ಹುಬ್ಬಳ್ಳಿ: ಜನರ ಪಾಲಿಗೆ ವಿಶ್ರಾಂತಿ ತಾಣ ಮತ್ತು ಮಕ್ಕಳಿಗೆ ವೈವಿಧ್ಯಮಯ ಮನರಂಜನೆಯ ಸ್ಥಳವಾಗಬೇಕಿದ್ದ ಇಲ್ಲಿನ ಇಂದಿರಾ ಗಾಜಿನ ಮನೆಯ ಉದ್ಯಾನವು ಅಕ್ಷರಶಃ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಅವಳಿನಗರದ ನಿವಾಸಿಗಳಿಗೆ ಸುಂದರ ಜಾಗ ಆಗಬೇಕಿದ್ದ ಆವರಣವು ಸಂಪೂರ್ಣ ಗಲೀಜುಮಯವಾಗಿ ಮಾರ್ಪಟ್ಟಿದೆ.
ಇಂದಿರಾ ಗಾಜಿನ ಮನೆಯು ಸೇರಿ ಉದ್ಯಾನವು ಅಭಿವೃದ್ಧಿಗೊಂಡ ಆರಂಭದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಲು ಜನರಲ್ಲಿ ಉತ್ಸಾಹ ಕಂಡು ಬರುತಿತ್ತು. ಮೃಗಾಲಯ, ಬಗೆಬಗೆಯ ಹೂಗಳ ತೋಟ, ಗ್ರಂಥಾಲಯ ಸೇರಿದಂತೆ ವಿವಿಧ ಆಕರ್ಷಣೆಯ ಕಾರಣಗಳಿದ್ದವು. ಆದರೆ, ಈಗ ಅವು ಯಾವುದೂ ಕೂಡ ಉಳಿದಿಲ್ಲ.
ಪ್ರವೇಶದ್ವಾರದಿಂದ ಆರಂಭಗೊಂಡು ಉದ್ಯಾನದ ಯಾವ ದಿಕ್ಕಿನಲ್ಲೂ ಅಲ್ಲಲ್ಲಿ ತ್ಯಾಜ್ಯದ ರಾಶಿ ಇಲ್ಲವೇ ಸ್ವಚ್ಛತೆ ಕಾಣದ ಸ್ಥಳವನ್ನು ನೋಡಬಹುದು. ಹಲವು ವರ್ಷಗಳಿಂದ ಉದ್ಯಾನವು ಸಮರ್ಪಕವಾಗಿ ನಿರ್ವಹಣೆ ಕಾಣದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲಿನ ‘ಅವ್ಯವಸ್ಥೆಯ ಆಗರ’ ಕಂಡು ಜನರಿಗೂ ಬೇಸರವಾಗಿದೆ.
‘ಮೊದಲೆಲ್ಲ ಈ ಉದ್ಯಾನಕ್ಕೆ ಬಂದರೆ, ಖುಷಿಯಾಗುತಿತ್ತು. ಎಲ್ಲೆಡೆ ಹಸಿರು ವಾತಾವರಣ ಇರುವುದರಿಂದ ನಿರಾಳಭಾವ ವ್ಯಕ್ತವಾಗುತಿತ್ತು. ಮಕ್ಕಳು ಒಂದೆಡೆ ಆಟವಾಡುತ್ತಿದ್ದರೆ, ಹಿರಿಯರು ಇನ್ನೊಂದೆಡೆ ಕೂತು ದೀರ್ಘಕಾಲದವರೆಗೆ ಚರ್ಚಿಸಲು ಅವಕಾಶ ಇರುತಿತ್ತು. ತಂಪಾದ ಗಾಳಿ ಬೀಸುತಿತ್ತು. ಆದರೆ, ಈಗ ದುರ್ವಾಸೆ ಬರುತ್ತದೆ. ಎಲ್ಲಿ ನೋಡಿದರಲ್ಲಿ ಗಲೀಜು ಕಂಡು ಬರುತ್ತದೆ’ ಎಂದು ನಗರದ ನಿವಾಸಿ ಎಂ.ಶ್ರೀಕಂಠಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೂರು–ನಾಲ್ಕು ಕಡೆ ಕುಡಿಯುವ ನೀರಿನ ವ್ಯವಸ್ಥೆ ಇರುತಿತ್ತು. ಕೈ ತೊಳೆದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇತ್ತು. ಆದರೆ, ಈಗ ಯಾವ ದಿಕ್ಕಿನಲ್ಲಿ ಹೋದರೂ ಕುಡಿಯಲು ನೀರು ಸಿಗಲ್ಲ. ಒಂದೆಡೆ ಎಲ್ಲರೂ ಜೊತೆಗೂಡಿ ಊಟ ಮಾಡಲು ಶುಚಿಯಾದ ಸ್ಥಳವೂ ಇಲ್ಲ ಎಂಬುದೇ ಬೇಸರದ ಸಂಗತಿ’ ಎಂದು ಅವರು ವಿವರಿಸಿದರು.
‘ಮಕ್ಕಳ ಆಟಿಕೆ ವಸ್ತುಗಳು ಪಾಳು ಬಿದ್ದಿವೆ. ಕೆಲವು ಮುರಿದು ಹೋಗಿವೆ. ಅವು ಯಾವಾಗ ಕುಸಿದು ಬೀಳುತ್ತಾವೋ ಗೊತ್ತಿಲ್ಲ. ಜೋಕಾಲಿ, ಜಾರುಗುಂಡಿ, ಕಸರತ್ತು ಮಾಡುವ ಆಟಿಕೆಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಅವುಗಳೇ ಸರಿ ಇಲ್ಲದಿರುವಾಗ, ಮಕ್ಕಳು ಆಡುವುದಾದರೂ ಹೇಗೆ’ ಎಂದು ಉಣಕಲ್ ನಿವಾಸಿ ಸಲ್ಮಾ ಬೇಗಂ ಹೇಳಿದರು.
‘ಇಲ್ಲಿ ಹೆಸರಿಗೆ ಮಾತ್ರ ಮಕ್ಕಳ ರೈಲು ಇದ್ದು, ಉದ್ಘಾಟನೆಗೊಂಡ ದಿನವೇ ಅದು ಕೆಟ್ಟು ನಿಂತಿತು. ಇದುವರೆಗೆ ದುರಸ್ತಿ ಆಗಿಲ್ಲ. ಯಾರೂ ಕೂಡ ಅದರ ಜವಾಬ್ದಾರಿ ಕೂಡ ತೆಗೆದುಕೊಂಡಿಲ್ಲ. ರೈಲು ಸಂಚಾರಕ್ಕೆ ಹಾಕಲಾಗಿದ್ದ ಹಳಿಯು ಕೂಡ ತುಕ್ಕು ಹಿಡಿದಿದೆ. ಎಲ್ಲಿ ನೋಡಿದರಲ್ಲಿ, ಹುಲ್ಲು ಬೆಳೆದಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಕೇಟಿಂಗ್ ಮೈದಾನ, ಕಾರಂಜಿ ಮುಂತಾದವು ಅಭಿವೃದ್ಧಿ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಅದು ಕೂಡ ಈಡೇರಿಲ್ಲ. ಇರುವ ಒಂದು ಗಾಜಿನ ಮನೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.