ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯಕ್ಕೆ ನ್ಯಾಕ್ ಸಮಿತಿಯು ಎ++ ಅತ್ಯುನ್ನತ ಶ್ರೇಣಿ ಮಾನ್ಯತೆ ನೀಡಿದ್ದು, ಸಂಸ್ಥೆಗೆ ಮತ್ತೊಂದು ಕಿರೀಟ ಬಂದಂತಾಗಿದೆ. ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಸುಧಾರಣೆ ಮಾಡಿಕೊಳ್ಳುವುದಕ್ಕೆ ನ್ಯಾಕ್ ಮಾನದಂಡವೇ ಆಧಾರ ಎಂದು ಕೆಎಲ್‌ಇ ಸೊಸೈಟಿ ಆಡಳಿತ ಮಂಡಳಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯಿಂದ ಸ್ಥಾಪಿತವಾದ 350 ಕಾಲೇಜುಗಳಲ್ಲಿ ಮೂರು ಕಾಲೇಜುಗಳಿಗೆ ಎ+ ಮಾನ್ಯತೆ ದೊರಕಿತ್ತು. ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯಕ್ಕೆ ಅತ್ಯುನ್ನತ ಶ್ರೇಣಿ ಲಭಿಸಿದೆ ಎಂದರು.
ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಪ್ರತಿಭಾನ್ವಿತರು ಈ ದೇಶದಲ್ಲಿಯೇ ಸಾಧನೆ ಮಾಡುವಂತೆ ಪ್ರೇರೇಪಿಸಬೇಕು ಎನ್ನುವುದು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಒತ್ತಾಸೆ. ಅದರಂತೆ ಯಾವುದೇ ಕಾಲೇಜಿಗೆ ಭೇಟಿ ನೀಡಿದಾಗ ಗುಣಮಟ್ಟಕ್ಕೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಎಲ್ಲರ ಸಹಕಾರದಿಂದ ಗುಣಮಟ್ಟ ಕಾಪಾಡಲು ಸಾಧ್ಯವಾಗಿದೆ. ಈ ಸಂಸ್ಥೆಯಲ್ಲಿ ಕಲಿತವರು ಮುಖ್ಯಮಂತ್ರಿ, ಕೇಂದ್ರ ಸಚಿವರು ಹಾಗೂ ಸ್ವಾಮೀಜಿಗಳು ಆಗಿದ್ದಾರೆ. ಇದು ಕೇವಲ ಶಿಕ್ಷಣ ಸಂಸ್ಥೆಯಲ್ಲ, ಧಾರ್ಮಿಕ ಸಂಸ್ಕಾರ ಕೇಂದ್ರವೂ ಆಗಿದೆ ಎಂದು ಹೇಳಿದರು.
ಜೆ.ಜಿ.ಮಹಾವಿದ್ಯಾಲಯದಲ್ಲಿ ಸದ್ಯ 1,066 ಪದವಿ ವಿದ್ಯಾರ್ಥಿಗಳು ಹಾಗೂ 800 ಪಿಯುಸಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ನ್ಯಾಕ್ ಸಮಿತಿಗೆ ಶೇ 70 ರಷ್ಟು ಆನ್‌ಲೈನ್ ಮಾಹಿತಿ ಹಾಗೂ ಶೇ 30 ರಷ್ಟು ಆಫ್‌ಲೈನ್ ಮಾಹಿತಿ ನೀಡಲಾಗುತ್ತದೆ. ಇದೇ ವರ್ಷದಿಂದ ಸಂಜೆ ಕಾಲೇಜು ಆರಂಭಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಂಜೆ ಕಾಲೇಜು ಆರಂಭಿಸಲಾಗಿದೆ. ಹುಬ್ಬಳ್ಳಿ, ಬೆಳಗಾವಿ ಹಾಗೂ ಬೆಂಗಳೂರಿನ ವಾಣಿಜ್ಯ ಪದವಿ ಕಾಲೇಜುಗಳಲ್ಲಿ ಸಿಎ ಫೌಂಡೇಷನ್ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಗಬ್ಬೂರ ಕ್ರಾಸ್ ಬಳಿ ನಿರ್ಮಿಸುತ್ತಿರುವ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಶೇ 65 ರಷ್ಟು ಪೂರ್ಣಗೊಂಡಿದ್ದು, ಈ ವರ್ಷವೇ ಎರಡು ಮಹಡಿಗಳು ಪೂರ್ಣವಾಗಲಿವೆ. ಶೀಘ್ರ ವೈದ್ಯಕೀಯ ತರಗತಿಗಳನ್ನು ಆರಂಭಿಸುವ ಯೋಜನೆ ಇದೆ ಎಂದರು.
ಜೆ.ಜಿ.ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಲ್.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕಾಗಿ 20 ಕ್ಕೂ ಹೆಚ್ಚು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ನೇಮಕಾತಿ ಘಟಕ (ಪ್ಲೆಸ್‌ಮೆಂಟ್ ಸೆಲ್) ಸಕ್ರಿಯವಾಗಿದ್ದು, ಕಳೆದ ವರ್ಷ 270 ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.