ಹುಬ್ಬಳ್ಳಿ: ‘ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಪಾಕಿಸ್ತಾನದವರು ಸುಲಭವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ರಾಜ್ಯ ಪೊಲೀಸರಿಗೆ ಮಾಹಿತಿ ದೊರೆತ ತಕ್ಷಣ ಕೆಲವರನ್ನು ಬಂಧಿಸಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಬಳಿ ರಾ (ಆರ್‌ಎಡಬ್ಲು), ಕೇಂದ್ರ ಗುಪ್ತಚರ, ಸಿಬಿಐ ಅಂಥ ಏಜೆನ್ಸಿಗಳು ಇದ್ದಾಗಲೂ ರಾಜ್ಯಕ್ಕೆ ನುಸುಳುಕೋರರು ಬಂದು ಪಾಸ್‌ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದರೆ ಏಜೆನ್ಸಿಗಳು ವಿಫಲವಾಗಿವೆ ಎಂದರ್ಥ. ರಾಜ್ಯದ ಇತರೆಡೆಯೂ ಅವರು ವಾಸವಾಗಿದ್ದಾರೆ ಎನ್ನುವ ಮಾಹಿತಿಯಿದ್ದು, ಅವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ’ ಎಂದರು.
‘ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ’ ಎನ್ನುವ ಪ್ರತಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ, ‘ನಾವು ಯಾರ ಮೇಲೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಯಾರೇ ದೂರು ನೀಡಿದರೂ ಎಫ್‌ಐಆರ್ ಮಾಡಿಕೊಳ್ಳುತ್ತೇವೆ. ತನಿಖೆಯಲ್ಲಿ ಸತ್ಯಾಂಶ ಕಂಡು ಬಂದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ. ಪೊಲೀಸರಿಗೆ, ಲೋಕಾಯುಕ್ತಕ್ಕೆ ತನಿಖೆಗೆ ಕೊಟ್ಟಾಗ, ತನಿಖೆ ಪೂರ್ಣಗೊಳ್ಳುವವರೆಗೂ ಕಾಯಬೇಕು. ಪ್ರತಿಪಕ್ಷಗಳು ಸಕಾರಾತ್ಮಕವಾಗಿ ವಿಮರ್ಶೆ ಮಾಡಬೇಕು, ಅದನ್ನು ಮೀರಿ ಅವರು ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ರಾಜಕಾರಣ ಹೇಳಿಕೊಡಬೇಕಾ? ಅದಕ್ಕೆ ನಾವು ಸಹ ಪ್ರತ್ಯುತ್ತರ ನೀಡಲು ಸಮರ್ಥವಾಗಿದ್ದೇವೆ’ ಎಂದು ಹೇಳಿದರು.
‘ಎಫ್ಐಆರ್ ಆದವರೆಲ್ಲ ರಾಜೀನಾಮೆ ನೀಡಲಿ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ ಎಂದ ಮಾತ್ರಕ್ಕೆ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನಲು ಸಾಧ್ಯವಿಲ್ಲ. ಆ ಕುರಿತು ಹೆಚ್ಚಿನ ಮಾಹಿತಿಯಿಲ್ಲ’ ಎಂದು ಪರಮೇಶ್ವರ್ ಹೇಳಿದರು.
‘ಜಾತಿ ಗಣತಿ ನಡೆಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಆ ಕುರಿತು ಸದನದಲ್ಲಿ ಚರ್ಚೆ ನಡೆಯಲಿದ್ದು, ನಂತರ ಸರ್ಕಾರ ನಿರ್ಧಾರ ಪ್ರಕಟಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.