ADVERTISEMENT

ಹುಬ್ಬಳ್ಳಿ– ವಿಜಯಪುರ: ಮತ್ತೆ 2 ಹೊಸ ವೋಲ್ವೊ ಬಸ್‌ ಸಂಚಾರ ಆರಂಭ

ವಾಕರಸಾಸಂ: ಮಿತವ್ಯಯಕರ ದರದಲ್ಲಿ ಎ.ಸಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 14:26 IST
Last Updated 8 ಫೆಬ್ರುವರಿ 2024, 14:26 IST
ಮಲ್ಟಿ ಆ್ಯಕ್ಸಲ್ ಎಸಿ ಬಸ್ಸು
ಮಲ್ಟಿ ಆ್ಯಕ್ಸಲ್ ಎಸಿ ಬಸ್ಸು   

ಹುಬ್ಬಳ್ಳಿ: ಪ್ರಯಾಣಿಕರ ಬೇಡಿಕೆ ಮೇರೆಗೆ ಹುಬ್ಬಳ್ಳಿ ಹಾಗೂ ವಿಜಯಪುರ ನಡುವೆ ಮತ್ತೆ ಎರಡು ಮಲ್ಟಿ ಆ್ಯಕ್ಸಲ್ ಎಸಿ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಹುಬ್ಬಳ್ಳಿ ಹಾಗೂ ವಿಜಯಪುರ ನಡುವೆ 6 ಮಲ್ಟಿ ಆ್ಯಕ್ಸಲ್ ವೋಲ್ವೊ ಎಸಿ ಬಸ್ಸುಗಳ ಸಂಚಾರ ಆರಂಭಿಸಲಾಗಿತ್ತು. ಮಿತವ್ಯಯಕರ ಪ್ರಯಾಣ ದರದಲ್ಲಿ ಹವಾನಿಯಂತ್ರಣ ಸೌಲಭ್ಯ ದೊರೆಯುತ್ತಿರುವುದರಿಂದ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಿದ್ದು, ಈ ಬಸ್ಸುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದ್ದರಿಂದ ಮತ್ತೆ ಎರಡು ವೋಲ್ವೊ ಬಸ್‌ ಸಂಚಾರ ಆರಂಭಿಸಲಾಗಿದೆ.

ಈ ಬಸ್ಸುಗಳು ಹುಬ್ಬಳ್ಳಿಯ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಹೊರಟು ಹೊಸೂರು ಬಸ್ ನಿಲ್ದಾಣದ ಮೂಲಕ ವಿಜಯಪುರಕ್ಕೆ ಸಂಚರಿಸುತ್ತವೆ.
ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಬೆಳಿಗ್ಗೆ 6–20, 7–30, 8–15, 10–30, ಮಧ್ಯಾಹ್ನ 12–01, 1–30 ಸಂಜೆ 6–15, ಹಾಗೂ 6-45 ಹೊರಡುತ್ತವೆ. ವಿಜಯಪುರದಿಂದ ಹುಬ್ಬಳ್ಳಿಗೆ ಬೆಳಿಗ್ಗೆ 6, 11–10, ಮಧ್ಯಾಹ್ನ 12–45, 2, 3–45 ಸಂಜೆ 5, 7–10 ಹಾಗೂ ರಾತ್ರಿ 11.15ಕ್ಕೆ ಹೊರಡಲಿವೆ. 

ADVERTISEMENT

ಮುಂಗಡ ಬುಕಿಂಗ್‌ಗೆ ರಿಯಾಯ್ತಿ: 

https://www.ksrtc.in ಅಥವಾ KSRTC Mobile App ಹಾಗೂ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ. ಒಂದೇ ಟಿಕೆಟ್‌ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ 5ರಷ್ಟು ರಿಯಾಯ್ತಿ ನೀಡಲಾಗುತ್ತದೆ. ಹೋಗುವಾಗಿನ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಹುಬ್ಬಳ್ಳಿಯಿಂದ ಮತ್ತಿತರ ಪ್ರಮುಖ ನಗರಗಳಿಗೆ ಮಲ್ಟಿ ಆ್ಯಕ್ಸಲ್ ಎಸಿ ಬಸ್ ಸಂಚಾರ ಆರಂಭಿಸುವ ಯೋಜನೆ ಇದೆ ಎಂದು  ಅವರು ತಿಳಿಸಿದ್ದಾರೆ.

ಎಚ್.ರಾಮನಗೌಡರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.