ADVERTISEMENT

ಹುಬ್ಬಳ್ಳಿ ಈದ್ಗಾ ಮೈದಾನ ಸಾರ್ವಜನಿಕ ಆಸ್ತಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 11:12 IST
Last Updated 18 ಆಗಸ್ಟ್ 2023, 11:12 IST
ಹುಬ್ಬಳ್ಳಿಯ ಈದ್ಗಾ ಮೈದಾನ
ಹುಬ್ಬಳ್ಳಿಯ ಈದ್ಗಾ ಮೈದಾನ   

ಹುಬ್ಬಳ್ಳಿ: ‘ನಗರದ ಈದ್ಗಾ ಮೈದಾನ ಸಾರ್ವಜನಿಕ ಆಸ್ತಿಯಾಗಿದ್ದು, ಅಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿ ನೀಡುವ ಕುರಿತು ರಾಜ್ಯ ಸರ್ಕಾರ ಯಾವುದೇ ಗೊಂದಲಕ್ಕೆ ಒಳಗಾಗಬಾರದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈದ್ಗಾ ಮೈದಾನ ಸಾರ್ವಜನಿಕ ಆಸ್ತಿಯಾಗಿದ್ದು, ಅದರ ಒಡೆತನ ಪಾಲಿಕೆಗೆ ಸೇರಿದೆ. ಯಾರೂ ಬೇಕಾದರೂ ಮೈದಾನವನ್ನು ಉಪಯೋಗಿಸಿಕೊಳ್ಳಲು ಅಧಿಕಾರವಿದೆ. ಮುಸ್ಲಿಂ ಸಮುದಾಯದವರಿಗೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗಿದೆ. ಹಾಗಂತ ಅದು ಮುಸ್ಲಿಂ ಸಮುದಾಯದ ಜಾಗವಲ್ಲ. ಕಳೆದ ವರ್ಷ ಈ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಉತ್ಸವ ಆಚರಿಸಲಾಗಿದೆ. ರಾಜ್ಯ ಸರ್ಕಾರ ಅನಗತ್ಯ ವಿವಾದಗಳನ್ನು ಎಳೆದುಕೊಂಡು ಗೊಂದಲ ಸೃಷ್ಟಿಬಾರದು’ ಎಂದರು.

‘ಅನೇಕ ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಿಜೃಂಭಣೆಯಿಂದ ಗಣೇಶ ಉತ್ಸವ ಆಚರಿಸುತ್ತ ಬರಲಾಗಿದೆ. ಈ ವರ್ಷವೂ ಅಷ್ಟೇ ಸಂಭ್ರಮ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮೆರವಣಿಗೆ ನಡೆಸುವ ಮಾರ್ಗಗಳ ಬಗ್ಗೆ ಗಣೇಶ ಸಮಿತಿಗಳ ಜೊತೆ ಪೊಲೀಸ್‌ ಇಲಾಖೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಅದನ್ನು ಹೊರತು ಪಡಿಸಿ, ಡಿಜೆ ಸೇರಿದಂತೆ ಯಾವುದೇ ನಿರ್ಬಂಧ ಹೇರಬಾರದು’ ಎಂದು ಎಚ್ಚರಿಸಿದರು.

ADVERTISEMENT

ಧಾರವಾಡದಿಂದಲೇ ಸ್ಪರ್ಧೆ: ‘ನಾಲ್ಕು ಬಾರಿಯ ನಾನು ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದು, ಈ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಬೇರೆ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎನ್ನುವ ಉಹಾಪೋಹದ, ರೇ ಸಾಮ್ರಾಜ್ಯದ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ಈ ಬಾರಿ ಲೋಕಸಭಾ ಸುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ರಾಜ್ಯದ 20 ಸ್ಥಾನಗಳಲ್ಲಿ ವಿಜಯಿಯಾಗಲಿದೆ’ ಎಂದರು.

‘ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಕೇಂದ್ರದ ನಾಯಕರು ರಾಜ್ಯದ ನಾಯಕರ ಮೇಲೆ ಯಾವ ಮುನಿಸು ಇಟ್ಟುಕೊಂಡಿಲ್ಲ. ಶೀಘ್ರವೇ ನಾಯಕನ ಆಯ್ಕೆಯಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.