ನವಲಗುಂದ: ತಾಲ್ಲೂಕಿನಾದ್ಯಂತ ಹಿಂಗಾರು ಮಳೆ ಸತತವಾಗಿ ಸುರಿದ ಕಾರಣ ಭೂಮಿಯಲ್ಲಿ ತೇವಾಂಶ ಅಧಿಕವಾಗಿ ಹಿಂಗಾರು ಬಿತ್ತನೆಗೆ ಅಡ್ಡಿಯಾಗಿದ್ದು, ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ರೈತರು ಈಗ ಪರಿತಪಿಸುತ್ತಿದ್ದಾರೆ.
ಅಕ್ಟೋಬರ್‌ನಲ್ಲಿ ಕಡಲೆ ಬಿತ್ತನೆ ಕಾರ್ಯ ಪ್ರಾರಂಭಿಸಲು ರೈತರು ತಯಾರಿ ನಡೆಸಿದ್ದರು. ಸತತ ಮಳೆ ಶುರುವಾಗಿ ತೇವಾಂಶ ಹೆಚ್ಚಾಗಿ ಕಡಲೆ ಬಿತ್ತನೆ ಮಾಡುತ್ತೇವೊ ಇಲ್ಲವೊ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ. ನಿರಂತರ ಮಳೆಗೆ ಹೊಲಗಳು ಕೆಸರು ಗದ್ದೆಯಂತಾಗಿವೆ.
ಹೆಸರು, ಉದ್ದು ರಾಶಿಯ ನಂತರ ಹಿಂಗಾರು ಬಿತ್ತನೆಗೆ ಹೊಲ ಹದಗೊಳಿಸುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಕಳೆ ಬೆಳೆದಿದ್ದು ರೈತರು ಸಂಕಟಕ್ಕೆ ಸಿಲುಕಿದ್ದಾರೆ. ಜೋಳ ಬಿತ್ತನೆಯೂ ಶುರುವಾಗಿಲ್ಲ. ಬೀಜ, ಗೊಬ್ಬರದ ಸಿದ್ಧತೆ ಮಾಡಿಕೊಂಡಿದ್ದರೂ ಹೊಲಗಳಲ್ಲಿನ ತೇವಾಂಶ ಕಡಿಮೆಯಾಗಿಲ್ಲ. ಮತ್ತೆ ಮಳೆ ಬಂದರೆ ಬಿತ್ತನೆ ಮತ್ತಷ್ಟು ವಿಳಂಬವಾಗಲಿದೆ ಎಂಬುದು ರೈತರು ಕಳವಳ.
ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಕಡಲೆ ಬೀಜ ವಿತರಣೆ ಮಾಡಿ ಬಿತ್ತನೆ ಪೂರ್ವ ಬೀಜೋಪಚಾರ ಕ್ರಮ ಪಾಲಿಸಬೇಕು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಚಿತ್ತಿಮಳೆಗೆ ಜೋಳ ಬಿತ್ತನೆಗೆ ಮಳೆ ಸಕಾಲವಾಗಿದ್ದು, ಅಧಿಕ ತೇವಾಂಶದಿಂದ ಬಿತ್ತನೆ ಪ್ರಾರಂಭವಾಗಿಲ್ಲ. ಸ್ವಾತಿ ಮಳೆಯಲ್ಲಿ ಕಡಲೆ ಬಿತ್ತುವುದು ವಾಡಿಕೆ. ಸತತ ಮಳೆಯಿಂದ ಕಡಲೆ ಬಿತ್ತನೆಗೂ ತೊಂದರೆಯಾಗಿದೆ. ತಾಲ್ಲೂಕಿನಲ್ಲಿ ಅಧಿಕ ಮಳೆಯಿಂದ ಹಳ್ಳದ ಪ್ರದೇಶದ ಹೊಲಗಳಲ್ಲಿನ ಬೆಳೆ ಹಾಳಾಗಿದೆ. ಬೆಳೆ ಸಮಯದಲ್ಲಿ ಮಳೆ ಬಿಡುವು ಕೊಡದೆ ಸುರಿದಿದ್ದರಿಂದ ಶೇ 75ರಷ್ಟು ಈರುಳ್ಳಿ ನೆಲದ ಪಾಲಾಗಿದೆ. ಹತ್ತಿ ಬೆಳೆಗೂ ಪ್ರತಿಕೂಲ ಪರಿಣಾಮ ಉಂಟಾಗಿದೆ ಎನ್ನುತ್ತಾರೆ ರೈತರು.
ವಾಡಿಕೆಗಿಂತ ಹೆಚ್ಚು ಮಳೆ
‘ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಹೀಗಾಗಿ ಬಿತ್ತನೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಹಿಂಗಾರು ಬೆಳೆಗಳ ಬಿತ್ತನೆಗೆ ಅಗತ್ಯವಾದ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. 1600 ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಇದ್ದು. ಪ್ರಸ್ತುತ 1700 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಸತತ ಮಳೆಗೆ ಕೆಲವೆಡೆ ಹತ್ತಿಯ ಕಾಯಿಗಳು ಬಿದ್ದಿವೆ. ಈರುಳ್ಳಿ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ.
‘ನವಲಗುಂದ ತಾಲ್ಲೂಕಿನಲ್ಲಿ ಇಲ್ಲಿಯವರೆಗೂ 588 ಮಿ.ಮೀ. ಮಳೆ ಸುರಿಯಬೇಕಿತ್ತು. 595 ಮಿ.ಮೀ ಮಳೆಯಾಗಿದ್ದು ಶೇ 7ರಷ್ಟು ಹೆಚ್ಚಿಗೆಯಾಗಿದೆ. ಅಣ್ಣಿಗೇರಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೂ 605 ಮಿ.ಮೀ. ಮಳೆ ಸುರಿಯಬೇಕಿತ್ತು. 470 ಮಿ.ಮೀ ಮಳೆಯಾಗಿದ್ದು ಶೇ 135ರಷ್ಟು ಕಡಿಮೆಯಾಗಿದೆ. ಅಣ್ಣಿಗೇರಿ ನವಲಗುಂದ ತಾಲ್ಲೂಕುಗಳಲ್ಲಿ ಹಿಂಗಾರು ಹಂಗಾಮಿನಲ್ಲಿ 76500 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 8020 ಹೆಕ್ಟೇರ್ ಬಿತ್ತನೆಯಾಗಿದೆ‘ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ.ವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.