ಹುಬ್ಬಳ್ಳಿ: 'ಪ್ರಲ್ಹಾದ ಜೋಶಿ ಅವರಿಗೆ ಹಿಂದೂ, ಮುಸ್ಲಿಂ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ಗೊತ್ತಿಲ್ಲ. ನನ್ನನ್ನ ಸಂಪುಟದಿಂದ ಕಿತ್ತು ಹಾಕಲು ಸಾಧ್ಯವಿಲ್ಲ' ಎಂದು ಸಚಿವ ಜಮೀರ್ ಅಹಮದ್ ಖಾನ್ ತಿರುಗೇಟು ನೀಡಿದರು.
'ಜಮೀರ್ ಅಹಮದ್ ಅವರು ಕೋಮು ದ್ವೇಷ ಹರಡುತ್ತಿದ್ದು, ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು' ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹೇಳಿಕೆ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾನು ಭಾರತೀಯ. 24 ಕ್ಯಾರೆಟ್ ಚಿನ್ನ. ಕೋಮು ದ್ವೇಷ ಹರಡುವ ಕೆಲಸವನ್ನು ಎಂದೂ ಮಾಡಿಲ್ಲ ಎಂದರು.
ಭಾರತದಲ್ಲಿ ಇರುವವರೆಲ್ಲರೂ ಭಾರತೀಯರು. ಪ್ರಲ್ಹಾದ ಜೋಶಿ ಅವರು ರಾಜಕೀಯದಲ್ಲಿ ಜಾತಿ ಮಾಡಬಾರದು. ಮಾಡುವುದಿದ್ದರೆ ಮನೆಯಲ್ಲಿ ಮಾಡಿಕೊಳ್ಳಲಿ ಎಂದು ಹೇಳಿದರು.
ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ವಿರೋಧ ಮಾಡುತ್ತಾರೆ. ಮತ ಹಾಕಿದರೆ ಮಾತ್ರ ನಾವು ಒಳ್ಳೆಯವರು. ಇಲ್ಲದಿದ್ದರೆ ಈ ರೀತಿ ಮಾತನಾಡುತ್ತಾರೆ ಎಂದರು.
ರೈತರು ಅನ್ನದಾತರು. ಅವರ ಆಸ್ತಿಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾನೂನು ಇದ್ದು ಯಾರ ಆಸ್ತಿಯನ್ನು ಯಾರೂ ಕಿತ್ತುಕೊಳ್ಳಲು ಬರುವುದಿಲ್ಲ. ರಾಜ್ಯದಲ್ಲಿ ಉಪ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವಿಷಯವನ್ನು ಬಿಜೆಪಿಯವರು ಮುನ್ನೆಲೆಗೆ ತಂದಿದ್ದಾರೆ, ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ವಕ್ಫ್ ಅದಾಲತ್ ಮಾಡುತ್ತಿದ್ದೇವೆ. ವಕ್ಫ್ ಬೋರ್ಡ್ ಸರ್ಕಾರದಿಂದ ಒಂದು ಇಂಚು ಜಾಗವನ್ನೂ ಪಡೆದಿಲ್ಲ.
ವಕ್ಫ್ ಬೋರ್ಡ್ ನಲ್ಲಿ ಸದ್ಯ 23 ಸಾವಿರ ಎಕರೆ ಜಾಗ ಇದ್ದು, 84 ಸಾವಿರ ಎಕರೆ ಒತ್ತುವರಿ ಆಗಿದೆ. ಮುಜರಾಯಿ ಇಲಾಖೆಯ 38 ಸಾವಿರ ಎಕರೆ ಜಾಗದಲ್ಲಿ 700 ಎಕರೆ ಒತ್ತುವರಿಯಾಗಿದೆ. ಅದರ ತೆರವಿಗೆ ನಾನೂ ಕೈಜೋಡಿಸುತ್ತೇನೆ ಎಂದು ಹೇಳಿದರು.
ವಿಜಯಪುರದಲ್ಲಿ ರೈತರನ್ನು ಬಿಜೆಪಿಯವರು ಎತ್ತಿಕಟ್ಟುತ್ತಿದ್ದಾರೆ. ಯಾವ ರೈತರಿಗೂ ತೊಂದರೆ ಅಗುವುದಿಲ್ಲ ಎಂಬ ಆಶ್ವಾಸನೆ ನೀಡುತ್ತೇನೆ. ವಕ್ಫ್ ಆಸ್ತಿ ವಿವಾದ ಸಂಬಂಧ ಬಿಜೆಪಿ ರಚಿಸಿರುವ ತಂಡಕ್ಕೆ ಎಲ್ಲ ದಾಖಲೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.