ADVERTISEMENT

ಅಳ್ನಾವರ | ಬಿಟ್ಟೂಬಿಡದ ಮಳೆ: ಹೊಲದಲ್ಲಿ ನೆಲಕ್ಕೊರಗಿದ ಭತ್ತ

ಗೋವಿನಜೋಳ ಒಣಗಿಸಲು ಪರದಾಟ

ರಾಜಶೇಖರ ಸುಣಗಾರ
Published 19 ಅಕ್ಟೋಬರ್ 2024, 6:00 IST
Last Updated 19 ಅಕ್ಟೋಬರ್ 2024, 6:00 IST
ಅಳ್ನಾವರದ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಗೋವಿನಜೋಳ ಒಣಗಿಸಲು ಕಷ್ಟ ಪಡುತ್ತಿರುವ ರೈತ
ಅಳ್ನಾವರದ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಗೋವಿನಜೋಳ ಒಣಗಿಸಲು ಕಷ್ಟ ಪಡುತ್ತಿರುವ ರೈತ   

ಅಳ್ನಾವರ: ಕೆಲವು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋವಿನಜೋಳ ಫಸಲು ಒಣಗಿಸಲು ರೈತ ಹರಸಾಹಸ ಪಡಬೇಕಾಗಿದೆ. ಭತ್ತದ ಫಸಲು ಗದ್ದೆಯಲ್ಲಿ ನೆಲಕ್ಕುರುಳಿದೆ. ಕಬ್ಬಿನ ಗದ್ದೆ ತೇವಾಂಶದಿಂದ ಕೂಡಿದ್ದು, ಬೆಳೆ ಸಾಗಣೆ ವಿಳಂಬವಾಗುವ ಸಂಭವ ಇದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ರೈತನದ್ದಾಗಿದೆ.

ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಈ ಸಾಲಿನಲ್ಲಿ ತಾಲ್ಲೂಕಿನಾದ್ಯಂತ ಸುಮಾರು 1,283 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನುಗೌಡರ ಮಾಹಿತಿ ನೀಡಿದ್ದಾರೆ.

‘ಹಲವು ರೈತರ ಗೋವಿನಜೋಳ ಬೆಳೆ ಸಂಪೂರ್ಣ ಹಾಳಾಗಿದೆ. ಅಲ್ಪ ಸ್ವಲ್ಪ ಬಂದ ಬೆಳೆ ಒಣಗಿಸಿ ಮಾರಾಟ ಮಾಡಬೇಕೆಂದರೆ ದರ ದಿಢೀರ್ ಕುಸಿತ ಕಂಡಿದೆ. ಬೆಳೆ ಬೆಳೆಯಲು ಮಾಡಿದ ಖರ್ಚು ಕೂಡ ದೊರೆಯುವುದು ಕಷ್ಟ. ರೈತನ ಶ್ರಮಕ್ಕೆ ಬೆಲೆ ಇಲ್ಲದಾಗಿದೆ’ ಎಂದು ಕುಂಬಾರಕೊಪ್ಪ ಗ್ರಾಮದ ರೈತ ಅಶೋಕ ಜೋಡಟ್ಟಿ ಆತಂಕ ವ್ಯಕ್ತಪಡಿಸಿದರು.

ADVERTISEMENT

ಪ್ರತಿ ಕ್ವಿಂಟಲ್‍ಗೆ ₹3,200 ಇದ್ದ ದರ ಈಗ ₹2,300ಕ್ಕೆ ಕುಸಿದಿದೆ.

ಫಸಲು ಒಣಗಿಸಲು ಮಳೆ ಅಡ್ಡಿ: ಇಲ್ಲಿನ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಕಳೆದ ಒಂದು ತಿಂಗಳಿಂದ ಗೋವಿನಜೋಳ ಒಣಗಿಸಲು ರೈತ ಕಷ್ಟ ಪಡುವುದು ಸಾಮಾನ್ಯವಾಗಿದೆ.

‘ಹೊಲದಿಂದ ಟ್ರ್ಯಾಕ್ಟರ್ ಮೂಲಕ ಫಸಲು ತಂದು ಹಸನಾದ ಭೂಮಿಯಲ್ಲಿ ಬಿಸಿಲಿಗೆ ಒಣಗಿಸಲು ಹಾಕಲಾಗುತ್ತಿದೆ. ಸತತ ಮಳೆಗೆ ಫಸಲು ಸರಿಯಾಗಿ ಒಣಗುತ್ತಿಲ್ಲ. ಮಳೆಯಿಂದ ರಕ್ಷಣೆ ಪಡೆಯಲು ದೊಡ್ಡ ಗಾತ್ರದ ತಾಡಪತ್ರಿ ಮುಂತಾದ ಹೊದಿಕೆ ಬಳಕೆ ಮಾಡಲಾಗುತ್ತಿದೆ. ರಾತ್ರಿ ಹೊತ್ತು ಹಂದಿಗಳೂ ಬೆಳೆಯನ್ನು ಹಾಳು ಮಾಡುತ್ತಿವೆ’ ಎಂದು ಗುಂಡೊಳ್ಳಿಯ ರೈತ ರಮೇಶ ಕುನ್ನೂರಕರ ಅಸಹಾಯಕತೆ ವ್ಯಕ್ತಪಡಿಸಿದರು.

‘ಭತ್ತ ಈ ಭಾಗದ ಮುಖ್ಯ ಬೆಳೆಯಾಗಿದ್ದು, 1,740 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಅತಿಯಾದ ಮಳೆಯ ಹೊಡೆತಕ್ಕೆ ಫಸಲು ಗದ್ದೆಯಲ್ಲಿ ನೆಲಕ್ಕೊರಗಿದೆ. ಕಾಳು ಮೊಳಕೆ ಒಡೆಯುವ ಸ್ಥಿತಿ ಇದೆ, ಬೀಜಕ್ಕೆ ಹಾಗೂ ಊಟಕ್ಕೂ ಭತ್ತದ ಪೈರು ಸಿಗುತ್ತದೆಯೋ ಇಲ್ಲವೋ ಎನ್ನುವ ಸ್ಥಿತಿ ಇದೆ’ ಎನ್ನುತ್ತಾರೆ ಕಾಶೇನಟ್ಟಿಯ ರೈತ ರಾಯಪ್ಪ ಹುಡೇದ.

ಕಳೆದ ವರ್ಷದ ಮಳೆಯ ಅನಿಶ್ಚಿತತೆಯಿಂದ ಬಸವಳಿದ ರೈತ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆ ತೆಗೆದು ಭತ್ತ ಮತ್ತು ಗೋವಿನಜೋಳ ಬಿತ್ತಿದ್ದಾನೆ. ಅಂದಾಜು 1,895 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಹೆಚ್ಚಿನ ಮಳೆಗೆ ಕಬ್ಬು ನಲುಗಿದೆ.

ತಾಲ್ಲೂಕಿನಾದ್ಯಂತ ಕೃಷಿ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿ ಕೃಷಿ ಸಮುದಾಯ ಇದೆ.

ಅಳ್ನಾವರದ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಗೋವಿನಜೋಳ ಒಣಗಿಸಲು ಕಷ್ಟ ಪಡುತ್ತಿರುವ ರೈತ
ಅಳ್ನಾವರದಲ್ಲಿ ಮಳೆಯ ಹೊಡೆತಕ್ಕೆ ಮಲಗಿದ ಭತ್ತದ ಫಸಲು

Highlights - 1,283 ಹೆಕ್ಟೇರ್ ಗೋವಿನಜೋಳ ಹಾನಿ ಮಾಡಿದ ಖರ್ಚೂ ಕೈಸೇರದ ಆತಂಕ ಕಬ್ಬಿನ ಗದ್ದೆಯಲ್ಲಿ ತೇವ; ಕಟಾವು ವಿಳಂಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.