂದೇ ಒಂದು ಕಾರು ಮಾರಾಟಕ್ಕೆ ನಿಂತಿರುತ್ತಿತ್ತು. ಈಗ ಒಬ್ಬ ಗ್ರಾಹಕರು ಬಂದಾಗ ಅವರೆದುರು ಒಂದೇ ಮಾದರಿಯ 10 ಕಾರುಗಳು ನಿಂತಿವೆ. ಯಾವುದು ಖರೀದಿಸಲಿ ಎಂದು ಕೆಲವರಿಗೆ ಗೊಂದಲ ಶುರುವಾಗುತ್ತದೆ. ಹತ್ತಾರು ಸಲ ಭೇಟಿ ನೀಡಿ ಸಮರ್ಪಕವಾಗಿ ಮಾಹಿತಿ ಪಡೆದು ಖರೀದಿಸುತ್ತಾರೆ. ಈ ಮೊದಲು ಒಂದು ತಿಂಗಳಿಗೆ 10ರಿಂದ 12 ಕಾರುಗಳು ಮಾರಾಟ ಆಗುತ್ತಿದ್ದವು. ಈಗ 5 ರಿಂದ 6 ಕಾರುಗಳು ಮಾತ್ರ ಮಾರಾಟ ಆಗುತ್ತಿವೆ’ ಎಂದು ರವೀಂದ್ರ ಹೇಳಿದರು.

‘ಹುಬ್ಬಳ್ಳಿಯಲ್ಲಿ ದಿಢೀರ್‌ ಕಾರು ಮಾರಾಟ ಮಧ್ಯವರ್ತಿ ಏಜೆನ್ಸಿಗಳ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಲಾಭದ ಪ್ರಮಾಣ ಎಲ್ಲರಿಗೂ ಕಡಿಮೆಯಾಗಿದ್ದು ಏಜೆನ್ಸಿ ನಿರ್ವಹಣೆ ಕಷ್ಟವಾಗುತ್ತಿದೆ. ಶೆಡ್‌ನಲ್ಲಿ ಕೂಡಿಟ್ಟ ಕಾರುಗಳನ್ನು 24/7 ಸಮಯ ಕಾಯಬೇಕು. ಸಹಾಯಕರನ್ನು ನೇಮಿಸಿಕೊಳ್ಳಬೇಕು. ಅಂದಾಜು ಪ್ರತಿ ತಿಂಗಳು ₹2 ಲಕ್ಷದವರೆಗೂ ನಿರ್ವಹಣೆ ವೆಚ್ಚವಾಗುತ್ತದೆ. ಈ ವೆಚ್ಚ ಭರಿಸಲು ಸಾಧ್ಯವಾಗದೆ ಮುಂದಿನ ಕೆಲವು ವರ್ಷಗಳಲ್ಲಿ ಏಜೆನ್ಸಿಗಳ ಸಂಖ್ಯೆ ಕುಸಿತವಾಗುವ ಸಾಧ್ಯತೆ ಹೆಚ್ಚಾಗಿದೆ‘ ಎಂದರು.

ಏಜೆನ್ಸಿಗಳ ಸವಾಲುಗಳು

ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಓ) ಕಚೇರಿಯಿಂದ ಕಾರು ಮಾಲೀಕತ್ವ ಬದಲಾವಣೆ ಸೇರಿದಂತೆ ವಿವಿಧ ನೋಂದಾಯಿತ ಪ್ರಮಾಣಪತ್ರ ಪಡೆಯುವುದಕ್ಕೆ ಕನಿಷ್ಠ 45 ದಿನಗಳವರೆಗೂ ವಾಹನ ಖರೀದಿಸಿದವರು ಕಾಯಬೇಕಾಗುತ್ತದೆ. ಏಜೆನ್ಸಿಗಳು ಈ ಬಗ್ಗೆ ಮೊದಲೇ ಮನವರಿಕೆ ಮಾಡುತ್ತವೆ. ಕಳ್ಳತನದ ಕಾರು ವಾಹನಗಳ ಕಂಡಿಷನ್‌ ಸಮರ್ಪಕವಾಗಿ ಗುರುತಿಸುವುದು ಹಾಗೂ ಹೊರ ರಾಜ್ಯಗಳಿಂದ ಬಂದಿರುವ ಕಾರುಗಳನ್ನು ಗುರುತಿಸುವುದು ಏಜೆನ್ಸಿ ಮಾಲೀಕರ ಮುಂದಿರುವ ದೊಡ್ಡ ಸವಾಲು. ‘ಮೂಲ ದಾಖಲೆಗಳನ್ನು ಮೊದಲೇ ಪರಿಶೀಲಿಸಿಕೊಂಡು ಕಾರನ್ನು ಮಾರಾಟಕ್ಕೆ ವಹಿಸಿಕೊಳ್ಳುತ್ತೇವೆ. ಹೀಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಿಂದ ಅಥವಾ ಪೊಲೀಸರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ’ ಎನ್ನುವುದು ಬಹುತೇಕ ಏಜೆನ್ಸಿ ಮಾಲೀಕರು ಹೇಳುವ ಮಾತಿದು.

ಪರಿಶೀಲಿಸಬೇಕಾದ ದಾಖಲೆ?

* ಆರ್‌ಸಿ ಕಾರ್ಡ್‌

* ವಾಹನ ವಿಮೆ

* 15 ವರ್ಷ ಮೇಲ್ಪಟ್ಟಿದ್ದರೆ ಎಫ್‌ಸಿ

* ಸಿಸಿ (ಕ್ಲಿಯರನ್ಸ್‌ ಸರ್ಟಿಫಿಕೇಟ್‌)

* ಮಾಲೀಕತ್ವ ಬದಲಾವಣೆ ಪತ್ರ

ಹುಬ್ಬಳ್ಳಿಯಲ್ಲಿನ ಕಾರು ಡೀಲರ್ಸ್‌

ಅರ್ಬನ್‌ ಕಾರ್ ಕಲ್ಯಾಣಿ ಅಟೊ ಜೋನ್‌ ಶ್ರೀ ಬಾಲಾಜಿ ಕಾರ್‌ ಮೇಳ ಕರ್ನಾಟಕ ಮೋಟರ್ಸ್‌ ನ್ಯೂ ಕಾರ್‌ ಬಜಾರ್‌ ಹುಬ್ಬಳ್ಳಿ ಮೋಟರ್ಸ್‌ ಹುಬ್ಬಳ್ಳಿ ಕಾರ್ಸ್‌ ಸೆಲೆಕ್ಟೆಡ್‌ ಕಾರ್ಸ್‌ ಮಾರುತಿ ಕಾರ್‌ ಮೇಳ ಡ್ರೀಮ್‌ ಕಾರ್‌ ಬಜಾರ್‌ ಶ್ರೀ ಬಾಲಾಜಿ ಮೋಟರ್ಸ್‌ ಟ್ರೂ ವ್ಯಾಲ್ಯು ಹರಿಪ್ರಿಯಾ ಅಟೊ ಕನ್ಸಲ್ಟಂಟ್‌ ಶರಾವತಿ ಮೋಟರ್ಸ್‌ ವಿಜಯ ಮೋಟರ್ಸ್‌ ವೆಲೊಸಿಟಿ ಮೋಟರ್ಸ್‌ ವಿನಾಯಕ ಕಾರ್‌ ಅಟೊ ಟೆರೆಸ್‌ ಹುಬ್ಬಳ್ಳಿ ಅಟೊಮೊಟಿವ್‌ ಶ್ರೀ ಕೇದಾರ ಮೋಟರ್ಸ್‌ ಶ್ರೀ ಭವಾನಿ ಮೋಟರ್ಸ್‌ ದಿ ಕಾರ್‌ ಪಾಯಿಂಟ್‌ ನವಲಿ ಎಂಟರ್‌ಪ್ರೈಜಿಸ್‌ ಕಾರ್‌ ಕರ್ನಾಟಕ ಮೋಟರ್ಸ್‌ ನ್ಯೂ ಕಾರ್‌ ಬಜಾರ್‌ ರಾಜ ನ್ಯಾಷನಲ್‌ ಮೋಟರ್ಸ್‌ ಗಣೇಶ ಮೋಟರ್ಸ್‌ ಓಂಕಾರ್ಸ್‌ ಲಾರ ಟೌನ್‌ ರವಿ ಮೋಟರ್ಸ್‌ ಕಾರ್‌ ಕ್ಲಬ್‌ ಶಿವಶಕ್ತಿ ಮೋಟರ್ಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.