ADVERTISEMENT

ನೇಹಾ ಕೊಲೆ ಹಿಂದೆ ಪಿಎಫ್‌ಐ ಸಂಘಟನೆ ಕೈವಾಡವಿದೆಯೇ?: ಆರ್.‌ಅಶೋಕ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 5:23 IST
Last Updated 30 ಏಪ್ರಿಲ್ 2024, 5:23 IST
<div class="paragraphs"><p>ಆರ್.‌ಅಶೋಕ</p></div>

ಆರ್.‌ಅಶೋಕ

   

ಹುಬ್ಬಳ್ಳಿ: 'ನೇಹಾ ಕೊಲೆ ಮಾಡಿದ ಆರೋಪಿ ಫಯಾಜ್ ಹಿಂದೆ ಯಾರಿದ್ದಾರೆ, ಪಿಎಫ್ಐ ಸಂಘಟನೆ ಕೈವಾಡವಿದೆಯೇ? ಅಥವಾ ಅವನು ಮತಾಂತರಕ್ಕೆ ಒತ್ತಾಯ ಮಾಡಿದ್ದನೆ?' ಎನ್ನುವ ಕುರಿತು ತನಿಖೆಯಾಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.

ಮಂಗಳವಾರ ನೇಹಾ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಕೊಲೆ ಮಾಡುವ ಸಂದರ್ಭದಲ್ಲಿ ಆರೋಪಿ ಫಯಾಜ್ ಡ್ರಗ್ಸ್ ಸೇವನೆ ಮಾಡಿದ್ದನಾ? ಎನ್ನುವ ಕುರಿತು ತನಿಖೆಯಾಗಬೇಕು. ಯಾರೂ ಈ ಪ್ರಕರಣದಲ್ಲಿ ರಾಜಕೀಯ ಮಾಡಬಾರದು. ಸಿಐಡಿ ತನಿಖೆ ಬಗ್ಗೆ ನಂಬಿಕೆಯಿಲ್ಲ' ಎಂದರು.

ADVERTISEMENT

'ಬುಲೆಟ್ ಟ್ರೇನ್ ಓಡೋ ಸ್ಪೀಡ್ ಅಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಬೇಕು. ಫಯಾಜ್ ಹಿಂದೆ ಇರುವವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸದಿರುವುದನ್ನು ಗಮನಿಸಿದರೆ, ಕಾಣದ ಕೈವಾಡ ಇದೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಅವನಿಗೆ ಪೊಲೀಸ್ ಭಾಷೆಯಲ್ಲಿ ಟ್ರೀಟ್‌‌ಮೆಂಟ್ ಕೊಟ್ಟು ಸತ್ಯ ಬಾಯಿಬಿಡಿಸಬೇಕಿತ್ತು. ಅದ್ಯಾವುದೂ ಮಾಡದೆ ಪೊಲೀಸರು ಸುಮ್ಮನಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಇದೊಂದು ಭೀಕರ ಕೊಲೆಯಾಗಿದ್ದು, ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾವ ಮಾಡುತ್ತೇನೆ. ಇನ್ನುಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು. 15 ಸಾವಿರದಷ್ಟು ವಿದ್ಯಾರ್ಥಿಗಳು ಇರುವ ಕಾಲೇಜ್ ಆವರಣದಲ್ಲಿ ನೇಹಾ ಕೊಲೆ ಪ್ರಕರಣ ನಡೆದಿದ್ದರೂ, ಸರ್ಕಾರ ಈವರೆಗೆ ಕಾಲೇಜ್ ಆವರಣದ ಸುರಕ್ಷತೆ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಇದು ಲವ್ ಜಿಹಾದ್‌ಗಾಗಿ ನಡೆದ ಕೊಲೆ. ಪೊಲೀಸರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯದೆ, ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದು ಯಾಕೆ? ಅಲ್ಲಿ ಅವನನ್ನು ಯಾರ್ಯಾರು ಭೇಟಿಯಾಗಿದ್ದಾರೆ, ಏನೇನು ಹೇಳಿದ್ದಾರೆ? ಎನ್ನುವುದು ಸಹ ತನಿಖೆಯಾಗಬೇಕು. ಪೊಲೀಸರೇ ಅವನನ್ನು ರಕ್ಷಣೆ ಮಾಡಿ, ಮುಚ್ಚಿ ಹಾಕುವ ಯತ್ನ ನಡೆಸಿದ್ದರು' ಎಂದು ಆರೋಪಿಸಿದರು.

ಶಾಸಕರಾದ ಬಸವರಾಜ ಬೊಮ್ಮಾಯಿ, ಮಹೇಶ ಟೆಂಗಿನಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.