ADVERTISEMENT

ಹವಾಮಾನ ವೈಪರೀತ್ಯ ತಡೆಗೆ ಶ್ರಮಿಸಿ: ಅಮೆರಿಕದ ಪ್ರಾಧ್ಯಾಪಕ ಶ್ರೀನಿವಾಸ ಕುಲಕರ್ಣಿ

ಐಐಟಿ 5ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 16:00 IST
Last Updated 22 ಜುಲೈ 2024, 16:00 IST
ಧಾರವಾಡದಲ್ಲಿ ನಡೆದ ಐಐಟಿ ಘಟಿಕೋತ್ಸದಲ್ಲಿ ಪ್ರೊ.ಶ್ರೀನಿವಾಸ ಆರ್. ಕುಲಕರ್ಣಿ ಅವರು ಬಿ.ಟೆಕ್‌ನಲ್ಲಿ ರಾಷ್ಟ್ರಪತಿ ಪದಕ ಪಡೆದ ಶಶಾಂಕ್‌ ಪಿ. ಅವರಿಗೆ ಪ್ರಮಾಣ ಪತ್ರ ಪದಾನ ಮಾಡಿದರು
ಧಾರವಾಡದಲ್ಲಿ ನಡೆದ ಐಐಟಿ ಘಟಿಕೋತ್ಸದಲ್ಲಿ ಪ್ರೊ.ಶ್ರೀನಿವಾಸ ಆರ್. ಕುಲಕರ್ಣಿ ಅವರು ಬಿ.ಟೆಕ್‌ನಲ್ಲಿ ರಾಷ್ಟ್ರಪತಿ ಪದಕ ಪಡೆದ ಶಶಾಂಕ್‌ ಪಿ. ಅವರಿಗೆ ಪ್ರಮಾಣ ಪತ್ರ ಪದಾನ ಮಾಡಿದರು    

ಧಾರವಾಡ: ‘ಹವಾಮಾನ ವೈಪರೀತ್ಯ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದೆ. ನೈಸರ್ಗಿಕ ವಿಕೋಪ ತಡೆಯುವ ತಂತ್ರಜ್ಞಾನ ಆವಿಷ್ಕರಿಸಲು ಐಐಟಿಯಲ್ಲಿ ತರಬೇತಿ ಪಡೆದ ಎಂಜಿನಿಯರ್‌ಗಳು, ವಿಜ್ಞಾನಿಗಳು ಮುಂದಾಗಬೇಕು’ ಎಂದು ಅಮೆರಿಕದ ಖಗೋಳ ವಿಜ್ಞಾನ ಮತ್ತು ಗೃಹ ವಿಜ್ಞಾನ ಪ್ರಾಧ್ಯಾಪಕ ಶ್ರೀನಿವಾಸ ಆರ್. ಕುಲಕರ್ಣಿ ಹೇಳಿದರು.

ನಗರದ ಐಐಟಿಯ ಕೇಂದ್ರೀಯ ಕಲಿಕಾ ಸಭಾಂಗಣದಲ್ಲಿ ಸೋಮವಾರ ನಡೆದ ಐದನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಮೂರು ದಶಕಗಳಲ್ಲಿ ದಕ್ಷಿಣ ಏಷ್ಯಾ ಭಾಗದಲ್ಲಿ ತಾಪಮಾನ 3‌ ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನು ಎದುರಿಸಲು ಪಾಕಿಸ್ತಾನ, ಭಾರತ, ಬಾಂಗ್ಲಾ ಸನ್ನದ್ಧವಾಗಬೇಕು’ ಎಂದರು.

ADVERTISEMENT

‘ವಿಜ್ಞಾನದ ಬೆಳವಣಿಗೆಗೆ ಭಾರತೀಯರು ಅಪಾರ ಕೊಡುಗೆ ನೀಡಿದ್ದಾರೆ. ಥರ್ಟಿ ಮೀಟರ್‌ ಟೆಲಿಸ್ಕೋಫ್‌ (ಟಿಎಂಟಿ) ಯೋಜನೆಯಡಿ ಹಲವು ಭಾರತೀಯ ವಿಜ್ಞಾನಿಗಳು ಕಾರ್ಯೋನ್ಮುಖರಾಗಿದ್ದಾರೆ. 2035ರ ಹೊತ್ತಿಗೆ ಯೋಜನೆ ಸಾಕಾರಗೊಳ್ಳುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಧಾರವಾಡ ಐಐಟಿ ನಿರ್ದೇಶಕ ವೆಂಕಪ್ಪಯ್ಯ ಆರ್‌. ದೇಸಾಯಿ ಮಾತನಾಡಿ, ‘ರೈತರಿಗೆ ಕಡಿಮೆ ಖರ್ಚಿನಲ್ಲಿ ಜಲ ಮತ್ತು ವಿದ್ಯುತ್‌ ಶಕ್ತಿ ಸಿಗುವ ಪರಿಹಾರೋಪಾಯಗಳನ್ನು ರೂಪಿಸಲು ಧಾರವಾಡದ ಐಐಟಿ ಗಮನ ಹರಿಸಿದೆ. ವಿದ್ಯಾರ್ಥಿಗಳು, ಬೋಧಕರು ಯೋಜನೆ ತಯಾರಿಯಲ್ಲಿ ತೊಡಗಿದ್ದಾರೆ’ ಎಂದು ತಿಳಿಸಿದರು.

‘ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ‘ಚಿಪ್‌ ಟು ಸ್ಟಾರ್ಟ್‌ ಅಪ್‌’ ಯೋಜನೆಯಡಿ ಧಾರವಾಡ ಐಐಟಿಗೆ ₹ 5 ಕೋಟಿ ಅನುದಾನ ಮಂಜೂರು ಮಾಡಿದೆ. ‌‘ಟೈರ್‌ ಪ್ರೆಷರ್‌ ಮೊನಿಟರಿಂಗ್‌ ಚಿಪ್‌’ ವಿನ್ಯಾಸಗೊಳಿಸುವ ಯೋಜನೆಗೆ ಆರ್ಯಭಟ ಸರ್ಕಿಟ್ಸ್‌ ಅಂಗಡ್‌ ರೀಸರ್ಚ್‌ (ಎಬಿಸಿಆರ್‌) ಲ್ಯಾಬ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಸಹಭಾಗಿತ್ವ ಇದೆ’ ಎಂದರು.

ಬಿ.ಟೆಕ್‌ ಪದವಿ: ಪದಕ ಪಡೆದವರು ಇಬ್ಬರಿಗೆ ಚಿನ್ನದ ಪದಕ: ಶಶಾಂಕ್‌ ಪಿ. (ಕಂಪ್ಯೂಟರ್‌ ಸೈನ್ಸ್‌)–ರಾಷ್ಟ್ರಪ‌ತಿ ಚಿನ್ನದ ಪ‍ದಕ. ಆದಿತ್ಯ ಕಲ್ಯಾಣಿ‌ (ಎಲೆಕ್ಟ್ರಿಕಲ್‌ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌)– ನಿರ್ದೇಶಕರ ಚಿನ್ನದ ಪದಕ. ಮೂವರಿಗೆ ಸಂಸ್ಥೆ ಬೆಳ್ಳಿ ಪದಕ: ಲೋಕೇಶ್‌ ಬಿ. ಜೋಗಿ (ಮೆಕ್ಯಾನಿಕಲ್ ಮೆಟೀರಿಯಲ್ಸ್‌ ಆ್ಯಂಡ್‌ ಏರೋಸ್ಪೇಸ್‌) ಪಿ.ನಿತಿನ್‌ ಶ್ರೀನಿವಾಸ್‌ (ಎಲೆಕ್ಟ್ರಿಕಲ್‌ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌) ಹಾಗೂ ಅರವಿಂದ ಕುಮಾರ್‌ ಎಂ (ಕಂಪ್ಯೂಟರ್‌ ಸೈನ್ಸ್‌) . ಓಂ ಪ್ರಕಾಶ್‌ ಗೋಯಲ್‌ ಅಂಡ್‌ ಸೇವತಿ ದೇವಿ ಗೋಯಲ್‌ ಪುರಸ್ಕಾರ– ಕವಳಿ ಶ್ರೀವೈಷ್ಣವಿ ದೇವಿ (ಕಂಪ್ಯೂಟರ್‌ ಸೈನ್ಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.