ADVERTISEMENT

ಮೂರು ವರ್ಷಗಳಿಂದ ನಡೆಯದ ಘಟಿಕೋತ್ಸವ!

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ

ಬಸವರಾಜ ಹವಾಲ್ದಾರ
Published 11 ಡಿಸೆಂಬರ್ 2019, 19:45 IST
Last Updated 11 ಡಿಸೆಂಬರ್ 2019, 19:45 IST
   

ಹುಬ್ಬಳ್ಳಿ: ರ‍್ಯಾಂಕ್‌ ಪಡೆಯುವುದು, ಘಟಿಕೋತ್ಸವದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಬೇಕು ಎಂಬುದು ವಿಶ್ವವಿದ್ಯಾಲಯಗಳಲ್ಲಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಆದರೆ, ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ 2016ರ ನಂತರ ಘಟಿಕೋತ್ಸವವೇ ನಡೆದಿಲ್ಲ!

ವಿಶ್ವವಿದ್ಯಾಲಯ ಮೂರು ವರ್ಷಗಳಿಂದ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳ ಪಟ್ಟಿ ಪ್ರಕಟಿಸಿಲ್ಲ. ರ‍್ಯಾಂಕ್‌ ವಿದ್ಯಾರ್ಥಿ ಎಂಬ ಅಂಶ ಕೆಲವೊಮ್ಮೆ ಉದ್ಯೋಗ ಗಿಟ್ಟಿಸಲು ಹಾಗೂ ಉನ್ನತ ಅಧ್ಯಯನಕ್ಕೆ ನೆರವಾಗುತ್ತದೆ. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಗುತ್ತಿಲ್ಲ.

ಘಟಿಕೋತ್ಸವ ಆಯೋಜನೆ ಹಾಗೂ ರ‍್ಯಾಂಕ್‌ ಪಟ್ಟಿ ಪ್ರಕಟಿಸಲು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಹಾಗೂ ಶೈಕ್ಷಣಿಕ ಮಂಡಳಿಯ ಅನುಮೋದನೆ ಬೇಕು. ಸಿಂಡಿಕೇಟ್‌ ಸದಸ್ಯರಿದ್ದಾಗ, ಶೈಕ್ಷಣಿಕ ಮಂಡಳಿಗೆ ಸದಸ್ಯರಿರಲಿಲ್ಲ. ಶೈಕ್ಷಣಿಕ ಮಂಡಳಿ ಇದ್ದಾಗ ಸಿಂಡಿಕೇಟ್‌ಗೆ ಸದಸ್ಯರಿರಲಿಲ್ಲ. ಹೀಗಾಗಿ ಘಟಿಕೋತ್ಸವ ಆಯೋಜನೆಯೇ ನನೆಗುದಿಗೆ ಬಿದ್ದಿದೆ.

ADVERTISEMENT

2014ರಲ್ಲಿ ಶೈಕ್ಷಣಿಕ ಮಂಡಳಿ ನೇಮಕವಾಗಿತ್ತು. ಅದರ ಅವಧಿ 2017ರಲ್ಲಿ ಪೂರ್ಣಗೊಂಡಿತ್ತು. ಆ ನಂತರ ಮಂಡಳಿಗೆ ಯಾರನ್ನೂ ನೇಮಕ ಮಾಡಿಲ್ಲ. ಹಾಗಾಗಿ, ಸಿಂಡಿಕೇಟ್‌ ಸದಸ್ಯರಿದ್ದರೂ ಘಟಿಕೋತ್ಸವ ನಡೆಸಲು ಸಾಧ್ಯವಾಗಿಲ್ಲ.

2016ರಲ್ಲಿ ಸಿಂಡಿಕೇಟ್‌ ಸದಸ್ಯರು ನೇಮಕಗೊಂಡಿದ್ದರು. ಅವರ ಅಧಿಕಾರ ಅವಧಿ 2019ರ ಮೇ ತಿಂಗಳಲ್ಲಿ ಮುಗಿದಿದೆ. ಸರ್ಕಾರದ ವತಿಯಿಂದ ಐವರು ಸದಸ್ಯರ ನೇಮಕವಾಗಬೇಕು. ಆದರೆ, ಇನ್ನೂ ಆಗಿಲ್ಲ.

ಹುಬ್ಬಳ್ಳಿಗೆ ಕಳೆದ ತಿಂಗಳು ಭೇಟಿ ನೀಡಿದ್ದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ವಾರದಲ್ಲಿ ಸಿಂಡಿಕೇಟ್‌ ಸದಸ್ಯರ ನೇಮಕ ಮಾಡಲಾಗುವುದು’ ಎಂದಿದ್ದರು. ತಿಂಗಳು ಕಳೆದರೂ ನೇಮಕವಾಗಿಲ್ಲ.

‘ಅರ್ಜಿ ಶುಲ್ಕ ತುಂಬಿ, ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯಲು ಯಾವುದೇ ತೊಂದರೆ ಇಲ್ಲ. ಈಗ ಶೈಕ್ಷಣಿಕ ಮಂಡಳಿಗೆ ಸದಸ್ಯರ ನೇಮಕ ಆಗಿದೆ. ಶೀಘ್ರವೇ ಸಿಂಡಿಕೇಟ್‌ ಸದಸ್ಯರ ನೇಮಕವಾಗುವ ವಿಶ್ವಾಸವೂ ಇದೆ. ಅದಾದ ಕೂಡಲೇ ಘಟಿಕೋತ್ಸವ ಆಯೋಜಿಸಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಈಶ್ವರ್ ಭಟ್ ಸ್ಪಷ್ಟಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.