ADVERTISEMENT

ಪ್ರೇಮಿಗಳ ದಿನ ಅನೈತಿಕ ಚಟುವಟಿಕೆಯಲ್ಲಿ ತೊಡಗಿದರೆ ಮದುವೆ!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 9:26 IST
Last Updated 13 ಫೆಬ್ರುವರಿ 2019, 9:26 IST
ಸಂಘಟನೆಯ ಪ್ರಮುಖರು ಸೀರೆ, ಪೈಜಾಮ ಹಾಗೂ ಮಾಂಗಲ್ಯ ತೋರಿಸಿದರು
ಸಂಘಟನೆಯ ಪ್ರಮುಖರು ಸೀರೆ, ಪೈಜಾಮ ಹಾಗೂ ಮಾಂಗಲ್ಯ ತೋರಿಸಿದರು   

ಹುಬ್ಬಳ್ಳಿ: ಯುವಕ–ಯುವತಿಯರು ಪ್ರೇಮಿಗಳ ದಿನದಿಂದು (ಫೆ. 14) ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ ಅವರಿಗೆ ಮದುವೆ ಮಾಡಿಸಲಾಗುವುದು ಎಂದು ಕ್ರಾಂತಿ ಸೇನಾ ಸಂಘಟನೆ ಎಚ್ಚರಿಕೆ ನೀಡಿದೆ.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವಿಠ್ಠಲ ಪವಾರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಪ್ರೇಮಿಗಳ ದಿನ ಆಚರಿಸುವುದು ನಮ್ಮ ಸಂಸ್ಕೃತಿ ಅಲ್ಲ. ಈ ದಿನದ ಆಚರಣೆಯ ನೆಪದಲ್ಲಿ ಯುವಜನಾಂಗ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಇದರಿಂದ ನಮ್ಮ ಸಂಸ್ಕೃತಿಗೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಯುವಕ–ಯುವತಿಯರ ಪೋಷಕರನ್ನು ಸ್ಥಳಕ್ಕೆ ಕರೆಯಿಸಿ ಪೊಲೀಸರ ಎದುರು ಹಿಂದೂ ಸಂಪ್ರದಾಯದ ಪ್ರಕಾರ ದೇವಸ್ಥಾನದಲ್ಲಿ ಮದುವೆ ಮಾಡಿಸಲಾಗುವುದು’ ಎಂದರು.

‘ಯುವತಿಗೆ ಸೀರೆ, ಅರಿಶಿಣದ ಮಾಂಗಲ್ಯ, ಯುವಕನಿಗೆ ಜುಬ್ಬಾ ಮತ್ತು ಪೈಜಾಮ ನೀಡಲಾಗುವುದು. ಅವರು ಮದುವೆಯಾದರೆ ನಮ್ಮ ಸಂಘಟನೆ ವತಿಯಿಂದ ₹ 10 ಸಾವಿರ ಕೊಡಲಾಗುತ್ತದೆ. ಸರ್ಕಾರದಿಂದ ಸೌಲಭ್ಯ ಕೊಡಿಸಲು ನೆರವು ನೀಡುತ್ತೇವೆ’ ಎಂದರು.

ADVERTISEMENT

‘ಪ್ರೇಮಿಗಳ ದಿನಾಚರಣೆಯಿಂದ ದೇಶದಲ್ಲಿ ಹೆಣ್ಣಿನ ಅಪಹರಣ, ಅತ್ಯಾಚಾರ, ಲೈಂಗಿಕ ಕಿರುಕುಳ, ಹೆಣ್ಣುಮಕ್ಕಳ ಸಾಕಾಣಿಕೆ ಮತ್ತು ಲವ್‌ ಜಿಹಾದ್‌ನಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ನಾವು ಈ ದಿನವನ್ನು ವಿರೋಧಿಸುತ್ತಿದ್ದೇವೆ’ ಎಂದರು.

ಕ್ರಾಂತಿ ಸೇನಾ ಸಂಘಟನೆ ಪ್ರಮುಖರಾದ ಬಸವರಾಜ ಮಣ್ಣೂರಮಠ, ಪ್ರಭುದೇವ ಹಿಪ್ಪರಗಿ, ಶ್ರೀನಾಥ ಪವಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.