ಹುಬ್ಬಳ್ಳಿ: ನಗರದ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈಲ್ವೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಶನಿವಾರ ಘಟನಾ ಸ್ಥಳ ಪರಿಶೀಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ‘ನಿಲ್ದಾಣದಲ್ಲಿ ಚಹಾ ಮಾರುವ ವ್ಯಕ್ತಿಯಿಂದ ಸ್ಫೋಟಕಗಳಿದ್ದ ಬಕೆಟ್ ಎತ್ತಿಸಿದ ಕಾರಣಕ್ಕೆ ನಿಲ್ದಾಣದ ವ್ಯವಸ್ಥಾಪಕ ವರುಣಕುಮಾರ ದಾಸ್ ಹಾಗೂ ಆರ್‌ಪಿಎಫ್ ಎಎಸ್‌ಐ ಮಂಜುನಾಥ ದೇಸಾಯಿ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಕುರಿತು ಮೂರು ದಿನಗಳಲ್ಲಿ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ‘ ಎಂದು ತಿಳಿಸಿದರು.
‘ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ವಿಮಾನ ನಿಲ್ದಾಣಗಳಲ್ಲಿ ಬಳಸುವಂತೆ ಸ್ಕ್ಯಾನಿಂಗ್ ಯಂತ್ರಗಳನ್ನು ಎಲ್ಲ ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗುವುದು’ ಎಂದರು.
ಸ್ಫೋಟಕ ವಸ್ತು ಪರೀಕ್ಷಿಸಲು ಹೋಗಿ ಗಾಯಗೊಂಡ ಹುಸೇನ್ ಸಾಬ್ ನಾಯಕವಾಲೆ ಅವರಿಗೆ ಸಚಿವರು ರೈಲ್ವೆ ಇಲಾಖೆಯಿಂದ ₹50 ಸಾವಿರ ಪರಿಹಾರ ನೀಡಿದರು.
ಸ್ಫೋಟಕ ನಿಷ್ಕ್ರಿಯ:ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸ್ಫೋಟಕಗಳನ್ನು ಬೆಂಗಳೂರಿನಿಂದ ಬಂದಿದ್ದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಶನಿವಾರ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ನಿಷ್ಕ್ರಿಯಗೊಳಿಸಿದರು. ಸ್ಪೋಟದ ತೀವ್ರತೆ ಕಂಡು ಹಿಡಿಯಲು ಪರೀಕ್ಷಾರ್ಥ ಎರಡು ವಸ್ತುಗಳನ್ನು ಸ್ಫೋಟಿಸಲಾಯಿತು.
ರೈಲ್ವೆ ನಿಲ್ದಾಣದಿಂದ ವಿಶೇಷ ವಾಹನದ ಮೂಲಕ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗಿ ಎಂಟು ಚಿಕ್ಕ ಬಾಕ್ಸ್‌ಗಳಲ್ಲಿದ್ದ ಒಣಗಿದ ಲಿಂಬೆ ಹಣ್ಣಿನಾಕಾರದ ಹದಿನೈದು ಸ್ಫೋಟಕಗಳನ್ನು ಒಂದೊಂದಾಗಿ ನಿಷ್ಕ್ರಿಯ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.