ADVERTISEMENT

ನೈರುತ್ಯ ರೈಲ್ವೆ ಇಲಾಖೆಯಿಂದ ಅನ್ಯಾಯ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 14:17 IST
Last Updated 7 ಮಾರ್ಚ್ 2024, 14:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಬ್ಬಳ್ಳಿ: ‘ನೈರುತ್ಯ ರೈಲ್ವೆ ವಲಯವು ಡಿಪ್ಲೊಮಾ ಪದವೀಧರರಿಗೆ ಒಂದು ವರ್ಷದ ಅಪ್ರೆಂಟಿಶಿಪ್ ತರಬೇತಿ ನೀಡಿ, ಬಳಿಕ ನೇಮಕಾತಿ ಮಾಡಿಕೊಳ್ಳದೆ ಅನ್ಯಾಯ ಮಾಡುತ್ತಿದೆ’ ಎಂದು ಕನ್ನಡ ಕ್ರಾಂತಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಎಂ. ಆರೋಪಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಪ್ರೆಟಿಶಿಪ್ ತರಬೇತಿ ಪಡೆದ ಡಿಪ್ಲೊಮಾ ಪದವೀಧರರಿಗೆ ಉದ್ಯೋಗ ನೀಡಲು 2010ರಲ್ಲಿ ರೈಲ್ವೆ ಬೋರ್ಡ್ ಆದೇಶ ಹೊರಡಿಸಿತ್ತು. ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿಭಾಗ ಹೊರತುಪಡಿಸಿ ಉಳಿದ ವಲಯದಲ್ಲಿ ರೈಲ್ವೆ ಬೋರ್ಡ್ ಆದೇಶದಂತೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಆದರೆ, ನೈರುತ್ಯ ರೈಲ್ವೆ ವಲಯ ಮಾತ್ರ ಈ ಬಗ್ಗೆ ಸ್ಪಷ್ಟೀಕರಣ ಕೇಳಿ ರೈಲ್ವೆ ಬೋರ್ಡ್‌ಗೆ ಪತ್ರ ಬರೆದಿದೆ. ಇದಕ್ಕೆ ರೈಲ್ವೆ ಬೋರ್ಡ್ 2012ರಲ್ಲಿ ಸ್ಪಷ್ಟೀಕರಣ ನೀಡಿದ್ದು, ಪ್ರಕ್ರಿಯೆ ಪೂರ್ಣಗೊಳಿಸಲು ಸ್ಥಳೀಯ ರೈಲ್ವೆ ಜನರಲ್ ಮ್ಯಾನೇಜರ್‌ಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಅವರು ನೇಮಕಾತಿ ಪ್ರಕ್ರಿಯೆಗೆ ಆದೇಶ ಹೊರಡಿಸಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ನೈರುತ್ಯ ರೈಲ್ವೆ ಇಲಾಖೆಯ ಈ ನಿರ್ಧಾರದಿಂದಾಗಿ ನೂರಾರು ಅಭ್ಯರ್ಥಿಗಳು ನಿರುದ್ಯೋಗಿಗಳಾಗುವಂತಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆ ನಡೆಸಿ, ಡಿಪ್ಲೊಮಾ ಪದವೀಧರರಿಗೆ ನ್ಯಾಯ ಒದಗಿಸಬೇಕು. ಈ ಕುರಿತು ಮಾರ್ಚ್ 8ರಿಂದ ಪತ್ರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರವಿ ಕಮ್ಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.