ADVERTISEMENT

ಹುಬ್ಬಳ್ಳಿ | ಮೂಲ ಸೌಲಭ್ಯಗಳಿಗೆ ಕಾದಿರುವ ಈಶ್ವರ ನಗರ

ಸಮರ್ಪಕವಾದ ರಸ್ತೆಗಳು, ಚರಂಡಿಗಳ ನಿರ್ಮಾಣಕ್ಕೆ ಒತ್ತಾಯ

ನಾಗರಾಜ ಚಿನಗುಂಡಿ
Published 23 ಅಕ್ಟೋಬರ್ 2024, 5:46 IST
Last Updated 23 ಅಕ್ಟೋಬರ್ 2024, 5:46 IST
ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಕಿತ್ತುಹೋದ ಸಿಸಿ ರಸ್ತೆಯು ತುಂತುರು ಮಳೆಯಿಂದಾಗಿ ಹೊಲದಲ್ಲಿರುವ ದಾರಿಯಂತಾಗಿದೆ
ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಕಿತ್ತುಹೋದ ಸಿಸಿ ರಸ್ತೆಯು ತುಂತುರು ಮಳೆಯಿಂದಾಗಿ ಹೊಲದಲ್ಲಿರುವ ದಾರಿಯಂತಾಗಿದೆ   

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಭಾಗವಾದ ಈಶ್ವರನಗರದಲ್ಲಿ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ.

ಹಳೇ ಹುಬ್ಬಳ್ಳಿ ವೃತ್ತದಿಂದ ಗಿರಿಯಾಲ್‌ ಮಾರ್ಗದಲ್ಲಿ ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಈಶ್ವರ ನಗರವಿದೆ. ಬೈಪಾಸ್‌ ಸರ್ವಿಸ್‌ ರಸ್ತೆ ಮೂಲಕ ಅಥವಾ ಹಳೇಹುಬ್ಬಳ್ಳಿ ವೃತ್ತದಿಂದ  ಈಶ್ವರ ನಗರವನ್ನು ತಲುಪಬಹುದು. ಯಾವ ಮಾರ್ಗದಿಂದ ಸಂಚರಿಸಿದರೂ ಅವ್ಯವಸ್ಥಿತ ರಸ್ತೆಯೇ ಇದೆ.

ಈಶ್ವರ ನಗರದ ಮುಖ್ಯರಸ್ತೆಗೆ ಅಕ್ಕಪಕ್ಕದಲ್ಲಿ ಮಳೆನೀರು ಹರಿದು ಹೋಗಲು ಚರಂಡಿಗಳನ್ನು ನಿರ್ಮಿಸಿಲ್ಲ. ಸ್ವಲ್ಪ ಮಳೆ ಸುರಿದರೂ ರಸ್ತೆಯಿಡೀ ಗದ್ದೆ ಮಾರ್ಗವಾಗಿ ಬದಲಾಗುತ್ತದೆ. ಮಾರ್ಗದುದ್ದಕ್ಕೂ ಬಿಡಾಡಿ ದನಗಳು, ಬೀದಿನಾಯಿಗಳು ಮುಗಿಬೀಳುವುದು ನಿತ್ಯ ನೋಟ.

ADVERTISEMENT

ಹದಗೆಟ್ಟ ಬಡಾವಣೆ ರಸ್ತೆ: ಪ್ರತಿವರ್ಷ ಮಳೆಗಾಲದಲ್ಲಿ ಇಡೀ ಬಡಾವಣೆ ಜನರು ತೊಂದರೆ ಅನುಭವಿಸುತ್ತಾರೆ.   ಜನವಸತಿ ಸಂಪರ್ಕಿಸುವ ಮಾರ್ಗಗಳು ಸಿಸಿ ರಸ್ತೆಗಳಾಗಿದ್ದರೂ ಮಳೆಗಾಲದುದ್ದಕ್ಕೂ ಹೊಲಗದ್ದೆಗಳ ದಾರಿಗಳಂತೆ ಕಾಣುತ್ತವೆ. ಮಳೆ ನಿಂತು ಹೋದರೂ ಈಶ್ವರ ನಗರದ ದಾರಿಗಳಲ್ಲಿ ಕೆಸರು ಮಾತ್ರ ಹಾಗೇ ಇರುತ್ತದೆ. ಬೇಸಿಗೆ ಶುರವಾದಾಗ ರಾಡಿಯೆಲ್ಲವೂ ದೂಳಾಗಿ ಪರಿವರ್ತಿತವಾಗುತ್ತದೆ.

ಈಶ್ವರ ನಗರವು ಬಹುತೇಕ ಕೊಳೆಗೇರಿಯಿಂದ ಕೂಡಿದೆ. ಶೇ 70ಕ್ಕಿಂತ ಹೆಚ್ಚು ಕಡು ಬಡವ ಜನರು ವಾಸಿಸುತ್ತಿದ್ದಾರೆ. ಬಡಾವಣೆಯಲ್ಲಿ ಅಲ್ಲಲ್ಲಿ ಖಾಲಿ ನಿವೇಶನಗಳಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದು ಅನೈರ್ಮಲ್ಯವನ್ನು ಹೆಚ್ಚಿಸಿವೆ. ಚರಂಡಿಗಳಿಂದ ನಿಯಮಿತವಾಗಿ ಘನತ್ಯಾಜ್ಯ ವಿಲೇವಾರಿ ಮಾಡದಿರುವ ಕಾರಣ ಗಬ್ಬುವಾಸನೆ ಹರಡಿಕೊಂಡಿದೆ. ತೆರೆದ ಚರಂಡಿ ಮೇಲೆ ಸಾರ್ವಜನಿಕ ಶೌಚಾಲಯ, ಶುದ್ಧನೀರಿನ ಘಟಕ, ಅಂಗನವಾಡಿ, ದೇವಸ್ಥಾನವೊಂದನ್ನು ಅಕ್ಕಪಕ್ಕದಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕ ಶೌಚಾಲಯದ ನಿರ್ವಹಣೆ ಸಮರ್ಪಕವಾಗಿಲ್ಲದ ಕಾರಣ ಅಶುಚಿತ್ವದಿಂದಾಗಿ ಸುತ್ತಮುತ್ತಲೂ ಗಬ್ಬುವಾಸನೆ ಹರಡಲು ಕಾರಣವಾಗಿದೆ.

ಈಶ್ವರನಗರ 5ನೇ ಕ್ರಾಸ್‌ಗೆ ಹೊಂದಿಕೊಂಡು ಕೊಳಚೆ ಹರಿಯುತ್ತಿದೆ. ಈ ಕೊಳಚೆ ಮಾರ್ಗದಲ್ಲಿ ಸಿಮೆಂಟ್‌ನಿಂದ ಚರಂಡಿ ನಿರ್ಮಿಸದ ಕಾರಣ ಪೊದೆಗಳು ಬೆಳೆದಿದ್ದು, ಸೊಳ್ಳೆಯಂತಹ ಕ್ರಿಮಿಗಳಿಗೆ ಆಶ್ರಯ ತಾಣವಾಗಿದೆ. ಅಕ್ಕಪಕ್ಕದ ಜನವಸತಿಗೆ ಸೊಳ್ಳೆ ಉಪಟಳ ವಿಪರೀತವಾಗಿದೆ.

ಕಿಷ್ಕಿಂಧೆಯಲ್ಲಿ ಸರ್ಕಾರಿ ಶಾಲೆ

ಈಶ್ವರ ನಗರದಲ್ಲಿ 1ರಿಂದ 8ನೇ ತರಗತಿವರೆಗಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಿಷ್ಕಿಂಧೆಯಲ್ಲಿ ನಡೆಯುತ್ತಿದೆ. ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿದ್ದು ಅದಕ್ಕೆ ತಕ್ಕಂತೆ ವಿಶಾಲವಾದ ಅಥವಾ ಪ್ರತ್ಯೇಕ ಕೋಣೆಗಳಿಲ್ಲ. ಜನವಸತಿಗಳ ಸಾಲಿನಲ್ಲಿರುವ ಶಾಲಾ ಕಟ್ಟಡವೂ ಅಷ್ಟೇ ಜಾಗದಲ್ಲಿದೆ. ಶಾಲಾ ಕಟ್ಟಡಕ್ಕೆ ಆವರಣವೇ ಇಲ್ಲ ಸಮರ್ಪಕವಾದ ಫಲಕವೂ ಇಲ್ಲ. ಎಲ್ಲ ವಿಷಯಗಳಿಗೂ ಶಿಕ್ಷಕರಿದ್ದು ಕಲಿಸುವಿಕೆ ಉತ್ತಮ ಇರುವುದರಿಂದ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆಯೂ ದುಪ್ಪಟ್ಟಾಗಿದೆ. ಈಶ್ವರ ನಗರದಲ್ಲಿಯೇ ಪ್ರತ್ಯೇಕವಾದ ಜಾಗ ಗುರುತಿಸಿ ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಮಕ್ಕಳ ಪಾಲಕರ ಒತ್ತಾಯ. ಜನವಸತಿ ಮಾರ್ಗದಲ್ಲೇ ಮಕ್ಕಳು ಆಟವಾಡುವ ಅನಿವಾರ್ಯತೆ ಇದೆ.

ಕಿತ್ತುಹೋದ ಸಿಸಿ ರಸ್ತೆಗಳು

ಮಳೆಗಾಲ ಪೂರ್ವದಲ್ಲೇ ಕಿತ್ತುಹೋಗಿದ್ದ ಸಿಸಿ ರಸ್ತೆಗಳು ಇದೀಗ ಕೆಸರಿನ ಹೊಂಡಗಳಾಗಿವೆ. ಒಳಚರಂಡಿ ಪೈಪ್‌ ಅಳವಡಿಸುವುದಕ್ಕಾಗಿ ಕೆಲವು ಕಡೆ ಸಿಸಿ ರಸ್ತೆಗಳ ಮಧ್ಯೆದಲ್ಲೇ ಅಗೆದು ಹಾಕಲಾಗಿದೆ. ಈಶ್ವರ ನಗರದ ಬಹುತೇಕ ಸಿಸಿ ರಸ್ತೆಗಳು ಮಣ್ಣಿನ ರಸ್ತೆಗಳಂತೆ ಗೋಚರಿಸುತ್ತಿವೆ. ರಸ್ತೆಗೆ ಹೊಂದಿಕೊಂಡು ಚರಂಡಿಗಳಿಲ್ಲದ ಕಾರಣ ಮಳೆನೀರಿನೊಂದಿಗೆ ರಾಡಿ ಹರಡಿದೆ. ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಮನೆಯಿಂದ ಶಾಲೆ ಹೋಗಿ ಬರುವುದಕ್ಕೆ ಶಾಲಾ ಮಕ್ಕಳು ಪ್ರಾಯಾಸ ಪಡುತ್ತಿದ್ದಾರೆ.

ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಒಳಚರಂಡಿ ಪೈಪ್‌ ಅಳವಡಿಸಲು ಕಿತ್ತುಹಾಕಿದ್ದ ಸಿಸಿ ರಸ್ತೆಯ ಅವ್ಯವಸ್ಥೆಯ ನೋಟ
ಹುಬ್ಬಳ್ಳಿಯ ಈಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಆಟವಾಡಲು ಜನವಸತಿ ಮಾರ್ಗವೇ ಗತಿ
ಈಶ್ವರ ನಗರದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣದ ಶುದ್ಧ ನೀರಿನ ಘಟಕವು ದುಃಸ್ಥಿತಿಯಲ್ಲಿದೆ
ಈಶ್ವರ ನಗರದಲ್ಲಿ ಕೊಳಚೆ ಹರಿಯುವ ಮಾರ್ಗಕ್ಕೆ ಸಿಸಿ ಚರಂಡಿ ನಿರ್ಮಿಸದ ಕಾರಣ ಸೊಳ್ಳೆ ಉತ್ಪತ್ತಿ ತಾಣವಾಗಿದೆ

Quote - ಮಳೆಗಾಲದಲ್ಲಿ ಜನರು ಚಪ್ಪಲಿ ಧರಿಸಿ ನಡೆಯುವುದಕ್ಕೆ ಆಗುವುದಿಲ್ಲ. ರಸ್ತೆಗಳಲ್ಲಿ ಕೆಸರು ತುಂಬಿಕೊಳ್ಳುತ್ತದೆ. ಮೂಲಸೌಲಭ್ಯಗಳನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಕಲ್ಪಿಸಿಲ್ಲ. ಶಾರದಾ ನಾರೆಣ್ಣನವರ ಈಶ್ವರ ನಗರ ನಿವಾಸಿ

Quote - ಮನೆ ಮುಂದೆ ಕಸದ ಗಾಡಿಗಳು ಬರುವುದಿಲ್ಲ. ದೂರದಲ್ಲಿ ಕಾಣಿಸುವ ಕಸದ ಗಾಡಿವರೆಗೂ ಜನರು ಹೋಗುವುದಿಲ್ಲ ಚರಂಡಿಯಲ್ಲಿಯೆ ಕಸ ಹಾಕುತ್ತಿದ್ದಾರೆ ರಜಿಯಾ ಮಕಾಮದಾರ ಈಶ್ವರ ನಗರ ನಿವಾಸಿ

Quote - ಡೆಂಗಿ ಜ್ವರ ಶುರುವಾದಾಗ ಒಂದು ಸಲ ಫಾಗಿಂಗ್‌ ಮಾಡಿದ್ದಾರೆ. ಆನಂತರ ಫಾಗಿಂಗ್‌ ಮಾಡಿಲ್ಲ. ಪಕ್ಕದಲ್ಲಿರುವ ಕೊಳಚೆಗೆ ಚರಂಡಿ ನಿರ್ಮಿಸಿಲ್ಲ. ಹೀಗಾಗಿ ಸೊಳ್ಳೆ ಕಾಟ ವಿಪರೀತವಾಗಿದೆ ರೂಪಾ ಎನ್‌.ಅಂಬಿಗೇರ ಈಶ್ವರ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.