ADVERTISEMENT

ಪಠ್ಯದ ಜತೆಗೆ, ಸಾಹಿತ್ಯಾಭಿರುಚಿಯೂ ಇರಲಿ: ಗಂಗಾವತಿ ಪ್ರಾಣೇಶ್

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಲಾವಿದ ಗಂಗಾವತಿ ಪ್ರಾಣೇಶ್ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 9:47 IST
Last Updated 17 ಸೆಪ್ಟೆಂಬರ್ 2020, 9:47 IST
ಗಂಗಾವತಿ ಪ್ರಾಣೇಶ್ ಅವರು ವಿವಿಧ ಲೇಖಕರ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ, ಪರಿಸರ ಲೇಖಕ ಶಿವಾನಂದ ಕಳವೆ,  ಹಿರಿಯ ಪತ್ರಕರ್ತ ಹಾಗೂ ಡಾ.ಡಿ.ಎಸ್. ಕರ್ಕಿ ಸಾಹಿತ್ಯ ಟ್ರಸ್ಟ್ ಸಂಚಾಲಕ ಗೋಪಾಲಕೃಷ್ಣ ಹೆಗಡೆ ಇದ್ದಾರೆ
ಗಂಗಾವತಿ ಪ್ರಾಣೇಶ್ ಅವರು ವಿವಿಧ ಲೇಖಕರ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ, ಪರಿಸರ ಲೇಖಕ ಶಿವಾನಂದ ಕಳವೆ,  ಹಿರಿಯ ಪತ್ರಕರ್ತ ಹಾಗೂ ಡಾ.ಡಿ.ಎಸ್. ಕರ್ಕಿ ಸಾಹಿತ್ಯ ಟ್ರಸ್ಟ್ ಸಂಚಾಲಕ ಗೋಪಾಲಕೃಷ್ಣ ಹೆಗಡೆ ಇದ್ದಾರೆ   

ಹುಬ್ಬಳ್ಳಿ: ‘ಮಕ್ಕಳಿಗೆ ಶಾಲೆಯ ಪಠ್ಯದ ಜತೆಗೆ, ಸಾಹಿತ್ಯ ಕೃತಿಗಳನ್ನು ಓದುವ ಅಭಿರುಚಿಯನ್ನೂ ಬೆಳೆಸಬೇಕು. ಪರಿಪೂರ್ಣ ಜ್ಞಾನಕ್ಕೆ ಪಠ್ಯದಷ್ಟೇ ಸಾಹಿತ್ಯವೂ ಅಗತ್ಯ’ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಸಲಹೆ ನೀಡಿದರು.

ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಟ್ರಸ್ಟ್ ಮತ್ತು ಸಾಹಿತ್ಯ ಪ್ರಕಾಶನವು ಸಾಹಿತ್ಯ ಭಂಡಾರದ ಮ. ಅನಂತಮೂರ್ತಿ ಅವರ 22ನೇ ಪುಣ್ಯತಿಥಿ ನಿಮಿತ್ತ, ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪುಸ್ತಕಗಳ ಬಿಡುಗಡೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರೀಕ್ಷೆಯಲ್ಲಿ ಫೇಲಾಗುವಷ್ಟರ ಮಟ್ಟಿಗೆ ನಾನು ಸಾಹಿತ್ಯವನ್ನು ಓದುತ್ತಿದ್ದೆ! ಅದಕ್ಕೆ ನಮ್ಮಪ್ಪ, ‘ಸಾಹಿತ್ಯದ ಬದಲು ಪಠ್ಯಪುಸ್ತಕ ಓದಿದ್ದರೆ ಪರೀಕ್ಷೆಯಲ್ಲಿ ನೀನು ರ‍್ಯಾಂಕ್ ಬರುತ್ತಿದ್ದೆ ಎನ್ನುತ್ತಿದ್ದ ನಮ್ಮಪ್ಪ, ನಿನ್ನ ಹಣೆಲಿ ವಿದ್ಯಾ ಸರಸ್ವತಿ ಬರೆದಿಲ್ಲ. ಬದಲಿಗೆ ಬೀಚಿ ಬರೆದಿದ್ದಾರೆ ನೋಡು ಎನ್ನುತ್ತಿದ್ದರು’ ಎಂದು ನೆನೆದರು.

ADVERTISEMENT

‘ಸಾಹಿತ್ಯ ಓದಿ ನಾನೀಗ ಗಳಿಸಿರುವುದನ್ನು ನೋಡಲು ನಮ್ಮ ತಂದೆ ಇಲ್ಲ. ಅವರ ಬೇಗನೇ ತೀರಿಕೊಂಡರು. ಅದಕ್ಕೆ ನಾನೇ ಅರ್ಧ ಕಾರಣವಿರಬಹುದು’ ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ‘ಕೊರೊನಾ ಆತಂಕದಿಂದಾಗಿ ಜನ ಗುಂಪುಗೂಡಲು ಭಯಪಡುತ್ತಿದ್ದಾರೆ. ಆದರೂ, ಜೀವಪ್ರೇಮಕ್ಕಿಂತ ಪುಸ್ತಕ ಪ್ರೇಮ ದೊಡ್ಡದು ಎಂಬುದನ್ನು ಕಾರ್ಯಕ್ರಮಕ್ಕೆ ಬಂದಿರುವವರು ತೋರಿಸಿದ್ದೀರಿ’ ಎಂದು ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು.

‘ಕಾಡು ನೋಡು ಕೃಷಿ ಮಾಡು’ ಕುರಿತು ಮಾತನಾಡಿದ ಪರಿಸರ ಲೇಖಕ ಶಿವಾನಂದ ಕಳವೆ, ‘ಆಧುನಿಕ ಕೃಷಿಯು ಬಿತ್ತನೆ ಬೀಜ ಉತ್ಪಾದಿಸುವ ಕಂಪನಿಗಳು ಹಾಗೂ ವಿಜ್ಞಾನಿಗಳ ಸಲಹೆಯನ್ನು ಆಧರಿಸಿದೆ. ಕೃಷಿ ಜ್ಞಾನ ತಲೆಮಾರುಗಳಿಂದ ನಮಗೆ ಹರಿದು ಬಂದಿದೆ. ಪೂರ್ವಿಕರು ಕಾಡು ನೋಡಿ ಕೃಷಿ ಮಾಡಿದರು. ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದೇ ಇಲ್ಲ’ ಎಂದರು.

‘ಹಣದ ಉಮೇದಿನಲ್ಲಿ ಕೃಷಿಯ ಮೂಲ ಮಾದರಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಮಾರುಕಟ್ಟೆ ಮತ್ತು ಮಣ್ಣು ಆಧಾರಿತ ಕೃಷಿ, ಕೆಲವೇ ಬೆಳೆಗಳತ್ತ ದೃಷ್ಟಿ ಹರಿಯುವಂತೆ ಮಾಡಿದೆ. ಮೂಲ ಕೃಷಿಯ ಉಳಿವಿಗಾಗಿ ಕಾಡು ತೋಟ ಮಾದರಿಯನ್ನು ಅನುಸರಿಸಬೇಕಿದೆ. ಹವಾಮಾನ ಏರುಪೇರು ಸೇರಿದಂತೆ, ಕೃಷಿಯ ಹಲವು ಸಮಸ್ಯೆಗಳಿಗೆ ಇದರಲ್ಲಿ ಪರಿಹಾರವಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ ಪ್ರಕಾಶನ ಮತ್ತು ಸಾಹಿತ್ಯ ಭಂಡಾರದ ಅಧ್ಯಕ್ಷ ಎಂ.ಎ. ಸುಬ್ರಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ.ಡಿ.ಎಸ್. ಕರ್ಕಿ ಸಾಹಿತ್ಯ ಟ್ರಸ್ಟ್ ಸಂಚಾಲಕ ಹಾಗೂ ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ ವಂದಿಸಿದರು.

ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಂಸದ ಐ.ಜಿ. ಸನದಿ ಸೇರಿದಂತೆ ಕಾರ್ಯಕ್ರಮದಲ್ಲಿದ್ದರು.

ಐದು ಪುಸ್ತಕಗಳು ಬಿಡುಗಡೆ
ಕಾರ್ಯಕ್ರಮದಲ್ಲಿ ಶಿವಾನಂದ ಕಳವೆ ಅವರ ‘ಕಾಡುತೋಟ’, ಡಾ.ಡಿ.ವಿ. ಗುರುಪ್ರಸಾದ್ ಅವರ ‘ಯಾವ ಕಷ್ಟವೂ ಶಾಶ್ವತವಲ್ಲ!’, ಡಾ.ಕೆ.ಎಸ್. ನಾರಾಯಣಾಚಾರ್ಯರ ‘ಆಚಾರ್ಯ ಚಾಣಕ್ಯ’, ಪ್ರೇಮಶೇಖರ್ ಅವರ ‘ಅಸಹಿಷ್ಣುತಾ ನೌಟಂಕಿ’ ಮತ್ತು ‘ಪಂಡಿತ ಎಸಗಿದ ಪ್ರಮಾದಗಳು’ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.