ಹುಬ್ಬಳ್ಳಿ: ಲೀಸ್‌ಗೆ ನೀಡಿರುವ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಗಳ ನವೀಕರಣವಾಗದ ಕಾರಣ ಪಾಲಿಕೆಗೆ ಪ್ರತಿ ವರ್ಷ ₹50 ಕೋಟಿಯಿಂದ ₹100 ಕೋಟಿವರೆಗೆ ನಷ್ಟವಾಗುತ್ತಿದೆ.
ಮಹಾನಗರ ಪಾಲಿಕೆಯ ₹2,744 ಆಸ್ತಿಗಳನ್ನು ಲೀಸ್‌ಗೆ ನೀಡಲಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದಿಂದ ಒಂದು ವರ್ಷದ ಅವಧಿಯಿಂದ 999 ವರ್ಷಗಳ ಅವಧಿಗೆ ಲೀಸ್‌ಗೆ ನೀಡಿರುವ ಆಸ್ತಿಗಳು ಅದರಲ್ಲಿವೆ.
ಕೆಲವರಿಗೆ 50 ಚದರ ಅಡಿ ಆಸ್ತಿಯನ್ನು ಸಹ ಲೀಸ್ ನೀಡಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಗೆ ಕೆಲವು ಆಸ್ತಿಗಳು ಒತ್ತುವರಿಯಾಗಿದ್ದರೆ, ಮಠ, ಕ್ರೀಡಾಂಗಣ ನಿರ್ಮಾಣ, ಕೊಳೆಗೇರಿ ಅಭಿವೃದ್ಧಿ ಮಂಡಳಿಗೂ ಹಲವು ಆಸ್ತಿಗಳನ್ನು ಹಸ್ತಾಂತರಿಸಲಾಗಿದೆ. ಈ ಬಗ್ಗೆ ಸರಿಯಾಗಿ ಪರಿಶೀಲನೆ ಸಹ ಆಗುತ್ತಿಲ್ಲ.
ಆಸ್ತಿಗಳ ಲೀಸ್ ನವೀಕರಿಸಬಾರದು, ಖರೀದಿಗೆ ಕೊಡಬಾರದು ಎಂದು ಸರ್ಕಾರ 2013ರಲ್ಲಿ ಆದೇಶಿಸಿದೆ. ಅದರ ಅನ್ವಯ ಸದ್ಯ ನವೀಕರಣ, ಖರೀದಿಗೆ ಕೊಡಲು ಮಹಾನಗರ ಪಾಲಿಕೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕು.
ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಐದು ವರ್ಷಗಳಿಗೊಮ್ಮೆ ಲೀಸ್ ಆಸ್ತಿಗಳನ್ನು ನವೀಕರಣ ಮಾಡಲಾಗುತ್ತಿತ್ತು. ಸರ್ಕಾರದ ಆದೇಶದಿಂದಾಗಿ ಲೀಸ್ ಪಡೆದವರು ಯಾವುದೇ ತೆರಿಗೆ ಪಾವತಿಸುತ್ತಿಲ್ಲ. ತೆರಿಗೆ ಕಟ್ಟಲು ಮುಂದೆ ಬರುವವರಿಂದಲೂ ಪಾವತಿಸಿಕೊಳ್ಳಲು ಅವಕಾಶ ಇಲ್ಲದಂತಾಗಿದೆ.
‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಹೊಸ ದರ ನಿಗದಿಪಡಿಸಿ, ಲೀಸ್ ಅವಧಿ ನವೀಕರಿಸಬೇಕು. ಇಲ್ಲವೆ, ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಖರೀದಿಗೆ ಕೊಡಲು ಸರ್ಕಾರ ಅನುಮತಿ ನೀಡಬೇಕು. ಇದರಿಂದ ಪಾಲಿಕೆಯ ಆದಾಯವೂ ಹೆಚ್ಚುತ್ತದೆ’ ಎನ್ನುತ್ತಾರೆ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ.
‘ದೇಶದ ಯಾವ ಮಹಾನಗರ ಪಾಲಿಕೆಗಳಲ್ಲಿಯೂ ಈ ರೀತಿಯ ನಿಯಮ ಇಲ್ಲ. ತೆರಿಗೆ ಸಂಗ್ರಹ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಪಾಲಿಕೆಗೆ ಹಾನಿಯಾಗದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇದೆ. ಆದರೆ, ರಾಜ್ಯದಲ್ಲಿ ಸರ್ಕಾರದ ಆದೇಶದಿಂದ ಇದಕ್ಕೆ ತೊಡಕಾಗಿದೆ’ ಎಂದರು.
ಸರ್ಕಾರದ ಆದೇಶದಿಂದಾಗಿ ಮಹಾನಗರ ಪಾಲಿಕೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ. ಅಲ್ಲದೆ, ಕೆಲವರು ತೆರಿಗೆ ಪಾವತಿಸದೆ ಆಸ್ತಿಗಳನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದರು.
‘ಲೀಸ್‌ಗೆ ನೀಡಿರುವ ಆಸ್ತಿಗಳನ್ನು ಸರ್ವೆ ಮಾಡಿ, ಯಾವ ಆಸ್ತಿಗಳನ್ನು ಎಷ್ಟು ವರ್ಷಕ್ಕೆ ಲೀಸ್‌ಗೆ ಕೊಡಲಾಗಿದೆ, ಯಾವ ಆಸ್ತಿಯ ಲೀಸ್ ಅವಧಿ ಮುಗಿದಿದೆ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಸರ್ವೆ ಕಾರ್ಯ ಮುಗಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಿ, ಅಲ್ಲಿ ತೆಗೆದುಕೊಳ್ಳುವ ನಿರ್ಧಾರದ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ವಿಶ್ವನಾಥ ಪಿ.ಬಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.