ಅಳ್ನಾವರ: ಸಮೀಪದ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ತುಂಬಿ ಕೋಡಿ ಬಿದ್ದಿದೆ. ಕೆರೆ ಕೋಡಿಯಿಂದ ನೀರು ಹರಿಯುತ್ತಿರುವ ದೃಶ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೆರೆಗೆ ಬರುತ್ತಿದ್ದಾರೆ.
ಕೆರೆ ಕೋಡಿಯಲ್ಲಿ ನಿರ್ಮಿಸಿರುವ ಮೆಟ್ಟಿಲುಗಳಿಂದ ನೀರುವ ಹರಿಯುವ ದೃಶ್ಯ ಜಲಪಾತದಂತೆ ಕಾಣುತ್ತಿದೆ. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಮಂಗಳವಾರ ಕೆರೆಗೆ ಭೇಟಿ ನೀಡಿ ನೀರಿನ ಮಟ್ಟ ವೀಕ್ಷಿಸಿತು.
2019ರಲ್ಲಿ ಕೆರೆಗೆ ಹೆಚ್ಚು ನೀರು ಬಂದ ಪರಿಣಾಮ ಕೆರೆಯ ಕೋಡಿ ಒಡೆದು ಅಪಾರ ಪ್ರಮಾಣ ನೀರು ಹರಿದು ಹೋಗಿತ್ತು. ಅಳ್ನಾವರ ಪಟ್ಟಣದ ಹಲವು ಬಡವಾಣೆಗಳಿಗೆ ನೀರು
ನುಗ್ಗಿ ಸಾಕಷ್ಟು ತೊಂದರೆಯಾಗಿತ್ತು. ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆರೆ ಕೋಡಿಗೆ ಕಟ್ಟೆ ನಿರ್ಮಿಸಲಾಗಿತ್ತು. ಆ ನಂತರ ಇದೇ ಮೊದಲ ಬಾರಿಗೆ ಕೆರೆ ತುಂಬಿ ಕೋಡಿ ಹರಿದಿದೆ.
51.08 ಕಿ.ಮೀ ಪ್ರದೇಶದಲ್ಲಿರುವ ಕೆರೆ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ವಿಸ್ತರಿಸಿಕೊಂಡಿದೆ. ಎರಡೂ ಜಿಲ್ಲೆಗಳ 1,208 ಹೇಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಇದು ಧಾರಡಾಡ ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ಕೆರೆ.
ಕೋಡಿಯ ಹೊಸ ಕಟ್ಟೆಯನ್ನು ₹9.40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಡದಂಡೆ ಹಾಗೂ ಬಲದಂಡೆ ಕಾಲುವೆಗಳು ಅತಿವೃಷ್ಟಿಯಿಂದ ಹಾಳಾಗಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಆರ್.ಎಸ್. ಪಾಟೀಲ ತಿಳಿಸಿದರು.
ಪುಷ್ಕರಣೆ ಮಾದರಿಯಲ್ಲಿ ಕೋಡಿ ಕಟ್ಟೆ ನಿರ್ಮಿಸಲಾಗಿದೆ. ಕೆರೆ ತುಂಬಿದಾಗ ಹೆಚ್ಚುವರಿ ನೀರು ರಭಸವಾಗಿ ಹರಿಯುವುದನ್ನು ತಡೆಯಲು ಹಾಗೂ ನೀರು ತಡೆದು ಬರುವಂತೆ ಮಾಡಲು ವಿಶೇಷ ವಿನ್ಯಾಸದಲ್ಲಿ ಕಟ್ಟೆ ಕಟ್ಟಲಾಗಿದೆ ಎಂದರು.
ಅಳ್ನಾವರ ಪಟ್ಟಣಕ್ಕೆ ಕಾಳಿ ನದಿಯಿಂದ ನೀರು ಬರುವ ಮುಂಚೆ ಪ್ರತಿ ಬೇಸಿಗೆಯಲ್ಲಿ ಈ ಕೆರೆಯ ನೀರನ್ನು ಕುಡಿಯಲು ಬಿಡಿಸಿಕೊಂಡು, ಸಂಗ್ರಹ ಮಾಡಲಾಗುತ್ತಿತ್ತು. ಬೇಸಿಗೆಯಲ್ಲಿ ಡೌಗಿ ನಾಲಾ ಸಂಪೂರ್ಣ ಬತ್ತಿದ ನಂತರ ಕೆರೆಯ ನೀರನ್ನು ಕುಡಿಯಲು ಬಳಸಲಾಗುತ್ತಿತ್ತು.
ಕೆರೆಗೆ ಭೇಟಿ ನೀಡಿದ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾತನಾಡಿ, ‘ಈ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಸೋಮವಾರ 71.66 ಮಿ.ಮೀ ಮಳೆಯಾಗಿದೆ. ಈ ಭಾಗದ ರೈತರು ಕೆರೆಯ ಸಮೀಪ ತಮ್ಮ ಜಾನುವಾರುಗಳನ್ನು ಬಿಡಬಾರದು. ಕೆರೆಯಲ್ಲಿ ಈಜುವುದು, ಬಟ್ಟೆ ತೊಳೆಯುವುದು ಮತ್ತು ಕೆರೆಯನ್ನು ದಾಟುವುದನ್ನು ನಿಷೇಧಿಸಲಾಗಿದೆ’ ಎಂದು ತಿಳಿಸಿದರು.
ಕಾಲುವೆ ನಿರ್ಮಿಸಲು ಆಗ್ರಹ
ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇದೆ. ಆದರೆ ನೀರನ್ನು ಹೊಲಗಳಿಗೆ ಹಾಯಿಸಲು ಸರಿಯಾದ ಕಾಲುವೆ ಇಲ್ಲ. ನೀರು ಕೃಷಿ ಬಳಕೆಗೆ ದೊರೆಯದೆ ತೊಂದರೆಯಾಗಿದೆ. ಕಾಲುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದರೂ ಕೆಲಸ ಆರಂಭವಾಗಿಲ್ಲ. ಕೂಡಲೇ ಕಾಲುವೆ ನಿರ್ಮಿಸಿ ಜಮೀನುಗಳಿಗೆ ನೀರು ಹರಿಸಬೇಕು ಎಂದು ರೈತ ಶಿವಾಜಿ ಡೊಳ್ಳಿನ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.