ADVERTISEMENT

ವೇತನ ಬಾಕಿ: ಐಸಿಡಿಎಸ್‌ ನೌಕರರ ಪರದಾಟ

ಸಂಸಾರ ನಿರ್ವಹಣೆ ಕಷ್ಟ; ಬಿಡುಗಡೆಯಾಗದ ಅನುದಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 19:03 IST
Last Updated 4 ಫೆಬ್ರುವರಿ 2024, 19:03 IST

ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್‌) ನೌಕರರಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗದೇ ಪರದಾಡುವಂತಾಗಿದೆ.

‘ಮೇಲ್ವಿಚಾರಕಿಯರು, ಎಫ್‌ಡಿಎ, ಎಸ್‌ಡಿಎ, ಇತರ ನೌಕರರಿಗೆ ವೇತನ ಪಾವತಿ ಆಗಿಲ್ಲ. ಸಂಬಳವಿಲ್ಲದೆ ಕುಟುಂಬ ನಿರ್ವಹಣೆ, ಮನೆ ಬಾಡಿಗೆ, ಸಾಲದ ಕಂತು ಪಾವತಿಗೆ ಸಮಸ್ಯೆಯಾಗಿದೆ’ ಎಂದು ನೌಕರರು ತಿಳಿಸಿದರು.

‘ಐಸಿಡಿಎಸ್‌ಗೆ ಕೇಂದ್ರ ಮತ್ತು ರಾಜ್ಯದ ಸರ್ಕಾರ ಶೇ 60:40 ಅನುಪಾತದಲ್ಲಿ ಅನುದಾನ ಬಿಡುಗಡೆಯಾಗುತ್ತದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಈ ನೌಕರರಿಗೆ ಮೂರು ತಿಂಗಳುಗಳಿಂದ ಅನುದಾನ ಬಿಡುಗಡೆಯಾಗದೇ ಸಂಬಳ ಬಾಕಿ ಇದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಸಂಬಳ ಆಧರಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವೆ. ಮೂರು ತಿಂಗಳಿನಿಂದ ಸಾಲದ ಕಂತು ಪಾವತಿಸಲು ಆಗಿಲ್ಲ. ಕಂತು ಪಾವತಿಗೆ ಕೈಸಾಲ ಮಾಡಿರುವೆ. ಕುಟುಂಬ ನಿರ್ವಹಣೆಗೆ ಸಂಬಳ ಆಶ್ರಯಿಸಿದ್ದೇನೆ. ವೇತನ ಬಾಕಿ ಇರುವ ಕುರಿತು ಬಗ್ಗೆ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾರೂ ಸ್ಪಂದಿಸುತ್ತಿಲ್ಲ’ ಎಂದು ಸಿಡಿಪಿಒ ಕಚೇರಿ ಮೇಲ್ವಿಚಾರಕಿಯೊಬ್ಬರು ನೋವು ತೋಡಿಕೊಂಡರು.

‘ಸರ್ಕಾರವು ಬಜೆಟ್‌ ಇಲ್ಲ ಎಂದು ವೇತನ ಪಾವತಿಸಿಲ್ಲ. ಸಂಬಳ ಇಲ್ಲದೆ ನೌಕರರಿಗೆ ತೊಂದರೆಯಾಗಿದೆ. ಪಂಚ ಗ್ಯಾರಂಟಿ ಕಾರ್ಯಕ್ರಮ ಅನುಷ್ಠಾನದ ಜೊತೆಗೆ ಐಸಿಡಿಎಸ್ ನೌಕರರಿಗೂ ಸಂಬಳ ಸಕಾಲದಲ್ಲಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ₹ 15 ಸಾವಿರ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು, ಆದರೆ ಅನುಷ್ಠಾನಕ್ಕೆ ಕ್ರಮವಹಿಸಿಲ್ಲ. ಬೆಂಗಳೂರಿನಲ್ಲಿ ಫೆಬ್ರುವರಿ 6ರಂದು ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘಟನೆ ಜಿಲ್ಲಾ ಸಂಚಾಲಕಿ ಭುವನಾ ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.