ADVERTISEMENT

ಕೈಗಾರಿಕೋದ್ಯಮಿಗಳನ್ನು ಸೆಳೆಯಲು ಸೂಚನೆ

ಜಿಲ್ಲಾ ಕೈಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಸಚಿವ ಶೆಟ್ಟರ್‌ ಮೊದಲ ಸಭೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 10:53 IST
Last Updated 29 ಆಗಸ್ಟ್ 2019, 10:53 IST
ಹುಬ್ಬಳ್ಳಿಯಲ್ಲಿ ಗುರುವಾರ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅಧಿಕಾರಿಗಳ ಸಭೆ ನಡೆಸಿದರು
ಹುಬ್ಬಳ್ಳಿಯಲ್ಲಿ ಗುರುವಾರ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅಧಿಕಾರಿಗಳ ಸಭೆ ನಡೆಸಿದರು   

ಹುಬ್ಬಳ್ಳಿ: ಕೈಗಾರಿಕೆಗಳನ್ನು ಸ್ಥಾಪಿಸಲು ಜಿಲ್ಲೆಯಲ್ಲಿ ಎಲ್ಲ ಸೌಲಭ್ಯಗಳೂ ಇವೆ,ಆದ್ದರಿಂದ ಕೈಗಾರಿಕೋದ್ಯಮಿಗಳನ್ನು ಸೆಳೆಯಲು ಅಧಿಕಾರಿಗಳು ಸನ್ನದ್ಧರಾಗಬೇಕು. ಉದ್ಯಮಿಗಳು ಆಸಕ್ತಿ ತೋರಿಸಿದರೆ ಸಹಕಾರ ನೀಡಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಸೂಚಿಸಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಯ ಕೈಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದರು. ಬೆಂಗಳೂರಿನಲ್ಲಿ ಆ. 30ರಂದು ಇಲಾಖೆ ಅಧಿಕಾರಿಗಳ ಜೊತೆ ರಾಜ್ಯ ಮಟ್ಟದ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರು ಇಲ್ಲಿ ಸಭೆ ಮಾಡಿ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದರು.

‘ಜಿಲ್ಲೆಯಲ್ಲಿ ಬಸ್‌, ರೈಲ್ವೆ ಮತ್ತು ವಿಮಾನಯಾನ ಸೌಲಭ್ಯವಿದೆ. ಮೂಲ ಸೌಕರ್ಯ ಕಲ್ಪಿಸಲು ಸ್ಥಳೀಯ ಆಡಳಿತ ಬದ್ಧವಾಗಿದೆ. ಆದ್ದರಿಂದ ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಸ್ಥಳೀಯವಾಗಿ ನೆರವು ಸಿಗದ ಕಾರಣ ಹಿಂದೆ ಅನೇಕ ಉದ್ಯಮಿಗಳು ಜಿಲ್ಲೆಗೆ ಬಂದು ವಾಪಸ್‌ ಹೋಗಿದ್ದಾರೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

‘ಬೆಂಗಳೂರು ಸುತ್ತಮುತ್ತಕೈಗಾರಿಕೆಗಳನ್ನು ಆರಂಭಿಸಿದರೆ ಮಾತ್ರ ಪ್ರೋತ್ಸಾಹ ಸಿಗುತ್ತದೆ ಎನ್ನುವ ನಂಬಿಕೆ ಅನೇಕ ಉದ್ಯಮಿಗಳಲ್ಲಿ ಇದೆ. ಆದ್ದರಿಂದ ಅವರೆಲ್ಲ ಅಲ್ಲಿಯೇ ಜಾಗ ಹುಡುಕುತ್ತಾರೆ. ಆದ್ದರಿಂದ ನಮ್ಮಲ್ಲಿಯೂ ಉದ್ಯಮಿ ಸ್ನೇಹಿ ವಾತಾವರಣ ರೂಪಿಸಬೇಕು. ಎಲ್ಲ ಕಡೆ ಉದ್ಯೋಗ ಕಡಿತ ಆಗುತ್ತಿರುವ ಕಾರಣ ಕೈಗಾರಿಕೆ ಸ್ಥಾಪಿಸುವ ಆಸಕ್ತಿ ಇರುವ ಉದ್ಯಮಿಗಳಿಗೆ ನೆರವು ನೀಡುವುದು ತುರ್ತು ಅಗತ್ಯವಾಗಿದೆ’ ಎಂದರು.

ಇದೇ ವೇಳೆ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ‘ಜಿಲ್ಲೆಯಲ್ಲಿ ಒಟ್ಟು 38,222 ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿದ್ದು, 2,16,727 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈ ವರ್ಷ 5,166 ಸಣ್ಣ ಕೈಗಾರಿಕೆಗಳು ಸ್ಥಾಪನೆಗೊಂಡಿದ್ದು, ₹ 674.46 ಕೋಟಿ ಬಂಡವಾಳ ಹೂಡಿಕೆಯಾಗಿದೆ. 27,059 ಜನರಿಗೆ ಉದ್ಯೋಗ ಸಿಕ್ಕಿವೆ’ ಎಂದರು.

‘ಕೆ.ಐ.ಎ.ಡಿ.ಬಿ. ಜಿಲ್ಲೆಯಲ್ಲಿ ಒಟ್ಟು ಆರು ಕೈಗಾರಿಕಾ ಪ್ರದೇಶಗಳಿನ್ನು ಹೊಂದಿದ್ದು, 2,869 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 1,175 ಘಟಕಗಳಿಗೆ ಹಂಚಿಕೆಯಾಗಿದೆ. ಇದರಲ್ಲಿ 825 ಘಟಕಗಳು ಕಾರ್ಯಾರಂಭ ಮಾಡಿವೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಜಿಲ್ಲಾ ಪಂಚಾಯ್ತಿ ಸಿಇಒ. ಡಾ.ಬಿ.ಸಿ. ಸತೀಶ ಇದ್ದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಸಚಿವರಿಗೆ ನೀಡಿದ ಮಾಹಿತಿ

* ಕೆಎಸ್‌ಎಸ್‌ಐಡಿಸಿ ವತಿಯಿಂದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರಿಗೆ 19 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಹಂಚಿಕೆ ಕಾರ್ಯ ಬಾಕಿಯಿದೆ.

* ಹುಬ್ಬಳ್ಳಿ–ಅಮರಗೋಳದಲ್ಲಿ ಶಾಶ್ವತ ವಿವಿದೊದ್ದೇಶ ವಸ್ತು ಪ್ರದರ್ಶನ ಕೇಂದ್ರವನ್ನು ₹ 7 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಇದುವರೆಗೆ ₹ 4.97 ಕೋಟಿ ಅನುದಾನ ಸರ್ಕಾರದಿಂದ ಬಂದಿದೆ. ಪರಿಷ್ಕೃತ ಹೆಚ್ಚುವರಿ ಅಂದಾಜು ವೆಚ್ಚ ₹ 2.93 ಕೋಟಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಬೇಕಿದೆ.

* ಕೋಟೂರು–ಬೇಲೂರು ಕೈಗಾರಿಕಾ ಪ್ರದೇಶದಲ್ಲಿ 594.36 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ.

* ಬೇಲೂರು, ಲಕ್ಕಮನಹಳ್ಳಿ, ರಾಯಾಪುರ, ಸತ್ತೂರ, ತಾರಿಹಾಳ, ಗೋಕುಲ ರಸ್ತೆ ಪ್ರದೇಶದಲ್ಲಿ ಕೆ.ಜೆ.ಪಿ. ಆಗದೇ ಇರುವುದರಿಂದ ಕೈಗಾರಿಕೋದ್ಯಮಿಗಳಿಗೆ ಆರ್‌ಟಿಸಿಯಲ್ಲಿ ಹೆಸರು ನಮೂದಾಗುತ್ತಿಲ್ಲ. ಆದ್ದರಿಂದ ಕೆಐಎಡಿಬಿ ಮತ್ತು ಕೆಎಸ್‌ಎಸ್ಐಡಿಸಿ ಅಧಿಕಾರಿಗಳು ನಗರ ಯೋಜನೆ ರೂಪಿಸಿ ಕೆಜಿಪಿ ಮಾಡಿಕೊಡಬೇಕು ಎಂದು ಉದ್ಯಮಿಗಳು ಒತ್ತಾಯಿಸಿದ್ದಾರೆ.

* ಬೇಲೂರು, ಗಾಮನಗಟ್ಟಿ, ರಾಮನಕೊಪ್ಪ, ಗೋಕುಲ ರಸ್ತೆಯ ಎಂ.ಟಿ. ಸಾಗರ, ಲಕ್ಕಮನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಬೇಕು.

6,388 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ

ಜಿಲ್ಲೆಯಲ್ಲಿ ಕೆಐಎಬಿಡಿ ವತಿಯಿಂದ ಕೈಗಾರಿಕೆಗಳಿಗೆ ‌6,388 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಬೇಲೂರು–ಕೋಟೂರು ವ್ಯಾಪ್ತಿಯಲ್ಲಿ 594 ಎಕರೆ, ಗಾಮನಗಟ್ಟಿ ಇಟಿಗಟ್ಟಿಯಲ್ಲಿ 590 ಎಕರೆ, ಶಿಂಗನಹಳ್ಳಿಯಲ್ಲಿ 302 ಎಕರೆ, ಶಿಂಗನಹಳ್ಳಿ–ಕುಮಾರಕೊಪ್ಪದಲ್ಲಿ 610 ಎಕರೆ, ಚಿಕ್ಕಮಲ್ಲಿಗವಾಡದಲ್ಲಿ 591 ಎಕರೆ, ದುರ್ಗದ ಕೇರೆಯಲ್ಲಿ 3,700 ಎಕರೆ ಸ್ವಾಧೀನಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಡ್ಡಿ ಜೊತೆಗೆ ಅಸಲು ಮನ್ನಾ ಮಾಡಲು ಒತ್ತಾಯ

ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗದ ಕಾರಣ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆಯ ಬಡ್ಡಿ ಹಣ ₹ 9.2 ಕೋಟಿ ಇದೆ. ಇದನ್ನು ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದು, ಆದರೆ ಇನ್ನೂ ಆದೇಶ ಬಂದಿಲ್ಲ. ಆದ್ದರಿಂದ ಉದ್ಯಮಿಗಳು ಅಸಲನ್ನೂ ಮನ್ನಾ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಶೆಟ್ಟರ್‌ ಅವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌ ‘ಮುಂದಿನ ವಾರದಲ್ಲಿ ಉದ್ಯಮಿಗಳ ಜೊತೆ ಸಭೆ ನಡೆಸುತ್ತೇನೆ’ ಎಂದರು.

ನಿವೇಶನ ದರ ಹೆಚ್ಚಳ; ಉದ್ಯಮಿಗಳಿಗೆ ಸಂಕಷ್ಟ

ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕೆ.ಐ.ಎ.ಡಿ.ಬಿ. ಸಂಸ್ಥೆಯ ಮಾರುಕಟ್ಟೆ ದರ ಪ್ರತಿ ಎಕರೆಗೆ ₹ 65 ಲಕ್ಷವಿದ್ದು, ಕೆಎಸ್‌ಎಸ್‌ಐಡಿಸಿ ದರ ₹ 3 ಕೋಟಿ ಇದೆ. ಆದರೆ, ಈಗಿನ ಮಾರುಕಟ್ಟೆ ದರ ₹ 1 ಕೋಟಿಯಿದೆ. ಇದರಿಂದ ಸಣ್ಣ ಕೈಗಾರಿಕೆಗಳ ಉದ್ಯಮಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೆಎಸ್‌ಎಸ್‌ಐಡಿಸಿ ದರ ಪುನರ್‌ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.