ಧಾರವಾಡ: ‘ವೃದ್ಧಾಶ್ರಮಗಳು ಹೆಚ್ಚಾಗಿರುವ ದೇಶವು ಪತನದ ಹಾದಿ ಹಿಡಿದಿದೆ ಎಂದರ್ಥ. ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವಂಥ ಶಿಕ್ಷಣ ಮಕ್ಕಳಿಗೆ ಸಿಗಬಾರದು, ಅದು ಬಹಳ ಅಪಾಯಕಾರಿಯಾದ ಶಿಕ್ಷಣ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ ರಾಜ್ಯೋತ್ಸವ ಮತ್ತು ಕರ್ನಾಟಕ ನಾಮಕರಣ 50ರ ಸಂಭ್ರಮ ಅಂಗವಾಗಿ ಆಯೋಜಿಸಿರುವ ‘ಧರೆಗೆ ದೊಡ್ಡವರು’ ವಿಚಾರಸಂಕಿರಣದಲ್ಲಿ ಶನಿವಾರ ಅವರು ಮಾತನಾಡಿದರು. ‘1995ರಲ್ಲಿ ದೇಶದಲ್ಲಿ 750 ವೃದ್ಧಾಶ್ರಮಗಳು ಇದ್ದವು, ಈಗ 28 ಸಾವಿರ ಇವೆ. ವೃದ್ಧಾಶ್ರಮಗಳು ದೇಶದ ಅವಲಕ್ಷಣ. ಮಕ್ಕಳನ್ನು ವಿದೇಶಗಳಿಗೆ ಕಳಿಸುವ ಪೋಷಕರು ವೃದ್ಧಾಶ್ರಮ ಸೇರುತ್ತಾರೆ’ ಎಂದರು.
‘ತಂದೆತಾಯಿಯನ್ನು ಗೌರವಿಸುವಂಥ ಏಕೈಕ ದೇಶ ನಮ್ಮದು. ಶ್ರವಣ ತಂದೆತಾಯಿಯನ್ನು ಹೊತ್ತುಕೊಂಡು ತೀರ್ಥಯಾತ್ರೆ ಮಾಡಿಸಿದ ಕತೆಯಿಂದ ಗಾಂಧೀಜಿ ಪ್ರಭಾವಿತರಾಗಿದ್ದರು’ ಎಂದರು.
‘ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಉತ್ತರ ಕರ್ನಾಟಕ ಭಾಗದ ಮಹಿಳೆಯನ್ನು ಆಯ್ಕೆ ಮಾಡಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಗಮನ ಹರಿಸಬೇಕು’ ಎಂದು ಅವರು ಹೇಳಿದರು.
‘ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಮಹಿಳೆಯರು ಧಾರವಾಡದಲ್ಲಿ ಇದ್ದಾರೆ. ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಥವಾ ವೀಣಾ ಶಾಂತೇಶ್ವರ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂದು ಪತ್ರಗಳನ್ನು ಬರೆದಿದ್ದೇವೆ. ಫಲಿತಾಂಶ ಇನ್ನು ತಿಳಿದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.