ಹುಬ್ಬಳ್ಳಿ: ಐದು ವರ್ಷಗಳಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆಗಳು ಹೆಚ್ಚಿವೆ. ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಮತ್ತು ಮೂರನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯಿದೆ.
2022–23ನೇ ಸಾಲಿನಲ್ಲಿ ರಾಜ್ಯದಲ್ಲಿ 20,365 ಅಂತರ್ಜಾತಿ ವಿವಾಹಗಳು ಆಗಿವೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 3,626 ಮತ್ತು ಯಾದಗಿರಿಯಲ್ಲಿ ಅತಿ ಕಡಿಮೆ 122 ಅಂತರ್ಜಾತಿ ವಿವಾಹಗಳು ಆಗಿವೆ.
ಪ್ರೋತ್ಸಾಹ ಧನ ವಿತರಣೆ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2021–22ನೇ ಸಾಲಿನಲ್ಲಿ ₹171.84 ಕೋಟಿ ಮತ್ತು 2022–23ನೇ ಸಾಲಿನಲ್ಲಿ ₹94.62 ಕೋಟಿ ನೀಡಲಾಗಿದೆ.
‘ಅಂತರ್ಜಾತಿ ವಿವಾಹದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಅರ್ಹ ದಂಪತಿಗೆ ಪ್ರೋತ್ಸಾಹ ಧನ ಸಿಗುವುದರ ಬಗ್ಗೆ ಮಾಹಿತಿ ಕೊಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅಂತರ್ಜಾತಿ ವಿವಾಹಗಳ ಸಂಖ್ಯೆಯು ಹೆಚ್ಚಳವಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಪ್ರೋತ್ಸಾಹ ಧನ ಪಡೆಯುವುದು ಹೇಗೆ ಎಂಬುದು ಕೆಲವರಿಗೆ ಗೊತ್ತಿಲ್ಲ. ಹೀಗಾಗಿ ಅವರಿಗೆ ಈ ಸೌಲಭ್ಯ ದೊರೆಯುವುತ್ತಿಲ್ಲ. ವಿವಾಹಿತ ಜೋಡಿಯು ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ಪಡೆದು, ಒಂದು ವರ್ಷದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಹಿತ ಅಗತ್ಯ ದಾಖಲೆ ಪತ್ರಗಳನ್ನು ಸಲ್ಲಿಸಿದರೆ, ಪ್ರೋತ್ಸಾಹ ಧನ ಪಡೆಯಲು ಅವಕಾಶವಿದೆ’ ಎಂದರು.
₹3 ಲಕ್ಷ ಪ್ರೋತ್ಸಾಹ ಧನ: ಪರಿಶಿಷ್ಟ ಜಾತಿ, ಪಂಗಡದ ಮಹಿಳೆ ಬೇರೆ ಜಾತಿಯ ವ್ಯಕ್ತಿಯ ಜೊತೆ ವಿವಾಹವಾದರೆ, ದಂಪತಿಗೆ ₹3 ಲಕ್ಷ ಪ್ರೋತ್ಸಾಹ ಧನ ಸಿಗುತ್ತದೆ. ಮೇಲ್ಜಾತಿಯ ಮಹಿಳೆಯು ಪರಿಶಿಷ್ಟ ಜಾತಿ, ಪಂಗಡದ ವ್ಯಕ್ತಿಯೊಂದಿಗೆ ಮದುವೆಯಾದರೆ, ದಂಪತಿಗೆ ₹2.5 ಲಕ್ಷ ಪ್ರೋತ್ಸಾಹ ಧನ ಸಿಗುತ್ತದೆ.
ಪ್ರೋತ್ಸಾಹ ಧನಕ್ಕೆ ಅರ್ಜಿಯ ಜೊತೆಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ದಂಪತಿಯ ಜಾತಿ ಪ್ರಮಾಣಪತ್ರ, ಜನನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ದಂಪತಿಯ ಚಿತ್ರ, ಮದುವೆ ಪ್ರಮಾಣಪತ್ರವನ್ನೂ ಸಲ್ಲಿಸಬೇಕು.
‘ಇಬ್ಬರೂ ಪ್ರೀತಿಸಿ 7 ವರ್ಷದ ಹಿಂದೆ ಮದುವೆಯಾದವು. ಹುಡುಗಿ ಕುಟುಂಬದ ವಿರೋಧವಿದ್ದರೂ ಲೆಕ್ಕಿಸಲಿಲ್ಲ. ಸರ್ಕಾರದಿಂದ ಸೌಲಭ್ಯ ಸಿಗುವುದೆಂದು ಗೊತ್ತಾಯಿತು. ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದೆವು. ಸೌಲಭ್ಯವೂ ಸಿಕ್ಕಿತು. ಪೊಲೀಸ್‌ರಿಂದಲೂ ರಕ್ಷಣೆ ದೊರೆಯಿತು’ ಎಂದು ಧಾರವಾಡ ಜಿಲ್ಲೆಯ ನವಲಗುಂದದ ಅಂತರ್ಜಾತಿ ವಿವಾಹಿತ ದಂಪತಿ ತಿಳಿಸಿದರು.
ಪ್ರೋತ್ಸಾಹಧನ ಕೋರಿ ಬಹಳ ಅರ್ಜಿಗಳು ಬಂದಿವೆ. ಆದರೆ, ಅನುದಾನದ ಕೊರತೆಯಿದೆ. ಆರ್ಥಿಕ ಇಲಾಖೆಯ ಗಮನಕ್ಕೆ ತಂದು ಪ್ರೋತ್ಸಾಹಧನ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು.-ಎಚ್.ಸಿ.ಮಹದೇವಪ್ಪ, ಸಮಾಜಕಲ್ಯಾಣ ಸಚಿವ
ವರ್ಷದಿಂದ ವರ್ಷಕ್ಕೆ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದ್ದು, ಪ್ರೋತ್ಸಾಹಧನ ವಿತರಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಕೆಲ ಅರ್ಜಿಗಳು ಸ್ವೀಕೃತವಾಗಿಲ್ಲ. ಎಲ್ಲವನ್ನೂ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.-ಎಂ.ಬಿ, ಸಣ್ಣೇರ, ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.